ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಂಬನೆ | ಆಡಿಸಿ ನೋಡು, ಬೀಳಿಸಿ ನೋಡು...

Last Updated 13 ಜುಲೈ 2019, 4:53 IST
ಅಕ್ಷರ ಗಾತ್ರ

ವಿಶ್ವಕಪ್‌ ಕ್ರಿಕೆಟ್‌ನ ಭಾರತ– ನ್ಯೂಜಿಲೆಂಡ್‌ ಸೆಮಿಫೈನಲ್‌ ಪಂದ್ಯ ನೋಡ್ತಾ ಕುತ್ಕೊಂಡಾಗ ಪ್ರಭ್ಯಾನ ಫೋನ್ ಬಂತು. ಕುತೂಹಲದ ಘಟ್ಟದಲ್ಲಿದ್ದ ಆಟಾ ನೋಡಾಕ್ ಈ ಅಡ್ನಾಡಿ ಅಡ್ಡ ಬಂದ್ನಲ್ಲ ಅಂತ ಮನಸ್ನ್ಯಾಗ್ ಬೈಕೋತ ಬ್ಯಾಸರದಾಗs ‘ಹಲೋ...’ ಎಂದೆ.

‘ವಿಕೆಟ್ ಹೆಂಗ್ ಬೀಳಾಕತ್ತಾವ್ ನೋಡಿ ಇಲ್ಲ’ ಎಂದ ಭಾರಿ ಖುಸ್ಯಾಗ್. ಅವ್ನ ಮಾತ್‌ನ್ಯಾಗಿನ ಹುರುಪು ನನ್ನ ಮಡ್ಡ ತಲಿಗಿ ಲಗೂನ್‌ ಹತ್ತಲಿಲ್ಲ.

‘ಹ್ಞೂಂನೊ ಮಾರಾಯಾ, ಅದ್ನ ನೋಡಾಕತ್ತೀನಿ. ಮ್ಯಾಟ್‌ ಹೆನ್ರಿ ಮತ್ತ ಟ್ರೆಂಟ್ ಬೌಲ್ಟ್‌ ವಿಕೆಟ್ ತೆಗ್ಯಾಕತ್ತಾರ್‌. ನಮ್ಮವರ ನಸೀಬ್‌ ಇವತ್‌ ಸರಿ ಇದ್ಹಂಗ್‌ ಕಾಣ್ತಾ ಇಲ್ಲ’ ಎಂದೆ ಬೇಸರದಿಂದ.

‘ಏಯ್→ಹುಚ್ಚಮಳ್ಳ, ನಾ ಹೇಳಿದ್ದು ಕ್ರಿಕೆಟ್ ವಿಕೆಟ್ ಅಲ್ಲಲೇ. ಎಂಎಲ್ಎಗಳ ವಿಕೆಟ್ ದಬದಬನೆ ಬೀಳಾಕತ್ತಾವ. ಪಿಚ್‌ ಹದಾ ಆಗೇದ್. ಕಮಲ ಮತ್ತ ಅರಳುವ ವ್ಯಾಳೆ ಹತ್ರಾ ಬಂದದ’ ಎಂದ ಠೇಂಕಾರದಿಂದ.

‘ಆ ವಿಕೆಟ್‌ಗಳ ಹಕೀಕತ್‌ ನಂಗೂ ಗೊತ್ತದ. ನಿಂಗ ಒಬ್ಬಾಂವ್ಗ ಎಲ್ಲಾ ಗೊತ್ತದ ಅಂತ ಬೆನ್ನ ಚಪ್ಪರಿಸ್ಕೊ ಬ್ಯಾಡೊ ಭಾಡ್‌ ತಿನ್ನಾಂವ’ ಅಂತ ಬೈದೆ.

ನಾ ಯಾರ‍್ದೊ ಸಿಟ್ಟನ್ನ ಅವ್ನ ಮ್ಯಾಲೆ ಹಾಕಾಕತ್ತಿದ್ದು ನೋಡಿ, ‘ಅಲ್ಲೊ, ದನದ ಬಜಾರ್‌ದಾಗ್ ಮಾರಾಕ್ ಇಟ್ಟಂಗ್ ಎಂಎಲ್ಎಗಿರಿ ಮಾರ್ಕೊಂಡವ್ರ ಮ್ಯಾಲಿನ ಸಿಟ್ಟನ್ನ ನನ್ನ ಮ್ಯಾಲೆ ಯಾಕ್ ಹಾಕ್ತಿಯೊ ಬೇಕೂಫಾ’ ಎಂದು ಎದುರೇಟ್ ಕೊಟ್ಟ. ಅದರ ಹಿಂದನ, ‘ಪಾಟಿ ಮ್ಯಾಲೆ ಪಾಟಿ, ನಮ್ಮ ಸಾಲಿ ಸೂಟಿ, ರಾಜೀನಾಮೆ ಮ್ಯಾಲೆ ರಾಜೀನಾಮೆ ಸಮ್ಮಿಶ್ರ ಸರ್ಕಾರಕ್ಕೂ ಬಂತು ಸೂಟಿ’ ಅಂತ ಹಾಡ್‌ ಹೇಳ್ತಾ ಗಹಗಹಿಸಿ ನಕ್ಕ.

‘ನಗು, ಮಗ್ನ ನಗು. ಎಷ್ಟ್‌ ದಿವ್ಸಂತ್‌ ಹೀಂಗ್‌ ಹಲ್‌ ಕಿಸಿತಿ ಅಂತ ನಾನೂ ನೋಡ್ತೀನಿ. ಜಿಂದಾಲ್‌ ನೆಪದಾಗ ವಿಕೆಟ್‌ ಒಪ್ಪಿಸಿದ ಆನಂದನ ಬೆನ್ನ ಹಿಂದೇನ, ಮಂತ್ರಿಯ ಗೂಟದ ಕಾರ್‌ ಸಿಗದ ಅತೃಪ್ತ ಅಂತರ್‌ಪಿಶಾಚಿಗಳ್ನ, ಕಮಲದ ಕಳ್ಳಗಂಟಿಗೆ ಹಪಹಪಿಸುತ್ತಿದ್ದವರ ಬೆಂಗಾವಲಿಗಿದ್ದ ಸಂತೋಷ ಬಾಂಬೆಗೆ ಕರ್ಕೊಂಡ್ ಹೋಗಿದ್ದು ನೋಡಿ ನಿಂಗ್‌ ಹಾಲು ಸಕ್ರಿ ಕುಡ್ದಂಗ್‌ ಆಗಿರ್‌ಬೇಕು. ಕಳ್ಳರ ಗ್ಯಾಂಗನ್ನ ಪೊಲೀಸರು ಜೀಪ್‌ನ್ಯಾಗ್‌ ಹಾಕ್ಕೊಂಡ್‌ ಹೋದ್ಹಂಗ್‌, ಬೀಡಾಡಿ ಬಿಟ್ಟ ದನಗಳನ್ನ ಕೊಂಡವಾಡಕ್ಕ ಹಾಕಿದ್ಹಂಗ್‌, ಬಾಡಿಗೆ ವಿಮಾನದಾಗ್‌ ಎಂಎಲ್‌ಎಗಳನ್ನ ಎಳಕೊಂಡು ಹೋಗಿದ್ದು ನೋಡಿ ಛೀ, ಥೂ ಅಂತ ಅನ್ಸಾಕತ್ತೈತಿ. ನಮ್ಮ ಘನಂದಾರಿ ಎಂಎಲ್‌ಎಗಳಿಗೆ ಎಂಥಾ ದುರ್ಗತಿ ಬಂತಲ್ಲೋ’ ಎಂದೆ.

‘ಆನಂದ ಮತ್ತ ಸಂತೋಷ ಸೇರಿದ್ರ ಕಮಲದ ಸರ್ಕಾರ ಗ್ಯಾರಂಟಿ ಅನ್ನೋ ಸೂತ್ರ, ಸುಪ್ರೀಂ ಕೋರ್ಟ್‌ನ್ಯಾಗ್‌ ಸಿಕ್ಕಾಕೊಂಡು, ಆಷಾಢದ ಗಾಳಿಗೆ ಸೂತ್ರ ಹರಿದ ಪಟದ್ಹಾಂಗ್, ಹೆಂಗ್ ಬೇಕಂಗ್ಹ್ ಲಗಾ ಹೊಡ್ಯಾಕತ್ತೈತಲ್ಲ’ ಎಂದು ಛೇಡಿಸಿದೆ.

ನನ್ನ ಮಾತಿನಿಂದ ತಬ್ಬಿಬ್ಬಾದ ಪ್ರಭ್ಯಾ, ‘ಈ ಸಲಾ ಯಾರೇ ಲಗಾ ಹೊಡೆದ್ರೂ ಆಡಿಯೋರಪ್ನೋರು ಸಿಎಂ ಆಗೋದು ಗ್ಯಾರಂಟಿ ನೋಡಪಾ’ ಎಂದ ತಣ್ಣಗೆ.

‘ಸತ್ಯದ ತಲಿಮ್ಯಾಲೆ ಹೊಡ್ದಂಗ್ ಹೇಳಾಕತ್ತೀಯಲ್ಲ.ರಮೇಶಣ್ಣ ಕಲ್ಲ ಬಂಡೆ ಥರಾ ಅಡ್ಡ ನಿಂತಾನಲ್ಲ’ ಎಂದೆ.

‘ಅದನ್ನೆಲ್ಲ ನೋಡ್ಕೊಳ್ಕಾಕ್ ಇಂಥಾ ವಿಷಯದಾಗ್ ಸಾಕಷ್ಟು ನೀರ್ ಕುಡ್ದಿರೊ ಬೋ... ಜನಾ ಅದಾರ್. ಎಂಎಲ್ಎಗೋಳ್ ತಲಿತಿಕ್ಕಾಕ್ ಮುಂಬೈಗೆ ಹೋಗಿದ್ದ ಡಿಕೆಸಿ ಬರಿಗೈಯ್ಯಾಗ್‌ ವಾಪಸ್‌ ಆಗ್ಯಾರ’ ಅಂತ ಫೋನ್‌ನ್ಯಾಗ್ ಮಾತಾಡ್ಕೊಂತ ನಮ್ಮ ಮನಿ ಬಾಗಲ್ ತನಕ ಬಂದ್ ಬಿಟ್ಟಿದ್ದ ಪ್ರಭ್ಯಾ.

ಬಾಗ್ಲಾ ತಗ್ಯಾಕ್ ಹೋದಾಗ ಕಾಲ್ಮರಿ ಇಲ್ದ ಬಂದದ್ದು ನೋಡಿ, ‘ಇದೇನೊಬರಗಾಲದಾಗ್ ಬರಿಗಾಲಲ್ಲಿಬಂದಿಯಲ್ಲ. ಹರಿಕಿ ಗಿರಕಿ
ಹೊತ್ತಿ ಏನ್. ಗಾಳಿ ಬಂದಾಗ ತೂರಿಕೊಳ್ಳೊ ನಿನ್ನಂತಹ ನಾಲಾಯಕರ ಸಂತತಿ ಹೆಚ್ಚಾಗಿದ್ದಿದ್ದಕ್ಕs ಮಳಿ ಕೈಕೊಟ್ಟದ. ಹಾಸನದ ಜ್ಯೋತಿಷಿಯ ಬರಿಗಾಲ್ ಭೂತ ನಿಂಗೂ ಬಡ್ದಂಗ್‌ ಕಾಣಸ್ತದ’ ಎಂದೆ.

‘ಹ್ಞೂಂನಪಾ, ಆ ಮಹಾನುಭಾವ ಸಮ್ಮಿಶ್ರ ಸರ್ಕಾರದ ವಿಕೆಟ್ ಪತನದ ಸಂಕ್ಟಾ ತಡ್ಯಾಕ್ ಹರಿಕಿ ಹೊತ್ತಿದ್ರ, ನಾ ಕೆಸರಾಗಿನ ಕಮಲ ಅರಳೋದನ್ನ ನೋಡಾಕ್ ಹರಿಕಿ ಹೊತ್ತೀನಿ. ಕಮಲದ ಸರ್ಕಾರ ರಚಸಾಕ್ ಇಷ್ಟ್‌ ದಿವ್ಸ್‌ ಓಡ್ಯಾಡಿ ಓಡ್ಯಾಡಿ ಚಪ್ಲಿ ಹರ‍್ದ ಹೋಗ್ಯಾವ್’ ಅಂತ ಹಲುಬಿದ.

ಸೂರ್ಯ ಹುಟ್ಟೋದನ್ನ ಪೋನಾ ತಾಸ್ ನಿಲ್ಸಿನಿ ಅಂತ ಹೇಳ್ಕೊಂಡಿರೊ ಭಂಡ ಸ್ವಾಮೀಜಿಯ ಹೇಳ್ಕಿ ವಾಟ್ಸ್‌ಆ್ಯಪ್‌ನ್ಯಾಗ್ ಹರಿದಾಡಾಕತ್ತದ. ಎಂಎಲ್ಎಗೋಳ್‌ ರಾಜೀನಾಮೆ ಕೊಡೋದನ್ನ ನಿಲ್ಸಾಕ್ ಸಿದ್ದಣ್ಣ, ಕುಮಾರಣ್ಣ ಓಡಾಡಾಕತ್ತಾರ್‌. ಮಂತ್ರಕ್ಕ ಪ್ರತಿಮಂತ್ರ ಅನ್ನೋಹಂಗ್, ಸರ್ಕಾರ ರಚಸಾಕ್‌ ಯಾವೊಬ್ಬನೂ ಅಡ್ಡಿಬರ್ಲಾರ್‌ದ್ಹಾಂಗ್‌ ನೋಡ್ಕೊಳ್ಳಾಕ್‌ ಆಡಿಯೋರಪ್ನೋರು ಯಾವ್ದರ ಸ್ವಾಮಿಗೋಳ್ ಹತ್ರ ಹೋಗಾಕ್ ಹೇಳು’ ಅಂತ ನಾ ಅನ್ನುತ್ತಿದ್ಹಂಗ್, ಪ್ರಭ್ಯಾ ಅವ್ಸರದಾಗ್‌ ನನ್ನ ಹೊಸಾ ಚಪ್ಲಿ ಹಾಕ್ಕೊಂಡ್ ಓಡಾಕತ್ತ.

‘ಏಯ್‌, ಯಾಕ್‌ ಓಡಾಕತ್ತಿ’ ಎಂದೆ.

‘ವಿಕೆಟ್‌ ಬೀಳೋದಕ್ಕ ಅಡ್ಡಿಪಡಿಸುವವರ ಹಿಕ್ಮತ್‌ ತಡ್ಯಾಕ್‌ ನಿತ್ಯಾನಂದ ಆಶ್ರಮಕ್ಕ ಜಲ್ದಿ ಹೋಗುದೈತಿ’ ಅಂತ ಹೇಳುತ್ತಲೇ ಓಡು ನಡಿಗೆಯಲ್ಲಿ ಹೋದ.

ಅದೇ ಹೊತ್ತಿಗೆ ರೇಡಿಯೊದಾಗ್ ಕೇಳಿ ಬಂದ, ಕಸ್ತೂರಿ ನಿವಾಸದ ‘ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು. ಏನೇ ಬರಲಿ ಯಾರಿಗೆ ಸೋತು ತಲೆಯ ಬಾಗದು... ಹಾಡು ನನ್ನ ಪಾಲಿಗೆ, ‘ರಾಜೀನಾಮೆ ಕೊಟ್ಟು ನೋಡು, ವಿಕೆಟ್‌ ಬೀಳಿಸಿ ನೋಡು, ಸಮ್ಮಿಶ್ರ ಸರ್ಕಾರ ಉರುಳಿ ಹೋಗದು... ಎಂದಿಗೂ ನಾನು ಸಿಎಂ ಆಗಿರುವೆ’ ಅಂತ ಕುಮಾರಣ್ಣ ಹಾಡ್ದಂಗ್‌, ಸಿದ್ದಣ್ಣ ಡೊಳ್ಳು ಬಾರಿಸಿ ಕುಣಿಯುತ್ತ ಸಾಥ್‌ ನೀಡ್ದಂಗ್‌, ಆಡಿಯೋರಪ್ಪನೋರು ‘ಎಲ್ಲಿಗೆ ಪಯಣ, ಯಾವುದೋ ದಾರಿ, ಏಕಾಂಗಿ ಸಂಚಾರಿ... ಅಂತ ಹಾಡುಹೇಳ್ತಾ ವಿಧಾನಸೌಧ್‌ ಪ್ರದಕ್ಷಿಣೆ ಹಾಕ್ತಾ ಇರೋವಂಗ್‌ ಭಾಸವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT