ಕಾಡುವ ಕಹಿ ನೆನಪು

ಭಾನುವಾರ, ಮೇ 26, 2019
27 °C

ಕಾಡುವ ಕಹಿ ನೆನಪು

Published:
Updated:

ನನಗೆ 26ವರ್ಷ. ನಾನು ಜೀವನದಲ್ಲಿ ಸ್ನೇಹಿತರಿಂದ, ಪ್ರೀತಿಸಿದ ಹುಡುಗಿಯಿಂದ ಹಾಗೂ ಸಂಬಂಧಿಕರಿಂದ ತುಂಬಾ ಮೋಸ ಹೋ‌ಗಿದ್ದೇನೆ. ಒಮ್ಮೆ ಸಾಯಲು ಮುಂದಾಗಿದ್ದೆ. ಆದರೆ ಸಾವೇ ಎಲ್ಲದ್ದಕ್ಕೂ ಪರಿಹಾರವಲ್ಲ, ಜೀವನದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದುಕೊಂಡು ಐಎಎಸ್‌ ಮಾಡುವ ಗುರಿ ಇಟ್ಟುಕೊಂಡಿದ್ದೇನೆ. ಅದಕ್ಕೆ ತಯಾರಿಯೂ ನಡೆಸುತ್ತಿದ್ದೇನೆ. ಒಬ್ಬ ಅತ್ಯುನ್ನತ ಅಧಿಕಾರಿಯಾಗಿ ದೇಶ ಸೇವೆ ಮಾಡಬೇಕು ಎಂದುಕೊಂಡು ದೃಢ ಸಂಕಲ್ಪ ಮಾಡಿ ಓದುತ್ತಿದ್ದೇನೆ. ಆದರೆ ಯಾವಾಗಲಾದರೂ ಹಿಂದಿನ ಘಟನೆಗಳು ನೆನಪಾದರೆ ತಡೆಯಲಾಗದಷ್ಟು ನೋವಾಗುತ್ತದೆ. ಇದರಿಂದ ಕೆಲವು ದಿನಗಳಿಂದ ಸರಿಯಾಗಿ ಓದಲು ಆಗುತ್ತಿಲ್ಲ. ಹಿಂದಿನ ಘಟನೆಗಳು ನೆನಪಿಗೆ ಬಾರದಂತೆ ಏನು ಮಾಡಬೇಕು?

ಊರು, ಹೆಸರು ಬೇಡ

ಐಎಎಸ್ ಪರೀಕ್ಷೆಗೆ ತಯಾರಿ ನಡೆಸುವುದು ಮತ್ತು ಪರೀಕ್ಷೆ ಎದುರಿಸುವುದು ಸುಲಭವಲ್ಲ. ಹಾಗಾಗಿ ನಿಮ್ಮ ಮೊದಲ ಆದ್ಯತೆ ಓದುವುದೇ ಆಗಿರಬೇಕು. ಜೊತೆಗೆ ಓದಿನ ಮೇಲೆ ಶೇ 100ರಷ್ಟು ಗಮನ ಹರಿಸಬೇಕು. ಯಾವಾಗ ನೀವು ಓದಿನ ಮೇಲೆ ಸಂಪೂರ್ಣ ಗಮನ ಹರಿಸುತ್ತೀರೋ ಆಗ ನಿಮಗೆ ಬೇರೆ ವಿಷಯಗಳ ಬಗ್ಗೆ ಚಿಂತಿಸಲು ಸಮಯವಿರುವುದಿಲ್ಲ. ಅದರ ಜೊತೆಗೆ ಸಮಯ ಹೊಂದಿಸಿಕೊಳ್ಳಲು ಸಾಧ್ಯವಾದರೆ ಆ ಬಿಡುವಿನ ವೇಳೆಯಲ್ಲಿ ರಿಲಾಕ್ಸ್ ಮಾಡುವ ದೃಷ್ಟಿಯಿಂದ ಕೆಲ ಹೊತ್ತು ವಾಕ್ ಮಾಡುವುದು, ಸಂಗೀತ ಕೇಳುವುದು ಅಥವಾ ವ್ಯಾಯಾಮ ಮಾಡುವುದು ಮಾಡಿ. ಈ ದಿನಚರಿಯನ್ನು ಸಂಪೂರ್ಣ ಪರಿಶ್ರಮ ಹಾಕಿ ಪಾಲಿಸಿದರೆ, ಇದು ನಿಮಗೆ ಬೇರೆಯುವರಿಂದ ನಿರೀಕ್ಷೆ ಮಾಡುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆಗಲೂ ನಿಮಗೆ ನಿಮ್ಮ ಭೂತಕಾಲಗಳ ಬಗ್ಗೆ ವಿಮರ್ಶೆ ಮಾಡಲು ಸಮಯ ಸಿಕ್ಕರೆ ನಿಮ್ಮ ಮುಖದಲ್ಲಿ ನಗು ಮೂಡಿಸುವ ಒಳ್ಳೆಯ ನೆನಪುಗಳನ್ನು ಮಾತ್ರ ವಿಮರ್ಶಿಸಿಕೊಳ್ಳಿ. ಜಾಗೃತ ಪ್ರಯತ್ನ ನಿಮ್ಮನ್ನು ವರ್ತಮಾನದಲ್ಲಿ ಸದಾ ಎಚ್ಚರದಿಂದಿರುವಂತೆ ಮಾಡುತ್ತದೆ ಹಾಗೂ ನಿಮ್ಮ ಜೀವನದ ಪ್ರಾಶಸ್ತ್ಯಗಳನ್ನು ನೆನಪಿಸುತ್ತದೆ. ಖಂಡಿತ ನೀವು ಗೆಲುವು ಸಾಧಿಸುತ್ತೀರಿ. 

***

ನಾನು 22 ವರ್ಷದ ಹುಡುಗಿ, ನಾನು ವರ್ಜಿನ್ ಅಲ್ಲ. ನನ್ನ ಪ್ರಶ್ನೆ ಏನೆಂದರೆ ವರ್ಜಿನ್ ಅಲ್ಲದ ಹುಡುಗಿ ಮತ್ತೆ ಪ್ರೀತಿ ಮಾಡಲು ಸಾಧ್ಯವಿಲ್ಲವೇ? ಅಥವಾ ಅವಳು ಯಾರನ್ನೂ ಇಷ್ಟ ಪಡಬಾರದಾ? ನನಗೆ ಮುಂದೆ ಒಳ್ಳೆಯ ಜೀವನ ಸಿಗುತ್ತಾ? ಈ ಯೋಚನೆಗಳಿಂದ ನಾನು ಹೇಗೆ ಹೊರ ಬರಲಿ. ನಾನು ಮದುವೆ ಆಗುವ ಹುಡುಗನಿಗೆ ಈ ವಿಷಯ ಹೇಳಬೇಕೋ ಬೇಡವೋ ಗೊತ್ತಾಗುತ್ತಿಲ್ಲ. ನಾನು ಹೇಗೆ ಜೀವನ ಕಟ್ಟಿಕೊಳ್ಳಲಿ ತಿಳಿಸಿ.

ಹೆಸರು ಊರು ಬೇಡ

ನಿಮ್ಮ ಜೀವನದಲ್ಲಿ ಘಟಿಸಿರುವ ಘಟನೆಗಳಿಗೆ ನೀವೇ ಜವಾಬ್ದಾರರು ಹಾಗೂ ಅದು ಸಂಪೂರ್ಣ ನಿಮ್ಮದೇ ನಿರ್ಧಾರ. ನಿಮ್ಮ ನಿರ್ಧಾರದ ಬಗ್ಗೆ ನೀವು ಸ್ಥಿರವಾಗಿರಿ ಹಾಗೂ ಆ ನಿರ್ಧಾರಗಳ ಬಗ್ಗೆ ಆತ್ಮವಿಶ್ವಾಸದಿಂದಿರಿ. ಉತ್ತಮ ಬಾಳಸಂಗಾತಿ ಸಿಕ್ಕರೆ ಮದುವೆಯಾಗುವುದು ಸಮಸ್ಯೆ ಅಲ್ಲ. ಖಂಡಿತ ಮುಂದೆ ಸಾಗಿ ಮದುವೆ ಆಗಿ. ನಿಮ್ಮ ಭೂತಕಾಲದ ಬಗ್ಗೆ ನಿಮ್ಮ ಸಂಗಾತಿಗೆ ತಿಳಿಸುವುದು ಕೇವಲ ನಿಮ್ಮೊಬ್ಬರ ನಿರ್ಧಾರ. ಹಾಗಾಗಿ ನೀವೇ ಈ ನಿರ್ಧಾರವನ್ನು ತೆಗೆದುಕೊಳ್ಳಬೇಕು.

***

ನಾನು ಎಂ. ಎ. ಓದುತ್ತಿದ್ದೇನೆ. ತುಂಬಾ ಮುಜುಗರದ ಸ್ವಭಾವದವನು. ನನಗೆ ಗೆಳೆಯರು ವಿರಳ. ಯಾವಾಗಲೂ ಒಂಟಿಯಾಗಿ ಇರಬೇಕು ಅನ್ನಿಸುತ್ತದೆ. ಎಲ್ಲರ ಜೊತೆ ಬೆರೆಯಲು ಸಾಧ್ಯವಾಗುತ್ತಿಲ್ಲ. ನಾನು ಯಾಕೆ ಹೀಗೆ ಇದ್ದೇನೆ ಎಂದು ಬೇಸರವಾಗುತ್ತದೆ. ಹೆಣ್ಣುಮಕ್ಕಳ ಜೊತೆ ಮಾತನಾಡುವಾಗ ಭಯವಿಲ್ಲ ಆದರೂ ನರ್ವಸ್ ಆಗುತ್ತೇನೆ. ನಡುಗುತ್ತೇನೆ, ಮುಜುಗರಕ್ಕೆ ಒಳಗಾಗುತ್ತೇನೆ.

ಮಂಜುನಾಥ, ತುಮಕೂರು

ನೀವು ಹೇಗಿದ್ದಿರೋ ಹಾಗೇ ಇರಿ. ನಿಮ್ಮ ಸುತ್ತಲಿನ ಜನರಿಂದ ಪ್ರಭಾವಿತರಾಗಬೇಡಿ. ನಿಮ್ಮ ಸುತ್ತಲಿನವರಿಗೆ ಇಷ್ಟವಾದಂತೆ ವರ್ತಿಸುವುದು ಅಥವಾ ನಟಿಸುವುದು ಮುಖವಾಡ ಧರಿಸಿದಂತೆ. ಅದರ ಬದಲು ಬೇರೆ ಬೇರೆ ಮನೋಭಾವದ ಜನರ ಜೊತೆ ಬೆರೆಯಲು ಪ್ರಯತ್ನಿಸಿ. ನಿಮ್ಮ ಬೆಂಚ್‌ಮೇಟ್‌ಗಳು, ರೂಮ್‌ಮೇಟ್‌ಗಳ ಜೊತೆ ಮಾತನಾಡಲು ಪ್ರಯತ್ನಿಸಿ. ಅವರೊಂದಿಗೆ ಸಾಮಾನ್ಯ ಪ್ರಶ್ನೆಗಳನ್ನು ಕೇಳಿ. ಅವರ ಎದುರು ಅಸಾಧಾರಣ ಎನ್ನಿಸಿಕೊಳ್ಳಲು ಪ್ರಯತ್ನಿಸಬೇಡಿ. ಅದರೊಂದಿಗೆ ನಿಮ್ಮ ಆಸಕ್ತಿಗೆ ಹೊಂದುವಂತಹ ಕೆಲವು ಮಂದಿ ಸಿಗುತ್ತಾರೆ. ಆಸಕ್ತಿದಾಯಕರಾಗಿರಿ. ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ. ಎಲ್ಲಾ ವಿಷಯಗಳ ಬಗ್ಗೆಯೂ ಸ್ವಲ್ಪವಾದರೂ ತಿಳಿದುಕೊಳ್ಳಲು ಪ್ರಯತ್ನಿಸಿ. ಕ್ಲಾಸ್‌ಮೇಟ್ಸ್ ಜೊತೆ ಊಟ ಮಾಡಿ. ಆಗ ನಿಮಗೆ ಅವರ ಜೊತೆ ಬೆರೆಯಲು ಅವಕಾಶ ಸಿಕ್ಕಂತೆ ಆಗುತ್ತದೆ ಹಾಗೂ ಅವರ ಬಗ್ಗೆ ಅರಿಯಲು ಸಾಧ್ಯವಾಗುತ್ತದೆ. ಯಾವಾಗ ನಿಮಗೆ ಅವರ ಜೊತೆ ಸಾಮಾನ್ಯರಂತೆ ಮಾತನಾಡಲು ಸಾಧ್ಯವಾಗುವುದೋ ಆಗ ನಿಮ್ಮ ಮನಸ್ಥಿತಿಯೂ ಬದಲಾಗುತ್ತದೆ. ಜೊತೆಗೆ ನೀವು ಅವರಲ್ಲಿ ಒಬ್ಬರು ಎನ್ನಿಸಿಕೊಳ್ಳುತ್ತೀರಿ. ಎಲ್ಲರೊಂದಿಗೆ ಆರಾಮಾಗಿ ಮಾತನಾಡಿ, ನಾಚಿಕೆ ಪಟ್ಟುಕೊಳ್ಳಬೇಡಿ. ಅದು ಹುಡುಗರೇ ಆಗಿರಲಿ ಹುಡುಗಿಯರೇ ಆಗಿರಲಿ; ಒಂದೇ ರೀತಿ ಇರಿ. ಸಮಯ ಕಳೆದಂತೆ ನೀವು ನಿಮ್ಮ ಸುತ್ತಲಿನ ಜನರ ಜೊತೆ ಸಮಾನ ಆಸಕ್ತಿ ಬೆಳೆಸಿಕೊಳ್ಳುತ್ತೀರಿ ಹಾಗೂ ಸ್ನೇಹ ಸಂಪಾದನೆ ಮಾಡುತ್ತೀರಿ. ನಿಮ್ಮ ಪ್ರಾಧ್ಯಾಪಕರ ಜೊತೆ ಮಾತನಾಡಿ, ಅವರು ಎದುರು ಸಿಕ್ಕಾಗ ವಿಶ್ ಮಾಡಿ. ಈ ಚಿಕ್ಕ ಹೆಜ್ಜೆಯೂ ನಿಮ್ಮಲ್ಲಿ ಭಯದಿಂದ ಹೊರಬಂದು ಜನರನ್ನು ಎದುರಿಸಲು ಸಹಾಯ ಮಾಡುತ್ತದೆ. ಇಲ್ಲಿ ನಿಮ್ಮ ಹೆಜ್ಜೆಯನ್ನು ನೀವೇ ಆರಿಸಿಕೊಳ್ಳಬೇಕು, ಯಾರೂ ನಿಮ್ಮನ್ನು ಮುಂದಕ್ಕೆ ಕರೆದ್ಯೊಯುವವರಿಲ್ಲ. ನೀವು ಪ್ರತಿದಿನ ನೋಡಿ ನಗುವ ಜನರ ಬಗ್ಗೆ ನಿಧಾನಕ್ಕೆ ಅರಿತುಕೊಳ್ಳುತ್ತೀರಿ. ಖಂಡಿತ ಕೆಲ ಸಮಯದಲ್ಲೇ ಹಲವರು ನಿಮ್ಮೊಂದಿಗಿರುತ್ತಾರೆ. ಆಗ ನಿಮಗೆ ಆಶ್ಚರ್ಯವಾಗುತ್ತದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !