ಶುಕ್ರವಾರ, ಮೇ 27, 2022
30 °C

ಅಂಕಣ ಬರಹದಲ್ಲಿ ಲವಲವಿಕೆ ಅಗತ್ಯ: ಹಳೆಮನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಬರಹಗಾರರು ದೊಡ್ಡವರಾಗುವುದು ಸಮುದಾಯಕ್ಕೆ ಸಲ್ಲುವ ಮಾತನ್ನು ಆಡಿದಾಗ’ ಎಂದು ವಿಮರ್ಶಕ ವೈ.ಎಲ್.ನಾಗಭೂಷಣಸ್ವಾಮಿ ಅಭಿಪ್ರಾಯಪಟ್ಟರು.ಭಾನುವಾರ ರಂಗಾಯಣದ ಶ್ರೀರಂಗದಲ್ಲಿ ಚೈತ್ರ ಪಲ್ಲವಿ ಪ್ರಕಾಶನ ಏರ್ಪಡಿಸದ್ದ ಸಮಾರಂಭದಲ್ಲಿ ಡಾ.ಮಮತಾ ಜಿ.ಸಾಗರ ಅವರ  ಅಂಕಣ ಬರಹ ‘ಇಲ್ಲಿ ಸಲ್ಲುವ ಮಾತು’ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು ‘ಕೆಲವು ಸಲ ಸಮಾಜಕ್ಕೆ ಒಲ್ಲದ, ಸಲ್ಲದ  ವಿಚಾರಗಳ ಕಡೆ ಬರೆಯುವ ಧೈರ್ಯವನ್ನು ಬರಹಗಾರರು ಮಾಡುತ್ತಾರೆ. ಪಂಪನ ಮನುಷ್ಯ ಜಾತಿ ತಾನೊಂದೆ ವಲಂ ಎಂಬ ಮಾತು ಆ  ಕಾಲಕ್ಕೆ ಸಲ್ಲದ್ದಾಗಿತ್ತು. ಆದರೆ ಅಲ್ಲಿ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಪ್ರಯತ್ನ ಕಂಡು ಬರುತ್ತದೆ’ ಎಂದರು.‘ಡಾ.ಹಾ.ಮಾ. ನಾಯಕ್ ತಮ್ಮ ಅಂಕಣಗಳಲ್ಲಿ ಪ್ರಸ್ತುತ ವಿಚಾರಧಾರೆಗಳ ಕುರಿತು ವಿಶ್ಲೇಷಿಸುತ್ತಿದ್ದರು. ಆದರೆ ಪ್ರಸ್ತುತ ಅಂಕಣಕಾರರು  ಹೆಚ್ಚಾಗಿ ಪ್ರಚಲಿತ ವಿಷಯಗಳಿಗಿಂತ ಕಾಲಾತೀತ ವಿಷಯಗಳತ್ತ ಗಮನ ಹರಿಸುತ್ತಿದ್ದಾರೆ. ಮಮತಾ ಜಿ.ಸಾಗರ ಅವರ ಅನೇಕ ಬರಹಗಳು  ವಿಶಾಲಕ್ಕೆ, ಆಳಕ್ಕೆ ಕರೆದೊಯ್ಯುತ್ತವೆ ಎನ್ನುವಾಗಲೆ ಲೇಖನ ಮುಗಿದು ಹೋಗುತ್ತದೆ. ಇದು ಅಂಕಣ ಬರಹದ ಮಿತಿಯೋ? ಅಥವಾ ಲೇಖ ಕರ ಮಿತಿಯೋ?’ ಎಂದು ಪ್ರಶ್ನಿಸಿದರು.‘ಮಮತಾ ಅವರ ಅಂಕಣ ಬರಹದಲ್ಲಿ ಕಥೆ ಮತ್ತು ಕಾವ್ಯದ ಗುಣವನ್ನು ಕಾಣಬಹುದು. ಸ್ವಾನುಭವಗಳನ್ನೇ ಅಕ್ಷರವನ್ನಾಗಿಸಿದ್ದಾರೆ.  ಸಮಾಜಕ್ಕೆ ಸಲ್ಲದೇ ಇರುವ ಮಾತುಗಳನ್ನು ಹೇಳುವ ಧೈರ್ಯವನ್ನು ತೋರಲಿ’ ಎಂದು ಆಶಿಸಿದರು.ರಂಗಾಯಣ ನಿರ್ದೇಶಕ ಪ್ರೊ.ಲಿಂಗದೇವರು ಹಳೆಮನೆ ಮಾತನಾಡಿ, ‘ಕಥೆಯ ಹಾಗೂ ಲೇಖನದ ಎರಡೂ ಲಕ್ಷಣಗಳನ್ನು ಮಮತಾ  ಅವರ ಅಂಕಣ ಬರಹ ಒಳಗೊಂಡಿದೆ. ಮಹಿಳೆಯರ ಸಮಸ್ಯೆ, ಸವಾಲುಗಳ ಬಗ್ಗೆ ಇಲ್ಲಿ ವಿಶ್ಲೇಷಿಸಿದ್ದಾರೆ. ಅಂಕಣದಲ್ಲಿ ಅಂದುಕೊಂಡ, ಹೇಳ ಬೇಕಾದ ಎಷ್ಟೋ ವಿಷಯಗಳು ಜಾಗದ ಮಿತಿಯಿಂದ ತುಂಡಾಗಿ ಹೋಗುತ್ತವೆ. ಅರಿವನ್ನು ಹಿಗ್ಗಿಸುವಲ್ಲಿ ಅಂಕಣಗಳು ಸಹಕಾರಿಯಾಗಿವೆ.  ತುಂಬಾ ಗಂಭೀರ ಶೈಲಿಯ ಅಂಕಣ ಬರೆದರೆ, ಅಂತಹವುದನ್ನು ಓದುವವರ ಸಂಖ್ಯೆ ಕಡಿಮೆ ಇದೆ. ಆದ್ದರಿಂದ ಸ್ವಲ್ಪ ಲವಲವಿಕೆ ಮತ್ತು ಓದಿಸಿಕೊಂಡು ಹೋಗುವ ಶೈಲಿ ಅವಶ್ಯಕ’ ಎಂದು ಅಭಿಪ್ರಾಯ ಪಟ್ಟರು.ಲೇಖಕಿ ಮಮತಾ ಜಿ.ಸಾಗರ, ಚೈತ್ರ ಪ್ರಕಾಶನ ಸಂಸ್ಥೆಯ ಡಾ.ಹಾ.ತಿ.ಕೃಷ್ಣೇಗೌಡ, ಡಾ.ಹಾಲತಿ ಸೋಮಶೇಖರ್ ಇತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.