ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟ, ಕಾಟ, ಸಂಕಟ

Last Updated 19 ಜುಲೈ 2019, 19:45 IST
ಅಕ್ಷರ ಗಾತ್ರ

ಉಫ್! ಈ ಹತ್ತು– ಹನ್ನೆರಡು ದಿನಗಳಲ್ಲಿ ಕಾಲ ಸರಿದಿದ್ದೇ ಗೊತ್ತಾಗಿಲ್ಲ. ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಭಾರತ- ನ್ಯೂಜಿಲೆಂಡ್ ಸೆಮಿಫೈನಲ್ ವೀಕ್ಷಿಸುವಾಗ ನಾವು ಎಷ್ಟು ಕುತೂಹಲಗೊಂಡಿದ್ದೆವೋ, ಅದಕ್ಕಿಂತ ದುಪ್ಪಟ್ಟು ಕುತೂಹಲದಿಂದ ರಾಜ್ಯದ ಮಜಾಕೀಯದ ಬೆಳವಣಿಗೆಗಳನ್ನು ಟೀವಿಯಲ್ಲಿ ನೋಡಿದ್ದೇವೆ. ಅದೇ ಮಜಾಕೀಯದ ಆಟ, ಕಾಟ ಮತ್ತು ಸಂಕಟದ ಕ್ಷಣಗಳತ್ತ ಮತ್ತೊಮ್ಮೆ ಹಿನ್ನೋಟ ಬೀರಿದರೆ, ನಿಮಗೆ ಬೋರು ಆಗುವುದಿಲ್ಲವೆಂದು ನಂಬಿಕೆ.

ಜುಲೈ 6... ರಾಜ್ಯದ ಕ್ಷಿಪ್ರ ಮಜಾಕೀಯ ಬೆಳವಣಿಗೆಯಲ್ಲಿ 12 ಮಂದಿ ಕಾಂಗ್ರೀಸ್ ಮತ್ತು ಜಾಂಡಿಸ್ ಪಕ್ಷಗಳ ಶೋಷಕರಿಂದ ಭ್ರಾಂತಿ. ಸಭಾಧ್ಯಕ್ಷರು ರಾಜಧಾನಿಯಲ್ಲಿ ಇಲ್ಲದ ಕಾರಣ, ರಾಜೀನಾಮೆ ಪತ್ರಗಳನ್ನು ಅವರ ಮೇಜಿನ ಮೇಲಿಟ್ಟು ಶೋಷಕರೆಲ್ಲಾ ನಿಗೂಢ ಸ್ಥಳಕ್ಕೆ ಪಯಣ.

ಜುಲೈ 7... ಶೋಷಕರು ಮುಂಬೈಯ ಧಾರಾವಿ ಕೊಳೆಗೇರಿಯಲ್ಲಿ ಪತ್ತೆ. ಗ್ರಾಮ ವಾಸ್ತವ್ಯ ಮುಗಿಸಿ ನೇರ ಅಮೆರಿಕ ವಾಸ್ತವ್ಯಕ್ಕೆಂದು ಹೊರಟಿದ್ದ ಮುಖ್ಯಮಂತ್ರಿಗೆ ನಿಧಾನಸೌಧದಲ್ಲಿ ನಡೆಯುತ್ತಿರುವ ನಾಟಕದಲ್ಲಿ ಮುಖ್ಯ ಪಾತ್ರ ವಹಿಸಲು ತುರ್ತು ಬುಲಾವ್. ಶೋಷಕರ ಕ್ಷಿಪ್ರ ಭ್ರಾಂತಿಗೆ ಮಾಜಿ ಸಿಯಮ್ಮಯ್ಯರೇ ಕಾರಣೀಭೂತ ಎಂಬ ಉಹಾ ಪೋಹದಿಂದಾಗಿ ‘ಆಪರೇಷನ್’ ನಿರತರಿಗೆ ತಳಮಳ.

ಜುಲೈ 8... ದೋಸ್ತಿ ಶೋಕಿಗಳಿಗೆ ರೆಸಾರ್ಟ್‌ನಲ್ಲಿ ಈ ಬಾರಿ ಬೆಲ್ಲಿ ಡ್ಯಾನ್ಸ್‌ನ ವಿಶೇಷ ಮನರಂಜನೆ. ಎಲ್ಲಾ ಸಚಿವರಲ್ಲಿ ‘ತ್ಯಾಗ’ ಮನೋಭಾವ ಪ್ರಕಟ. ಇಬ್ಬರು ಪಕ್ಷೇತರ ‘ಸಾಂದರ್ಭಿಕ ಶಿಶು’ಗಳಿಂದ ಮುಖ್ಯ ‘ಸಾಂದರ್ಭಿಕ ಶಿಶು’ವಿಗೆ ಮೋಸ. ಸಚಿವ ಲಿಂಬೆಯಣ್ಣ ಅವರಿಂದ ವರ್ಗಾವಣೆ ವಿಲೇವಾರಿ.

ಜುಲೈ 9... ಒಂಬತ್ತು ಶೋಷಕರ ರಾಜೀನಾಮೆ ಪತ್ರಗಳಿಗೆ ನೂರರಲ್ಲಿ ಸೊನ್ನೆ ಅಂಕ! ದೋಸ್ತಿ ಶೋಕಿ ಗಳು ತಂಗಿರುವ ರೆಸಾರ್ಟ್‌ನಲ್ಲಿ ಇಂದಿನ ಮನರಂಜನೆ ಕಾರ್ಯಕ್ರಮ: ಶನಿ ಲಿಯಾನ್ ಅವರ ಸೆಕ್ಸಿ ನೃತ್ಯ. ಸಚಿವ ಲಿಂಬೆಯಣ್ಣ ಅವರು ವರ್ಗಾವಣೆ ಕೆಲಸದಲ್ಲಿ ತಲ್ಲೀನ.

ಜುಲೈ 10... ಇತ್ತ ನಿಧಾನಸೌಧದಲ್ಲಿ ರಾಜೀನಾಮೆ ತಡೆಗೆ ‘ಗೂಂಡಾಗಿರಿ’– ಅತ್ತ ದಿಕ್ಕೆಟ್ಟಶಿ ಅವರಿಂದ ಮುಂಬೈ ಬೀದಿಯಲ್ಲಿ ವಡಾಪಾವ್ ತಿನ್ನುತ್ತಾ ಶೋಷಕರ ಮನವೊಲಿಸಲು ‘ಗಾಂಧಿಗಿರಿ’! ಇವತ್ತಿನ ಷೇರು ಮಾರುಕಟ್ಟೆ ಮೈತ್ರಿ ಸೂಚ್ಯಂಕ 101ಕ್ಕೆ ಇಳಿದಿದೆ. ಬಾಜಪ್ಪ 107ರಲ್ಲಿ ನಿಂತಿದೆ. ಲಿಂಬೆಯಣ್ಣ ವರ್ಗಾವಣೆಯ ಜತೆಗೆ ಬಡ್ತಿ ಕಾರ್ಯದಲ್ಲಿ ಮಗ್ನ.

ಜುಲೈ 11... ಕ್ಷಿಪ್ರ ಭ್ರಾಂತಿಯ ಮರುಪ್ರದರ್ಶನ- ರಾಜೀನಾಮೆ wವಾಪಸ್ ಪಡೆಯಿರಿ ಎಂದರೆ, ವಾಪಸ್ ರಾಜೀನಾಮೆ ಕೊಟ್ಟ ಶೋಷಕರು. ಮರು ರಾಜೀನಾಮೆ ಕೊಡುವ ರೇಸ್‌ನಲ್ಲಿ ತಡವಾಗಿ ಮುಟ್ಟಿದವರಲ್ಲಿ ಶೋಷಕ ಬೈಬ ಅವರಿಗೆ ಮೊದಲ ಸ್ಥಾನ. ಮೂರನೇ ಬಾರಿ ಮರು ರಾಜೀನಾಮೆ ನೀಡಿದ ರಮ್ಮಿ ಅವರ ದಾಖಲೆ! ಲಿಂಬೆಯಣ್ಣರಿಗೆ ವರ್ಗಾವಣೆ, ಬಡ್ತಿ ಕೆಲಸ ಮಾಡಿ ಸುಸ್ತು.

ಜುಲೈ 12... ಸಿಎಂ ‘ಅವಿಶ್ವಾಸ’ ಮತ ಯಾಚನೆಗೆ ಸಿದ್ಧ! ಪಾರ್ಟಿ ಸುಪ್ರೀಂನಿಂದ ‘ಅನರ್ಹತೆ’ ಬೆದರಿಕೆಯ ನಡುವೆ ನಿಜವಾದ ಸುಪ್ರೀಂ ಕೋರ್ಟ್ ತೀರ್ಪಿಗಾಗಿ ಕಾಯುತ್ತಿರುವ ಶೋಷಕರು. ಬಾಜಪ್ಪ ಪಕ್ಷದ ಗ್ಯಾಂಗ್ ರೆಸಾರ್ಟ್ ಕಡೆಗೆ- ರಾತ್ರಿ ‘ಶೀಲಾ ಕೀ ಜವಾನಿ...’ ಹಾಡಿಗೆ ರೋಣಕ್ ಆಚಾರ್ಯ ನೃತ್ಯ! ದೋಸ್ತಿ ಪಾರ್ಟಿಗಳು ತಂಗಿರುವ ರೆಸಾರ್ಟ್‌ನಲ್ಲಿ ಒಂಟೆ ಮಾಂಸದ ಪಾರ್ಟಿ! ಮುಂಬೈಯ ಜೋಪಡ್ಪಟ್ಟಿಯಲ್ಲಿರುವ ಶೋಷಕರಿಗೆ ನಾಯಿ ಬಿರಿಯಾನಿಯೇ ಗತಿ! ಲಿಂಬೆಯಣ್ಣ ಹಣ ವರ್ಗಾವಣೆಯಲ್ಲಿ ತಲ್ಲೀನ.

ಜುಲೈ 13... ಟೀವಿಯಲ್ಲಿ ಅಸ್ಸಾಂ ಪ್ರವಾಹದ ದೃಶ್ಯ ನೋಡುತ್ತಲೇ, ತನ್ನದೂ ಅದೇ ಪರಿಸ್ಥಿತಿ ಎಂದು ನೆನೆದು ಸಿ.ಎಂ. ಕಣ್ಣೀರು. ಹೊಸ ಪ್ಯಾಂಟು ಮತ್ತು ಶರ್ಟು ಹೊಲಿಸಲು ಆಡಿಯೋರಪ್ಪರ ಮನೆಗೆ ಬಂದ ಟೈಲರ್. ‘ಟೆಂಪಡಲ್ ರನ್’ಗೆ ಹೊರಟ ಲಿಂಬೆಯಣ್ಣ.

ಜುಲೈ 14... ರೈತರಿಂದ ಅನಿರ್ದಿಷ್ಟಾವಧಿ ‘ಛೀಛೀ! ಥೂಥೂ!’ ಪ್ರತಿಭಟನೆ. ಕರ್ನಾಟಕಕ್ಕೆ ‘ನಾಟಕ’ ಎಂಬ ಕೆಟ್ಟ ಹೆಸರನ್ನು ತಂದುಕೊಟ್ಟಿದ್ದಕ್ಕೆ ರಾಜ್ಯದ ಮಜಾಕಾರಣಿಗಳ ವಿರುದ್ಧ ರಾಜ್ಯ ಸೇನೆಯಿಂದ ನಿಧಾನಸೌಧದ ಎದುರು ಕಪ್ಪು ಬಾವುಟ ಪ್ರದರ್ಶನ. ಸರ್ಕಾರ ಉರುಳದಂತೆ ಕೊಲ್ಲೂರಿನಲ್ಲಿ ಸಚಿವ ಲಿಂಬೆಯಣ್ಣರ ಉರುಳು ಸೇವೆ.

ಜುಲೈ 15... ‘ಆಪ’ರೋಷನ್’ ಸಕ್ಸೆಸ್- ಬಾಜಪ್ಪರ ಬದಲು ಎಸ್ಐಟಿ ಬಲೆಗೆ ಶೋಷಕ! ಆಡಿಯೋರಪ್ಪರ ಉಡ್ಡಯನಕ್ಕೆ ತಾಂತ್ರಿಕ ಸಮಸ್ಯೆ ಬಾರದಂತೆ ಹೋಮ. ಇಡೀ ದಿವಸ ದೇವರ ಎದುರು ಸಾಷ್ಟಾಂಗ ಅಡ್ಡಬಿದ್ದ ಲಿಂಬೆಯಣ್ಣ.

ಜುಲೈ 16... ರೆಸಾರ್ಟ್‌ನಲ್ಲಿ ಆಡಿಯೋರಪ್ಪ ಬ್ಯಾಟಿಂಗ್, ಬಾಲ್ ಕೋರ್ಟ್‌ನಲ್ಲಿ. ಉಗುಳಿ ಉಗುಳಿ ರೈತರು ಸುಸ್ತು- ಐವರು ಆಸ್ಪತ್ರೆಗೆ. ಲಿಂಬೆಯಣ್ಣ ನಾಪತ್ತೆ!

ಜುಲೈ 17... ಕ್ಷಿಪ್ರ ಭ್ರಾಂತಿಗೆ ಮದ್ದು ಸೂಚಿಸಿದ ಕೋರ್ಟ್. ವಿಪತ್ತಿಗೆ ಹೆದರಿದ ದೋಸ್ತಿಗಳು, ‘ವಿಪ್’ಗೆ ಹೆದರದ ಶೋಷಕರು.

ಜುಲೈ 18... ಅಕ್ಷರಶಃ ನಿಧಾನ-ಸಭೆ! (ಓದುಗರ ಬಾಯಾಕಳಿಕೆ ನೋಡಿ ಈ ಹಿನ್ನೋಟಕ್ಕೆ ಮಂಗಳ ಹಾಡಿದ್ದೇವೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT