ಗುರುವಾರ , ಏಪ್ರಿಲ್ 15, 2021
22 °C

ಅಂಕಿ-ಅಂಶದಲ್ಲಿ ಮಾತ್ರ ಪ್ರಗತಿ:ರಾಮಸ್ವಾಮಿಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಣಿಗಲ್: ತಾಲ್ಲೂಕಿನ ಬಹುತೇಕ ಅಧಿಕಾರಿಗಳು ಅಂಕಿ-ಅಂಶದ ಮೂಲಕ ಮಾತ್ರ ಪ್ರಗತಿ ಸಾಧಿಸಿರುವುದಾಗಿ ಮಾಹಿತಿ ನೀಡುತ್ತಿದ್ದಾರೆ. ಆದರೆ, ವಾಸ್ತವಿಕವಾಗಿ ಭೌತಿಕ ಪ್ರಗತಿಯಲ್ಲಿ ಬಹಳ ಹಿಂದುಳಿದಿದ್ದಾರೆ ಎಂದು ಶಾಸಕ ಬಿ.ಬಿ.ರಾಮಸ್ವಾಮಿಗೌಡ ಅಭಿಪ್ರಾಯಪಟ್ಟರು.ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆಲ ಇಲಾಖೆಗಳಲ್ಲಿ ಅನುದಾನದ ಕೊರತೆಯಿಂದ ಅಭಿವೃದ್ಧಿ ಸಾಧ್ಯವಾಗಿಲ್ಲ. ಇನ್ನು ಕೆಲವು ಇಲಾಖೆಗಳಲ್ಲಿ ಸಾಕಷ್ಟು ಅನುದಾನ ಇದ್ದರೂ; ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ. ಅಂಕಿ ಅಂಶಗಳ ಪ್ರಗತಿ ಬಿಟ್ಟು ಅಭಿವೃದ್ಧಿ ಕಾರ್ಯಗಳಲ್ಲಿ ಪ್ರಗತಿ ಸಾಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-48ರ ಇಕ್ಕೆಲಗಳಲ್ಲಿ ಚರಂಡಿ ನಿರ್ಮಾಣ ಮಾಡಲು ಶಾಸಕರ ನಿಧಿಯಿಂದ 96 ಲಕ್ಷ ರೂಪಾಯಿ ಬಿಡುಗಡೆಯಾಗಿದ್ದರೂ; ಭೂಸೇನಾ ನಿಗಮದ ವತಿಯಿಂದ ಕಾರ್ಯಾರಂಭವಾಗದಿರುವ ಬಗ್ಗೆ ರಾಮಸ್ವಾಮಿಗೌಡ ಅಸಮಾಧಾನ ವ್ಯಕ್ತಪಡಿಸಿದರು. ತಾಲ್ಲೂಕಿನಲ್ಲಿ 52,708 ಕುಟುಂಬಗಳಿದ್ದು 69 ಸಾವಿರ ಪಡಿತರ ಚೀಟಿ ವಿತರಣೆಯಾಗಿವೆ, ಇದು ಹೇಗೆ ಸಾಧ್ಯ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಶಾಸಕರು ಅನರ್ಹ ಪಡಿತರ ಚೀಟಿಗಳನ್ನು ಪರಿಶೀಲಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಕೂಡಲೆ ರದ್ದುಪಡಿಸುವಂತೆ ಸೂಚಿಸಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆ ವಿದ್ಯುತ್ ವ್ಯವಸ್ಥೆ ಬಗ್ಗೆ ಗಮನಹರಿಸಬೇಕು. ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ನಿಗದಿತ ಅವಧಿಯ ಸೇವೆಗೆ ಗಮನಹರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಡಾ.ಬಿ.ಎನ್.ರವಿ ಎಚ್ಚರಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಎಚ್.ಹುಚ್ಚಯ್ಯ, ಹುತ್ರಿದುರ್ಗ ವ್ಯಾಪ್ತಿಯಲ್ಲಿ ಕುಂಠಿತವಾಗಿರುವ ಸುವರ್ಣ ಗ್ರಾಮ ಯೋಜನೆ ಕಾಮಗಾರಿಗಳ ಬಗ್ಗೆ ವಿವರಣೆ ಪಡೆದು ಸಕಾಲದಲ್ಲಿ ಪೂರ್ಣಗೊಳಿಸುವಂತೆ ಆಗ್ರಹಿಸಿದರು.ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಮಣ್ಣ ರೇಷ್ಮೆ ಬೆಳೆಗಾರರಿಗೆ ಬಾಕಿಯಿರುವ 53 ಲಕ್ಷ ರೂಪಾಯಿ ಬೋನಸ್ ಹಣವನ್ನು ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆಯೂ; ಉಪಾಧ್ಯಕ್ಷೆ ಜಮುನಾ ಕುಂಠಿತವಾಗಿರುವ ಯಲಿಯೂರು ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರವಾಗಿ ಪೂರೈಸುವಂತೆ ಆಗ್ರಹಿಸಿದರು. ಜಿ.ಪಂ. ಸದಸ್ಯ ಅರುಣ್‌ಕುಮಾರ್ ರಾಷ್ಟ್ರೀಯ ಹೆದ್ದಾರಿ -48ರಲ್ಲಿ ರಸ್ತೆ ವಿಸ್ತರಣೆಯಿಂದ ತೆಗೆದು ಹಾಕಲಾಗಿರುವ ಕೊಳವೆ ಬಾವಿಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆಯೂ, ಸದಸ್ಯೆ ವಸಂತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿರುವ ಅಭಿವೃದ್ಧಿ ಕಾಮಗಾರಿಗಳ ವಿವರಣೆ ನೀಡುವಂತೆ ಒತ್ತಾಯಿಸಿದರು. ತಹಶೀಲ್ದಾರ್ ಡಾ.ರವಿ ಎಂ.ತಿರ್ಲಾಪುರ್, ಇಒ ರವಿಕುಮಾರ್, ಯೋಜನಾಧಿಕಾರಿ ಬಾಲರಾಜ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.