“...ಉಳಿಯುವ ಗಾಂಧಿ ಮಾರ್ಗ ಎಂ.ಜಿ. ರೋಡ್ ಮಾತ್ರ...

7

“...ಉಳಿಯುವ ಗಾಂಧಿ ಮಾರ್ಗ ಎಂ.ಜಿ. ರೋಡ್ ಮಾತ್ರ...

ಎನ್.ಎ.ಎಂ. ಇಸ್ಮಾಯಿಲ್
Published:
Updated:
“...ಉಳಿಯುವ ಗಾಂಧಿ ಮಾರ್ಗ ಎಂ.ಜಿ. ರೋಡ್ ಮಾತ್ರ...

ಸಂದರ್ಶನ

ಬೊಳುವಾರು ಮಹಮ್ಮದ್ ಕುಂಞಿ ಕನ್ನಡದ ಮುಖ್ಯ ಕಥೆಗಾರರಲ್ಲಿ ಒಬ್ಬರು. ನಾಳೆಗಳ ಬಗ್ಗೆ ಅಪಾರ ವಿಶ್ವಾಸವನ್ನೂ, ಮಾನವೀಯತೆಯ ಬಗ್ಗೆ ನಂಬಿಕೆಯನ್ನೂ ವ್ಯಕ್ತಪಡಿಸುವ ಅವರ ಕಥೆಗಳು ಕನ್ನಡ ಕಥಾಲೋಕವನ್ನು ಶ್ರೀಮಂತಗೊಳಿಸಿವೆ. ಮಾರ್ಕ್ವೆಜ್‌ಗೆ ಮಕಾಂಡೋದಂತೆ, ಆರ್.ಕೆ. ನಾರಾಯಣ್‌ಗೆ ಮಾಲ್ಗುಡಿಯಂತೆ ಬೊಳುವಾರರಿಗೆ ಮುತ್ತುಪಾಡಿ.`ಅತ್ತ ಇತ್ತಗಳ ಸುತ್ತಮುತ್ತ~, `ದೇವರುಗಳ ರಾಜ್ಯದಲ್ಲಿ~, `ಅಂಕ~, `ಆಕಾಶಕ್ಕೆ ನೀಲಿ ಪರದೆ~, `ಒಂದು ತುಂಡು ಗೋಡೆ~ ಅವರ ಕಥಾಸಂಕಲನಗಳು. ಮಕ್ಕಳಿಗಾಗಿ ಬೊಳುವಾರರು ರಚಿಸಿದ `ಪಾಪು ಗಾಂಧಿ, ಗಾಂಧಿ ಬಾಪು ಆದ ಕತೆ~ ಕೃತಿಗೆ, ಮಕ್ಕಳ ಸಾಹಿತ್ಯಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ನೀಡುವ ಪುರಸ್ಕಾರ ದೊರೆತಿದೆ. ಅವರ `ಮುತ್ತುಚ್ಚೇರ~ ಕಥೆ ಆಧರಿಸಿದ `ಮುನ್ನುಡಿ~ (ನಿ: ಪಿ. ಶೇಷಾದ್ರಿ) ಸಿನಿಮಾ ಹಲವು ಪ್ರಶಸ್ತಿಗಳಿಗೆ ಪಾತ್ರವಾಗಿದೆ.

 

ಬ್ಯಾಂಕ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ, ಈಚೆಗಷ್ಟೇ ನಿವೃತ್ತರಾಗಿರುವ ಬೊಳುವಾರರು ಈಗ ಪೂರ್ಣ ಪ್ರಮಾಣದ ಲೇಖಕರು.  ಬರುವ ಮಾರ್ಚ್ 18ರಂದು ಅವರ ಮಹತ್ವಾಕಾಂಕ್ಷೆಯ ಕಾದಂಬರಿ `ಸ್ವಾತಂತ್ರ್ಯದ ಓಟ~ದ ಬಿಡುಗಡೆ. ಆ ಓಟದ ಬಗ್ಗೆ ಅವರೊಂದಿಗೆ ಮಾತುಕತೆ.

                                            ======

-ಸ್ವಾತಂತ್ರ್ಯದ ಓಟ ಕಥೆ ಬರೆದಾಗಲೇ ನಿಮ್ಮ ಮನಸ್ಸಿನೊಳಗೆ ಈಗ ಪ್ರಕಟವಾಗುತ್ತಿರುವ `ಮ್ಯಾಗ್ನಂ ಓಪಸ್~ನ ಪರಿಕಲ್ಪನೆ ಮೊಳಕೆಯೊಡೆದಿತ್ತೇ?

ಹಿಂದೆಯೆಲ್ಲ ಗೆಳೆಯರಿಗೆ ಎರಡು ಸಾಲಿನ ಪತ್ರ ಬರೆದು ಮುಗಿಸಿದಾಗಲೇ ನೀವು ಹೇಳುವ `ಮ್ಯಾಗ್ನಂ ಓಪಸ್~ನ ಕನಸು ಕಾಣುತ್ತಿದ್ದವನು ನಾನು. ಈಗ ಅದೆಲ್ಲ ಸುಳ್ಳು ಅಂತ ಹೇಳಿದರೆ ಸುಳ್ಳು ಹೇಳಿದ ಹಾಗೆ ಆಗುವುದಿಲ್ಲವಾ?

-ನಿಮ್ಮ ಹಿಂದಿನ ತಲೆಮಾರಿನ ಎಲ್ಲಾ ಪ್ರಮುಖ ಲೇಖಕರಿಗೂ ಕಾದಂಬರಿ ಅಭಿವ್ಯಕ್ತಿಯ ಬಹಳ ಮುಖ್ಯ ಮಾಧ್ಯಮ/ಪ್ರಕಾರ/ತಂತ್ರವಾಗಿತ್ತು. ಆದರೆ ನಿಮ್ಮ ಕಾಲಕ್ಕೆ ಆ ಸ್ಥಾನವನ್ನು ಸಣ್ಣ ಕಥೆ ಪಡೆದುಕೊಂಡಿತು. ಆದರೂ ಎಲ್ಲಾ ಲೇಖಕರಿಗೂ ಕಾದಂಬರಿಯ ಕಡೆಗಿನ ಆಕರ್ಷಣೆ ಉಳಿದೇ ಇತ್ತು. ನೀವು ಮತ್ತೆ ಕಾದಂಬರಿಗೆ ಹಿಂದಿರುಗುತ್ತಿದ್ದೀರಿ.ಇದಕ್ಕೆ ಕಾರಣ ಸಣ್ಣ ಕಥೆಯೆಂಬ ಪ್ರಕಾರದ ಮಿತಿಯೇ? ಕಾದಂಬರಿ ಎಂಬ ಪ್ರಕಾರದೆಡೆಗಿನ ಆಕರ್ಷಣೆಯೇ? ಅಥವಾ ಆರಿಸಿಕೊಳ್ಳುವ ವಸ್ತು ಅದರ ಪ್ರಕಾರವನ್ನು ನಿರ್ಧರಿಸುತ್ತದೆಯೇ? ಅದು ಹೌದು ಎನ್ನುವುದಾದರೆ `ಸ್ವಾತಂತ್ರ್ಯದ ಓಟ~ ಕಥೆಯಾದದ್ದು ಹೇಗೆ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆಯಲ್ಲವೇ?


ಹದಿನೈದು ವರ್ಷಗಳ ಹಿಂದೆ (1995) `ಸ್ವಾತಂತ್ರ್ಯದ ಓಟ~ವನ್ನು ಶುರುಮಾಡಿದ್ದು ಸಣ್ಣ ಕಥೆಯಾಗಿಯೇ. ಅದು ಆಗ ಪ್ರಕಟವೂ ಆಗಿತ್ತು. ಆನಂತರ ಹಲವು ಬಾರಿ ಸಣ್ಣ ಕಥೆ ಬರೆಯಲು ಯತ್ನಿಸಿದಾಗಲೆಲ್ಲ ಸೋತುಬಿಟ್ಟೆ. ಆ ಕತೆಯ ಮುಖ್ಯ ಪಾತ್ರವಾಗಿದ್ದ ಚಾಂದ್ ಅಲೀಯನ್ನು ಪಾಕಿಸ್ತಾನದ ಬಹವಾಲಪುರದಿಂದ ಕರೆದುಕೊಂಡು ಬಂದು ದೆಹಲಿಯ ರೈಲು ನಿಲ್ದಾಣದಲ್ಲಿ ಬಿಟ್ಟು ಬಂದಿದ್ದೆ.

 

ಮುಂದೆ ಬೇರೆ ಯಾವ ಕಥೆ ಬರೆಯಲು ಶುರು ಮಾಡಿದರೂ ಆತ ನನ್ನನ್ನು ತಡೆಯುತ್ತಿದ್ದ; `ಒಂದೋ ನನ್ನನ್ನು ನನ್ನ ಮಾತೃಭೂಮಿಗೆ ಕಳುಹಿಸಿಬಿಡು. ಅಥವಾ ಇಲ್ಲೇ ಕೊಂದುಬಿಡು. ಅಲ್ಲಿಯವರೆಗೆ ಬೇರೆ ಕಥೆ ಬರೆಯಲು ನಿನ್ನನ್ನು ಬಿಡಲಾರೆ~ ಅಂತ ಎಚ್ಚರಿಸುತ್ತಿದ್ದ.ಹಾಗಾಗಿ ಕಳೆದ ಹದಿನೇಳು ವರ್ಷಗಳಲ್ಲಿ ಯಾವುದೇ ಸಣ್ಣ ಕಥೆ ಬರೆಯುವುದು ನನ್ನಿಂದ ಸಾಧ್ಯವಾಗಲಿಲ್ಲ. ಅವನನ್ನು ಮುಗಿಸದೇ ಹೋದರೆ ನಾನು ಸಣ್ಣ ಕಥೆಗಾರನೆಂಬ `ಪ್ರಚಾರ~ದಿಂದ ಅಳಿಸಿಹೋಗುತ್ತಿದ್ದೇನೆ ಎಂಬ ಭಯ ಶುರುವಾಯಿತು. ಮತ್ತೊಂದಿಪ್ಪತ್ತು ಪುಟ ಸೇರಿಸಿ ಮತ್ತೊಂದು ಸಣ್ಣ ಕಥೆ ಬರೆದು ಅವನನ್ನು `ದಫನ~ ಮಾಡಲು ನಿರ್ಧರಿಸಿದೆ.ಆದರೆ ಆತ ಭಯಂಕರನಿದ್ದ; ಮೈ ಕೈಗೆಲ್ಲ ಎಣ್ಣೆ ಸವರಿಕೊಂಡು ಹಿಡಿದಷ್ಟೂ ಜಾರಿಕೊಳ್ಳುತ್ತಿದ್ದ. ಆಯಿತು ಮಾರಾಯಾ ಅಂತ ಒಂದಿನ್ನೂರು ಪುಟಗಳ ಕಾದಂಬರಿ ಬರೆಯಲು ಶುರು ಮಾಡಿದೆ. ಉಪದ್ರ ಅವನೊಬ್ಬನದೇ ಅಲ್ಲ; ನಾನು ಅದುವರೆಗೆ ಬರೆದ ಸಣ್ಣ ಕಥೆಗಳ ಕೆಲವು ಪಾತ್ರಗಳೂ ದುಂಬಾಲು ಬೀಳತೊಡಗಿದವು; ನಮಗೂ ನಿನ್ನ ಚಾಂದ್ ಅಲೀಯ ಪರಿಚಯ ಮಾಡು ಅಂತ.ಮುಖ್ಯವಾಗಿ ಹಾಜಾರ‌್ರು, ಹಸನಬ್ಬನವರು, ಇಸ್ಪೇಟ್ ಖಾದರ್, ಹಂಝಾಕಾ, ಕರೀಮ್ ಖಾನ್, ಕೈಜಮ್ಮ, ಐಸಮ್ಮ, ಜನ್ನಾತುಮ್ಮ, ಹಲೀಮಾ, ಸಲೀಮಾ, ಸಣ್ಣ ಪಾತುಮ್ಮ, ಕಾಸಿಮ್, ದೊಡ್ಡ ಪಂಡಿತರು, ಮುತ್ತುಪ್ಪಾಡಿ ಜೋಯಿಸರು, ಗಣೇಶ ಕಾಮತರು, ಚಡ್ಡಿ ಅನಂತಣ್ಣನವರು, ಸರಳಾಯರು ಹೀಗೆ ಎಲ್ಲರ ಬೇಡಿಕೆಯೂ ಒಂದೇ ಬಗೆಯದ್ದು.`ಅವನನ್ನು ಡೆಲ್ಲಿಯಿಂದ ಮುತ್ತುಪ್ಪಾಡಿಗೆ ಕರೆದುಕೊಂಡು ಬಾ, ಅವನನ್ನು ನಾವು ನೋಡಿಕೊಳ್ಳುತ್ತೇವೆ~ ಅಂತ. ಒಬ್ಬನನ್ನು ಸೇರಿಸಿಕೊಂಡಾಗ ಮತ್ತೊಬ್ಬನಿಗೆ ಬೇಸರವಾಗುತ್ತಿತ್ತು. ಮತ್ತೊಬ್ಬನ ಹಿಂದೆ ಇನ್ನೊಬ್ಬ. ಹೀಗೆ ಸುಮಾರು ಇನ್ನೂರರಷ್ಟು ಮುತ್ತುಪ್ಪಾಡಿಯ ಮನುಷ್ಯರು ಚಾಂದ್ ಅಲೀಯನ್ನು ಬರಮಾಡಿಕೊಳ್ಳಲು ತಯಾರಿ ಮಾಡಿಕೊಂಡಿದ್ದರು. ಆಗ ನಾನು ಬ್ಯಾಂಕಿನ ಉದ್ಯೋಗಿ. ಬರೆಯಲು ಪುರುಸೊತ್ತಾಗುತ್ತಿದ್ದದ್ದು ರಾತ್ರಿ ಹತ್ತರಿಂದ ಒಂದರವರೆಗೆ. ದಿನಕ್ಕೆ ಎರಡು ಮೂರು ಪುಟಗಳಿಗಿಂತ ಹೆಚ್ಚು ಬರೆಯಲಾಗುತ್ತಿರಲಿಲ್ಲ. ರಾತ್ರಿ ಬರೆಯಲು ಹೊರಟಿದ್ದ ಕತೆ, ಹಗಲಿನ ಬ್ಯಾಂಕು ಕೆಲಸಗಳ ನಡುವೆ ಮರೆತು ಹೋಗುತ್ತಿತ್ತು. ಮರುರಾತ್ರಿ ಬರೆಯುತ್ತಿರುವುದು ಹೊಸತೇ ಆಗುತ್ತಿತ್ತು.

 

ಇನ್ನೂರು ಪುಟಗಳು ಮುನ್ನೂರು ದಾಟುತ್ತಿದೆಯೆಂದಾಗ ಇದನ್ನು ಯಾರು ಓದುತ್ತಾರೆ ಅಂತ ಭಯ ಶುರುವಾಯಿತು. ಆಗ ಜ್ಞಾನೋದಯವಾಯಿತು. ಅದರಂತೆ ಸ್ವಾತಂತ್ರ್ಯದ ಓಟದ `ಪಥ ಪರಿವೀಕ್ಷಕರಾಗಿ~ ಸಹೃದಯರ ಒಂದು ಪಟ್ಟಿ ಮಾಡಿದೆ. ಅದರಲ್ಲಿ ಒಟ್ಟು ಇಪ್ಪತ್ತೇಳು ಮಂದಿ. ಅವರಲ್ಲಿ ಗೆಳೆಯರಿದ್ದರು, ಗೆಳತಿಯರಿದ್ದರು, ಜಾತಿಗಳ ಮತಗಳ ಪಂಡಿತರುಗಳಿದ್ದರು, ಧರ್ಮ ಪ್ರತಿಪಾದಕರಿದ್ದರು, ಸಾಮಾನ್ಯ ಮನುಷ್ಯರಿದ್ದರು.ಬರೆಯುತ್ತಿದ್ದಂತೆಯೇ ಐವತ್ತು ಅರುವತ್ತು ಪುಟಗಳನ್ನು ನೆರಳಚ್ಚು ಮಾಡಿ ಅವರಿಗೆ ಕಳುಹಿಸಿ ಓದಿ ಪ್ರತಿಕ್ರಿಯಿಸಲು ಹೇಳುತ್ತಿದ್ದೆ. ಅವರೆಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಿ ನನ್ನದೇ ಆದ ದಾರಿಯಲ್ಲಿ ಮುಂದುವರಿಯತೊಡಗಿದೆ. ಪುಟ ಐನೂರು ದಾಟಿದರೂ ನಿಜವಾದ ಕಥೆ ಶುರುಮಾಡಲು ಸಾಧ್ಯವಾಗದಾದಾಗ ಬರೆಯುವುದನ್ನು ನಿಲ್ಲಿಸಿದೆ. ಅದನ್ನು ಬರೆಯುವುದಿಲ್ಲವೆಂದು ತೀರ್ಮಾನಿಸಿದೆ.ಆದರೆ, ಅದಾಗಲೇ ಅರ್ಧ ಓದಿದ್ದವರು ಉಳಿದ ಪುಟಗಳನ್ನು ಕಳುಹಿಸುವಂತೆ ಒತ್ತಾಯಿಸತೊಡಗಿದ್ದರು. ಹಾಗಾಗಿ ಬರೆದು ಮುಗಿಸುವುದು ಅನಿವಾರ್ಯವೇ ಆದಂತಾಗಿತ್ತು. ಆದರೆ ಬರೆದಂತೆಲ್ಲಾ ಅದು ಬೆಳೆಯುತ್ತಲೇ ಹೋಯಿತು. ಚಾಂದಜ್ಜನಿಗೆ ಮದುವೆ ಮಾಡಿಸಿ, `ಅವರು ಮುಂದೆ ಸುಖವಾಗಿದ್ದರು~ ಎಂಬ ಮಾತಿನ ಮೂಲಕ ಕಾದಂಬರಿ ಮುಗಿಸಬೇಕೆಂದಿದ್ದೆ.ಆದರೆ ಸುಖವಾಗಿರಲು ಉಳಿದವರು ಬಿಡಬೇಕಲ್ಲ? ಬರೆದೆ. ಎಂಟುನೂರು ಪುಟ ದಾಟಿದಾಗ ಕಥೆ ಶುರುವಾಯಿತು ಅಂತ ಅನ್ನಿಸಿತ್ತು. ಆದರೆ ಸಾವಿರ ಮುಟ್ಟಿದಾಗ ಇನ್ನೂ ಸಾವಿರ ಪುಟಗಳಷ್ಟು ಮುಂದುವರಿಯಬಹುದು ಅಂತ ಭಯವಾಯಿತು. ಆದರೆ ಆ ಹೊತ್ತಿಗೆ `ಪಥ ಪರಿವೀಕ್ಷಕರು~ ಪ್ಲೇಟು ತಿರುಗಿಸಿದ್ದರು. ಅದುವರೆಗೆ `ಉಳಿದ ಪುಟಗಳನ್ನು ಕಳಿಸು~ ಎಂದು ಒತ್ತಾಯ ಮಾಡುತ್ತಿದ್ದವರು `ಎರಡು ಕೇಜಿ ಪುಸ್ತಕವನ್ನು ಮಲಗಿ ಎದೆ ಮೇಲೆ ಇಟ್ಟುಕೊಂಡು ಓದುವುದು ಹೇಗೆ?~ ಎಂದು ಸಾಮಾಜಿಕ ನ್ಯಾಯ ಕೇಳತೊಡಗಿದರು.ಬಹುಮತದ ಅಭಿಪ್ರಾಯದಂತೆ ಬರೆಯುವುದನ್ನು ನಿಲ್ಲಿಸಿ, `ಆಸ್-ಎಂಡ್-ವೇರ್~ ಸ್ಥಿತಿಯಲ್ಲೇ ಪ್ರಿಂಟಿಗೆ ಕೊಟ್ಟೆ. ಆದ್ದರಿಂದ ಈ ಕಾದಂಬರಿಯು ಮೊದಲು ಸಣ್ಣ ಕಥೆಯಾಗಿ ಹುಟ್ಟಿಕೊಂಡದ್ದು ಎಷ್ಟು ಸತ್ಯವೋ, ಆ ವಸ್ತು ಬಯಸಿದ ಕಾರಣಕ್ಕೆ ಕಾದಂಬರಿಯಾಗಿ ಬೆಳೆದದ್ದೂ ಅಷ್ಟೇ ಸತ್ಯ.

-ಇತಿಹಾಸವನ್ನು ಫಿಕ್ಷನಲೈಸ್ ಮಾಡುವುದರ ಹಿಂದೆ ಲೇಖಕನ ಆಸಕ್ತಿಯ/ನಂಬಿಕೆಯ ರಾಜಕೀಯ ಅಜೆಂಡಾದ ಪ್ರತಿಪಾದನೆ/ಪ್ರಚಾರದ ಉದ್ದೇಶವಿರುತ್ತದೆ ಎನಿಸುತ್ತದೆ. ನಿಮ್ಮ ಕಾದಂಬರಿಯ ಬಗ್ಗೆಯೂ ಹಾಗೊಂದು ಅನುಮಾನ ವ್ಯಕ್ತಪಡಿಸಬಹುದಲ್ಲವೇ?

ನನ್ನ ಕಾದಂಬರಿಯ ಬಗೆಗಿನ ನಿಮ್ಮ ಅನುಮಾನವು ನಿಜವಾಗಿರುತ್ತಿದ್ದರೆ ನಾನು ಹೆಚ್ಚು ಸಂತೋಷಪಡುತ್ತಿದ್ದೆ. ಅದರೆ ನನ್ನ ಮುತ್ತುಪ್ಪಾಡಿಯ ಮನುಷ್ಯರು ಇತಿಹಾಸ ಪುಸ್ತಕಗಳನ್ನು ಓದಿದ್ದು ಕಡಿಮೆ. ಓದಿರುವುದರ ಬಗ್ಗೆ ದಾಖಲೆಗಳನ್ನು ಇಟ್ಟುಕೊಂಡವರೂ ಅಲ್ಲ. ಅವರು ಭೂತಗಳಿಗೆ ಕೈ ಮುಗಿಯುವ ಜನರು. ನಂಬಿಕೆಯಿರುವುದು ವರ್ತಮಾನದಲ್ಲಿ ಮಾತ್ರ. ಅವರು ಕಟ್ಟಿಕೊಳ್ಳಬಯಸುವುದು ಪೀಳಿಗೆಯ ಭವಿಷ್ಯವನ್ನು.ಸ್ವಾತಂತ್ರ್ಯದ ಓಟದಲ್ಲಿ ಚರಿತ್ರೆಯೆಂಬುದು ಕಥೆಯಾಗುವುದಿಲ್ಲ. ಬದಲಿಗೆ ಕಥೆಯೇ ಚರಿತ್ರೆಯಾಗುತ್ತದೆ. ನಿಮ್ಗೆ ಗೊತ್ತಿರಬಹುದು- ನಮಗೆ, ದಕ್ಷಿಣದವರಿಗೆ ದೇಶವಿಭಜನೆಯೂ ಒಂದು ಕಥೆ. ಉದಾಹರಣೆಗೆ ಒಂದು ಕಥೆ ಹೇಳುತ್ತಿದ್ದೇನೆ; ಕೇಳಿ. ದೇಶ ವಿಭಜನೆಗೆ ಮೊದಲು ನಮ್ಮ ದೇಶದ ಮುಸಲ್ಮಾನರಿಂದ `ನಿಮಗದು ಬೇಕಾ ಬೇಡವಾ~ ಅಂತ ವೋಟು ತೆಗೆದುಕೊಂಡಿದ್ದರಂತೆ.ಅಂಥದ್ದು ಒಂದು ಇತ್ತು ಅಂತ ನನ್ನ ಅಬ್ಬನಿಗೆ ಗೊತ್ತಾಗುವ ಮೊದಲೇ ನಾನು ಹುಟ್ಟಿಬಿಟ್ಟಿದ್ದೆ. ಹಾಗಾಗಿ ನಾನು ಕನ್ನಡ ಕಲಿತೆ; ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವ ಅವಕಾಶ ಸಿಕ್ಕಿತು. ಇಲ್ಲದಿದ್ದರೆ ನಾನು ಮತ್ತು ನೀವು ಶತ್ರು ರಾಷ್ಟ್ರಗಳ ಪ್ರಜೆಗಳಾಗಿದ್ದುಕೊಂಡು, ಕ್ರಿಕೆಟ್ ಮ್ಯಾಚ್ ನಡೆಯುತ್ತಿದ್ದಾಗಲೆಲ್ಲ ನಮ್ಮ ನಮ್ಮ ದೇಶಪ್ರೇಮಗಳಿಗೆ `ಟೆಸ್ಟ್~ ತೆಗೆದುಕೊಳ್ಳುತ್ತಿರಬೇಕಾಗಿತ್ತು.

-ವ್ಯಂಗ್ಯ ನಿಮ್ಮ ಮಾತು ಮತ್ತು ಕೃತಿಗಳಲ್ಲಿ ಕಂಡು ಬರುವ ಒಂದು ಸ್ಥಾಯಿ ಭಾವ. ಇದು ಕೋಪವೆ? ವಿಷಾದವೇ? ಕೇವಲ ನಿರೂಪಣೆಯ ತಂತ್ರವೇ? ಅಥವಾ ನಿಮ್ಮ  ಅಸಹಾಯಕತೆಯೇ?

ಕೋಪ ತಣಿಸಿಕೊಳ್ಳಲು ಬಳಸುವ ಅಸಹಾಯಕ ವಿಷಾದವನ್ನು, ತಂತ್ರವೆಂದು ವ್ಯಂಗ್ಯ ಮಾಡುತ್ತಿದ್ದೀರಾ ಹೇಗೆ?

-ಕನ್ನಡದ ಬೌದ್ಧಿಕ ಜಗತ್ತಿನ `ಮುಖ್ಯವಾಹಿನಿ~ಯಲ್ಲಿ ಉಳಿದೆಲ್ಲಾ ಮಾರ್ಗಗಳೂ ವರ್ಜ್ಯ ಎನ್ನುವಷ್ಟರ ಮಟ್ಟಿಗೆ ಗಾಂಧಿ ಮಾರ್ಗ ಬಹಳ ಮುಖ್ಯವಾಗುವುದು ಏಕೆ?

ನಾವು ಈಗ ಕಾಣುತ್ತಿರುವ ಕನ್ನಡ ಭೌತಿಕ ಜಗತ್ತಿನಲ್ಲಿ ಗಾಂಧಿ ಮಾರ್ಗವನ್ನು ಮುಖ್ಯವೆನ್ನುವವರೆಲ್ಲ ನನ್ನಂತೆ `ಸೀನಿಯರ್ ಸಿಟಿಜನ್~ಗಳು. ಜೂನಿಯರ್ಸ್ ಇದ್ದರೆ ಅವರು ಅಪವಾದಗಳು. ಇದಕ್ಕೆ ಕಾರಣ ತೀರಾ ಸರಳ. ನಾವೆಲ್ಲ ಶಾಲೆಗೆ ಸೇರಿದ್ದು 50ರ ದಶಕದ ಆಸುಪಾಸುಗಳಲ್ಲಿ.ಆಗೆಲ್ಲ ನಮ್ಮ ತಲೆಗೆ ತುಂಬಲಾಗುತ್ತಿದ್ದ ಒಳ್ಳೆಯ ಸಂಗತಿಗಳಲ್ಲಿ ಗಾಂಧಿಗೆ ಮೊದಲ ಸ್ಥಾನವಿತ್ತು. `ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರು ಯಾರೂ?~ ಎಂದು ಟೀಚರು ಪ್ರಶ್ನಿಸಿದಾಗಲೆಲ್ಲ ನಮ್ಮೆಲ್ಲರ ಉತ್ತರ ಒಂದೇ- ಮಹಾತ್ಮ ಗಾಂಧೀಜಿಯವರು. ಸ್ವಂತ ಚಿಕ್ಕಪ್ಪ, ದೊಡ್ಡಪ್ಪನ ಹೆಸರು ಗೊತ್ತಿಲ್ಲದ ವಿದ್ಯಾರ್ಥಿಗಳಿಗೂ ಗಾಂಧೀಜಿಯವರ ಅಪ್ಪ ಅಮ್ಮನ ಹೆಸರು ಗೊತ್ತಿರುತ್ತಿತ್ತು.ಬಾಲ್ಯದಲ್ಲಿ ನಮ್ಮ ಮೆದುಳಿಗೆ ಅಂಟಿಕೊಂಡ ಆ ಮಹಾತ್ಮನ ಮಾರ್ಗದ ಬಗೆಗಿನ ಫಲಕಗಳನ್ನು ಕಿತ್ತು ಹಾಕುವ ಬಗ್ಗೆ ಹೈಸ್ಕೂಲುಗಳಲ್ಲೂ ಯಾರೂ ಪ್ರಯತ್ನಿಸಲಿಲ್ಲ. ಶಾಲೆಗಳಲ್ಲಿ ತೂಗಿ ಹಾಕಲಾಗುತ್ತಿದ್ದ ನಾಡನಾಯಕರ ಫೋಟೋಗಳಲ್ಲಿ ಗಾಂಧೀಜಿ ಫ್ರೇಮುಗಳಿಗೆ ಮೊದಲ ಸ್ಥಾನ.

 

ಆ ನಂತರದ ಫ್ರೇಮು ನೆಹರೂಗೆ. ಲೋಹಿಯಾ ಆಗಲೀ ಅಂಬೇಡ್ಕರ್ ಆಗಲೀ ಫ್ರೇಮುಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದು ಎಂಬತ್ತರ ಈಚೆಗಿನ ಬೆಳವಣಿಗೆ. ಗಾಂಧಿ ಮಾರ್ಗಕ್ಕಿಂತ ಒಳ್ಳೆಯ ಮಾರ್ಗ ಮತ್ತೊಂದಿದೆ ಅಂತ ಹಟ ಹಿಡಿದು ಸಾಬೀತು ಪಡಿಸುವವರ ಸಂಖ್ಯೆ ಈಗಲೂ ಕಡಿಮೆಯೇ. ಗಾಂಧೀಜಿಗಿಂತ ಅಂಬೇಡ್ಕರ್, ಲೋಹಿಯಾರನ್ನು ಹೆಚ್ಚು ಮೆಚ್ಚಿಕೊಳ್ಳುವವರು ಕೂಡ ಗಾಂಧೀಜಿಯವರನ್ನು ಸಾರಾಸಗಟಾಗಿ ಇದುವರೆಗೆ ತುಚ್ಚೀಕರಿಸಿಲ್ಲ ಎಂಬುದನ್ನು ಗಮನಿಸಬೇಕು.ಈ ಕಾರಣಗಳಿಂದಾಗಿಯೇ ಗಾಂಧಿ ಮಾರ್ಗ ಇನ್ನೂ ಕೂಡಾ ಕನ್ನಡ ಬೌದ್ಧಿಕ ಜಗತ್ತಿನ ಮಟ್ಟಿಗೆ ಉಳಿದೆಲ್ಲದಕ್ಕಿಂತಲೂ ಹೆಚ್ಚು ಮುಖ್ಯವಾಗಿ ಉಳಿದಿದೆ. ಇನ್ನೊಂದು ಹತ್ತಿಪ್ಪತ್ತು ವರ್ಷ ಕಳೆದರೆ, ಈ ಪ್ರಶ್ನೆಯ ಅಗತ್ಯ ಬೀಳಲಿಕ್ಕಿಲ್ಲ. ಎಲ್ಲದಕ್ಕೂ ಹಳೆಯ ಗಾಂಧಿಯನ್ನು `ಕೋಟ್~ ಮಾಡುವುದು ಹೊಸಬರಿಗೆ ಬೋರ್ ಹೊಡೆಸುತ್ತಿದೆ.ನಮ್ಮ ಸರಕಾರಗಳಿಗೂ ತಮ್ಮ ತಪ್ಪಿನ ಅರಿವಾದಂತಿದೆ. ತಿದ್ದಿಕೊಳ್ಳಲು ಮನಸ್ಸು ಮಾಡಿದ್ದಾರೆ. ಅದಕ್ಕಾಗಿಯೇ `ಮುಖ್ಯವಾಹಿನಿ~ಯ ಅಗತ್ಯಕ್ಕೆ ತಕ್ಕಂತೆ, ಪುಟ್ಟಮಕ್ಕಳ ಪಠ್ಯಪುಸ್ತಕಗಳ ಮಾರ್ಗವನ್ನೇ ಬದಲಾಯಿಸುತ್ತಿದ್ದಾರೆ. ಮುಂದೆ ಬರಲಿರುವ ಕನ್ನಡದ ಬೌದ್ಧಿಕ ಜಗತ್ತಿನಲ್ಲಿ ಉಳಿಯುವ ಗಾಂಧಿ ಮಾರ್ಗವೆಂದರೆ `ಎಂ.ಜಿ. ರೋಡ್~ ಮಾತ್ರ.

 

-ನಿಮ್ಮ ಬರವಣಿಗೆಯಲ್ಲಿ ತುಳು ಭಾಷೆಯ ಗಂಧವಿದ್ದಂತೆ ಭಾಸವಾಗುತ್ತದೆ. ತುಳು ಭಾಷೆಯ ಪ್ರಭಾವ ನಿಮ್ಮ ಮೇಲೆ ಆಗಿದೆಯಾ?

ತುಳುನಾಡಿನಲ್ಲಿ ಹುಟ್ಟಿ ಬೆಳೆಯುವ ಕನ್ನಡೇತರ ಸಮುದಾಯದ ಮಕ್ಕಳ ಕಿವಿಗಳಿಗೆ ತಮ್ಮ ಮಾತೃಭಾಷೆಯ ಜೊತೆಗೆ ಕನ್ನಡ, ತುಳು, ಕೊಂಕಣಿ, ಮಲಯಾಳಮ್ ಶಾಲೆಗೆ ಸೇರಿದರೆ ಇಂಗ್ಲಿಷ್ ಮತ್ತು ಹಿಂದಿಯ ಪದಗಳು ಬೇಡವೆಂದರೂ ತೂರಿ ನುಗ್ಗುತ್ತವೆ. ಅಲ್ಲಿ ಹುಟ್ಟಿ ಬೆಳೆದವರಿಗೆ, ಮಾತೃಭಾಷೆಗೆ ಹೊರತಾಗಿ, ಉಳಿದೆಲ್ಲ ಭಾಷೆಗಳಿಗಿಂತ ತುಳು ಹೆಚ್ಚು ಪರಿಚಿತ `ಭಾಸೆ~.ಯಾಕೆಂದರೆ ತುಳುನಾಡಿನ ಬಹುಜನ ಬದುಕಿನ `ಭಾಸೆ~ ತುಳು. ನನ್ನ ಮನೆ ಮಾತು ಬ್ಯಾರಿ. ತುಳು ಮತ್ತು ಬ್ಯಾರಿಯ ನಂಟು ದೊಡ್ಡದು. ಕನ್ನಡ ನಾನು ಓದಿ ಕಲಿತ ಭಾಷೆಯಾದರೆ, ತುಳು ಆಡಿ ಅನುಭವಿಸಿದ `ಭಾಸೆ~. ನಾನು ಕನ್ನಡದಷ್ಟೇ ಸಲೀಸಾಗಿ ತುಳುವಿನಲ್ಲೂ ಯೋಚಿಸಬಲ್ಲೆ. ಬರೆಯಬಲ್ಲೆ. ಆದ್ದರಿಂದಲೇ ನಿಮ್ಮ ಅನುಮಾನ ನಿಜ ಇರಬಹುದು. ನನಗೂ ಇದು ಗೊತ್ತಿರಲಿಲ್ಲ.

-ಮುಸ್ಲಿಮ್ ಎಂಬ ಐಡೆಂಟಿಟಿಯನ್ನಿಟ್ಟುಕೊಂಡು ಬರೆದ ಕಥೆಗಾರರು ಸಮುದಾಯದ ಅಂಪಾಯರ್‌ಗಳಾದರು. ಅಂದರೆ ಆಟದ ಹೊರಗೆ ನಿಂತು ಸಮುದಾಯದ ಕುರಿತಂತೆ ಬರೆದರೇ ಹೊರತು ಸಮುದಾಯದಿಂದ ದೂರ ಉಳಿದರು ಎಂಬ ಅಭಿಪ್ರಾಯಕ್ಕೆ ತಮ್ಮ ಪ್ರತಿಕ್ರಿಯೆ ಏನು?

ಆಟದಲ್ಲಿ ಬಹುಕಾಲ ಪಳಗಿದವನೇ `ಅಂಪಾಯರ್~ ಆಗಿ ಆಯ್ಕೆಯಾಗುತ್ತಾನೆ. ಹೌದಾ ಅಲ್ವಾ? ಅಂಪಾಯರ್ ಆದವನು, ಆಟಗಾರರಿಂದ ಸಾಕಷ್ಟು ದೂರದಲ್ಲಿದ್ದುಕೊಂಡೇ `ಅಂಪಾಯರಿಂಗ್~ ಮಾಡಬೇಕು. ಇದು ಆಟದ ನಿಯಮ. ಇಲ್ಲದೇ ಹೋದರೆ `ಮ್ಯಾಚ್ ಫಿಕ್ಸಿಂಗ್~ ಮಾಡುವವರಷ್ಟೇ ಗೆದ್ದುಬಿಡುತ್ತಾರೆ. ಈ ನಿಯಮವನ್ನು ಎಲ್ಲ ಸಮುದಾಯಗಳ ಎಲ್ಲ ಬರಹಗಾರರೂ ಪರಿಪಾಲಿಸಬೇಕಾಗಿತ್ತು. ಅಂಪಾಯರ್‌ಗಳೇ ಮ್ಯಾಚ್ ಫಿಕ್ಸಿಂಗ್ ಮಾಡುತ್ತಾ ಹೋದರೆ ಆಟಗಾರರ ಗತಿಯೇನು?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry