ಬುಧವಾರ, ಆಗಸ್ಟ್ 21, 2019
22 °C

ಇದು ಹುಲಿರಾಯರ ಕಾಲವಯ್ಯಾ!

Published:
Updated:
Prajavani

ಕಳೆದ ವರ್ಷ ಮೈಸೂರು ಝೂಗೆ ಹೋಗಿ, ನನ್ನ ನೆಚ್ಚಿನ ಗೆಳೆಯ ಹುಲಿರಾಯನನ್ನು ಮಾತನಾಡಿಸಿ ಬಂದದ್ದು ಓದುಗರಿಗೆ ನೆನಪಿರಬಹುದು. ಅವನನ್ನು ಮೊನ್ನೆ ಮತ್ತೊಮ್ಮೆ ಭೇಟಿಯಾದೆ. ದೇಶದಲ್ಲಿ ಹುಲಿಗಳ ಸಂತತಿ ಹೆಚ್ಚಿರುವ ಶುಭ ಸಮಾಚಾರ ತಿಳಿಸಬೇಕಾಗಿತ್ತು.

‘ಗುಡ್ ಮಾರ್ನಿಂಗ್ ಹುಲಿರಾಯ! ಹೇಗಿದ್ದೀಯ? ಸಮಯಕ್ಕೆ ಸರಿಯಾಗಿ ಆಹಾರ ಹಾಕ್ತಾರೆ ತಾನೇ?’

‘ನೀನೊಬ್ಬ ಮೂರ್ಖ! ಸರಿಯಾದ ಸಮಯಕ್ಕೆ ಆಹಾರ ತರ್ತಾನೋ ಇಲ್ಲವೋ ಅಂತ ನೋಡೋಕೆ ನಾನೇನು ವಾಚ್ ಕಟ್ಟಿದ್ದೀನಾ, ಅದಿರಲಿ ಏನ್ ಈ ಕಡೆ?’

‘ನಿನಗೊಂದು ಗುಡ್ ನ್ಯೂಸ್ ಹೇಳೋಣಾಂತ ಬಂದೆ. ನಮ್ಮ ದೇಶದಲ್ಲಿ ಹುಲಿಗಳ ಸಂತತಿ ಕಳೆದ ನಾಲ್ಕು ವರ್ಷಗಳಲ್ಲಿ 741ಕ್ಕೆ ಏರಿದೆಯಂತೆ ಮಾರಾಯ!’

‘ಬರೀ 741! ನನಗ್ಯಾಕೋ ಡೌಟು... ಅವರು ಗಣತಿ ಕೆಲಸ ಸರಿಯಾಗಿ ಮಾಡಿಲ್ವೇನೋ ಅಂತ!’

‘ಅರೆ! ಯಾಕಾಗಂತೀಯಾ?’

‘ಅಲ್ಲ ಮತ್ತೆ... ದೇಶದಲ್ಲಿರೋ ಎರಡು ಕಾಲು ಹುಲಿಗಳನ್ನು ಅವರು ಗಣತಿಯಲ್ಲಿ ಸೇರಿಸಿಲ್ಲಾಂತ ಕಾಣುತ್ತೆ. ಅತ್ಯಾಚಾರ, ಕೊಲೆ ಮಾಡುವ ಹುಲಿಗಳ ಸಂತತಿಗೆ ಈಗ ಎಮ್ಮೆ ಕಳ್ಳರು ಮತ್ತು ಮಕ್ಕಳ ಕಳ್ಳರೆಂದು ಭಾವಿಸಿ ದಾಳಿ ಮಾಡುವ ಹುಲಿಗಳೂ ಸೇರಿರುವುದು ನನಗೇನು ಗೊತ್ತಿಲ್ಲದ ವಿಚಾರವೇ? ಹ್ಞಾಂ... ಮರೆತೆ, ಈಗ ದೇವರ ಹೆಸರಿಗೆ ಜೈಕಾರ ಹಾಕದವರ ಮೇಲೂ ದಾಳಿ ಮಾಡುತ್ತಾರಂತಲ್ಲ?’

‘ಅದು ನಿಜ, ಆದರೆ ಹುಲಿ ಗಣತಿಯಲ್ಲಿ 2014ರಿಂದ 2018ರವರೆಗೆ ಮಾತ್ರ ಹೆಚ್ಚಿದ ಸಂತತಿಯನ್ನು ಸೇರಿಸಿದ್ದಾರೆ.ದೇವರ ಹೆಸರು ಹೇಳದಿದ್ದವರ ಮೇಲೆ ಎರಗುವ ಹೊಸ ಹುಲಿಗಳು ಹುಟ್ಟಿರೋದು 2019ರಲ್ಲಷ್ಟೇ’.

‘ಹಾಗಾದರೆ ಮುಂದಿನ ಗಣತಿಯಲ್ಲಿ ಹುಲಿರಾಯರುಗಳ ಸಂಖ್ಯೆ ವಿಪರೀತ ಏರಿಕೆಯಾಗುವುದು ಗ್ಯಾರಂಟಿ’.

‘ನೋ ಡೌಟ್! ಉತ್ತರ ಪ್ರದೇಶದಲ್ಲಂತೂ ಹುಲಿ- ರಾಯರುಗಳದ್ದೇ ಕಾರುಬಾರು!’

‘ಓಹ್! ಹಾಗಾದರೆ ಅಲ್ಲಿ ಹುಲಿಗಳನ್ನು ಸಂರಕ್ಷಿಸಿ ಅನ್ನೋ ಬದಲು ಹುಲಿ- ರಾಯರನ್ನು ಶಿಕ್ಷಿಸಿ ಅನ್ನೋ ಸ್ಲೋಗನ್ ಜಾರಿಯಲ್ಲಿರಬಹುದಲ್ಲವೇ?’

‘ಹ್ಞೂಂ ಕಣೋ... ಅದಕ್ಕೆ ಉನ್ನಾವ್ ಅತ್ಯಾಚಾರ ಮತ್ತು ಸಂತ್ರಸ್ತೆಯ ಕೊಲೆ ಯತ್ನ ಪ್ರಕರಣವೇ ಸಾಕ್ಷಿ!’

‘ಆ ಪ್ರಕರಣದಲ್ಲಿ ಅದ್ಯಾರೋ ಆಳುವ ಪಕ್ಷದ ಶೋಷಕನೇ ಪ್ರಮುಖ ಆರೋಪಿಯೆಂದು ಕೇಳಿದೆ. ಈ ಬಗ್ಗೆ ನಿಮ್ಮ ಪ್ರಧಾನಿ ಮೌನ ಮುರಿಯಲೇಬೇಕು!’

‘ಅಲ್ಲಯ್ಯಾ... ನಮ್ಮ ಸುತ್ತಮುತ್ತಲೇ ಬೇಕಾದಷ್ಟು ಹುಲಿರಾಯರು, ಹೆಬ್ಬಾವು, ಕೋತಿರಾಮಣ್ಣರಿದ್ದಾರೆ. ಹಾಗಿರುವಾಗ ಪ್ರಧಾನಿಯೋರು ಡಿಸ್ಕವರಿ ಚಾನೆಲ್‌ನ ಮ್ಯಾನ್ ಅಂಡ್‌ ವೈಲ್ಡ್ ಕಾರ್ಯಕ್ರಮಕ್ಕಾಗಿ ಯಾಕೆ ದಟ್ಟಡವಿಗೆ ಹೋಗಬೇಕಾಗಿತ್ತು?’

‘ನಿಜ, ನಿಜ. ಈಗ ಹೊಸತಾಗಿ ರಾಜ್ಯಭಾರ ಮಾಡುವವರು ರಾಜಾ ಹುಲಿಯಂತೆ! ಹೌದೇನೋ?’

‘ಹ್ಞೂಂ, ಶಿಕಾರಿಪುರದವರಾದ್ದರಿಂದ ಅವರನ್ನು ರಾಜಾ ಹುಲಿ ಎಂದು ಕರೆಯುತ್ತಾರೋ ಇಲ್ಲವೋ ಎಂಬುದು ಗೊತ್ತಿಲ್ಲ. ಒಟ್ಟಿನಲ್ಲಿ ಜನರ ಪಾಲಿಗೆ ಅವರು ಮುಂದೆ ರಾಜ ಹುಳಿಯಾಗದಿದ್ದರೆ ಸಾಕು!’

‘ಮೊನ್ನೆ, ವಿಶ್ವಾಸಮತ ಯಾಚನೆ ವೇಳೆ ಮೈತ್ರಿಕೂಟದ ಶಾಸಕರು ಕಾಲಹರಣ ಮಾಡುತ್ತಾ, ವಿರೋಧ ಪಕ್ಷದ ಕಾಲೆಳೆಯುತ್ತಿದ್ದಾಗ, ಇದೇ ರಾಜಾ ಹುಲಿ ಥೇಟ್ ಇಲಿಯಂತೆಯೇ ಕಾಣುತ್ತಿದ್ದರಲ್ಲ!’

‘ಪರವಾಗಿಲ್ವೇ... ನಿನಗೂ ರಾಜಕೀಯದಲ್ಲಿ ಸಕತ್ ಆಸಕ್ತಿಯಿದ್ದಂತಿದೆ!’

‘ಹಾಗೇನಿಲ್ಲ, ಕೆಲವೊಮ್ಮೆ ನನ್ನ ಪಾಲಕ ಮಹಾಶಯ ವಾಟ್ಸ್‌ಆ್ಯಪ್‌ನಲ್ಲಿ ಬರುವ ವಿಡಿಯೊ ತೋರಿಸುತ್ತಾನೆ. ಈಚೆಗೆ ನಿಧಾನಸಭೆಯಲ್ಲಿರುವ ಹಾವು, ಮುಂಗುಸಿಗಳನ್ನು ತೋರಿಸಿದ್ದ. ಮೊನ್ನೆ ನಿಮ್ಮ ರಾಜಾ ಹುಲಿ ವಿಶ್ವಾಸಮತ ಗೆದ್ದಾಗ ಎಮ್ಮೆಲ್ಲೆ ಕೋತಿಯಾಚಾರ್ಯರು ಕುಣಿದದ್ದನ್ನು ನೋಡಿದ್ದೆ’.

‘ಹ್ಞಾಂ, ಒಂದು ಮುಖ್ಯ ವಿಷಯ ಗೊತ್ತಾ? ಮೈಸೂರ ಹುಲಿ ಟಿಪ್ಪುವಿನ ಜಯಂತಿ ಆಚರಣೆಗೆ ಇನ್ನು ಮುಂದೆ ಫುಲ್‌ಸ್ಟಾಪ್ ಹಾಕಿದ್ದೇವೆ ಎಂದು ರಾಜಾ ಹುಲಿ ಗರ್ಜಿಸಿದ್ದಾರೆ. ಹಾಗಂತ ನಿಧಾನಸಭೆಯಲ್ಲಿ ಮೈಸೂರ ಹುಲಿರಾಮಯ್ಯರು ಸುಮ್ಮನೆ ಕೂರೊಲ್ಲ ಬಿಡು’.

‘ಯಾಕೆ? ಆ ಹುಲಿರಾಮಯ್ಯ ಇದೇ ನಿಧಾನಸಭೆಯಲ್ಲಿ ಮೊನ್ನೆ ಕೈಕೈ ಹಿಡಿದು ಬಹಳ ಕಾಲದ ಜಿಗ್ರಿ ದೋಸ್ತ್‌ಗಳಂತೆ ಮಾತನಾಡುತ್ತಿದ್ರಲ್ಲ’

‘ನೋಡಯ್ಯಾ, ನಿನ್ನೆ ಕೈಕೈ ಹಿಡಿದು ಮಾತನಾಡಿದವರು ಇವತ್ತು ಖಂಡಿತವಾಗಿಯೂ ಕೈಕೈ ಮಿಲಾಯಿಸಬಹುದು ಎಂದು ರಾಜಕಾರಣದ ರೂಲ್ ಬುಕ್ ಹೇಳುತ್ತದೆ. ಹಾಗಿರುವಾಗ...’

‘ಗೊತ್ತಾಯಿತು ಬಿಡು. ಈ ನಿಮ್ಮ ಹಾಳು ಪೋಲಿಟ್ರಿಕ್ಸು ಬಿಟ್ಟು ಬೇರೆ ಮಾತನಾಡು’.

‘ಬೇರೆ ಹಾಳಾದ್ದು... ಹ್ಞಾಂ! ಅರವತ್ತು ಸಾವಿರ ಜನರ ದುಡ್ಡನ್ನು ನುಂಗಿ ತಪ್ಪಿಸಿಕೊಂಡಿದ್ದ ಷೇರ್ ಖಾನ್, ಅರಣ್ಯ ಕಾವಲುಪಡೆಯವರ ಬಲೆಗೆ ಸಿಕ್ಕಿಬಿದ್ದಿದೆ!’

ಹುಲಿರಾಯನಿಗೆ ಫಾಸ್ಟ್ ಫುಡ್ ತಿನ್ನುವ ಹೊತ್ತಾಯಿತು. 

Post Comments (+)