ಸೋಮವಾರ, ಮೇ 23, 2022
21 °C

ಅಂಕಣ ಬರೆಯದಂತೆ ತಾಕೀತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ತಗಾಂಗ್ (ಪಿಟಿಐ): ವಿಶ್ವಕಪ್ ಕ್ರಿಕೆಟ್ ಟೂರ್ನಿ ಮುಗಿಯುವ ತನಕ ಆಟಗಾರರು ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುವುದನ್ನು ನಿಲ್ಲಿಸಬೇಕು ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಆಟಗಾರರಿಗೆ ಸೂಚನೆ ನೀಡಿದೆ.ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಕೇವಲ 58 ರನ್‌ಗಳಿಗೆ ಆಲ್‌ಔಟ್ ಆಗಿ ಕಳಪೆ ಪ್ರದರ್ಶನ ತೋರಿದ್ದ ಶಕೀಬ್-ಅಲ್-ಹಸನ್ ಪಡೆಯ ವಿರುದ್ಧ ಮಾಜಿ ಆಟಗಾರರು ತೀವ್ರ ಟೀಕೆ ಮಾಡಿದ್ದರು.ಆದ್ದರಿಂದ ಆಟಗಾರರು ಪ್ರದರ್ಶನದತ್ತ ಗಮನ ಹರಿಸಬೇಕು. ಅಂಕಣಗಳನ್ನು ಬರೆಯುವು ದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಬಿಸಿಬಿ ಹೇಳಿದೆ.ಪತ್ರಿಕೆಯೊಂದಕ್ಕೆ ಬಾಂಗ್ಲಾ ನಾಯಕ ಶಕೀಬ್-ಅಲ್-ಹಸನ್ ತಮ್ಮ ಅಂಕಣದಲ್ಲಿ ತಂಡದ ಹಿರಿಯ ಆಟಗಾರರ ಕುರಿತು ಟೀಕೆ ಮಾಡಿದ್ದರು. ಆದ್ದರಿಂದ ಕಠಿಣ ಕ್ರಮಕ್ಕೆ ಮುಂದಾಗಿರುವ ಬಿಸಿಬಿ ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುವುದನ್ನು ನಿಲ್ಲಿಸಿ, ಉತ್ತಮ ಪ್ರದರ್ಶನ ತೋರುವತ್ತ ಗಮನ ಹರಿಸಬೇಕು’ ಎಂದು ಆಟಗಾರರಿಗೆ ಸೂಚಿಸಲಾಗಿದೆ ಎಂದು ಮಂಡಳಿಯ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಮುಂಜರ್ ಅಹ್ಮದ್ ‘ನ್ಯೂ ಏಜ್’ ಪತ್ರಿಕೆಗೆ ತಿಳಿಸಿದ್ದಾರೆ.ಕೆರಿಬಿಯನ್ ದೊರೆಗಳ ವಿರುದ್ಧ ಹೀನಾಯ ಸೋಲು ಅನುಭವಿಸಿದ ನಂತರ ಬಾಂಗ್ಲಾ ಅಭಿಮಾನಿಗಳು ವೆಸ್ಟ್ ಇಂಡೀಸ್ ಆಟಗಾರರಿದ್ದ ಬಸ್ಸಿಗೆ ಕಲ್ಲು ಎಸೆದಿದ್ದರು. ಈ ಘಟನೆ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಪದೇ ಪದೇ ವಿವಾದಕ್ಕೆ ಸಿಲುಕಿಕೊಳ್ಳಬಾರದು ಎಂದು ಬಿಸಿಬಿ ಕೂಡಲೇ ಈ ಕ್ರಮಕ್ಕೆ ಮುಂದಾಗಿದೆ.‘ಮಾಜಿ ಆಟಗಾರರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಕ್ರಿಕೆಟ್ ಅಭಿಮಾನಿಗಳಂತೆ ಕೇವಲ ಟೀಕೆ ಮಾಡಬಾರದು. ಒಂದು ಪಂದ್ಯದಲ್ಲಿ ಕಳಪೆ ಪ್ರದರ್ಶನ ತೋರಿದ್ದಕ್ಕೆ ಟೀಕೆ ಸರಿಯಲ್ಲ. ತಂಡದ ಹಿಂದಿನ ಸಾಧನೆಯನ್ನು ಗಮನಿಸಬೇಕು. ಮತ್ತೆ ಚೇತರಿಸಿಕೊಂಡು ಉತ್ತಮ ಪ್ರದರ್ಶನ ನೀಡಲಿದ್ದೇವೆ’ ಎಂದು ಹಸನ್ ತಮ್ಮ ಅಂಕಣದಲ್ಲಿ ಬರೆದಿದ್ದರು.ಅಂಕಣದಲ್ಲಿ ಪ್ರಸ್ತಾಪಿಸಿದ ವಿಷಯದಿಂದ ಅಸಮಾಧಾನಗೊಂಡಿರುವ ಬಾಂಗ್ಲಾ ತಂಡದ ಮಾಜಿ ನಾಯಕ ರುಕಿಬುಲ್ ಹಸನ್ ‘ಹಿರಿಯ ಆಟಗಾರರಿಗೆ ಶಕೀಬ್ ಅಗೌರವ ತೋರಿದ್ದಾರೆ. ಅವಮಾನ ಮಾಡಿದ್ದಾರೆ’ ಎಂದು ಪ್ರತಿಕ್ರಿಯಿಸಿದ್ದಾರೆ.ಈ ವಾದ-ಪ್ರತಿವಾದಗಳಿಂದ ಎಚ್ಚೆತ್ತುಕೊಂಡಿರುವ ಬಿಸಿಬಿ ವಿವಾದ ಸೃಷ್ಟಿಸುವಂತ ಹೇಳಿಕೆಗಳು ಪಂದ್ಯದ ಪ್ರದರ್ಶನಕ್ಕೆ ದಕ್ಕೆಯಾಗಬಹುದು ಎನ್ನುವ ಭೀತಿಯಿಂದ ಬಿಸಿಬಿ ಅಂಕಣ ಬರೆಯದಂತೆ ತಾಕೀತು ಮಾಡಿದೆ.ವಿಶ್ವಕಪ್‌ನಲ್ಲಿ ಇದುವರೆಗೂ ಒಟ್ಟು ಮೂರು ಪಂದ್ಯಗಳನ್ನು ಆಡಿರುವ ಬಾಂಗ್ಲಾ ಎರಡು (ಭಾರತ ಮತ್ತು ವೆಸ್ಟ್‌ಇಂಡೀಸ್) ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮಾತ್ರ ಗೆಲುವು ಪಡೆದಿದೆ. ಶಕೀಬ್ ಬಳಗ ಮಾ. 11ರಂದು ಇಂಗ್ಲೆಂಡ್ ತಂಡದ ಸವಾಲನ್ನು ಎದುರಿಸಲಿದೆ.ಕಲ್ಲು ಎಸೆದ ಘಟನೆ ಅನಿರೀಕ್ಷಿತ: ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದ ನಂತರ ಹತಾಶೆಗೊಂಡಿದ್ದ ಅಭಿಮಾನಿಗಳು ಬಸ್ಸಿಗೆ ಕಲ್ಲು ಎಸೆದ ಘಟನೆ ಅನಿರೀಕ್ಷಿತ ಎಂದು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.‘ಅಭಿಮಾನಿಗಳ ವರ್ತನೆ ಬಾಂಗ್ಲಾದಲ್ಲಿ ನಡೆಯುವ ವಿಶ್ವಕಪ್ ಕ್ರಿಕೆಟ್ ಮುಂದಿನ ಪಂದ್ಯಗಳ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಅಭಿಮಾನಿಗಳು ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ. ಈ ಘಟನೆ ನಂತರ ಬಾಂಗ್ಲಾದಲ್ಲಿ ನಡೆ ಯುವ ಪಂದ್ಯಗಳ ಬಗ್ಗೆ ತೀವ್ರ ಎಚ್ಚರಿಕೆ ವಹಿಸಿರುವ  ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಕ್ರೀಡಾಂಗಣದ ಭದ್ರತೆಯನ್ನು ಹೆಚ್ಚಿಸಿದೆ.ಈ ಘಟನೆಯನ್ನು ‘ಸಣ್ಣ ಘಟನೆ’ ಎಂದಿದ್ದ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮುಖ್ಯಕಾರ್ಯನಿರ್ವಾಹಕ ಹರೂನ್ ಲಾರ್ಗಟ್ ಅವರ ಹೇಳಿಕೆಯನ್ನು ವೆಸ್ಟ್‌ಇಂಡೀಸ್ ತಂಡದ ಕೋಚ್ ಟೀಕಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.