“ಗಾಯಕ ಆಗ್ಬೇಕಂದ್ರ ಕಿರುದಾರಿ ಇಲ್ರಿ...”

7

“ಗಾಯಕ ಆಗ್ಬೇಕಂದ್ರ ಕಿರುದಾರಿ ಇಲ್ರಿ...”

Published:
Updated:

ಪಂ. ಎಂ. ವೆಂಕಟೇಶಕುಮಾರ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಗ್ವಾಲಿಯರ್ ಹಾಗೂ ಕಿರಾಣಾ ಘರಾಣಾ ಶೈಲಿಯಲ್ಲಿ ಹಾಡುವ ಅಪರೂಪದ ಗಾಯಕರು. ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಪಂ. ಪುಟ್ಟರಾಜ ಗವಾಯಿಗಳ ಬಳಿ ಗುರುಕುಲ ಪದ್ಧತಿಯಲ್ಲಿ ಸಂಗೀತಾಭ್ಯಾಸ ಮಾಡಿರುವ ಅವರು, ಹಿಂದೂಸ್ತಾನಿ ಜೊತೆಗೆ ದಾಸರ ಪದ ಹಾಗೂ ವಚನಗಳನ್ನು ದೇಶ-ವಿದೇಶಗಳಲ್ಲಿ ಹಾಡುತ್ತ ಶ್ರೋತೃಗಳ ಮನಸೂರೆಗೊಂಡವರು.ಧಾರವಾಡದಲ್ಲಿ ನೆಲೆಸಿ ಸಂಗೀತ ಕಲಿಸುತ್ತ, ಕಛೇರಿ ಕೊಡುತ್ತ ಓಡಾಡುವ ಅವರಿಗೆ ರಾಜ್ಯೋತ್ಸವ, ವತ್ಸಲಾ ಭೀಮಸೇನ ಜೋಶಿ, ಡಾ. ಪ್ರಭಾ ಅತ್ರೆ ಮೊದಲಾದ ಪ್ರಶಸ್ತಿಗಳು ಸಂದಿವೆ. ಅವರಿಗೀಗ 2011ನೇ ಸಾಲಿನ ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ. ಈ ಹಿನ್ನೆಲೆಯಲ್ಲಿ ಅವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.

* ಅಕಾಡೆಮಿ ಪ್ರಶಸ್ತಿ ಬಂದಾಗ ಮೊದಲು ತಮಗೆ ನೆನಪಾದುದು ಏನು?

ಮೊದಲು ನೆನಪಾದವರು ಗುರುಗಳಾದ ಪಂ. ಪುಟ್ಟರಾಜ ಗವಾಯಿಗಳು. ಅವರ ಪಾದಕ್ಕೆ ಶರಣೆಂದೆ.

* ನಮ್ಮ ಓದುಗರಿಗಾಗಿ ನಿಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುವಿರಾ...

ಬಳ್ಳಾರಿ ಹತ್ತಿರದ ಲಕ್ಷ್ಮಿಪುರ ನನ್ನ ಹುಟ್ಟೂರು (ಲ: ಜುಲೈ 1, 1953). ತಂದೆ ಹೂಲೆಪ್ಪ. ಅವರಿಗೆ ನಾಲ್ವರು ಪುತ್ರರು, ಇಬ್ಬರು ಪುತ್ರಿಯರು. ನಮ್ಮ ತಂದೆ ಬಯಲಾಟ ಕಲಸ್ತಿದ್ರು. ತೊಗಲುಗೊಂಬೆ ಆಡಿಸುತಿದ್ರು.ಛಲೋ ಹಾಡೋರು. ಛಲೋ ಹಾಡೋರನ್ನ ಕಂಡು ಸಂತೋಷಪಡ್ತಿದ್ರು. ಅವರು ಹಾಡುತ್ತಿದ್ದ ರಂಗಗೀತೆಗಳನ್ನು ಕೇಳಿ ನಾನೂ ಹಾಡುತ್ತಿದ್ದೆ. ನನಗಾಗ 12-13 ವರ್ಷ. ತಂದೆಯವರಿಗೆ ಸ್ವಲ್ಪ ಹೊಲವಿತ್ತು. ಚಿಕ್ಕಪ್ಪ ಎರ‌್ರಿಸ್ವಾಮಿ ನಾಟಕ ಮಾಸ್ತರ.

 

ನಾನು ಛಲೋ ಹಾಡುವುದನ್ನು ಕಂಡವರು ಶಾಸ್ತ್ರೋಕ್ತವಾಗಿ ಸಂಗೀತ ಕಲಿಸಿರಿ ಅಂತಿದ್ರು. ದುಡ್ಡು ಕೊಟ್ಟು ಸಂಗೀತ ಕಲಿಯುವಷ್ಟು ಶಕ್ತರಾಗಿರಲಿಲ್ಲ ನಾವು. ಆಗ ನಮ್ಮೂರ ಹತ್ತಿರದ ಮಹಾದೇವನಹಳ್ಳಿಯಲ್ಲಿ ಐದನೇ ತರಗತಿ ಓದ್ತಿದ್ದೆ. ನಮ್ಮೂರಿನಿಂದ 2-3 ಕಿ.ಮೀ. ನಡಕೊಂಡು ಹೋಗಿ ಕಲೀತಿದ್ದೆ.

* ಗದುಗಿನ ವೀರೇಶ್ವರ ಪುಣ್ಯಾಶ್ರಮ ಹೆಂಗ ಸೇರಿದ್ರಿ?

ಸೋದರಮಾವ ಬೆಳಗಲ್ಲ ವೀರಣ್ಣ ಅವರ ಗೆಳೆಯ ನಾಗನಗೌಡ ಮರಿಸ್ವಾಮಿ ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತಾಭ್ಯಾಸ ಮಾಡಿದ್ರು. ವೀರಣ್ಣ ಮಾವ ಅವರನ್ನು ಸಂಪರ್ಕಿಸಿ ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ಸೇರಿಸಿದ್ರು.

 

ಪಂ. ಪುಟ್ಟರಾಜ ಗವಾಯಿಗಳು ಹಾಡಿಸಿಯೇ ಆಶ್ರಮಕ್ಕೆ ಸೇರಿಸಿಕೊಳ್ಳುತ್ತಿದ್ರು. ಧ್ವನಿ ಛಲೋ ಇದ್ರ ಗಾಯನ ಕಲಿ, ಇಲ್ಲದಿದ್ರ ವಾದ್ಯ ಕಲಿ ಅಂತಿದ್ರು. ನನಗೆ ಹಾಡಲು ಹೇಳಿದಾಗ ಹಾಡಿದೆ. ಧ್ವನಿ ಛಲೋ ಅದ. `ಆದ್ರ ಚಂಚಲ ಸ್ವಭಾವ ಅದ. ಕಲೀಬೇಕಲ್ಲ~ ಅಂತ ಅನುಮಾನಿಸಿದ್ರು.

 

ಆಶ್ರಮ ಸೇರುವ ಮುನ್ನ ನಿಯಮದ ಪ್ರಕಾರ 101 ರೂಪಾಯಿ ಕೊಡಬೇಕು. ಅಷ್ಟು ಕೊಟ್ರೆ ಕನಿಷ್ಠ ಆರು ವರ್ಷ, ಗರಿಷ್ಠ 12 ವರ್ಷದವರೆಗೆ ಕಲಿಯಲು ಅವಕಾಶವಿತ್ತು. ಬಡತನದಿಂದಾಗಿ 101 ರೂಪಾಯಿ ಕೊಡಲಾಗಲಿಲ್ಲ. 101 ರೂಪಾಯಿ ಕೊಡಲಾಗದವರಿಗೆ 65 ರೂಪಾಯಿ ಕೊಡಬೇಕಿತ್ತು. ನಮ್ಮ ತಂದೆ 65 ರೂಪಾಯಿ ಕೊಟ್ಟು ಸೇರಿಸಿದ್ರು.ಅದು 1968. ನಮ್ಮ ತಂದೆ ಆರು ವರ್ಷದವರೆಗೆ ಕಲಿಯುತ್ತಾನೆಂದು ಬಾಂಡ್ ಬರೆದುಕೊಟ್ರು. ಬಾಂಡ್ ಬರೆದುಕೊಡುವುದು ಕಡ್ಡಾಯವಾಗಿತ್ತು. ನನ್ನ ಜೊತೆ ಚಿಗವ್ವನ ಮಗ ವಿರೂಪಾಕ್ಷ ಸೋಮಲಾಪುರ ಸೇರಿದ.

* ಆಶ್ರಮದ ದಿನಗಳು ಹೇಗಿದ್ದವು?

ಆಶ್ರಮದಲ್ಲಿ ಕಟ್ಟುನಿಟ್ಟಿನ ನಿಯಮಗಳಿದ್ದವು. ನಸುಕಿನ ನಾಲ್ಕು ಗಂಟೆಗೇ ಏಳಬೇಕು. ಐದು ನಿಮಿಷದೊಳಗೆ ಮೂರು ಸಲ ಘಂಟೆ ಹೊಡೆಯುತ್ತಿತ್ತು. ಮೂರನೇ ಘಂಟೆ ಹೊಡೆಯುವುದರೊಳಗೆ ಪ್ರಾರ್ಥನೆಗೆ ನಿಲ್ಲಬೇಕಿತ್ತು. ಹಂಗ ಬರದವರಿಗೆ ಅವತ್ತಿನ ದಿನದ ಊಟ ಬಂದ್.

 

ಮಧ್ಯಾಹ್ನ ಒಂದೂವರೆಗೆ ಊಟ. ರಾತ್ರಿ ಎಂಟೂವರೆಗೆ ಊಟ. ಎರಡೇ ಹೊತ್ತು. ಬೆಳಗಿನ ನಾಷ್ಟಾ ಇರ‌್ತಿರಲಿಲ್ಲ. ಗುರುಗಳು ಪ್ರವಚನ ಹೇಳಿ, ಸಂಗೀತ ಕಾರ್ಯಕ್ರಮ ನೀಡಿ ಧಾನ್ಯ ತಂದು ನಮ್ಮನ್ನು ಸಾಕತಿದ್ರು. ಆಗ ಸರ್ಕಾರದ ನೆರವು ಇರಲಿಲ್ರಿ.

 

ಕಣ್ಣಿಲ್ಲದಿದ್ರೂ 60 ವರ್ಷಗಳವರೆಗೆ ನಿಸ್ವಾರ್ಥ ಸೇವೆಯಿಂದ ಸಾವಿರಾರು ವಿದ್ಯಾರ್ಥಿಗಳನ್ನು ಸಾಕಿದ್ರು. ನಮ್ಮ ಗುರುಗಳು ಬಹಳ ದೊಡ್ಡವರು. ಅವರ ಗುರುಗಳು ಗಾನಯೋಗಿ ಪಂಚಾಕ್ಷರಿ ಗವಾಯಿಗಳು. ಗದುಗಿನಲ್ಲಿ ವೀರೇಶ್ವರ ಪುಣ್ಯಾಶ್ರಮ ಶುರು ಮಾಡಿದ್ರು. ಅವರು ಹಾವೇರಿ ಜಿಲ್ಲೆಯ ಹಾನಗಲ್ಲ ತಾಲ್ಲೂಕಿನ ಕಾಡಶೆಟ್ಟಿಹಳ್ಳಿ ಗ್ರಾಮದವರು.

 

ಹಾನಗಲ್ಲ ಕುಮಾರ ಸ್ವಾಮಿಗಳು ಭಕ್ತರ ಮನೆಗೆ ಹೋಗುವಾಗ ಕಣ್ಣಿಲ್ಲದ ಗದಿಗಯ್ಯ ಹಾಗೂ ಗುರುಬಸವಾರ್ಯ (ಇದು ಪಂಚಾಕ್ಷರಿ ಗವಾಯಿಗಳ ಮೊದಲಿನ ಹೆಸರು) ಸೋದರರು ಮನೆ ಮುಂದೆ ಕುಂತು ಭಜನೆ ಮಾಡತಿದ್ರು. ಇದನ್ನು ಕೇಳಿದ ಹಾನಗಲ್ಲ ಕುಮಾರ ಸ್ವಾಮಿಗಳು ನಮ್ಮ ಕಡೆ ಕಳಸ್ರಿ, ಸಂಗೀತ ಕಲಸ್ತೀವಿ ಅಂದ್ರು. ಆಗಿನ ಕಾಲಕ್ಕ ದುಡ್ಡು ಕೊಟ್ಟು ಗುರುಗಳನ್ನು ಕರೆಸಿ ಹಿಂದೂಸ್ತಾನಿ ಗಾಯನ ಕಲಿಸಿದ್ರು. ಸಮಾಜದ ದುಡ್ಡು ತಗೊಂಡು ಬಂದೀನಿ.ಸಮಾಜಕ್ಕ ಉಪಯೋಗ ಆಗು ಅಂದ್ರು. ಹಂಗ ಕಣ್ಣಿಲ್ಲದ, ಕಾಲಿಲ್ಲದವರಿಗೆ ಸಂಗೀತ ಕಲಿಸಲು ಪಂಚಾಕ್ಷರಿ ಗವಾಯಿಗಳು ಗದುಗಿನಲ್ಲಿ ವೀರೇಶ್ವರ ಪುಣ್ಯಾಶ್ರಮ ಕಟ್ಟಿದ್ರು. ಅವರ ಶಿಷ್ಯರು ನಮ್ಮ ಗುರುಗಳಾದ ಪಂ. ಪುಟ್ಟರಾಜ ಗವಾಯಿಗಳು.

* ಆಶ್ರಮದಲ್ಲಿ ಎಷ್ಟು ವರ್ಷ ಕಲತ್ರಿ?

ಆಶ್ರಮದಲ್ಲಿಯ ಕಟ್ಟುನಿಟ್ಟಿನ ನಿಯಮಕ್ಕೆ ಹೆದರಿದ್ದೆ. ಅದರಲ್ಲೂ ಬೆಳಗಿನ ನಾಷ್ಟಾ ಇಲ್ಲದ್ದಕ್ಕೆ ಹಸಿವು ತಡೆದುಕೊಳ್ಳದೆ ಹೇಳದೆ ಕೇಳದೆ ಊರಿಗೆ ಓಡಿ ಹೋಗ್ತಿದ್ದೆ. 8-10 ದಿನಗಳಿಂದ ತಿಂಗಳ ತನಕ ಊರಲ್ಲಿರತಿದ್ದೆ. ಮತ್ತೆ ಆಶ್ರಮಕ್ಕೆ ಬರ‌್ತಿದ್ದೆ. ಗುರುಗಳು ಬೈಯೋರು.`ತಪ್ಪಾತ್ರಿ, ಕ್ಷಮಾ ಮಾಡ್ರಿ~ ಅಂತಿದ್ದೆ. ಊರಿಗೆ ಹೋದಾಗ ತಂದೆಯವರ ಕೂಡ ದೊಡ್ಡಾಟ, ನಾಟಕಕ್ಕ ಹಾಡಾಕ ಹೋಗ್ತಿದ್ದೆ. `ಹಂಗ ಹೋಗಬ್ಯಾಡ. ಛಲೋ ಹಾಡಾಕ ಕಲಿ. ಆಗ ನಿನ್ನ ಹತ್ರ ಬಂದು ಕರ‌್ಕೊಂಡು ಹೋಗ್ತಾರ. ಮನಸುಗೊಟ್ಟು ಕಲಿ~ ಅನ್ನೋರು.

 

ಈ ಮಾತು ಮನಸ್ಸಿಗೆ ನಾಟಿತು. ತಂದೆಯವರ ಕೂಡ ಮತ್ತೆ ಹಾಡಾಕ ಹೋಗಲಿಲ್ಲ. ಹಿಂದೂಸ್ತಾನಿ ಗಾಯನದ ಗ್ವಾಲಿಯರ್ ಹಾಗೂ ಕಿರಾಣಾ ಘರಾಣಾ ಶೈಲಿಗಳನ್ನು ಗುರುಗಳಿಂದ ಕಲಿತೆ. ನನ್ನ 24 ನೇ ವರ್ಷದವರೆಗೆ ಆಶ್ರಮದಲ್ಲಿದ್ದೆ.

* ಆಶ್ರಮದಿಂದ ಹೊರಬಂದ ಮೇಲಿನ ದಿನಗಳು ಹೇಗಿದ್ದವು?

ಆಶ್ರಮದಿಂದ ಹೊರ ಬಂದ ಮೇಲೆ ಗದಗ, ಹರಪನಹಳ್ಳಿ, ಉಡುಪಿಯಲ್ಲಿ ಸಂಗೀತ ಶಿಕ್ಷಕನಾದೆ. ಅದೆಲ್ಲ ಅರೆಕಾಲಿಕ ಉದ್ಯೋಗ. ಇದರ ನಡುವೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕಟ್ಟಿ ಪಾಸಾದೆ. ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. 1984 ರಲ್ಲಿ ಧಾರವಾಡದ ಶಿಕ್ಷಕಿಯರ ಸರ್ಕಾರಿ ತರಬೇತಿ ಸಂಸ್ಥೆಯಲ್ಲಿ ಸಂಗೀತ ಶಿಕ್ಷಕನಾಗಿ ನೇಮಕಗೊಂಡೆ.ಇದಕ್ಕೂ ಮೊದಲು ಧಾರವಾಡ ಆಕಾಶವಾಣಿಗೆ ಬರ‌್ತಿದ್ದೆ. ಆಮ್ಯಾಲ 1993ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸಂಗೀತ ಮಹಾವಿದ್ಯಾಲಯದಲ್ಲಿ ಸಂಗೀತ ಪ್ರಾಧ್ಯಾಪಕನಾದೆ. ಈಗಲೂ ಅಲ್ಲಿಯೇ ಮುಂದುವರಿದಿರುವೆ.

* ಧಾರವಾಡದ ಬಗ್ಗೆ ಏನನ್ನಿಸ್ತದ?

ಸಂಗೀತಗಾರರನ್ನು ತಯಾರಿಸುವ ಊರು ಧಾರವಾಡ. ಈ ಊರಾಗ ಬಹಳ ವರ್ಷಗಳಿಂದ ಸಂಗೀತ ಕೇಳಿದವರಿದ್ದಾರ. ಆದ್ರ ಈ ಊರಾಗ ಕಡಿಮೆ ದುಡ್ಡು ಸಿಗ್ತದ. ಹಿಂಗಂತ ಬೆಂಗಳೂರು, ಮುಂಬೈ, ಪುಣೆಗೆ ಹೋಗೂದಿಲ್ಲ. ಧಾರವಾಡದಾಗ ಆರಾಮವಾಗಿರುವೆ. ಇಲ್ಲಿ ಸಂಗೀತ ಕಾರ್ಯಕ್ರಮ ಬಹಳ ಆಗ್ತಾವು. ದೇಶದ ಬೇರೆ ಬೇರೆ ಸಂಗೀತಗಾರರು ಬರ‌್ತಾರ. ಅವರ ಸಂಗೀತ ಕೇಳಲು ಸಾಧ್ಯವಾಗ್ತದ.

 

ಹಿಂಗ ಸಂಗೀತ ಕೇಳಲು, ರಿಯಾಜ್ ಮಾಡಲು ಅನುಕೂಲ ಆಗಿದೆ. ಜ್ಞಾನಿಗಳ ಒಡನಾಟ ಸಿಕ್ಕಿದೆ. ಧಾರವಾಡದಲ್ಲಿ ಇದ್ದುದು ನನ್ನ ಭಾಗ್ಯ. ನಾನು ಹಿಂದುಳಿದ ವರ್ಗಕ್ಕೆ ಸೇರಿದವನಾದರೂ ಮೀಸಲಾತಿಯಿಂದ ಮೇಲೆ ಬಂದಿಲ್ರಿ. ಸಂಗೀತಕ್ಕ ಜಾತಿ ಇಲ್ರಿ. ಎಲ್ಲ ಜಾತಿಯವರು ನನ್ನನ್ನು ಗೌರವಿಸ್ತಾರ.

* ನಿಮ್ಮ ಕುಟುಂಬದ ಬಗ್ಗೆ ಹೇಳಿ...

ಸೋದರಮಾವ ಬೆಳಗಲ್ಲ ವೀರಣ್ಣನ ಮಗಳಾದ ಲಕ್ಷ್ಮೀದೇವಿ ನನ್ನ ಮನೆಯಾಕೆ. ಇಷ್ಟು ಎತ್ತರ ಬೆಳೆಯಲು ಆಕೆಯ ಕಾಣಿಕೆ ದೊಡ್ಡದು. ನಮಗ ಮೂರು ಮಕ್ಕಳು. ಹಿರಿಯ ಪುತ್ರ ಸಿದ್ಧಲಿಂಗೇಶ ಪ್ರಾಥಮಿಕ ಶಾಲೆ ಮಾಸ್ತರ. ಎರಡನೇ ಪುತ್ರ ಪಂಚಾಕ್ಷರಿ, ಖಾಸಗಿ ಪ್ರೌಢಶಾಲೆಯಲ್ಲಿ ಶಿಕ್ಷಕ. ಪುತ್ರಿ ನೀರಜಾ. ಆದ್ರ ಯಾರಿಗೂ ಸಂಗೀತದಲ್ಲಿ ಆಸಕ್ತಿಯಿಲ್ಲ. ಆಸಕ್ತಿ ಬರಲಾರದಂಗ ನಾನೇ ಮಾಡಿದೆ. ಯಾಕಂದ್ರ ನಾನು ಅನುಭವಿಸಿದ್ದು ಸಾಕು ಅನ್ನಿಸ್ತು. ಆದ್ರ ಈಗೀಗ ಸಂಗೀತಗಾರರಿಗೆ ಮರ್ಯಾದೆ ಐತ್ರಿ.

* ಸಹೃದಯರು ಮೆಚ್ಚುವ ನಿಮ್ಮ ಹಾಡು?

ವಾದಿರಾಜರ ಪದ `ಒಂದು ಬಾರಿ ಸ್ಮರಣೆ ಸಾಲದೆ~. ಇನ್ನೊಂದು ಅಲ್ಲಮಪ್ರಭುವಿನ ವಚನ, `ಪ್ರಣತಿಯಿದೆ ಬತ್ತಿಯಿದೆ ಜ್ಯೋತಿ ಬೆಳಗುವಡೆ ತೈಲವಿಲ್ಲದೆ ಪ್ರಭೆ ತಾನೆಲ್ಲಿಯದು~. ಇವನ್ನು ಶ್ರೋತೃಗಳು ಬಹಳ ಅಪೇಕ್ಷೆ ಪಡ್ತಾರ.

* ನಿಮ್ಮ ಅಪೇಕ್ಷೆ ಏನು?

ಛಲೋ ಸಂಗೀತಗಾರರ ಮುಂದ ಸತತ ಹಾಡಬೇಕು. ಅವರಿಂದ ಛಲೋ ಹಾಡ್ತಿ ಅನ್ನಿಸಿಕೊಳ್ಳಬೇಕು. ಹಂಗ ಅನ್ನಿಸಿಕೊಂಡ್ರ ಅದೇ ಸರ್ಟಿಫಿಕೇಟ್ ಇದ್ದಂಗ.

* ಯುವ ಸಂಗೀತಗಾರರಿಗೆ ನಿಮ್ಮ ಕಿವಿಮಾತು?

ಸಂಗೀತ ಕ್ಷೇತ್ರದೊಳಗ ಯಶಸ್ವಿ ಗಾಯಕ ಆಗ್ಬೇಕಂದ್ರ ಕಿರುದಾರಿ ಇಲ್ರಿ. ಇದನ್ನು ಗದುಗಿನ ಪುಣ್ಯಾಶ್ರಮದಲ್ಲಿ ಕಲಿತೆ. ಗುರುಗಳಾದ ಪುಟ್ಟರಾಜ ಗವಾಯಿಗಳು ಪೂಜೆ ಮಾಡುವಾಗ ಘಂಟೆ ಬಾರಿಸೋರು.ಆಗ ನಾವೆಲ್ಲ ತಂಬೂರಿ ತಗೊಂಡು ರಿಯಾಜ್ ಮಾಡಬೇಕು. ಕನಿಷ್ಠ * -5 ತಾಸು ಪೂಜೆ. ಒಮ್ಮಮ್ಮೆ 8-10 ತಾಸು ಪೂಜೆ ಆಗೋದು. ಅದುವರೆಗೆ ಹಾಡೋರು ಹಾಡ್ತಿರಬೇಕು. ವಾದ್ಯ ಬಾರಿಸೋರು ಬಾರಸ್ತಿರಬೇಕು. ಪೂಜೆ ಮುಗಿಯುವವರೆಗೆ ನಿಲ್ಲಿಸಬಾರದು ಎನ್ನುವುದು ನಿಯಮ.ಇದರಲ್ಲೇ ರಿಯಾಜ್ ಆಗ್ತಿತ್ತು. ಹಿಂಗ ಗುರುಗಳು ಮಾಡುತ್ತಿದ್ದ ಶಿವಪೂಜೆಯೊಳಗ ಸಂಗೀತಾಭ್ಯಾಸ ಆಗ್ತಿತ್ತು. ಸ್ವರದೊಳಗೆ ಶಿವಪೂಜೆ ಮಾಡೋರು ಅವರು. ಹಾಡುವಾಗ ರಾಗ ತಪ್ಪಿದರೆ ಪೂಜೆ ಮುಗಿಸಿದ ಮೇಲೆ ತಿದ್ದಿ ಹೇಳೋರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry