ಕಣ್ಣೀರೇಕೆ...ಬಿಸಿ ಉಸಿರೇಕೆ...

7

ಕಣ್ಣೀರೇಕೆ...ಬಿಸಿ ಉಸಿರೇಕೆ...

Published:
Updated:
ಶೆಟ್ಟಿ

‘ನಾವಿರುವುದೇ ನಿಮಗಾಗಿ… ನೀವಿರುವುದೇ ನಮಗಾಗಿ… ಕಣ್ಣೀರೇಕೆ… ಬಿಸಿ ಉಸಿರೇಕೆ… ಬಾಳುವಿರೆಲ್ಲಾ ಹಾಯಾಗಿ…’ ಮೊನ್ನೆ ‘ಜನತಾ ದರ್ಶನ’ದಲ್ಲಿ ರಾಮನಗರದಿಂದ ಬಂದವನೊಬ್ಬ ಮುಖ್ಯಮಂತ್ರಿಯವರ ಎದುರು ತನ್ನ ಗಾರ್ದಭ ಕಂಠದಿಂದ ಹಾಡತೊಡಗಿದ.

‘ಏನ್ ಬ್ರದರ್, ನಾವಿರುವುದೇ ನಿಮಗಾಗಿ ಎಂದು ಹಾಡುತ್ತಿದ್ದೀಯಲ್ಲ… ಅದು ನಾನಿರುವುದೇ ಎಂದಾಗಬೇಕಲ್ಲವೇ?’ ಸಿ.ಎಂ. ಸ್ವಾಮಿ ತಪ್ಪನ್ನು ಎತ್ತಿ ತೋರಿಸಿದರು.

‘ಅದೇ ಸಾರ್, ಅದು ನಾನಿರುವುದೇ ನಿಮಗಾಗಿ... ಎಂದೇ ಆಗಬೇಕು ಮತ್ತು ಈ ಹಾಡನ್ನು ಈ ಕರುನಾಡಿನ ದೊರೆಯಾದ ನೀವು ಹಾಡಬೇಕಾಗಿರುವವರು. ಆದರೆ ನೋಡಿ, ನೀವೇ ಕಣ್ಣೀರು ಹಾಕುತ್ತಿದ್ದೀರಿ!
ನೀವಲ್ಲವೇ ನಮಗೆಲ್ಲಾ ಧೈರ್ಯ ತುಂಬಬೇಕಾದವರು’ ಅನ್ನುತ್ತಾ ಆ ಗಾರ್ದಭ ಕಂಠ ಅಲ್ಲಿಂದ ಜಾಗ ಖಾಲಿ ಮಾಡಿತು.

ಕಣ್ಣಾಲಿಗಳಿಂದ ಬಿದ್ದ ಎರಡೇ ಎರಡು ಹನಿಗಳು ದೇಶದಾದ್ಯಂತ ಇಷ್ಟು ದೊಡ್ಡ ಸುದ್ದಿ ಮಾಡಿ ಗುದ್ದು ಕೊಡುತ್ತವೆ ಎಂದು ಸ್ವಾಮಿ ಖಂಡಿತ ಅಂದುಕೊಂಡಿರಲಿಲ್ಲ. ರಾಜ್ಯದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿರುವಾಗ ಈ ಕಣ್ಣೀರ ಹನಿಗಳಿಗೆ ಹೀಗೆ ಪ್ರಾಮುಖ್ಯ ಸಿಗಬಾರದಿತ್ತು ಎಂದು ಸ್ವತಃ ವರುಣದೇವನೂ ಟ್ವಿಟರ್‌ನಲ್ಲಿ ಬರೆದಿದ್ದಾನೆ ಎಂದರೆ ನೀವೇ ಊಹಿಸಿ, ಸಿ.ಎಂ. ಕಣ್ಣೀರಿಗೆ ಸಿಕ್ಕ ಮಹತ್ವ!

ಟ್ವಿಟರ್‌ನಲ್ಲಿ ಇದ್ದಕ್ಕಿದ್ದ ಹಾಗೆ ಪ್ರತ್ಯಕ್ಷನಾಗಿರುವ ಶಿವನಂತೂ ಸಿಕ್ಕಾಪಟ್ಟೆ ಕೆಂಡಾಮಂಡಲನಾಗಿಬಿಟ್ಟಿದ್ದಾನೆ. ಆದರೆ ಶಿವನ ಕೋಪಕ್ಕೆ ಕಾರಣ ಸ್ವಾಮಿಯ ಕಣ್ಣೀರಲ್ಲ. ಸ್ವಾಮಿ ಅಂದು ಕಣ್ಣೀರಿಡುತ್ತಲೇ ಒಂದು ಭರ್ಜರಿ ಡೈಲಾಗ್ ಬಿಟ್ಟಿದ್ದರು.

‘ನಾನು ನೋವುಗಳನ್ನು ನುಂಗುವ ವಿಷಕಂಠನಾಗಿದ್ದೇನೆ’ ಎಂದು. ಈ ಹೇಳಿಕೆಯನ್ನು ಶಿವ ಖಂಡಿಸಿ ‘ವಿಷ ಕುಡಿಯುವ ತಾಕತ್ತು ನನಗೆ ಮಾತ್ರ ಇರುವುದು. ಹಾಗಿರುವಾಗ ಒಬ್ಬ ಯಃಕಶ್ಚಿತ್ ಹುಲು ಮಾನವ ವಿಷಕಂಠ ಎಂದು ಹೇಳುತ್ತಿರುವುದು ಶುದ್ಧ ಸುಳ್ಳು’. ಎಂದು ಟ್ವಿಟರ್‌ನಲ್ಲಿ ಬರೆದಿರುವುದನ್ನು ನೂರು ಕೋಟಿ ಶಿವಭಕ್ತರು ಮರುಟ್ವೀಟ್ ಮಾಡಿದ್ದಾರೆ.

ಇತ್ತ ಭೂಲೋಕದಲ್ಲಿ ಕಾಂಗ್ರೀಸ್ ಪಾರ್ಟಿಯ ಶಿವ ಕೂಡಾ ಟ್ವಿಟರ್ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಸಿ.ಎಂ.ಗೆ ನಾವೇನೂ ವಿಷ ಕುಡಿಸೋಕೆ ಹೋಗಿಲ್ಲ. ನಮ್ಮ ಪಾರ್ಟಿ ಅವರಿಗೆ ಅಮೃತ ನೀಡಿದೆ. ನಾನೇ ಕೈಯಾರೆ ಕೊಟ್ಟಿದ್ದು ಎಲ್ಲರಿಗೂ ಗೊತ್ತು’ ಎಂದು ಅವರು ಬರೆದಿದ್ದಾರೆ.

ಫಾರ್ಚೂನರ್ ಜಮೀನ್ ಬರೆದ ಈ ಟ್ವೀಟ್‌ ಅನೇಕರ ಗಮನ ಸೆಳೆದಿದೆ. ಅವರು ‘ಸ್ವಾಮಿ, ಜನರಿಗೆ ಅಮೃತ ಕೊಟ್ಟು ತಾನು ವಿಷ ಕುಡಿಯುತ್ತಿದ್ದೇನೆ ಅಂದಿದ್ದಾರೆ. ಟವೆಲ್‌ಗೆ ಹಚ್ಚಿಕೊಳ್ಳುವುದಕ್ಕೆಂದು ಅವರು ಮನೆಯಲ್ಲಿ ಮೂಟೆಗಟ್ಟಲೆ ‘ಅಮೃತಾಂಜನ’ ತಂದಿಡುತ್ತಾರಷ್ಟೆ. ಅವರಲ್ಲಿ ಅಮೃತ ಇರುವುದಂತೂ ಸಾಧ್ಯವೇ ಇಲ್ಲ!’ ಎಂದು ವಾದಿಸಿದ್ದಾರೆ.

ಡಾಕ್ಟರ್ ಅಂಬಿ ಬಿಯಸ್ಸು ಹೊಸತೊಂದು ವಿಷಯವನ್ನೇ ತೆರೆದಿಟ್ಟಿದ್ದಾರೆ. ಅವರ ಪ್ರಕಾರ ‘ಮಾಜಿ ಸಿಎಮ್ಮಯ್ಯನವರು ನಿದ್ದೆ ರೋಗದಿಂದ ಬಳಲುತ್ತಿದ್ದರೆ, ಈಗಿನ ಸಿ.ಎಂ.ಗೆ ಆಗಾಗ ಕಣ್ಣೀರು ಹರಿಸುವ ರೋಗವಿದೆ. ಇದಕ್ಕೆ ಎಮೋಶನಾ ಫೋಬಿಯಾ ಎಂಬ ಹೆಸರಿದೆ ಎಂದೂ ಡಾಕ್ಟರ್ ಫೀಸು ಇಲ್ಲದೇ ಟ್ವೀಟ್ ಮಾಡಿದ್ದಾರೆ.

‘ಕ್ರೇಜಿಬಾಲರಿಗೆ ಕೇಂದ್ರ ಸರ್ಕಾರ ಅಷ್ಟೊಂದು ಉಪಟಳ ಕೊಟ್ಟರೂ ಅವರೂ ಇದುವರೆಗೆ ಅತ್ತಿದ್ದು ಯಾರಾದರೂ ಕಂಡಿದ್ದೀರಾ? ಈ ನಿಟ್ಟಿನಲ್ಲಿ ಸ್ವಾಮಿ ಮಹಾಶಯರು ಕ್ರೇಜಿ ಅವರಿಂದ ಸಲಹೆಗಳನ್ನು ಅಗತ್ಯವಾಗಿ ಕೇಳತಕ್ಕದು’ ಎಂದು ಕ್ರೇಜಿಭಕ್ತ್ ಟ್ವೀಟ್ ಮಾಡಿದ್ದಾರೆ.

ಕೀಟಲೆ ಕಿಟ್ಟ ಟ್ವೀಟ್ ಮಾಡಿದ್ದು ಹೀಗೆ: ‘ಈಚೆಗೆ ರಾಜಕಾರಣಿಗಳು ಅಳುವುದನ್ನು ಫ್ಯಾಷನ್ ಮಾಡಿಕೊಂಡಿದ್ದಾರೆ. ನಮ್ಮ ಸಿ.ಎಂ. ಮಾತ್ರವಲ್ಲ, ಹಿಂದೆ ಬಾಜಪ್ಪರು ಅತ್ತಿಲ್ಲವೇ?
ಟಿಕೆಟ್ ಸಿಗದಿದ್ದಾಗ, ಮಂತ್ರಿಗಿರಿ ತಪ್ಪಿದ್ದಾಗ ಎಷ್ಟು ಮಂದಿ ಗೊಳೋ ಎಂದು ಅತ್ತಿಲ್ಲ! ಆದ್ದರಿಂದ ಅಳುವ ಗಂಡಸರು ರಾಜಕಾರಣಿಗಳಾಗಿದ್ದರೆ ನಂಬಲೇಬಾರದು’.

ಈ ಕಣ್ಣೀರು ಅಥವಾ ವಿಷಕಂಠ ಹೇಳಿಕೆ ಬಗ್ಗೆ ವಿಷ ಕಾರಬಾರದೆಂದು ಹೈಕಮಾಂಡ್ ತಾಕೀತು ನೀಡಿರುವುದರಿಂದಲೋ ಏನೋ, ಮಾಜಿ ಸಿಎಮ್ಮಯ್ಯರು ಮಾಧ್ಯಮಗಳಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದಾರಂತೆ. ಇಷ್ಟಾಗ್ಯೂ ಅಪರಿಚಿತರು ಯಾರೋ ಅವರ ಹೆಸರಲ್ಲಿ ಟ್ವೀಟ್ ಮಾಡಿದ್ದು ಎಲ್ಲರ ಗಮನ ಸೆಳೆದಿದೆ. ಅದು ಹೀಗಿದೆ: ‘ಅವರಿಗೆ ವಿಷ ಕೊಡೋಕೆ ನಾವೇನು ಹಾವುಗಳನ್ನು ಸಾಕಿದ್ದೇವೆಯೋ? ಅವರು ನಮ್ಮ ಮೇಲೆ ‘ಹಿಟ್‌ ಅಂಡ್ ರನ್’ ಮಾಡುವುದು ಇನ್ನಾದರೂ ನಿಲ್ಲಿಸಲಿ ಎಂದು ಸಿ.ಎಂ. ಕುರ್ಚಿಯಲ್ಲಿ ಕೂರಿಸಿದರೆ ಇನ್ನೂ ಅದೇ ಚಾಳಿ ಮುಂದುವರಿಸಿದ್ದಾರೆ...’

ಬಡಜೀವಿ ಎಂಬ ಟ್ವೀಟಿಗ ಏನು ಬರೆದಿದ್ದಾರೆ ನೋಡಿ: ‘ಸಿ.ಎಂ. ಕಣ್ಣೀರು ಸುರಿಸುವುದರಲ್ಲಿ ತಪ್ಪಿಲ್ಲ. ಆದರೆ ಏಳು ತಿಂಗಳಿನಿಂದ ಸಂಬಳ ಕೊಡದ ಮಹಾನಗರ ಪಾಲಿಕೆಯ ದೆಸೆಯಿಂದ, ಒಬ್ಬ ಪೌರಕಾರ್ಮಿಕ ಆತ್ಮಹತ್ಯೆ ಮಾಡಿಕೊಂಡು ಸತ್ತಾಗ ಅವರು ಯಾಕೆ ಅತ್ತಿಲ್ಲ? ಭಾವುಕ ಸಿ.ಎಂ. ಅವರೇ, ಇಂತಹ ಹಲವಾರು ಘಟನೆಗಳು ಮುಂದೆ ನಡೆಯಬಹುದು. ಆವಾಗ ಖಂಡಿತ ಕಣ್ಣೀರು ಹರಿಸಿ’.

ಕೊನೆಯದಾಗಿ ‘ರಾಜೇಶ್ ಖನ್ನಾ ಅಭಿಮಾನಿ’ ಎಂಬುವರು ಹಾಗೇ ಸುಮ್ಮನೆ ಟ್ವೀಟ್ ಮಾಡಿದ್ದಾರೆ… ‘ಐ ಹೇಟ್ ಟಿಯರ್ಸ್!’

ಬರಹ ಇಷ್ಟವಾಯಿತೆ?

 • 12

  Happy
 • 2

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !