ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಿಯೊರಪ್ಪರ ಎಡವಟ್ಟು

Last Updated 15 ಫೆಬ್ರುವರಿ 2019, 20:15 IST
ಅಕ್ಷರ ಗಾತ್ರ

ಅದು ಪಕ್ಷವೊಂದರ ಕಚೇರಿ. ಅಲ್ಲೇ ಪಕ್ಕದಲ್ಲಿದ್ದ ಮರದ ಬುಡದಲ್ಲಿ ಕಚೇರಿಯ ಗುಮಾಸ್ತ ಮತ್ತು ಜವಾನ ಬೈಟೂ ಚಾಯ್ ಪೇ ಚರ್ಚೆಯಲ್ಲಿ ಮುಳುಗಿ ಹೋಗಿದ್ದರು. ಅವರ ಚರ್ಚೆ ಸ್ವಾಭಾವಿಕವಾಗಿ ಆ ಪಕ್ಷದ ಅಧ್ಯಕ್ಷ ಆಡಿಯೊರಪ್ಪರ ಸುತ್ತವೇ ಇತ್ತು.

ಇಬ್ಬರ ಕೈಯಲ್ಲಿದ್ದ ಚಹಾದಿಂದಲೋ, ಅವರ ಖಾಸ್‌ಬಾತ್‌ನಿಂದಲೋ ಸುಳಿಗಾಳಿ ಬರುತ್ತಿದ್ದುದು ಮಾತ್ರ ನಿಜ. ‘ಏನ್ಸಾರ್… ನಮ್ಮ ಅಧ್ಯಕ್ಷರು ನೂರಒಂದನೇ ಎಡವಟ್ಟಿಗೆ ಸಿಕ್ಕಿಬಿದ್ದಿದ್ದಾರಲ್ಲ, ಪಾಪ!’ ‘ಓಹ್, ನೂರಒಂದನೇ ಎಡವಟ್ಟಾ?! ಪರವಾಗಿಲ್ಲಯ್ಯಾ
ನೀನು, ಅವರ ಎಡವಟ್ಟುಗಳ ಲೆಕ್ಕವನ್ನೂ ಇಟ್ಟಿದ್ದೀಯಲ್ಲ!’

‘ಹಾಗೇನಿಲ್ಲ ಸಾರ್. ಅನ್ನ ಕೊಡುವ ಈ ಪಕ್ಷದ ಅಧ್ಯಕ್ಷರ ಎಡವಟ್ಟುಗಳನ್ನು ಮರೆಯಲು ಸಾಧ್ಯವೇ? ಅವರ ಎಡವಟ್ಟುಗಳ ಶತಮಾನೋತ್ಸವವಂತೂ ಧಾಮ್ ಧೂಮ್‌ನಲ್ಲಿ ನಡೆದದ್ದು ನಿಮಗೂ ಗೊತ್ತಿರಬೇಕಲ್ಲ?’

‘ನಿಜ ಕಣಯ್ಯ. ಅಂದು ಅವರು ವಿಶ್ವಾಸಮತ ಗೆಲ್ಲದೇ ‘ಏಕ್ ದಿನ್ ಕಾ ಸುಲ್ತಾನ್’ ಎಂಬ ಬಿರುದು ಪಡೆದದ್ದನ್ನು ನಾವಲ್ಲ, ಇಡೀ ರಾಜ್ಯದ ಜನ ಯಾವತ್ತೂ ಮರೆಯಲಿಕ್ಕಿಲ್ಲ ಬಿಡು’.

‘ಅಲ್ಲ ಸಾರ್, ಮೊನ್ನೆ ಮೊನ್ನೆ ಆ ಕೈಲಾಸ ಪಕ್ಷದ ಶಾಸಕ ಮಂಗನ ಕಾಯಿಲೆಗೆ ತುತ್ತಾಗುವ
ವರೆಗೂ ನಮ್ ಲೀಡರನ್ನು ಜನ ಎಡವಟ್ಟೂರಪ್ಪ ಎಂದೇ ಕರೆಯುತ್ತಿದ್ದರು.

ಈಗ ನೋಡಿ… ಆಡಿಯೊರಪ್ಪ ಎಂದು ಹೊಸ್ದಾಗಿ ಅಡ್ಡ ಹೆಸರಿಟ್ಟುಬಿಟ್ಟಿದ್ದಾರೆ!’ ‘ಸಿ.ಎಂ ತಮ್ಮ ಪಕ್ಷದ ಶಾಸಕರ ಪುತ್ರನ ಹತ್ತು ನಿಮಿಷದ ಆಮಿಷ ಆಡಿಯೊ ನೋಡಿ, ನನ್ನ ಪುತ್ರನಿಗಿಂತಲೂ ದೊಡ್ಡ ಹೀರೊ ಆಗ್ಬಿಟ್ಟಿಯಲ್ಲ ಬ್ರದರ್ ಅಂದರಂತೆ!’

‘ಆದ್ರೆ ನಮ್ ಲೀಡರ್ ಕತೆ ಗೋವಿಂದ ಆಯ್ತಲ್ಲಾರೀ! ಅಲ್ಲಾ ಸಾರ್, ಸ್ವಲ್ಪನಾದ್ರೂ ಬುದ್ಧಿ ಬೇಡವೇ, ಆಡಿಯೊ
ದಲ್ಲಿರುವುದು ನಿಜವೆಂದಾದರೆ ರಾಜಕೀಯ ಸನ್ಯಾಸ ಪಡೆಯುತ್ತೇನೆ ಅನ್ನುವ ಅಗತ್ಯವಿತ್ತೇ? ಅದು ಹೋಗಲಿ, ಮಾರನೇ ದಿವಸ ಅದು ನನ್ನದೇ ಧ್ವನಿ ಎಂದೂ ಅವರು ಒಪ್ಪಿಕೊಳ್ಳಬೇಕಿತ್ತೇ?’

‘ಹೂಂ ನಿಜ ಕಣಯ್ಯಾ... ಮೊದಲ ದಿನದ ಅವರ ಅಮೃತವಾಣಿಯನ್ನು ನಂಬಿ ಅವರ ಪರ ಖಡಕ್ಕಾಗಿ ನಿಂತ ನಮ್ಮ ನಾಯಕರಲ್ಲಿ ಒಬ್ಬರಂತೂ, ಅಧ್ಯಕ್ಷರು ಹಾಗೆಲ್ಲಾ ಹಲ್ಕಾ ಕೆಲಸ ಮಾಡುವವರಲ್ಲ ಅಂದ್ಬಿಟ್ರು. ಆದ್ರೆ ಏನಾಯಿತು? ಸ್ವತಃ ಅಧ್ಯಕ್ಷರೇ ಅಂಥ ಕೆಲಸ ಮಾಡಿದ್ದನ್ನು ಒಪ್ಪಿಕೊಂಡುಬಿಡೋದಾ ಮಾರಾಯ!’

‘ಆದರೆ ಸಾರ್… ನಮ್ಮ ಪಕ್ಷದೋರು ಅಂಥ ಕೆಲಸ ಮಾಡೋದರಲ್ಲಿ ತಪ್ಪೇನಿದೆ? ಅಷ್ಟಕ್ಕೂ ಆಪರೇಷನ್ ಕಾರ್ಯಾಚರಣೆ ಗುಟ್ಟಿನ ವಿಷಯವೇನಲ್ಲ. ಆಪರೇಷನ್ ಈಗಿನ ರಾಜಕಾರಣದ ಜೀವಾಳವಾಗಿರುವುದರಿಂದ ಅದರಲ್ಲೇನೂ ತಪ್ಪಿಲ್ಲ ಎಂದು ನಾಳೆ ತನಿಖಾ ವರದಿಯಲ್ಲೂ ಉಲ್ಲೇಖಿಸಿದರೆ ಆಶ್ಚರ್ಯವಿಲ್ಲ!’ ‘ಹೌದಲ್ಲ! ಹಲ್ಕಾ ಕೆಲಸ ಮಾಡುವವರ ಕೊನೆಯ ಅಸ್ತ್ರ ರಾಜಕೀಯ ಎಂದು ಷಾ ಎಂಬ ಮಹಾನುಭಾವ ಹೇಳಿದ್ದನ್ನು ಇವರೆಲ್ಲಾ ಸೀರಿಯಸ್ಸಾಗಿ ತಗೊಂಡಿದ್ದಾರೆ’.

‘ನಮ್ ಪಕ್ಷದ ರಾಷ್ಟ್ರಾಧ್ಯಕ್ಷ ಶಾ ಹಾಗೆ ಹೇಳಿದ್ದಾರಾ?!’‌

‘ಯೋ! ನಮ್ಮ ಶಾ ಅಲ್ಲ ಕಣಯ್ಯಾ… ಬರ್ನಾರ್ಡ್‌ ಷಾ ಅಂತ ಒಬ್ಬ ಸಾಹಿತಿ ಇದ್ದರು. ಅವರು ಹೇಳಿದ್ದು ಅಂದೆ’. ‘ಸಾರ್, ಮುಂದೇನಾಗಬಹುದು? ಆಡಿಯೊರಪ್ಪರು ಕೊಟ್ಟ ಮಾತಿನಂತೆ ರಾಜಕೀಯ ಸನ್ಯಾಸ ತಗೋಬಹುದಾ?’

‘ಹೂಂ... ರಾಜಕೀಯ ಸನ್ಯಾಸ ತಗೋತೀನೀಂತ ಘೋಷಣೆ ಮಾಡುವ ಸಾಧ್ಯತೆ ಇದೆ. ಆದರೆ ರಾಜಕೀಯ ಸನ್ಯಾಸಿಯಾಗಿ ಮರಳಿ ಫೀಲ್ಡಿಗೆ ಬರುವುದು ಗ್ಯಾರಂಟಿ! ಯುಪಿ ಸಿ.ಎಂ ತರ!’

‘ಅಲ್ಲ ಸಾರ್… ಇವರ ಆಪರೇಷನ್ ಜಂಜಾಟದಲ್ಲಿ ಸ್ಪೀಕರ್ ಸಾಹೇಬ್ರನ್ನೂ ಎಳೆದು ತರ್ತಾರೆ ಅಂತ ನಾನು ಭಾವಿಸಿರಲಿಲ್ಲ!’ ‘ಹೂಂ ಕಣಯ್ಯಾ… ತುಂಬಿದ ಸಭೆಯಲ್ಲಿ ದುಶ್ಶಾಸನ ದ್ರೌಪದಿಯ ಸೀರೆ ಎಳೆದು ಮಾನಭಂಗ…’ ‘ಶ್! ಸುಮ್ನೆ ಯಾವುದ್ಯಾವು
ದಕ್ಕೆಲ್ಲ ಹೋಲಿಸಬೇಡಿ ಸಾರ್! ಮೊನ್ನೆ ಮಾಜಿ ಸಿಯಮ್ಮಯ್ಯರು ಹೋಗಿ ಹೋಗಿ ಸ್ಪೀಕರ್ ಸಾಹೇಬ್ರನ್ನು ಯಾರೋ ಒಬ್ಬ ಖತರ್‌ನಾಕ್ ಕಳ್ಳನಿಗೇ ಹೋಲಿಸಿ ಬಿಟ್ರಲ್ಲ! ಸ್ಪೀಕರ್‌ರಂತೆ ಆ ಕಳ್ಳನ ನಾಲಗೆಯೂ ಹರಿತವಿದ್ದುದರಿಂದ, ಕೋರ್ಟ್‌ನಲ್ಲಿ ತಾನೇ ವಾದಿಸಿ ಗೆಲ್ಲುತ್ತಿದ್ದ ಎಂದು ಅವರು ಹೇಳಹೊರಟಿದ್ದರೂ… ಹಾಗೆ ಹೋಲಿಸಿದ್ದು ಖಂಡನೀಯ ಅಲ್ಲವೇ ಸಾರ್?’.

‘ಹಾಂ! ಎಲ್ಲದಕ್ಕೂ ತನಿಖೆ ಮೂಲಕ ನಿಜ ಸಂಗತಿ ಬಯಲಾಗಲಿದೆ. ಅಗ್ನಿಪರೀಕ್ಷೆಗೆ ಆಡಿಯೊ ಪಾತ್ರಧಾರಿಗಳೆಲ್ಲಾ ಸಿದ್ಧರಾಗಲಿ’.
‘ನಮ್ ಅಧ್ಯಕ್ಷರು ಆಡಿಯೊ ಮಾಡಿದ ಸ್ಮಾರ್ಟ್ ಫೋನನ್ನು ಬೆಂಕಿಗೆ ಹಾಕುವ ಮೂಲಕವೇ ಅಗ್ನಿಪರೀಕ್ಷೆ ಆಗಬೇಕೆಂದು ಹಟ ಹಿಡಿದು ಕುಳಿತಿದ್ದಾರಂತಲ್ಲ ಸಾರ್! ಹೌದಾ?’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT