ಮಾನವನಿಂದ ಮಂಗ!

7

ಮಾನವನಿಂದ ಮಂಗ!

Published:
Updated:

ಹಿಂದಿನ ರಾತ್ರಿ ಫುಟ್ಬಾಲ್ ಪಂದ್ಯ ನೋಡ್ಕೋಂತ್‌ ಕುತ್ಕೊಂಡಿದ್ದರಿಂದ ತಡವಾಗಿ ಮಲಗಿದ್ದೆ. ಒಂಬತ್ತಾದರೂ ಎದ್ದೇಳಲು ಮನಸ್ಸಾಗದೆ ಹಾಸಿಗೆಯಲ್ಲಿ ಹೊರಳಾಡುತ್ತಿರುವಾಗಲೇ ಪ್ರಭ್ಯಾನ ಫೋನ್ ಬಡ್ಕೊಳ್ಳಾಕ್ ಹತ್ತಿತ್ತು. ಆಕಳಿಸುತ್ತಲೇ ಹಲೋ... ಎಂದೆ. ‘ಏಯ್ ಖೋಡಿ, ಇನ್ನ ಹಾಸ್ಗಿ ಒಳ್ಗ ಬಿದ್ದಿ ಏನ್’ ಎಂದು ಜೋರ್‌ ಮಾಡ್ದಾ.

‘ನಿನ್ನೆ ರಾತ್ರಿ ಕ್ವಾರ್ಟರ್‌...’ ಅಂತ ಅನ್ನುತ್ತಿದ್ದಂತೆ... ಅದ್ಕ ಕಲ್ ಹಾಕಿ, ‘ಹ್ಞಾ, ಏನಂದಿ. ಕ್ವಾರ್ಟರ್ರಾ. ಹೊಸಾ ಬ್ರ್ಯಾಂಡಿ ಬಾಟಲ್‌ ಬಂದದ ಅಂತ ಹೇಳೆ ಇಲ್ಲಾ. ಏನ್‌ ಮನ್ಶಾ ಅದಿಯೋ, ಚೆಡ್ಡಿ ದೋಸ್ತ್‌ಗ ಬಿಟ್ಟು ಒಬ್ನ ಕುಡ್ಯಾಕ್‌ ಮನಸ್ಸರ ಹೆಂಗ್‌ ಬಂತು ನಿಂಗ್‌’ ಅಂತ ಬೈದ.

‘ಏಯ್‌, ಆರ್ರಾಗ್‌ ಹುಟ್ಟಿದವ್ನ, ಸ್ವಲ್ಪ ತಡ್ಕೊ. ಅವ್ಸರಾ ಮಾಡ್ಬ್ಯಾಡ್‌. ಸ್ವಲ್ಪ ಹೇಳೂದು ಕೇಳ್‌. ಫುಟ್ಬಾಲ್‌ ಕ್ವಾರ್ಟರ್‌ ಫೈನಲ್‌ ಆಟಾ ನೋಡಾಕತ್ತಿದ್ಯಾ. ಅದ್ಕ ಇನ್ನ ನಿದ್ದಿಗನ್ನಾಗ್‌ ಇದೀನಿ. ನೀ ನೋಡಿದ್ರ ರಾತ್ರಿ ಕುಡ್ದ ಕ್ವಾರ್ಟರ್‌ ನಿಶೆದಾಗ್‌ ಇದ್ಹಂಗ್‌ ಕಾಣ್ತೈತಿ’ ಎಂದು ತಿರುಗೇಟು ಕೊಟ್ಟೆ.

‘ಅದಿರ್ಲಿ, ನೀ ಸೂರ್ಯವಂಶದಂವಾ ಅನ್ನೋದು ನಂಗ್‌ ಗೊತ್ತಿಲ್ಲೇನ್‌. ರೇವಣ್ಣನಿಂದ ಸ್ವಲ್ಪ ಕಲ್ಕೊ’ ಅಂದ.

‘ಜೋತಿಷ್ಯ ಏನ್ ಪೂಜಾರಕಿನ’ ಎಂದು ಕುಟುಕಿದೆ.

‘ಎರಡೂ ಅಲ್ಲ. ರಾತ್ರಿ ಹಾಸನದಾಗ ಮಲಗಿ ನಸುಕಿನ್ಯಾಗ್‌s ಎದ್ದು ಬೆಂಗ್ಳೂರಿಗೆ ಬಂದು ಸರ್ಕಾರಿ ಕೆಲ್ಸ ಮಾಡ್ತಾರ್. ವಿ(ನಿ)ಧಾನಸಭಾ ದೇವಸ್ಥಾನದಾಗ ಒಂದ್‌ಕಡೆಗೂ  ಕುತ್ಕೊಳ್ಳದೆ ಪ್ರದಕ್ಷಿಣೆ ಹಾಕುತ್ತಲೇ ಕೆಲ್ಸ ಮಾಡೋದನ್ನ, ದಿನಾ 350 ಕಿ.ಮೀ. ಪ್ರಯಾಣದಾಗ ನಿದ್ದೆ ಮಾಡೋದನ್ನ ಸ್ವಲ್ಪ ನೋಡಿ ಕಲ್ತ್‌ಕೊ. ಏಳೋ ನಿನ. ಟಗರ್‌ ಕಾಳ್ಗಾ ನೋಡಾಕ್‌ ಬರ್ತಿ ಏನ್‌’ ಎಂದ.

‘ಅಲ್ಲಲೇ, ನಮ್ಮ ಕಡೆ ಕಾರ್‌ ಹುಣ್ಮಿಗೆ ಎತ್‌ಗೋಳ್ನ ಓಡುಸ್ತಾರ್‌. ನೀ ನೋಡಿದ್ರ ಟಗರ್‌ ಕಾಳಗಾ ಅನ್ನಾಕತ್ತಿ ಅಲ್ಲ. 125 ದಿನ ಓಡಿರೋ ಶಿವಣ್ಣನ ಸಿನಿಮಾ ನೋಡಾಕ್‌ ಹೊಂಟಿಯೇನ್‌’ ಎಂದೆ.

‘ಆ ‘ಟಗರು’ ಅಲ್ಲಲೇ. ರಾಜ್ಯ ರಾಜಕೀಯದಾಗ್‌ ಈಗ ಟಗರು ಕಾಳಗದ ಮಾತ್‌ ನಡ್ದದ. ಟಗರು ಒಂದು ಹೆಜ್ಜೆ ಹಿಂದೆ ಸರಿದಿದೆ ಎಂದರೆ ಸುಮ್ಮನಾಗಿದೆ ಎಂದಲ್ಲ. ಗಟ್ಟಿಯಾಗಿ ಗುದ್ದಲು ರೆಡಿಯಾಗಿದೆ ಎಂದರ್ಥ ಎಂದು ಕಾಗಿನೆಲೆಶ್ರೀ ಅಪ್ಪಣೆ ಕೊಡಿಸ್ಯಾರ್‌, ಓದಿ ಇಲ್ಲ’ ಎಂದು ಪ್ರಶ್ನಿಸಿದ.

‘ಹಿಂದೆ ಬಂದ್ರೆ ಹಾಯದ, ಮುಂದೆ ಬಂದ್ರೆ ಒದೆಯದ ಪುಣ್ಯಕೋಟಿ ಕತಿ ಗೊತ್ತೈತಿ. ಟಗರಿನ ಕತೆ ಹೊಸಾದು ನೋಡಪಾ. ಕಾಂಗ್ರೆಸ್‌ನ್ಯಾಗ್‌ ಟಗರಿನ ಕಾಳಗ, ಬಿಜೆಪಿ ಒಳ್ಗ ದನಗಳ ಕಾಟ. ಅಲ್ಲಿಗೆ ಲೆಕ್ಕ ಸರಿ ಆಗ್ತದ ನೋಡ್‌. ನಂಗೂ ಸಿನಿಮಾ ನೋಡೊ ತಲಬು ಇಲ್ಲಪಾ. ಟಗರು ಕಾಳಗಾ ನೋಡಾಕ್‌ ಹೊಂಟೀನಿ’ ಅಂತಾನೂ ಸೇರಿಸಿದ.

‘ಗೊತ್ತದಪಾ. ಹಳ್ಯಾಗ್‌ ನಡೆಯೋ ಟಗರು ಕಾಳಗಕ್ಕಿಂತ ವಿಧಾನಸೌಧ್‌ದಾಗಿನ  ಟಗರು ಕಾಳಗ ಜೋರಾಗಿ ನಡದೈತಿ. ಸಿಎಂ ಹಿಂದ್‌ ಕುಂತಿದ್ದ ಮಾಜಿ ಸಿಎಂ ಈಗ ಕೊನೆ ಬೆಂಚಿಗೆ ಹೋಗಿ ಕುಂತಾರ್. ಯಾವಾಗ, ಯಾರಿಗೆ ಗುದ್ದತಾರೋ ಈ ಸಿದ್ದಣ್ಣ ಗೊತ್ತಿಲ್ಲ. ಸ್ವಾಮೀಜಿ ಮಾತ್‌ ಖರೆ ಐತಿ ಅಂತ ಅನಸ್ತದ. ಸಮನ್ವಯ ಸಮಿತಿ ಅಧ್ಯಕ್ಷಗಿರಿ ತಲೆಗೇರಿ, ತಲಿ ಗಟ್ಟಿ ಅದ ಅಂತ ಓಡೋಡಿ ಬಂದು ಬಂಡೆಗಲ್ಲಿಗೆ ಡಿಕ್ಕಿ ಹೊಡದ್ರ ಯಾರ್‌ ತಲೆ ಒಡಿತೈತಿ ಅನ್ನೋದು ಟಗರಿಗೆ ಗೊತ್ತಿರಬೇಕಲೆ. ಅದಿರ್ಲಿ, ರಾತ್ರಿ ತಗೊಂಡಿದ್ದು ಇನ್ನ ಇಳದಿಲ್ಲೇನ್‌. ಮಂಗ್ಯಾಗ್‌ ಹೆಂಡಾ ಕುಡ್ಸಿದ್ಹಂಗ್‌ ಮಾತಾಡ್‌ಬ್ಯಾಡಾ ಮಂಗ್ಯಾನ ಮಾರಿಯವ್ನ’ ಎಂದೆ.

‘ಏಯ್‌, ನೀ ನಂಗ ಮಂಗ್ಯಾ ಅನಬ್ಯಾಡಾ. ನನ್ನ ಮಾರಿಮ್ಯಾಗ್‌ ಮಂಗ್ಯಾ ಕುಣ್ಯಾಕತ್ತದ ಏನ್‌’ ಎಂದು ಜೋರ್‌ ಮಾಡ್ದಾ. ‘ಮಂಗನಿಂದನs ಮಾನವ. ಮಂಗ್ಯಾ ನಮ್ಮ ಪೂರ್ವಜ. ಮಂಗ್ಯಾ ಅಂದ್ರ ಗೌರವ ಸೂಚಕಲೇ, ಮಂಗ್ಯಾ ಬ್ಯಾಡ ಅಂದ್ರ ಮುಷ್ಯಾ ಅಂತೀನಿ ಏಳ್‌’ ಎಂದು ಪುಸಲಾಯಿಸಲು ನೋಡ್ದೆ.

‘ಮಂಗನಿಂದಲೇ ಮಾನವ ಅನ್ನೋದಕ್ಕ ನಿನ್ನ ಹತ್ರ ಏನ್‌ ಸಾಕ್ಷಿ ಐತಪಾ. ಮಂಗನಿಂದ ಮಾನವ ಅನ್ನೊ ಡಾರ್ವಿನ್‌ ಸಿದ್ಧಾಂತನ ಸುಳ್‌ ಐತಿ. ಪಠ್ಯಪುಸ್ತಕ ಬದಲಿಸಬೇಕಾಗೇದ್‌ ಅಂತ ಕೇಂದ್ರ ಮಾನವ ಸಂಪನ್ಮೂಲ ರಾಜ್ಯ ಸಚಿವ ಸತ್ಯಪಾಲ್‌ ಸಿಂಗ್‌ ಅವ್ರು ಹೇಳಿದ್ದು ಸುಳ್‌ ಇರಲಿಕ್ಕಿಲ್ಲ’ ಎಂದ. 

‘ಖರೆ ಮಾತ್‌ ಹೇಳ್ದಿ ನೋಡ್‌. ಸಂವಿಧಾನ ಬದಲಿಸೋರು, ಮೊದ್ಲ ತಮ್ಮ ಬಿಜೆಪಿ ಪಕ್ಷದ ಸಂವಿಧಾನ ಬದಲ್ಸಿ. ಯಡ್ಯೂರಪ್ಪ ವಿರೋಧ ಪಕ್ಷದ ನಾಯಕ ಮತ್ತ ಬಿಜೆಪಿ ರಾಜ್ಯ ಅಧ್ಯಕ್ಷ ಹುದ್ದೆ ನಿಭಾಯ್ಸಾಕ್‌ ಪಕ್ಷದ ಸಂವಿಧಾನದಾಗ್ ಅವಕಾಶ ಇಲ್ಲಪ್ಪ. ಆದ್ರೂ ಪಕ್ಷದ ಸಂವಿಧಾನ ಬದಲ್ಸಾಕ್‌ ಯಾರಿಗೂ ಮನಸ್ಸಿಲ್ಲ. ಅಂಥವ್ರು ಈಗ ಪಠ್ಯಪುಸ್ತಕ ಬದಲ್ಸಾಕ್‌ ಹೊಂಟಾರ್‌ ನೋಡ್‌. ಈ ಮಂಗ್ಯಾ, ಟಗರು, ದನ, ಹುಲಿ, ಕಾಗೆ, ನರಿ, ತೋಳ... ಪ‍್ರಾಣಿಗಳೆಲ್ಲ ಈಗ ನಮ್ಮ ಸ್ವಾಮ್‌ಗೋಳು, ಎಂಎಲ್‌ಎ, ಎಂಪಿಗಳಿಗೆ, ಸಚಿವರಿಗೆ ನೆನಪ್‌ ಆಗಾಕತ್ತಾವ್‌. ಎದುರಾಳಿಗಳನ್ನ ಪ್ರಾಣಿಗಳಿಗೆ ಹೋಲಿಸೋದು ನೋಡಿದ್ರ ಮಂಗನಿಂದ ಮಾನವ ಅಲ್ಲಅನ್ನೋದು ಖರೆ ಐತಿ. ಡಾರ್ವಿನ್‌ ಸಿದ್ಧಾಂತ ಸಂಪೂರ್ಣ ಸುಳ್ಳು. ಮಾನವನಿಂದಲೇ ಮಂಗ... ಅನ್ನೋದು ಸತ್ಯಪಾಲ್‌ ಸಿಂಗ್ ಆಣೆಗೂ ಖರೆ ಐತಿ’ ಎಂದೆ.

ಮಂಗನಿಂದ ಹುಲಿ ಎಡೆಗೆ ಮಾತು ತಿರುಗಿಸಿದ ಪ್ರಭ್ಯಾ, ‘ನಮ್ಮ ಜೂನಿಯರ್‌ ಅನಂತಣ್ಣ ‘ಹುಲಿ (ನರೇಂದ್ರ ಮೋದಿ) ವಿರುದ್ಧ ಕಾಗೆ, ಕೋತಿ, ನರಿ ಮತ್ತಿತರ ಪ್ರಾಣಿಗಳು ಒಂದುಗೂಡ್ಯಾವ್‌ ಅಂತ ಸಖತ್ತಾಗಿ ಹೇಳ್ಯಾನಲ್ಲ’ ಅಂದ.

‘ಹೌದಪಾ, ನರೇಂದ್ರ ಮೋದಿ ಸಿಂಹಾನಾ, ‘ಹುಲಿನೋ’ ಅನ್ನೋದು ಮೊದ್ಲು ನಿರ್ಧಾರ ಆಗಬೇಕಲೇ. ಈಶ್ವರಪ್ನೋರು ಸಿಂಹ ಅಂತ ಕರದಾರ, ಜೂನಿಯರ್‌ ಅನಂತಣ್ಣ ಹುಲಿ ಅಂತ ಕರದಾನ. ತಾವು ‘ಷಹನ್‌ಶಾ’ ಅಥ್ವಾ ಸರ್ವಾಧಿಕಾರಿ ಅಲ್ಲ ಅಂತ ಸ್ವತಃ ಮೋದಿ ಸಾಹೇಬ್ರ ಹೇಳ್ಯಾರ್‌. ಕಾಡಿನ ರಾಜ ಸಿಂಹ ತಾನೆ. ಮೊದ್ಲ ಈ ಗೊಂದ್ಲಾ ಬಗಿಹರಿಬೇಕಾಗೇದ. ಭಾಳ್‌ ಗೊಂದ್ಲಾ ಆದ್ರ, ‘ಸಿಂಹುಲಿ’ ಅಂತ ಲೆಕ್ಕಕ್ಕೆ ತಗೋಳ್ಳೋಣ. ವಿರೋಧ ಪಕ್ಷದವರು ನರಿ, ತೋಳ ಅಂತಾನೂ ಪರಿಗಣಿಸೋಣ. ಹಂಗಿದ್ರ, ಈ ಪ್ರಾಣಿಗಳ ಲೋಕದಲ್ಲಿ ಅಮಿತ್‌ ಶಾ, ಯಡ್ಯೂರಪ್ಪ, ಈಶ್ವರಪ್ಪ, ಅನಂತದ್ವಯರು ಇವರೆಲ್ಲ ಯಾವ ಪ್ರಾಣಿಗಳು. ಚಾಣಕ್ಯ ಖ್ಯಾತಿಯ ಶಾ ಠಕ್ಕ ನರಿ ಎನ್ನಬಹುದೇ. ಉಳಿದವರು ಕತ್ತೆ, ಕಿರುಬುಗಳೇ ಅಥವಾ ಹಾವು– ಮುಂಗುಸಿಗಳೇ? ಇಲ್ಲಾ ಇದಕ್ಕಿಂತ ಭಯಂಕರವಾದ ಡೈನೋಸಾರ್‌ಗಳೇ’ ಎಂದೆ.

‘ಏಯ್‌, ಜನಾ–ದನಾ. ಏನೇನೋ ಮಾತಾಡ್ತಾರ್. ಅವನ್ನೆಲ್ಲ ತಲಿಗಿ ಹಚ್ಕೊಬಾರ್ದು’ ಎಂದು ಪ್ರಭ್ಯಾ, ಚರ್ಚೆಯ ದಿಕ್ಕನ್ನ ಬದಲ್ಸಾಕ್‌ ನೋಡ್ದ.

‘ಹ್ಞಾ, ದನ ಅಂದಕೂಡ್ಲೆ, ಸೀನಿಯರ್‌ ಅನಂತಣ್ಣನ ಮಾತ್‌ ನೆನಪಾತು ನೋಡಪಾ. ‘ಭಾ–ಜಪ’ದ ಒಳ್ಗ ಕೆಲವು ದನಾ ಅದಾವಂತ. ಅವ್ಕ ಎಲ್ಲಿ, ಯಾವಾಗ್‌ ಏನ್‌ ಮಾತನಾಡಬೇಕ್‌ ಅಂತಾನೂ ಗೊತ್ತಿಲ್ಲಂತ. ಸಿಕ್ಕ ಸಿಕ್ಕಲ್ಲಿ ಬಾಯಿ ಹಾಕ್ದಂಗ್‌ ಅವುಗಳ ಬಾಯಿಗೆ ಬಟ್ಟೆ ಹಾಕಬೇಕಂತ ಅವ್ರು ಸಲಹೆ ಕೊಟ್ಟಾರಲ್ಲಪ್ಪ, ಅದ್ಕ ಏನಂತಿ. ನಮ್ಮ ಕಡಿ, ತುಡುಗು ದನಗೋಳ್ನ ಕೊಂಡವಾಡಕ್‌ ಹಾಕ್ತಾರ್‌, ನೆನಪ್‌ ಅದ ಏನ್‌’ ಎಂದೆ.

‘ರಾಜಕಾರಣಿಗಳು ಮಂಗನಿಂದ ಹಿಡಿದು, ಸಿಂಹ, ದನಗಳವರೆಗೆ, ಪಠ್ಯಪುಸ್ತಕ ಬದಲಿಸುವ ಬಗ್ಗೆ ಮಾತನಾಡೋದು ನೋಡಿದ್ರ, ಖರೇನ ಹೊಸ ಪಠ್ಯಪುಸ್ತಕ ರಚನಾ ಸಮಿತಿಯನ್ನ ತುರ್ತಾಗಿ ರಚಿಸಿದ್ರ ಕೆಲ ಸಾಹಿತಿ, ಬುದ್ಧಿಜೀವಿ ಮತ್ತ ಪ್ರಾಣಿ ಪ್ರೇಮಿಗಳಿಗೆ ಕೆಲ್ಸನಾದ್ರು ಸಿಕ್ತೈತಿ. ಸಿದ್ರಾಮಣ್ಣನ ಹಾಗೆ, ಕುಮಾರಣ್ಣನೂ ಇವತ್ತಲ್ಲ ನಾಳೆ ತಮ್ಮ ಮನೆ ಬಾಗಿಲಿಗೆ ಬರ್ತಾನ, ಆಶೀರ್ವಾದ ಕೇಳ್ತಾನ, ಸಲಹೆ ಪಡಿತಾನ ಅಂತ ಚಾತಕಪಕ್ಷಿ ಹಂಗ್‌ ಕಾಯ್ತಾ ಕುಂತಿರೋ ನಾಡಿನ ಸಾಹಿತಿಗಳು ಹೊಸ ಕೆಲ್ಸಾ ನೋಡಿ ಖುಷಿಪಟ್ಟಾರು. ಯಾವುದೇ ಪ್ರಾಣಿಯ ಹಕ್ಕು, ಘನತೆಗೆ ಕಿಂಚಿತ್ತೂ ಧಕ್ಕೆ ಬರದ್ಹಂಗ, ಬಯಲುಸೀಮೆ, ಮಲೆನಾಡು, ಅರಣ್ಯಪ್ರದೇಶ, ಕಾಡಿನಂಚಿನ ಪ್ರದೇಶದ ಪ್ರಾಣಿಗಳಿಗೆ ತಾರತಮ್ಯ ಎಸಗದ್ಹಂಗ ಪಠ್ಯಪುಸ್ತಕ ರಚಿಸಬೇಕು ಅಂತ ಮೊದ್ಲ ತಾಕೀತು ಮಾಡಿರಬೇಕು. ಇಲ್ಲಂದ್ರ ಬಜೆಟ್‌ನ್ಯಾಗ್‌ ಅನ್ಯಾಯ ಮಾಡಿದ್ಹಂಗ್‌, ದುರ್ಬಲ ಪ್ರಾಣಿಗಳಿಗೂ ಅನ್ಯಾಯ ಆಗಬಹುದು’ ಅಂತ ಪ್ರಭ್ಯಾ ಎಚ್ಚರಿಕೆ ನೀಡ್ದ.

‘ಅದು ಖರೇನ. ಶಾಲಾ ಪಠ್ಯಪುಸ್ತಕದಾಗ್‌ ಮಂಗನಿಂದ ಮಾನವನಲ್ಲ, ಸಿಂಹುಲಿ ವಿರುದ್ಧ ಒಂದಾದ ತೋಳಗಳು, ಟಗರಿನ ಮುನಿಸು, ಕೊಂಡವಾಡಕ್ಕೆ ಹಾಕಿದ ದನ ಅಂತ ಹೊಸ ಪಾಠ ಬೋಧಿಸಿದ್ರ ಭಾಳ್‌ ಛಲೋ ಇರ್ತದ’ ಎಂದೆ.

‘ನಾವೆಲ್ಲ ಪುಣ್ಯಕೋಟಿಯ ಕಥೆ ಕೇಳಿ, ಗೋವಿನ– ನೀನಾರಿಗಾದೆಯೋ ಎಲೆ ಮಾನವಾ... ಹಾಡು ಕೇಳಿ ಬೆಳೆದವ್ರು. ಈಗಿನ ಮಂಗನಿಂದ ಮಾನವನಲ್ಲ ಅಂತ ಅನ್ನೋರಿಗೆ ಸಿಪಾಯಿ ರಾಮು ಚಿತ್ರದ ‘ಕೊಕರೆ ಕೊ... ವಹಾರೆ ಮೇರಾ ಮುರ್ಗಾ, ವಹಾರೆ ನನ್ನ ಸಿಂಗ, ಸಿಂಗನ ಮುಂದೆ ರಂಗನು ಎಂದು ಇಂಗು ತಿಂದ ಮಂಗ... ಹಾಡನ್ನೂ ಪಠ್ಯ ಮಾಡಬೇಕು ನೋಡು’ ಎಂದೆ. 

‘ಆಯ್ತು ಬಿಡೊ ಮಾರಾಯಾ. ಬೆಳಗೆದ್ದು ಯಾರ ಮುಖಾ ನೋಡಿದ್ನೊ. ನಿನ್ನಿಂದ ಒಳ್ಳೆ ಮಂಗಳಾರ್ತಿ ಆಯ್ತು. ಜಳಕಾ ಮಾಡ ಬರ್ರಿ, ನಾಷ್ಟಾ ತಣ್ಣಗಾಗ್ತದ ಅಂತ ಹೆಂಡ್ತಿ ಕೂಗಾಕತ್ತಾಳ, ಫೋನ್‌ ಇಡ್ತಿನಿ’ ಅಂದ.

‘ಸಂಜಿಮುಂದ ಸಿಗ್ತೀನಿ, ಕ್ವಾರ್ಟರ್‌ ಕುಡಸ್ತಿನಿ’ ಅಂತ ಸಮಾಧಾನ ಹೇಳಿ ನಾನೂ ಫೋನ್‌ ಕಟ್‌ ಮಾಡಿ ಹಾಸಿಗೆಯಿಂದ ಮೇಲೆದ್ದೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 3

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !