“ನನ್ನ ಪಾತ್ರಕ್ಕೆ ಎಂದಿಗೂ ಮೋಸ ಮಾಡಿಲ್ಲ...

ಗುರುವಾರ , ಜೂಲೈ 18, 2019
29 °C

“ನನ್ನ ಪಾತ್ರಕ್ಕೆ ಎಂದಿಗೂ ಮೋಸ ಮಾಡಿಲ್ಲ...

Published:
Updated:

ಮತ್ತೊಂದು `ಮುಂಗಾರು ಮಳೆ~ಯ ನಿರೀಕ್ಷೆಯಲ್ಲಿದ್ದಾರೆ ನಟ ಗಣೇಶ್. ಮುಂಗಾರಿನ ಮಳೆ ಕೈಕೊಟ್ಟಿದ್ದರೂ ಈ ವಾರ ತೆರೆಕಾಣುತ್ತಿರುವ `ರೋಮಿಯೊ~ ಗಣೇಶ್ ಪಾಲಿನ ವರ್ಷಧಾರೆ ಸುರಿಸಲಿದೆ ಎಂಬ ನಿರೀಕ್ಷೆ ಚಿತ್ರರಂಗದಲ್ಲಿಯೂ ವ್ಯಕ್ತವಾಗಿದೆ. ಚಿತ್ರದ ಹಾಡುಗಳು ಜನಪ್ರಿಯವಾಗಿವೆ. ಗಣೇಶ್ ಕೂಡ `ರೋಮಿಯೊ~ ತಮ್ಮ ವೃತ್ತಿ ಬದುಕಿನಲ್ಲಿ ವಿಶಿಷ್ಟ ಚಿತ್ರ ಎಂದು ಹೇಳಿಕೊಂಡಿದ್ದಾರೆ.`ಮುಂಜಾನೆ~ ಚಿತ್ರದ ದಯನೀಯ ಸೋಲಿನ ಬಳಿಕ ಗಣೇಶ್‌ರಲ್ಲಿ ರೋಮಿಯೊ ಗೆಲುವಿನ ಆಸೆಯನ್ನು ಗರಿಗೆದರಿಸಿದೆ. `ಸಿನಿಮಾ ರಂಜನೆ~ಯೊಂದಿಗೆ ಮಾತಿಗಿಳಿದ ಗಣೇಶ್, ರೋಮಿಯೊವನ್ನು ಎಲ್ಲರಿಗೂ ಖುಷಿಕೊಡುವ ಕಲರ್‌ಫುಲ್ ಚಿತ್ರ ಎಂದು ಬಣ್ಣಿಸಿದರು. ನಿರ್ದೇಶಕ ಪಿ.ಸಿ.ಶೇಖರ್ ಅತ್ಯಂತ ವಿಭಿನ್ನವಾದ ಮತ್ತು ತಾಜಾ ಪರಿಕಲ್ಪನೆಯನ್ನಿಟ್ಟುಕೊಂಡು ಚಿತ್ರ ಮಾಡಿದ್ದಾರೆ.

 

ಚಿತ್ರದಲ್ಲಿ ಹೊಸತನವಿದೆ. ಕಲಾವಿದನಾಗಿ ಪ್ರೇಕ್ಷಕನಿಗೆ ಮನರಂಜನೆ ನೀಡುವುದು ನನ್ನ ಕರ್ತವ್ಯ. ರೋಮಿಯೊದಲ್ಲಿ ಅದು ಶೇಕಡಾ 100ರಷ್ಟು ಸಿಗುತ್ತದೆ ಎಂದು ಉತ್ಸಾಹದಿಂದ ಹೇಳಿದರು.ಗಣೇಶ್ ಸಂಭ್ರಮಕ್ಕೆ ಮತ್ತೊಂದು ಕಾರಣವಿದೆ. ರೋಮಿಯೊ ಕರ್ನಾಟಕದಲ್ಲಿ ಮಾತ್ರವಲ್ಲ ಏಕಕಾಲದಲ್ಲಿ ಅಮೆರಿಕದಲ್ಲೂ ತೆರೆಕಾಣುತ್ತಿದೆ. ಸಾಮಾನ್ಯವಾಗಿ ಕನ್ನಡ ಚಿತ್ರಗಳು ಅಮೆರಿಕದಲ್ಲಿ ವಾರಾಂತ್ಯದಲ್ಲಿ ಒಂದು ದಿನ ಪ್ರದರ್ಶನಗೊಳ್ಳುತ್ತದೆ.ಆದರೆ `ರೋಮಿಯೊ~ ಸ್ಯಾನ್‌ಜೋಸ್, ಕ್ಯಾಲಿಫೋರ್ನಿಯಾ ಸೇರಿದಂತೆ ವಿವಿಧೆಡೆ ವಾರವಿಡೀ ಪ್ರದರ್ಶನವಾಗಲಿದೆ. ತೆಲುಗಿನ ರಾಜಮೌಳಿ ನಿರ್ದೇಶನದ ಸುದೀಪ್ ನಟಿಸಿರುವ `ಈಗ~ ಚಿತ್ರ `ರೋಮಿಯೊ~ಗೆ ಪ್ರಮುಖ ಎದುರಾಳಿ. ಆದರೆ ಗಣೇಶ್ ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. `ಈಗ~ದಿಂದ ನಮ್ಮ ಚಿತ್ರಕ್ಕೇನೂ ತೊಂದರೆಯಾಗುವುದಿಲ್ಲ ಎನ್ನುತ್ತಾರೆ.ಎಲ್ಲಾ ಚಿತ್ರವೂ `ಮುಂಗಾರು ಮಳೆ~ ಆಗುವುದಿಲ್ಲ. `ಚೆಲುವಿನ ಚಿತ್ತಾರ~ವೂ ಆಗುವುದಿಲ್ಲ. ನಿರ್ದೇಶಕ ಆ ಚಿತ್ರವನ್ನು ಮನಸ್ಸಿನಲ್ಲಿಟ್ಟುಕೊಂಡು ಅಂತಹದ್ದೇ ಹಿಟ್ ಚಿತ್ರ ನೀಡುತ್ತೇನೆ ಎಂದರೆ ಆಗುವುದಿಲ್ಲ. ಚಿತ್ರವನ್ನು ಯಾವುದಕ್ಕೆ ಹೋಲಿಸಬಹುದು ಎಂಬುದನ್ನು ಚಿತ್ರ ಬಿಡುಗಡೆಯಾದ ಬಳಿಕ ಪ್ರೇಕ್ಷಕ ನಿರ್ಧರಿಸುತ್ತಾನೆ ಎಂದು ಗಣೇಶ್ `ರೋಮಿಯೊ~ವನ್ನು `ಮುಂಗಾರು ಮಳೆ~ಗೆ ಹೋಲಿಸುವುದನ್ನು ನಿರಾಕರಿಸುತ್ತಾರೆ.

ನಾವೇ ಹೊಣೆಯಲ್ಲ...

`ನಿರ್ದೇಶಕ ಏನು ಹೇಳುತ್ತಾನೋ ಕಲಾವಿದನಾಗಿ ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದು ನನ್ನ ಜವಾಬ್ದಾರಿ. ಚಿತ್ರ ಸೋತರೆ ಅದಕ್ಕೆ ನಾಯಕನೇ ಕಾರಣ ಎಂದು ದೂರುವುದು ಎಷ್ಟು ಸರಿ? ಈ ರೀತಿ ಗೂಬೆ ಕೂರಿಸುವ ಪ್ರವೃತ್ತಿಯನ್ನು ನಾನು ಇಷ್ಟಪಡುವುದಿಲ್ಲ~- ಇದು ಗಣೇಶ್ ನಿರ್ದೇಶಕ ಎಸ್.ನಾರಾಯಣ್ ಬಗ್ಗೆ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ ಪರಿ.ಎಸ್.ನಾರಾಯಣ್ `ಮುಂಜಾನೆ~ ಚಿತ್ರದ ಹೀನಾಯ ಸೋಲಿನ ಬೆನ್ನಲ್ಲೇ ಚಿತ್ರರಂಗದಿಂದ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದರು. ನಾಯಕನಟರು ತಮಗೆ ಸರಿಯಾಗಿ ಸಹಕರಿಸುತ್ತಿಲ್ಲ ಎಂದೂ ಆರೋಪಿಸಿದ್ದರು. ಆದರೆ ಗಣೇಶ್ ಈ ಆರೋಪವನ್ನು ಒಪ್ಪುವುದಿಲ್ಲ. `ಮುಂಜಾನೆ~ ಸೋಲಿನಿಂದ ತಾವು ನಿವೃತ್ತಿ ತೆಗೆದುಕೊಳ್ಳಲು ನಿರ್ಧರಿಸಿದ್ದು ಎಂದು ಅವರು ಎಲ್ಲಿಯೂ ಹೇಳಿಕೊಂಡಿಲ್ಲ.ಅದು ಅವರ ವೈಯಕ್ತಿಕ ವಿಚಾರ. ಚಿತ್ರರಂಗದಲ್ಲಿ ಏಳುಬೀಳುಗಳು ಸಹಜ. ಪ್ರೇಕ್ಷಕ ಯಾವುದನ್ನು ಹೇಗೆ ಸ್ವೀಕರಿಸುತ್ತಾನೆ ಎಂದು ಹೇಳಲು ಆಗುವುದಿಲ್ಲ. ಆದರೆ ಚಿತ್ರಕ್ಕೆ ಸೂಕ್ತ ತಯಾರಿ ಮಾಡಿಕೊಳ್ಳುವುದು ಅವರ ಜವಾಬ್ದಾರಿಯಾಗಿತ್ತು.ಕಥೆ ಹೇಳುವಾಗಲೇ ಒಂದು, ಚಿತ್ರ ಹೊರಬಂದಾಗಲೇ ಇನ್ನೊಂದು ರೀತಿಯಿದ್ದರೆ ಅದಕ್ಕೆ ನಾಯಕನಟರು ಹೇಗೆ ಹೊಣೆಗಾರರಾಗುತ್ತೇವೆ? ಇದಕ್ಕೂ ಮುಂಚೆ ಮಾಡಿದ್ದ `ಶೈಲೂ~ ಸ್ವಲ್ಪಮಟ್ಟಿಗೆ ಯಶಸ್ಸು ಕಂಡಿತ್ತು. ಹಾಗಾದರೆ `ಮುಂಜಾನೆ~ಯ ಗಣೇಶ್ ಮಾತ್ರವೇ ಎಲ್ಲದಕ್ಕೂ ಕಾರಣವೇ? ಎಂದು ಬೇಸರದಿಂದ ನುಡಿದರು ಗಣೇಶ್.ನಾಯಕ ಸೇರಿದಂತೆ ಎಲ್ಲಾ ಕಲಾವಿದರನ್ನೂ ಸರಿಯಾಗಿ ಬಳಸಿಕೊಳ್ಳಬೇಕು. ಕಥೆ, ಸನ್ನಿವೇಶದ ಬಗ್ಗೆ ಸಮಾಲೋಚನೆ ನಡೆಸಬೇಕು. ನಾನು ಮಧ್ಯ ಪ್ರವೇಶಿಸಿದರೆ ಗಣೇಶ್ ಮೂಗು ತೂರಿಸುತ್ತಾನೆ ಎಂಬ ಆರೋಪ ಎದುರಾಗುತ್ತದೆ. ನನ್ನ ಪಾಡಿಗೆ ನಿರ್ದೇಶಕ ಹೇಳಿದ್ದನ್ನು ಅಚ್ಚುಕಟ್ಟಾಗಿ ಮಾಡಿ ಸುಮ್ಮನಿದ್ದರೆ ಇನ್ನೊಂದು ಬಗೆಯ ಆರೋಪವೂ ಬರುತ್ತದೆ. ಈ ಧೋರಣೆ ಬದಲಾಗಬೇಕು.ಯಾವ ನಟನೂ ತನ್ನ ಚಿತ್ರ ಸೋಲಬೇಕು ಎಂದು ಬಯಸುವುದಿಲ್ಲ. ಗಣೇಶ್ ತನ್ನ ಪಾತ್ರಕ್ಕೆ ಎಂದಿಗೂ ಮೋಸ ಮಾಡಿಲ್ಲ. ಚಿತ್ರ ಗೆಲ್ಲಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ. ಸೋತಾಗ ಅದಕ್ಕೆ ಒಟ್ಟಿಗೆ ಕುಳಿತು ಮಾತನಾಡಿ ಕಾರಣಗಳನ್ನು ಹುಡುಕಬೇಕು. ಆದರೆ ಅದು ನಡೆಯುತ್ತಿಲ್ಲ. ನಾನು ಪ್ರತಿ ಚಿತ್ರವನ್ನೂ ಕನಸಿನ ಚಿತ್ರವೆಂದೇ ಪರಿಗಣಿಸುತ್ತೇನೆ. ಅದರ ಸೋಲು ಗೆಲುವು ಪ್ರೇಕ್ಷಕನ ಕೈಯಲ್ಲಿದೆ ಎನ್ನುತ್ತಾರೆ.ಗಣೇಶ್‌ರ `420~ ಚಿತ್ರದ ಒಂದು ಹಾಡು ಬಾಕಿ ಉಳಿದಿದೆ. ಅಭಯಸಿಂಹ ನಿರ್ದೇಶನದ `ಸಕ್ಕರೆ~ ಚಿತ್ರದ ಬಗ್ಗೆ ಗಣೇಶ್ ಅಪಾರ ಭರವಸೆ ಇಟ್ಟುಕೊಂಡಿದ್ದಾರೆ. ತುಂಬಾ ಬುದ್ಧಿವಂತಿಕೆಯಿಂದ ಅಭಯಸಿಂಹ ಚಿತ್ರಕಥೆ ಹೆಣೆದಿದ್ದಾರೆ.

 

ಇದು ಉತ್ತಮ ಪ್ರಯೋಗಾತ್ಮಕ ಚಿತ್ರ. ಇಂತಹ ಪಾತ್ರಗಳು ನನಗೆ ಹೆಚ್ಚು ಸಿಗಬೇಕು ಎನ್ನುವ ಅವರು, ಕೈಯಲ್ಲಿರುವ ಚಿತ್ರಗಳನ್ನು ಮುಗಿಸಿದ ಬಳಿಕ ಈ ವರ್ಷದ ಅಂತ್ಯದಲ್ಲಿ ತಮ್ಮದೇ ನಿರ್ಮಾಣದ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry