ವಿಷು ಸಂಭ್ರಮ

ಶನಿವಾರ, ಏಪ್ರಿಲ್ 20, 2019
30 °C

ವಿಷು ಸಂಭ್ರಮ

Published:
Updated:
Prajavani

ನಗರದಲ್ಲಿ ಮಲಯಾಳಿಗಳ ವಿಷು ಮತ್ತು ತುಳುವರ ಯುಗಾದಿ ಸಂಭ್ರಮ ಈಗ ಕಳೆಕಟ್ಟಿದೆ. ಸೌರಮಾನ ಯುಗಾದಿ ಎಂಬ ಹೆಸರಿನಲ್ಲಿ ಕರ್ನಾಟಕದಲ್ಲಿ ತೌಳವ ಸಂಸ್ಕೃತಿಯೊಂದಿಗೂ ಈ ಹಬ್ಬದ ಬೆಸುಗೆ ಇದೆ. 

ಬಿಸಿಲಿಗೆ ಮೈ–ಮನ ಮರಗಟ್ಟಿದ್ದಾಗ ಬರುವ ‘ವಸಂತ’ನ ಜೊತೆಯಲ್ಲೇ ಕಾಲಿಡುತ್ತದೆ ವಿಷು ಸಂಭ್ರಮ. ವೈಶಾಖ, ಬಿಹು, ಬಿಸ್ವಾಗು, ಬೈಸಾಖಿ, ಪೊಹೆಲ ಬೊಯ್‌ಸಖು, ಪುತ್ತಾಂಡು, ಪಣ ಸಂಕ್ರಾಂತಿ ಮುಂತಾದ ಹೆಸರಿನೊಂದಿಗೆ ಒಂದೊಂದು ಪ್ರದೇಶಲ್ಲಿ ಆಚರಿಸಲಾಗುವ ಈ ಹಬ್ಬ ಹೆಚ್ಚು ಪ್ರಸಿದ್ಧಿ ಪಡೆದಿರುವುದು ಕೇರಳದಲ್ಲಿ; ‘ವಿಷು’ ಮೂಲಕ.

ವಿಷು, ಮಲಯಾಳಿಗಳ ಎರಡು ಪ್ರಮುಖ ಹಬ್ಬಗಳಲ್ಲಿ ಒಂದು. ಓಣಂಗೆ ಸಾಂಸ್ಕೃತಿಕ ಸ್ಪರ್ಶವಿದ್ದರೆ, ವಿಷುವಿನೊಂದಿಗೆ ಧಾರ್ಮಿಕ ಆಚರಣೆ ಮತ್ತು ನಂಬಿಕೆಯೂ ಸೇರಿಕೊಂಡಿದೆ. ಚಾಂದ್ರಮಾನ ಯುಗಾದಿಯ ನಂತರ ಒಂದು ತಿಂಗಳ ಒಳಗೆ ವಿಷು ಬರುತ್ತದೆ. ಪ್ರಕೃತಿಗೂ ಈ ಹಬ್ಬಕ್ಕೂ ಇರುವ ಸಂಬಂಧವನ್ನು ಚಿಗುರಿ ನಿಂತ ಮರಗಳು ಮತ್ತು ಅರಳಿ ಘಮಘಮಿಸುವ ಹೂಗಳು ಸಾರಿ ಹೇಳುತ್ತವೆ. ಬಂಗಾರದ ಬಣ್ಣ ಚೆಲ್ಲಿ ರಮಣೀಯವಾಗಿ ಕಂಗೊಳಿಸುವ ‘ಕೊನ್ನ’ ಎಂಬ ಹೂ ವಿಷುವಿನ ಪ್ರಮುಖ ಆಕರ್ಷಣೆ.

‘ಕೊನ್ನ ಪೂ’ ಇಲ್ಲದೆ ವಿಷು ಆಚರಣೆಯೇ ಇಲ್ಲ ಎನ್ನಬೇಕು. ಬೆಂಗಳೂರು ಹೊರವಲಯದ ಕೆಲವು ಪ್ರದೇಶಗಳಲ್ಲೂ ‘ಕೊನ್ನ ಪೂ’ ಧಾರಾಳವಾಗಿ ಸಿಗುತ್ತಿರುವುದರಿಂದ ಉದ್ಯಾನ ನಗರಿಯಲ್ಲಿ ಹಬ್ಬ ಆಚರಿಸುವವರಿಗೆ ಅನುಕೂಲವಾಗಿದೆ.

ಹಲಸಿನ ಕಾಯಿ, ಮಾವಿನ ಕಾಯಿ, ಸೌತೆ ಕಾಯಿ, ದೀವಿ ಹಲಸು ಮುಂತಾದವುಗಳೊಂದಿಗೆ ಹಣ್ಣು–ಹಂಪಲ, ವೀಳ್ಯದೆಲೆ, ಅಡಿಕೆ, ಸೀರೆ, ಚಿನ್ನದ ಆಭರಣ ಬಳಸಿ ಇರಿಸುವ ‘ವಿಷು ಕಣಿ’ಯೂ ಹಬ್ಬದ ಪ್ರಮುಖ ಭಾಗ. ವಿಷು, ಮಲಯಾಳಿಗರ ಹೊಸ ವರ್ಷವೂ ಹೌದು. ಈ ದಿನದಂದು ಬೆಳಿಗ್ಗೆ ಸಮೃದ್ಧಿಯ ವಸ್ತುಗಳನ್ನು ನೋಡುವುದರಿಂದ ವರ್ಷ ಪೂರ್ತಿ ಐಶ್ವರ್ಯ ತುಂಬಿರುತ್ತದೆ ಎಂಬುದು ನಂಬಿಕೆ.

ದಿನ–ರಾತ್ರಿ ಸಮ ಆಗುವುದು ಹೇಗೆ?
ಹಗಲು ಮತ್ತು ರಾತ್ರಿ ಸಮ ಆಗುವ ವಿದ್ಯಮಾನದ ಕುರಿತು ವಿಜ್ಞಾನ ಪಂಡಿತರ ವಿಶ್ಲೇಷಣೆ ಹೀಗಿದೆ: ದೀರ್ಘವೃತ್ತದ ಕಕ್ಷೆಯಲ್ಲಿ ಸೂರ್ಯನ ಸುತ್ತ ಪರಿಭ್ರಮಿಸುತ್ತಿರುವ ಭೂಮಿ ತನ್ನ ಅಕ್ಷದಲ್ಲಿಯೂ ಸುತ್ತುತ್ತಿರುತ್ತದೆ. ಭೂಮಿಯ ಆವರ್ತನಾ ಅಕ್ಷ ಮತ್ತು ಪರಿಭ್ರಮಣೆಯ ಕಕ್ಷೆ ನಡುವೆ 23.5 ಡಿಗ್ರಿಯಷ್ಟು ವಾಲಿಕೆ ಇದೆ. ಇದು ಹಗಲು ರಾತ್ರಿಯ ಅವಧಿ ಹೆಚ್ಚಲು ಕಾರಣ. ಆದರೆ ಒಂದು ನಿರ್ದಿಷ್ಟ ಘಟ್ಟದಲ್ಲಿ ಭೂಮಿ ಮತ್ತು ಸೂರ್ಯ ಲಂಬ ರೇಖೆಯಲ್ಲಿ ಬರುತ್ತವೆ. ಆಗ ಹಗಲು ಮತ್ತು ರಾತ್ರಿಯ ಅವಧಿ ಒಂದೇ ಆಗುತ್ತದೆ. ಈ ಪ್ರಕ್ರಿಯೆಯ ಆರಂಭದ ದಿನವೇ ವಿಷು.

**

ಧಾರ್ಮಿಕ ಸಮನ್ವಯದ ಹಬ್ಬ
ವಿಷು ನಮಗೆ ಧಾರ್ಮಿಕ ಸಮನ್ವಯದ ಹಬ್ಬ. ಎಲ್ಲರೂ ಜೊತೆಗೂಡಿ, ಕಲೆತು ಊಟ ಮಾಡಿ ಹಬ್ಬ ಆಚರಿಸುತ್ತೇವೆ. ಕೇರಳದಲ್ಲಿ ಮಾಡುವ ಎಲ್ಲ ಬಗೆಯ ಖಾದ್ಯಗಳನ್ನು ಇಲ್ಲೂ ಸಿದ್ಧಪಡಿಸುತ್ತೇವೆ. ಮಧ್ಯಾಹ್ನದ ನಂತರ ಗೆಳೆಯರ ಕುಟುಂಬಗಳೊಂದಿಗೆ ಸೇರಿ ಸಂಭ್ರಮವನ್ನು ಇಮ್ಮಡಿಗೊಳಿಸುತ್ತೇವೆ. ಅನೇಕ ವರ್ಷಗಳಿಂದ ಹೀಗೆ ಮಾಡುವುದರಿಂದ ಮಕ್ಕಳಲ್ಲಿ ಧಾರ್ಮಿಕ ಸೌಹಾರ್ದ ಮೂಡಿದೆ.
–ಅಬ್ದುಲ್ ಸಲೀಂ, ವ್ಯಾಪಾರಿ, ಕರ್ನಾಟಕ ಬಡಾವಣೆ

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !