ಕಣ್ಸನ್ನೆ; ಪ್ರಿಯಾಳಿಂದ ಪಪ್ಪುತನಕ...

7

ಕಣ್ಸನ್ನೆ; ಪ್ರಿಯಾಳಿಂದ ಪಪ್ಪುತನಕ...

Published:
Updated:
Deccan Herald

ಸಂಜೀಮುಂದ ಹವಾಸಿರಿ ಒಂದ್‌ ಸುತ್‌ ತಿರುಗಾಡಿ ಬಂದ್ರಾತು ಅಂತ ಚಪ್ಪಲಿ ಮೆಟ್ಟಿ ಮನೆಯಿಂದ ಹೊರಡುವಾಗಲೇ ಯಾಕೊ ಎಡಗಣ್ಣು ಹಾರಾಕತ್ತಿತ್ತು. ಎಡಗಣ್ಣು ಹಾರಾಕತ್ತದಂದ್ರ ಏನೋ ಕೆಟ್ಟದ್ದು ಕಾದಿರತೈತಿ ಅಂತ ಕೆಲವರು ಹೇಳೋದು ನೆನಪಾದ್ರೂ, ‘ಹೇ, ಅದನ್ನೆಲ್ಲ ನಂಬ್ಕೊಂಡು ಕುಂತ್ರ ಮುಗದ್‌ ಹೋತ್‌’ ಅಂತ ನನ್ನಷ್ಟಕ್ಕೆ ಸಮಾಧಾನ ಮಾಡ್ಕೊಂಡೆ. ಮೂರ್ನಾಲ್ಕು ಉಡಾಳ್‌ ಹುಡುಗ್ರು ನನ್ನ ಮುಂದ್‌ ಜೋರಾಗಿ ಮಾತಾಡ್ಕೊಂಡ್‌ ಹೊಂಟಿದ್ರು.

‘ಲೇ, ನಂಗ ಹೊಡ್ಯಾಕs ಬರವಲ್ದು, ಎಷ್ಟು ಟ್ರೈ ಮಾಡಿದ್ರೂ ಆಗವಲ್ದು’ ಅಂದ ಒಬ್ಬ. ‘ಅದೂ ಒಂದು ಕಲಾ ಮಗನ. ಎಲ್ಲಾರ‍್ಗು ಬರೂದಿಲ್ಲ. ಕಲಾಕಾರರಿಗೆ ಮಾತ್ರ ಕರಗತ ಆಗಿರತೈತಿ. ಒಂದ್ವೇಳೆ ಹೊಡದ್ರೂ ಶೆಟಗೆವ್ವ ಹಣೆಬರದಾಗ್‌ ಬರ್ದಿದಿಲ್ಲಂದ್ರ ಯಾರೂ ನಿನ್ನ ಬಲ್ಯಾಗ್‌ ಬೀಳೂದೂ ಇಲ್ಲ’ ಅಂದ ಇನ್ನೊಬ್ಬ.

‘ಹೆಂಗ್‌ ಹೊಡ್ಡಿ ತೋರ್ಸು’ ಅಂದ ಮೂರನೆಯಂವ, ‘ಹಿಂಗ್‌ ಹೊಡ್ದೆ ನೋಡ್’ ಅಂತ ಒಬ್ಬ ಹೊಡ್ದು ತೋರ್ಸಿದ. ‘ಮಳ್‌ ನನ್ನ ಮಗ್ನ, ಎರಡೂ ಹೊಡಿತಾರೇನ್ಲೆ. ಒಂದ್‌s ಹೊಡಿಬೇಕ್ಲೆ. ಅಂದ್ರನ ಅದರ ಮಜಾನೆ ಬ್ಯಾರೆ. ಅದು ಒನ್‌ವೇ ಇದ್ಹಂಗ್‌. ಆ ಕಡಿಂದೂ ಪರತ್ ಪಾವ್ತಿ ಬಂದ್ರ ನೀ ಪಾಸಾದಂಗs’ ಎಂದ. ‘ನಾನು ಹೊಡ್ಯಾಕ್‌ ಹೋದ್ರ ಪಿಸಕ್ಕನೆ ಒಳ್ಗ ಹೋದ್ಲು ಪಿಕನಾಸಿ’ ಅಂತಂದ ನಾಲ್ಕನೆಯಂವ ಬೇಸರದಿಂದ. ‘ಮಂದಿ ಇದ್ದಾಗ ಹೊಡ್ದರ‍್ನ ಅದರ ಮಜಾನ ಬ್ಯಾರೆಲೆ’ ಅಂದ ಮೊದಲಿನವ.

‘ಲೋ ಬೇವರ್ಸಿಗಳಾ ಹಂಗೆಲ್ಲ ಮಾಡ್ಬಾರ್ದು. ದೊಡ್ಡವರಿಗೆ ಗೊತ್‌ ಆದ್ರ ಹಿಡ್ದು ನಾಲ್ಕು ಬಾರಸ್ತಾರ್‌’ ಅಂತ ಒಬ್ಬಾಂವ ಬುದ್ಧಿ ಹೇಳಾಕ್‌ ನೋಡ್ದ. ‘ಏಯ್‌ ಗಾಂಧಿ ಮೊಮ್ಮಗನ, ಸಾಕ್‌ ಸುಮ್ನಿರು. ನೀನು ಇದಕ್ಕೆಲ್ಲ ಲಾಯಕ್ಕಲ್ಲ ಬಿಡು. ನೀನು ಗಾಂಧಿ ಮುತ್ಯಾನ ಮೆಚ್ಚಿನ ಮೂರು ಮಂಗ್ಯಾನಂಗ್‌ ಕಣ್ಣು, ಕಿವಿ, ಬಾಯಿ ಮುಚ್ಕೊಂಡು ಬಿದ್ದಿರು. ಇದರಾಗಿನ ಮಜಾ ನಿಂಗ್‌ ಗೊತ್ತಾಗುದಿಲ್ಲ ಬಿಡು’ ಅಂದ.

‘ಆಯ್ತಪ್ಪಾ, ಗೋವು ರಕ್ಷಕರು ಹೆಸರ್‌ನ್ಯಾಗ್‌ ಪಾಪದವರನ್ನ ಹಿಡಿದು ಹೊಡ್ದು ಸಾಯಿಸುವವರನ್ನ, ಸಿ.ಎಂ. ಕುರ್ಚಿ ಮ್ಯಾಗ್‌ ಕುತ್ಕೊಂಡಿದ್ರೂ ಬುಳು ಬುಳು ಅಳೋದನ್ನ (ಕೆಟ್ಟದ್ದನ್ನು) ನಾನು ನೋಡುದಿಲ್ಲ. ಉಡುಪಿ ಸ್ವಾಮೀಜಿಯೊಬ್ಬರಿಗೆ ವಿಷಪ್ರಾಶನ ಮಾಡಿದ್ದು ಯಾರು, ನಿಮಗೆಷ್ಟು ಮಕ್ಳು ಅದಾರ, ಯಾವಾಗ್‌ ಪೀಠ ತ್ಯಾಗ ಮಾಡ್ತೀರಿ ಅಂತ ಸಪ್ತ ಮಠಾಧೀಶರನ್ನ (ಕೆಟ್ಟದನ್ನ) ಕೇಳುದಿಲ್ಲ, ಎಂಪಿಗಳಿಗೆ ಕೊಟ್ಟ ಐಫೋನ್‌ ಗಿಫ್ಟ್‌ಗೆ ಯಾರ್‌ ಕಿಸೆಯಿಂದ ಯಾರ್‌ ದುಡ್ಡು ಕೊಟ್ಟಾರ, ಯಾರ್‌ ವಾಪಸ್‌ ಕೊಟ್ಟಾರ್‌, ಹಿಂದ್‌ ಯಾಕ್‌ ವಾಪಸ್‌ ಕೊಟ್ಟಿರಲಿಲ್ಲ (ಕೆಟ್ಟದ್ದನ್ನ) ಅನ್ನೋದರ ಬಗ್ಗೆ ಬಾಯಿ ಬಿಡುದಿಲ್ಲ. ನೀವು ರಾಹುಲ್‌ ಗಾಂಧಿ ಮಾಡಿದ್ಹಂಗ್‌ ಮಾಡಾಕ್‌ ಹೋದ್ರ ಹುಡುಗೇರ್‌ ಕಾಲಾಗಿನ ಚಪ್ಪಲಿ ಕೈಗೆ ಬರ್ತಾವ್‌ ಹುಷಾರ್ಲೆ’ ಅಂದ ‘ಗಾಂಧಿ ಮೊಮ್ಮಗ’.

‘ಪ್ರಿಯಾ ವಾರಿಯರ್‌ ಕಣ್‌ ಹೊಡ್ದು ಹುಬ್ಬು ಹಾರಿಸಿದ್ರ ಭಾಳ್‌ ಛಂದ್‌ ಕಾಣ್ತೈತಿ. ಎಲ್ರೂ ಆಕಿ ಗುಣಗಾನ ಮಾಡ್ತಾರ್‌. ವಾಹ್, ವಾಹ್‌ ಅಂತಾರ. ‘ರಾಗಾ’ ಹೊಡದ್ರ, ದಡ್ಡಾ, ತಲೆಮಾಸದವ, ಅಂತ ಬೈತಾರ. ಪಪ್ಪು ಆದರ್ಶ ಪಾಲ್ಸಾಕ್‌ ಹೋದ್ರ ಹುಡುಗ್ಯಾರ್‌ ಕಾಲ್ಮರಿ ಕೈಗ್‌ ಬರ್ತಾವ್‌ ಅಂತ ಹೆದರಸ್ತಿಯಲ್ಲಾ, ಇದ್ಯಾವ ನ್ಯಾಯಾ’ ಅಂದ ಅವರಲ್ಲೊಬ್ಬ.

‘ದೇಶಕ್ಕೆಲ್ಲ ಕಾಯ್ದೆ ಮಾಡೊ ಸಂಸತ್‌ನ್ಯಾಗ್‌ ರಾಹುಲ್‌ ಬಾಬಾ ಕಣ್ ಹೊಡ್ದಾನ್‌. ಅಪ್ಕೊಳ್ಳೋದು, ಕಣ್‌ ಹೊಡೆಯಲು ಈಗ ಯಾರಪ್ಪನ ಮಾತೂ ಕೇಳು ಗರ್ಜ್‌ ಇಲ್ಲೇಲ್‌... ’ ಹೀಂಗ್‌ ಅವರ ಮಾತೆಲ್ಲ ಕಣ್ಸನ್ನೆ ಸುತ್ತ ಗಿರಕಿ ಹೊಡೆಯೋದನ್ನ ಕೇಳಿಸ್ಕೋತ್‌ ಹೊಂಟವ್ನಗ, ಅಕ್ಕನ ಮಗಳಿಗೆ ಕಣ್‌ ಹೊಡೆದದ್ದು ನೆನಪಾತು. ಅದೇ ಖುಷಿಯಿಂದ ಸಣ್ಣಗೆ ಶಿಳ್ಳೆ ಹಾಕುತ್ತ ಮನಿ ಕಡಿಗಿ ಹೊಂಟ್ಯಾ. ಬಾಗಲ್ದಾಗ್‌ ಕಾಲಿಡುತ್ತಿದ್ದಂತೆ, ‘ಇಷ್ಟೊತ್ತು ಎಲ್ಲಿ ಹೋಗಿದ್ರಿ (ಎಲ್ಲಿ ಸಾಯಾಕ್‌ ಹೋಗಿದ್ರಿ ಅಂತ ಧ್ವನಿಸಿದಂ
ತಾಯ್ತು)’ ಅಂತ ಹೆಂಡ್ತಿಯ ಜೋರು ದನಿ ಕೇಳಿಬಂತು.

ಅಷ್ಟೊತ್ತಿಗೆ ಎಡಗಣ್ಣು ಮುಚ್ಚಿಕೊಂಡ ಪ್ರಭ್ಯಾನೂ ಮನಿ ಒಳ್ಗ ಬಂದಾ. ಅವ್ನ ಕಡಿ ಲಕ್ಷ್ಯ ಹೋಯ್ತು. ‘ಏಯ್‌, ಇದೇನೊ, ಎಡಗಣ್ಣು ಬಾತದಲ್ಲೋ, ಏನಾಯ್ತೊ’ ಎಂದೆ ಕಕ್ಕುಲಾತಿಯಿಂದ.

‘ರಾಹುಲ್‌ ಬಾಬಾನ ಕುಚೇಷ್ಟೆ ನೋಡಿ, ಹುಡುಗಾಟಿಕೆ ಒಳ್ಗ ಹೆಂಡ್ತಿಗೆ ಕಣ್ಣ ಹೊಡ್ದೆ. ಅಕಿ ಹುಸಿ ಮುನಿಸಿನಿಂದ ಲಟ್ಟಣಿಗೆಯಿಂದ ನನ್ನ ತಲೆ ಮೊಟಕಲು ಬಂದ್ಳು. ತಲಿಗೆ ಏಟ್‌ ಬೀಳ್ತದಂತ ಬಗ್ಗಿದೆ. ಕಣ್ಣಿಗೆ ಏಟು ಬಿದ್ದೆ ಬಿಡ್ತು. ಮನ್ಯಾಗಿನ ಚಾಷ್ಟಿ ಓಣ್ಯಾಗ್‌ ಮಾಡಿದ್ರ ಇನ್ನೊಂದು ಕಣ್ಣಿಗೂ ಏಟು ಬಿದ್ದೀತು, ಹುಷಾರ್‌ ಅಂತ ಬುದ್ಧಿ ಹೇಳಿ ಕಳಸ್ಯಾಳ’ ಅಂದ.

‘ಅಕಿ ಬರೋಬ್ಬರಿ ಹೇಳ್ಯಾಳ್‌. ಹರೆದಾಗ ಹಿಂಗೆಲ್ಲ ಮಾಡಿದ್ರ ಛಂದ್‌ ಕಾಣ್ತದ. ವಯಸ್ಸಲ್ಲದ ವಯಸ್ಸನ್ಯಾಗ್‌ ಮಾಡಿದ್ರ ಹೀಂಗ್‌s ಆಗೋದು. ನಾನು, ಶಂಕ್ರಿ ಜಗಳಿ ಮ್ಯಾಲ್‌ ಕುಂತು ಓಣ್ಯಾಗಿನ ಪಾಪದ ಹುಡುಗರನ್ನ ಗೋಳ್‌ ಹೊಯ್ದುಕೊಳ್‌ತಿದ್ವಿ’ ಅಂದ್ಳು.

ರಾಗಾ ಹಠಾತ್ತಾಗಿ ಅಪ್ಪಿಕೊಳ್ಳಾಕ್‌ ಬಂದಾಗ್ ಗಾಬ್ರಿ ಆದ ಮೋದಿ ಅವರ ಹಂಗ್‌ ನಾ ಗಾಬರಿಯಿಂದ, ‘ಹ್ಞಾ, ನೀವೂ ಕಣ್‌ ಹೊಡಿತಿದ್ದೀರೇನ್‌’ ಎಂದೆ.

‘ಹ್ಞೂ ಮತ್ತ. ನಿಮ್ಗ ‍ಪಪ್ಪು ಆದರ್ಶವಾದ್ರ, ನಮ್ಗ ಪ್ರಿಯಾ ಆದರ್ಶ’ ಅಂತ ಹೇಳಿ ಕಣ್ಣು ಮಿಟುಕಿಸಿದಳು. ‘ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ...’ ಅಂತ ಹಾಡು ಗುನುಗುನಿಸುತ್ತ ಅಡುಗೆ ಮನಿಗೆ ಹೋದ್ಳು.

ಪ್ರಭ್ಯಾ ಮಿಕಿ ಮಿಕಿ ನನ್ನ ಮಾರಿ ನೋಡ್ದ. ಅವ್ನ ಮಾರಿಮ್ಯಾಗಿನ ಪ್ರಶ್ನಾರ್ಥಕ ಚಿಹ್ನೆ ಗಮನಿಸದಂತೆ ನಾಟ್ಕಾ ಮಾಡಿ, ‘ಕಣ್ಣೀರು ಹೆಂಗಸರ ದೊಡ್ಡ ಅಸ್ತ್ರ, ಕಣ್ಸನ್ನೆ ಗಂಡಸರ ಹೊಸ ಅಸ್ತ್ರ ಅಂತ ಇನ್‌ಮ್ಯಾಲೆ ಹೇಳ್ಕೊಂಡ್‌ ಕಣ್‌ ಹೊಡ್ಕೊತ್‌ ತಿರುಗಬಹುದು ಏಳ್‌’ ಎಂದು ಮಾತಿಗೆ ಎಳ್ದೆ.

‘ಏಯ್‌ ಬೇಕೂಫ್‌. ಕಣ್‌ ಹೊಡೆಯೋದನ್ನ ಸಮರ್ಥಿಸಿಕೊಳ್ಳಾಕ್‌ ಹೊಸ ಗಾದೆ ಹೊಸಿಬ್ಯಾಡ್‌’ ಅಂದ.

ಬಿಸಿ ಬಿಸಿ ಚಹಾ ತಂದಿಟ್ಟ ಹೆಂಡ್ತಿ, ‘ಹಿಂದ್‌ ಪೇಪರ್‌ನ್ಯಾಗ್ ಇವತ್ತ ಎಷ್ಟ್‌ ಮಂದಿ, ಏನೇನ್‌ ಕರೆ ಕೊಟ್ಟಾರಂತ ಎಣಿಸ್ಕೋತ್‌ ಸುದ್ದಿ ಓದಬೇಕಾಗಿತ್ತು. ಈಗ ಅಪ್ಪಿಕೊ ಬಗ್ಗೆ ಯಾರ‍್ಯಾರ್‌ ಏನೇನ್‌ ಹೇಳ್ಯಾರ್‌, ಬರ್ದಾರ್‌, ಕಣ್ಸನ್ನೆ ಯಾರ‍್ಯಾರ್‌ ಕಣ್ಣಾಗ್‌ ಹೆಂಗ್‌ ಕಾಣಾಕತ್ತೈತಿ ಅಂತ ಎಣಿಸೋದ ದೊಡ್ಡ ಕೆಲ್ಸ ಆಗೇದ್‌. ಗಂಡ ಹೆಂಡ್ತಿ ನಡುವೆ ಜಗಳಾನೂ ಹಚ್ಚೇದಲ್ರಿ ಈ ಹುಡುಗಾಟಿಕೆ’ ಅಂತ ಹುಸಿ ಮುನಿಸು ತೋರಿ, ಅಡುಗೆ ಮನೆಗೆ ಓಡಿದಳು.

 ಅಷ್ಟೊತ್ತಿಗೆ ತೊಟ್ಟಿಲ್‌ನ್ಯಾಗ ಮಲಗಿದ್ದ ಕೂಸಿನ ಅಳು ಕೇಳಿ ಬರಾಕತ್ತು. ‘ಈ ಸುಡಗಾಡ್‌ ಗಂಡಸ್ರು ಮಾತಿಗೆ ಕುಂತ್ರ, ಮನ್ಯಾಗ್‌ ಏನ್‌ ಆಗಾಕತ್ತೈತಿ ಅನ್ನೋದು ಅವ್ಕ ಗೊತ್ತಾಗುದಿಲ್ಲ’ ಎಂದು  ಬೈದುಕೊಳ್ಳುತ್ತಲೇ ಅಡುಗೆ ಮನೆಯಿಂದ ಹೊರ ಬಂದು ತೊಟ್ಟಿಲಲ್ಲಿ ಅಳುತ್ತಿದ್ದ ಮಗೂನ್ನ ಎತ್ತಿಕೊಂಡ್ಲು. ‘ಮುದ್ದಿನ ಗಿಣಿ ಬಾರೊ, ಮುತ್ತನ್ನು ತರುವೆ ಬಾರೊ, ಹೆಗಲನೇರಿ ಆಡಿ ಕುಣಿವ ಈ ಕೂಸು ಮರಿ ಯಾರೊ...’ ಅಂತ ಹಾಡು ಹೇಳ್ತಾ ಸಮಾಧಾನ ಮಾಡಾಕತ್ಲು.

‘ಅಳು ಕೂಸಿಗೆ ಹಾಲ್‌ ಕುಡಿಸಿದ್ರ, ಜೋಗುಳ ಹಾಡಿದ್ರ ಸಮಾಧಾನ ಆಗ್ತದ. ಆದ್ರ, ಸಾಂದರ್ಭಿಕ ಶಿಶು ಸಾರ್ವಜನಿಕ ಸಭೆದಾಗ ಮೈಕ್‌, ಟಿ.ವಿ. ಕ್ಯಾಮರಾ ಮುಂದ ಗಳಗಳ ಅಳಕೋಂತ ಕಣ್ಣೀರು ಸುರಿಸಿದ್ರ, ಅದ್ಕ ಏನ್‌ ಕುಡಿಸಿ, ತಿನಿಸಬೇಕು, ಯಾವ ಜೋಗುಳ ಹಾಡ್ ಹೇಳಿ ಸಮಾಧಾನ ಮಾಡಬೇಕ್‌ ಅಂತ ಸಮನ್ವಯ ಸಮಿತಿ ಸಿದ್ರಾಮಣ್ಣಗs, ಮತ್ತ ಪಿ.ಎಂ. ಆಗು ಕನ್ಸು ಕಾಣುತ್ತಿರುವ ದ್ಯಾವೇಗೌಡ್ರಿಗೆ, ಎಲ್ಲಕ್ಕಿಂತ ಹೆಚ್ಚಾಗಿ ಸ್ವತಃ ಆ ದ್ಯಾವ್ರಿಗೂ ಗೊತ್ತ ಇದ್ಹಂಗ್‌ ಕಾಣುದಿಲ್ಲ. ಅಳು ಮುಂಜಿಯರೂ, ಈ ಕುಮಾರಣ್ಣ ಅಳೋದು ನೋಡಿ ಬಿದ್ದ ಬಿದ್ದ ನಗಾಕತ್ತಾರ... ’ ಅಂದ್ಲು.

‘ಮುತ್ತಿನಂಥಾ ಮಾತ್‌ ಹೇಳ್ದಿ ನೋಡ್‌ ಮುಗುದೆ’ ಎಂದು ಶಹಬ್ಬಾಸ್‌ಗಿರಿ ಕೊಟ್ಟೆ.

‘ಲಂಚ ನೀಡಿದವರಿಗೂ ಜೈಲು ಶಿಕ್ಷೆ ವಿಧಿಸುವ ಮಸೂದೆ ಸಂಸತ್‌ನ್ಯಾಗ್‌ ಅಂಗೀಕಾರ ಆಗೇದ್‌. ಅದರ್‌ಹಂಗನ, ‘ಶಾಸಕಾಂಗ ಪಕ್ಷದ ಸಭೆಯಲ್ಲಿ, ಸಾರ್ವಜನಿಕ ಸಭೆಯಲ್ಲಿ ಅಳೋರನ್ನ ಮತ್ತ ಅವ್ರು ಅಳಾಕ್‌ ಕಾರಣರಾದವರನ್ನ ಚುನಾವಣೆಗೆ ಅನರ್ಹಗೊಳಿಸುವ ಕಾಯ್ದೆ ಜಾರಿಗೆ ಬಂದ್ರ ಮಾತ್ರ ಈ ಅಳೋ ನಾಟ್ಕ ನಿಲ್ಲತದ ನೋಡಪಾ’ ಅಂದ ಪ್ರಭ್ಯಾ.

 ‘ನಮ್ಮ ನಸೀಬ್ಕ ಖೊಟ್ಟಿ ಅದಲೇ. ಎಂಥಾ ನಾಯಕರು ಸಿಕ್ಕಾರ ನೋಡ್‌. ಹಿಂದ್‌ ಸ್ವಾತಂತ್ರ್ಯ ಹಂಬಲಿಸಿ, ತುರ್ತು ಪರಿಸ್ಥಿತಿ ವಿರೋಧಿಸಿ ಜೈಲ್‌ಗೆ ಹೋಗ್ತಿದ್ರು. ಈಗ, ಚೆಕ್‌ರೂಪ್‌ದಾಗ್‌ ಲಂಚ ಸ್ವೀಕರಿಸಿ ಪರಪ್ಪನ ಅಗ್ರಹಾರಕ್ಕ ಹೋಗಿ ಬಂದಾರ. ಹಳಬರು ಬಡವರ ಕಣ್ಣೀರು ಒರಸ್ತಿದ್ರು. ಈಗ ಸಿ.ಎಂ. ಆದ್ರೂ ಕಣ್ಣೀರು ಸುರಿಸುವ ಅಳಬುರಕಿಗೋಳು ರಾಜ್ಯಾನ ಆಳಾಕತ್ತಾವ. ಕಡು ದ್ವೇಷಿಗಳನ್ನು ಅಪ್ಕೊಳ್ಳೋದು ದೊಡ್ಡತನ. ನಾ ಅಂವ್ಗ ಹೆಂಗ್‌ ಯ್ಯಾಮಾರ‍್ಸಿನಿ ನೋಡ್‌ ಅಂತ ಕಣ್‌ ಹೊಡಿಯೋದು ದಡ್ಡತನಪಾ. ಲೋಕಸಭಾ ಚುನಾವಣೆದಾಗ್‌, ಎಲ್ಲೆಂದರಲ್ಲಿ ಕಣ್ ಹೊಡೆಯೋದನ್ನ ಮತ್ತು ಅಳೋದನ್ನ ನಿಷೇಧಿಸಿ ಕಾಯ್ದೆ ಮಾಡುವ ಪ್ರಣಾಳಿಕೆ ಘೋಷಿಸುವವರಿಗೆ ನಾನು ವೋಟ್‌ ಹಾಕುದು ನೋಡಪಾ’ ಅಂತ ಹೇಳಿದೆ. 

‘ಈ ಕಣ್ಸನ್ನೆ, ಕಣ್ಣೀರು ಪುರಾಣಕ್ಕೆ ಮಂಗ್ಳಾ ಹಾಡೋಣ. ಈಗ ಹೋಗೋಣ ನಡಿ ಅಂತ ಹೇಳಿ ಕಣ್ಸನ್ನೆ ಮಾಡ್ದ. ಇಬ್ರೂ ಕೂಡಿ ನಮ್ಮ ಮೆಚ್ಚಿನ ಗಡಂಗಿನತ್ತ ಹೆಜ್ಜೆ ಹಾಕಿದೆವು. 

 

ಬರಹ ಇಷ್ಟವಾಯಿತೆ?

 • 4

  Happy
 • 8

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !