ಬುಧವಾರ, ಜೂನ್ 29, 2022
24 °C
ವಿಡಂಬನೆ

ಇವನೇ ಶ್ರೀಮಾನ್ ಟ್ವೆಂಟಿ

ಪ್ರಕಾಶ್ ಶೆಟ್ಟಿ Updated:

ಅಕ್ಷರ ಗಾತ್ರ : | |

Prajavani

2000ನೇ ಇಸವಿಯಲ್ಲಿ ಹುಟ್ಟಿದವರಿಗೆ ಈಗ ಇಪ್ಪತ್ತರ ಹರೆಯ. ಇಪ್ಪತ್ತೊಂದನೆಯ ಶತ-ಮಾನವರು ಇವರು. ಇವರೆಲ್ಲಾ ಸಾಧಾರಣ ಮಾನವರಲ್ಲ. ಇವರ ಗತ್ತು, ಗಮ್ಮತ್ತು ತೀರಾ ಭಿನ್ನವಾಗಿರುವುದರಿಂದ, ಹಿಂದಿನ ಶತ-ಮಾನವರ ಆಚಾರ-ವಿಚಾರಗಳೆಂದರೆ ಸೊಳ್ಳೆ ಕಾಟ ಅಂದುಕೊಳ್ಳುತ್ತಾರೆ. ಅಂತಹ ಒಬ್ಬ ಸ್ಯಾಂಪಲ್ ಯುವಕನನ್ನು ಈ ಹೊಸ ವರ್ಷದ ಶುಭ ಸಂದರ್ಭದಲ್ಲಿ ನಿಮ್ಮ ಮುಂದಿಡಲು ಸಂತೋಷವಾಗುತ್ತಿದೆ.

ಇವನು ತನ್ನನ್ನು ಪರಿಚಯಿಸಿಕೊಳ್ಳುವಾಗ ‘ಶ್ರೀಮಾನ್ ಟ್ವೆಂಟಿ’ ಎಂದೇ ಹೇಳುತ್ತಾನೆ. ಜನವರಿ ಒಂದು, 2000 ಎಂಬ ಮಿಲೆನಿಯಂ ವರ್ಷಕ್ಕೆ ಈತ ಜನ್ಮತಾಳಿದಾಗ ಮೊಬೈಲ್ ಫೋನ್ ಯುಗ ಆಗ ತಾನೇ ಆರಂಭವಾಗಿತ್ತು. ಬರಬರುತ್ತಾ ಈ ಚೂಟಿ ಹುಡುಗ ‘ಓವರ್ ಸ್ಮಾರ್ಟ್’ ಆಗಿಬಿಟ್ಟ. ಎಷ್ಟು ಓವರ್ ಸ್ಮಾರ್ಟ್ ಅಂದರೆ, ಮೊಬೈಲ್ ಕಂಪನಿಯವರು ಇವನನ್ನು ನೋಡಿಯೇ ಸ್ಮಾರ್ಟ್ ಫೋನ್ ಎಂಬ ಮಾಯಾಜಾಲವನ್ನು ಮಾರುಕಟ್ಟೆಗೆ ತಂದಿದ್ದಂತೆ!

ಶ್ರೀಮಾನ್ ಟ್ವೆಂಟಿಗೆ ಬಿ.ಎ, ಬಿ.ಕಾಂ ಅಥವಾ ಬಿ.ಎಸ್ಸಿ ಅಂದರೇನೆಂದೇ ಗೊತ್ತಿಲ್ಲ. ವಿದ್ಯಾಭ್ಯಾಸ ಅಂದರೆ ಆತನಿಗೆ ಗೊತ್ತಿರುವುದು ಎಂಜಿನಿಯರಿಂಗ್ ಮಾತ್ರ. ಅವನೀಗ ಎಂಜಿನಿಯರಿಂಗ್ ಕಲಿಯುತ್ತಿದ್ದಾನೆ. ಆದರೆ ಯಾವ ಹಂತದಲ್ಲಿದ್ದಾನೆಂದು ಸ್ವತಃ ಅವನಿಗೇ ಗೊತ್ತಿಲ್ಲ. ಯಾಕೆಂದರೆ ಅವನಿಗೆ ಕಾಲೇಜಿಗಿಂತ ಮಾಲ್‌ಗಳಲ್ಲಿ ಹೆಚ್ಚುಕಾಲ ಕಳೆಯುವ ರೂಢಿ. ಇವನಿಗೆ ಯಾವಾಗ ಹಾರಾಡುವ ವಯಸ್ಸಾಯಿತೋ ಆವಾಗಲೇ ಮಾಲ್ ಸಂಸ್ಕೃತಿ ಹುಟ್ಟಿಕೊಂಡಿತು. ತಿರುಗಾಡುವುದಕ್ಕೆ ಪಾರ್ಕ್, ಗುಡ್ಡ ಎಂದು ಹುಡುಕುವ ಪ್ರಶ್ನೆಯೇ ಇಲ್ಲ.

ಮಾಲ್ ಅಂದರೆ ಅಲ್ಲಿ ಎಲ್ಲವೂ ಬಂತಲ್ಲವೇ! ಲಲನೆಯರು, ತಿಂಡಿ, ತೀರ್ಥ ಮತ್ತು ಮುಖ್ಯವಾಗಿ ಸಿನಿಮಾ! ಒಂದು ಸಿನಿಮಾ ಅಲ್ಲ, ಎಲ್ಲಾ ಭಾಷೆಯ ಅನೇಕ ಸಿನಿಮಾಗಳನ್ನು ಒಂದೇ ಕಡೆ ನೋಡಿ ಹಾಳಾಗಿ ಹೋಗಬಹುದು. ಹಾಗೆ ಹಾಳಾದವರಲ್ಲಿ ಈ ಟ್ವೆಂಟಿ ಕೂಡ ಒಬ್ಬ. ಅವನಲ್ಲಿ ಮಾತನಾಡುವಾಗ ‘ಥಿಯೇಟರ್’ ಅಥವಾ ‘ಟಾಕೀಸ್’ ಎಂಬ ಪದಗಳನ್ನು ಬಳಸುವ ಹಾಗಿಲ್ಲ. ‘ಮಲ್ಟಿಪ್ಲೆಕ್ಸ್’ ಅಂದರೆ ಕೂಡಲೇ ತಲೆಗೆ ಹೊಕ್ಕುತ್ತೆ.

ಟ್ವೆಂಟಿ ಸರಿಯಾಗಿ ಕಾಲೇಜಿಗೆ ಹೋಗದಿದ್ದರೂ ಚೆನ್ನಾಗಿ ಬರೆಯುವ, ಓದುವ ಅಭ್ಯಾಸ ಇಟ್ಟುಕೊಂಡಿದ್ದಾನೆ. ಆದರೆ ಮಣಗಟ್ಟಲೆ ಭಾರದ ಪುಸ್ತಕಗಳನ್ನಲ್ಲ. ಮೊದಲು ಎಸ್ಸೆಮ್ಮೆಸ್, ನಂತರ ಚಾಟಿಂಗ್. ಈಗ ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್‌ಗಳತ್ತ ಮನಸ್ಸನ್ನು ಕೇಂದ್ರೀಕರಿಸಿದ್ದಾನೆ. ಈ ಮೂಲಕ ಪರಿಚಯವಾಗುವ ಹುಡುಗಿಯರ ಸಂಖ್ಯೆ ಮಿತಿಮೀರಿರುವುದರಿಂದ ಪೂರ್ತಿ ಗೊಂದಲಕ್ಕೀಡಾಗಿದ್ದಾನೆ. ಹಿಂದೆ ಯುವಕರು ಒಬ್ಬ ಹುಡುಗಿಯ ಸ್ನೇಹಕ್ಕಾಗಿ ಪಡಬಾರದ ಸಂಕಟ ಅನುಭವಿಸುತ್ತಿದ್ದ ಸಂಗತಿ ಈ ಅದೃಷ್ಟವಂತನಿಗೆ ಗೊತ್ತೇ ಇಲ್ಲ. ಆದರೆ ಇವನಿಂದಾಗಿ ಸುಳ್ಳು ಸುದ್ದಿ- ಮಾಹಿತಿ- ಚಿತ್ರಗಳು ರಾದ್ಧಾಂತ ಎಬ್ಬಿಸಿವೆ. ವೈರಲ್, ಫೇಕ್, ಲೈಕ್ ಮುಂತಾದ ಕುಖ್ಯಾತ ಪದಗಳ ಹಿಂದಿರುವ ವ್ಯಕ್ತಿ ಇವನೇ!

ನಮ್ಮ ಟ್ವೆಂಟಿಗೆ ಆಟ ಆಡುವ ಗೀಳು ಇದೆ. ಹಾಗೆಂದು ಅದು ಕ್ರೀಡಾಪಟುವಾಗುವ ಲಕ್ಷಣ ಖಂಡಿತ ಅಲ್ಲ. ಅವನಿಗೆ ಅಂಟಿಕೊಂಡಿರುವುದು ಫೋನಿನಲ್ಲಿ ಆಡುವ ‘ಗೇಮ್ಸ್’ ಚಟ. ನಿಮಗೆ ಅಚ್ಚರಿಯಾಗಬಹುದು, ಶ್ರೀಮಾನ್ ಟ್ವೆಂಟಿ ಏನೂ ಮಾಡದಿದ್ದರೂ ಹಗಲು– ರಾತ್ರಿ ಬ್ಯುಸಿಯಾಗಿರುತ್ತಾನೆ. ಎಷ್ಟು ಬ್ಯುಸಿ ಎಂದರೆ ಅಪ್ಪ, ಅಮ್ಮ, ಅಜ್ಜ, ಅಜ್ಜಿ, ಅಣ್ಣ, ತಂಗಿ ಜತೆ ಸರಿಯಾಗಿ ಮಾತನಾಡದೆ ದಿನಗಳಲ್ಲ, ಕೆಲವು ವರ್ಷಗಳೇ ಆಗಿವೆ!

ಕ್ಯಾಸೆಟ್, ಕ್ಯಾಮೆರಾ ರೀಲು, ವಿಸಿಡಿ ಬಗ್ಗೆ ಟ್ವೆಂಟಿ ಕಿವಿಗೆ ಹಾಕಿ. ಛೇ! ಇಷ್ಟೊಂದು ಹದಗೆಟ್ಟ ಪರಿಸ್ಥಿತಿಯಿತ್ತಾ ಎಂದು ಛೇಡಿಸುತ್ತಾನೆ. ಫೋಟೊಗ್ರಫಿ ಬಗ್ಗೆ ಆಸಕ್ತಿಯೇ ಇಲ್ಲದ ಇವನ ಕೈಯಲ್ಲಿ ಕ್ಯಾಮೆರಾ ಕೂಡಾ ಇದೆ. ಆದರೆ ಅದನ್ನು ಹೆಚ್ಚಾಗಿ ‘ಸೆಲ್ಫಿ’ ಕ್ಲಿಕ್ಕಿಸುವುದಕ್ಕೇ ಉಪಯೋಗಿಸುತ್ತಾನೆ. ಎಲ್ಲಾ ಸ್ಮಾರ್ಟ್ ಫೋನ್ ಕೃಪೆ!

ಇವನಿಗೆ ದಾರಿಯಲ್ಲಿ ಟ್ಯಾಕ್ಸಿ ಅಥವಾ ಆಟೊ ಎಂದು ಕರೆದು ಅಭ್ಯಾಸವೇ ಇಲ್ಲ. ಅದೇನೋ ಮೊಬೈಲ್‌ನಲ್ಲಿ ಬೆರಳನ್ನಾಡಿಸಿದ ಕೆಲ ಹೊತ್ತಿನಲ್ಲೇ ಅವನ ಎದುರು ಗಾಡಿ ಪ್ರತ್ಯಕ್ಷ ಆಗುತ್ತೆ! ಆಟೊ ಡ್ರೈವರ್ ‘ಅಲ್ಲಿ ಬರಲ್ಲ’ ‘...ಇಷ್ಟಾಗುತ್ತೆ’ ಎಂದೆಲ್ಲ ಹೇಳದೆ ‘ಜೀ ಹುಜೂರ್’ ಎಂದು ಗಾಡಿ ಓಡಿಸುತ್ತಾನೆ.

ಟ್ವೆಂಟಿಗೆ ಬ್ಯಾಂಕ್ ಬಗ್ಗೆ ಯಾವುದೇ ಜ್ಞಾನವಿಲ್ಲ. ಎಟಿಎಂಗಳು ಮಾತ್ರ ಅವನ ಪಾಲಿನ ಬ್ಯಾಂಕುಗಳು. ಬ್ಯಾಂಕುಗಳಲ್ಲಿ ಹಣ ತೆಗೆದುಕೊಳ್ಳುವುದಕ್ಕೆ ಮತ್ತು ಕೊಡುವುದಕ್ಕೆ ‘ಕ್ಯಾಶಿಯರ್’ ಎಂಬುವರು ಇರುತ್ತಾರೆ ಅಂದರೆ ಬಿದ್ದು ಬಿದ್ದು ನಗುತ್ತಾನೆ! ಹಾಗೆಯೇ ಅವನು ಎಟಿಎಂ ದರೋಡೆ ಬಗ್ಗೆ ಕೇಳಿರುತ್ತಾನಷ್ಟೆ. ಹಿಂದೆ ಬ್ಯಾಂಕ್ ದರೋಡೆ ಮಾಡುತ್ತಿದ್ದರು ಎಂದು ಯಾರಾದರೂ ಹೇಳಹೊರಟರೆ ‘ಓಹ್! ದೇಶ ಬಿಟ್ಟು ಓಡಿ ಹೋದ್ರಲ್ಲ ಅವರ ಥರನಾ?’ ಎಂದು ಕಣ್ಣರಳಿಸುತ್ತಾನೆ.

ಈತ ಇನ್ನೆಂದೂ ಅಂಗಡಿಗಳ ಮುಖ ನೋಡುವುದಿಲ್ಲ ಎಂದು ಶಪಥ ಹೂಡಿದ್ದರ ಫಲವಾಗಿ ಆನ್‌ಲೈನ್ ಮಾರಾಟ ಕಂಪನಿಗಳು ಭರ್ಜರಿ ವ್ಯಾಪಾರ ಮಾಡುತ್ತಿರುವುದು ಸುಳ್ಳೇನಲ್ಲ. ಮದುವೆ ವಿಚಾರದಲ್ಲಂತೂ ಇವನ ಮನಃಸ್ಥಿತಿ ಅಧೋಗತಿಗಿಳಿದಿದೆ. ‘ಮದುವೆ ಒಂದು ಟ್ರಯಲ್ ಅಂಡ್ ಎರರ್...’ ‘ಡೈವೋರ್ಸ್ ತಪ್ಪಲ್ಲ...’ ‘ಲಿವ್ ಇನ್ ರಿಲೇಷನ್‌ಷಿಪ್‌ ಒಳ್ಳೆಯದು...’ ಎಂದು ಈ ಶತಮಾನದ ಚಿಂತಕನಂತೆ ಮಾತನಾಡುತ್ತಾ ಹೆತ್ತವರನ್ನು ಚಿಂತೆಗೀಡು ಮಾಡುತ್ತಾನೆ. ಇವನೇ ಶ್ರೀಮಾನ್ ಟ್ವೆಂಟಿ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.