“ಬಣ್ಣ ಹಚ್ಚದಿದ್ದರೆ ಏನೋ ಕಳಕೊಂಡಂತೆ

7

“ಬಣ್ಣ ಹಚ್ಚದಿದ್ದರೆ ಏನೋ ಕಳಕೊಂಡಂತೆ

Published:
Updated:

`ಸಿನಿಮಾಕ್ಕಿಂತಲೂ ಹೆಚ್ಚು ಖುಷಿ ಧಾರಾವಾಹಿಗಳಲ್ಲಿ, ಅದಕ್ಕಿಂತಲೂ ಹೆಚ್ಚು ಖುಷಿ ನಾಟಕಗಳಲ್ಲಿ...'

`ಶಂಖನಾದ' ಚಿತ್ರದ ಮೂಲಕ ಚಿತ್ರಜಗತ್ತಿನಲ್ಲಿ ಗುರುತಿಸಿಕೊಂಡ ಆಂಜಿನಪ್ಪನವರ ಮಾತುಗಳಿಗೆ ಅನುಭವದ ತೂಕ. ರಂಗಭೂಮಿ ಅವರ ಅಜ್ಜನ ಬಳುವಳಿ. ಧಾರಾವಾಹಿ ಮತ್ತು ಸಿನಿಮಾ ಸ್ವಯಾರ್ಜಿತ ಕ್ಷೇತ್ರಗಳು.ತಿರುವಿದ ಮೀಸೆ, ಅಷ್ಟೇ ಢಾಳಾದ ಹುಬ್ಬು, ಕಟ್ಟ ಕಡೆಯ ಪ್ರೇಕ್ಷಕನನ್ನೂ ಸ್ಪಷ್ಟವಾಗಿ ಮುಟ್ಟಬಲ್ಲ ಗಟ್ಟಿ ದನಿ, ಆಜಾನುಬಾಹು ವ್ಯಕ್ತಿತ್ವ. ಪೌರಾಣಿಕ ನಾಟಕಗಳಿಗೆ ಅಗತ್ಯವಿದ್ದ ಎಲ್ಲ ಗುಣಗಳೂ ಅವರ ಬಳಿ ಇದ್ದವು. ಐಟಿಐನ ಲಲಿತ ಕಲಾ ಸಂಘದಲ್ಲಿ ಐತಿಹಾಸಿಕ, ಪೌರಾಣಿಕ ನಾಟಕಗಳನ್ನು ಆಡಲು ಕೂಡ ಈ ಶರೀರ-ಶಾರೀರವೇ ಕಾರಣ. ಅಲ್ಲಿ ನೃತ್ಯ ನಿರ್ದೇಶಕ ಪಿ.ಸಿ. ಸುಬ್ರಹ್ಮಣ್ಯಂ ಅವರೊಂದಿಗೆ ಒಡನಾಟ.ಹಾಗೆ ನಾಟಕಗಳನ್ನು ಆಡುವಾಗಲೇ ಹವ್ಯಾಸಿ ರಂಗಭೂಮಿ ಪರಿಚಯ. ಅದೇ ಹೊತ್ತಿಗೆ ಹಿರಿಯ ನಟ ಎನ್. ಎಸ್.ರಾವ್ ಗರಡಿಯ ಪರಿಚಯ. `ಹಯವದನ', `ಜೋಕುಮಾರಸ್ವಾಮಿ', `ತಲೆದಂಡ' ಮುಂತಾದ ನಾಟಕಗಳಲ್ಲಿಯೂ ಕಾಣಿಸಿಕೊಳ್ಳುವ ಅವಕಾಶ. ಬೆನಕ ತಂಡದ ಮೂಲಕ ಬಿ.ವಿ. ಕಾರಂತರ ಸುಪರ್ದಿಗೆ. ಇಷ್ಟಾದರೂ ಪೌರಾಣಿಕ ವರ್ಚಸ್ಸಿನಿಂದ ಬಿಡಿಸಿಕೊಳ್ಳಲು ಆಗಲಿಲ್ಲ. `ಶ್ರೀಕೃಷ್ಣ ಸಂಧಾನ', `ಯಮರಂಜನೆ' ಇತ್ಯಾದಿ ನಾಟಕಗಳಲ್ಲಿ ವಿಭಿನ್ನ ಪ್ರಯೋಗ.ಮೂಲತಃ ತುಮಕೂರು ಜಿಲ್ಲೆಯ ಶಿರಿವಾರದವರಾದ ಅವರಿಗೆ ಮಾಗಡಿಯಲ್ಲಿದ್ದ ಅಜ್ಜನ ಘೋರ ಪಾತ್ರಗಳು ಪ್ರಭಾವ ಬೀರಿದ್ದವು. ಶಂಖನಾದಕ್ಕೂ ಮೊದಲು ಅವರು ನಟಿಸಿದ್ದು ರಂಗನಾಯಕಿ ಚಿತ್ರದಲ್ಲಿ. `ಕೀಚಕ ವಧೆ' ನಾಟಕದಲ್ಲಿ ಭೀಮನ ಪಾತ್ರ ವಹಿಸಿದ್ದ ಸಂದರ್ಭದಲ್ಲಿ ಪಿ.ಎಚ್. ವಿಶ್ವನಾಥ್ ಅವರು ಪುಟ್ಟಣ್ಣ ಕಣಗಾಲ್‌ರಿಗೆ ಪರಿಚಯಿಸಿದರು. ರಂಗನಾಯಕಿಯ `ಶ್ರೀಮಾತಾ ಲೋಕಮಾತಾ' ಹಾಡಿನಲ್ಲಿ ಅಭಿನಯಿಸುವ ಅವಕಾಶ ದೊರೆಯಿತು.`ಕೆಂಪೇಗೌಡ', `ಗಂಡು ಗೂಳಿಗಳು', `ಉತ್ತರ ಭೂಪ', `ಮೈಸೂರು ಮಲ್ಲಿಗೆ', `ತೂಗುವೆ ಕೃಷ್ಣನಾ', `ಹೃದಯರಾಗ', `ಧರಣಿ ಮಂಡಲ ಮಧ್ಯದೊಳಗೆ', `ಆಕಸ್ಮಿಕ', `ಪರಶುರಾಮ' ಅವರು ನಟಿಸಿದ ಪ್ರಮುಖ ಚಿತ್ರಗಳು. ಮೂವತ್ತು ವರ್ಷಗಳ ಕಾಲ ಅಭಿನಯದ ಸುದೀರ್ಘ ಪಯಣ. ಜತೆಗೆ `ಕಾರ್ತಿಕ ದೀಪ', `ಪಾರಿಜಾತ', `ಕೋಗಿಲೆ', `ತಂಗಾಳಿ' ಮುಂತಾದ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು.ವ್ಯಾಪಾರಿ ಚಿತ್ರಗಳಿಗಿಂತಲೂ ಸದಭಿರುಚಿಯ ಚಿತ್ರಗಳೇ ಸೈ ಎನ್ನುವ ಅವರು ಎಪ್ಪತ್ತೈದಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆಯ ಛಾಪು ತೋರಿದ್ದಾರೆ. ನಾಟಕಗಳನ್ನು ಅಭಿನಯಿಸುವಾಗ ಗೀಳಿನಂತೆ ಬಂದ ನಟನೆ ಕೊನೆಗೆ ವೃತ್ತಿಯಾಗಿದೆ. ನಟನೆಗೆಂದೇ ಐಟಿಐನ ಉದ್ಯೋಗವನ್ನೂ ತ್ಯಜಿಸಿದ್ದಾರೆ. ಕೆಲವು ದಿನ ಬಣ್ಣ ಹಚ್ಚದಿದ್ದರೆ ಅವರಿಗೆ ಏನೋ ಕಳೆದುಕೊಂಡ ಕಸಿವಿಸಿ. ಉದ್ಯೋಗದಿಂದಾಗಿ ನಟನೆಯಲ್ಲಿ ನಿರಂತರತೆ ಕಂಡುಕೊಳ್ಳುವುದು ಸಾಧ್ಯವಿಲ್ಲ ಎಂಬ ಕಾರಣಕ್ಕೇ ತಮ್ಮ ಉದ್ಯೋಗಕ್ಕೆ ತಿಲಾಂಜಲಿ ನೀಡಿದ್ದು.ಈಗ `ಆಟೊ ರಾಜ', `ಪರಬ್ರಹ್ಮ', `ಜನ್ಮ ನಕ್ಷತ್ರ' ಮತ್ತಿತರ ಚಿತ್ರಗಳಲ್ಲಿ ಅವರು ನಿರತ. ವ್ಯಾಪಾರಿ ಚಿತ್ರಗಳು ಹೊಟ್ಟೆಪಾಡಿಗೆ ಎನ್ನುವ ಕಲಾವಿದರಲ್ಲಿ ಇವರೂ ಒಬ್ಬರು. ಅದರ ಏಕತಾನತೆಯಿಂದ ಬಿಡಿಸಿಕೊಳ್ಳಲು ಸದಭಿರುಚಿಯ ಪಾತ್ರಗಳತ್ತ ಅವರು ಆಗಾಗ ವಾಲುವುದಿದೆ. `ಗಾಂಧಿ ಜಯಂತಿ' ಚಿತ್ರದಲ್ಲಿ ಹಣ್ಣು ಹಣ್ಣು ಮುದುಕನಾಗಿ ನಟಿಸುತ್ತಿರುವುದು ಅವರ ಮರೆಯಲಾರದ ಅನುಭವ. ಅದು ಭಾವನೆಗಳನ್ನು ಅಭಿವ್ಯಕ್ತಿಸಲು ಸೂಕ್ತ ವೇದಿಕೆಯಾಗಿದೆಯಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry