ಮಂಗಳವಾರ, ನವೆಂಬರ್ 19, 2019
26 °C
ಕುಸಿಯುತ್ತಿರುವ ದರ: ಬಂಗಾರಕ್ಕೆ ಹೆಚ್ಚಿದ ಬೇಡಿಕೆ

ಅಂಗಡಿ ಬಂದ್: ಗ್ರಾಹಕರ ಪರದಾಟ

Published:
Updated:

ಕುಷ್ಟಗಿ: ಕೆಲ ದಿನಗಳಿಂದ ಬಂಗಾರ ದ ಬೆಲೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಒಂದೆಡೆ ಬೇಡಿಕೆ ಹೆಚ್ಚುತ್ತಿದ್ದರೆ ಇನ್ನೊಂದೆಡೆ ಆಭರಣದ ವ್ಯಾಪಾರಿಗಳು ಅಂಗಡಿಗಳನ್ನು ಮುಚ್ಚಿದ್ದಲ್ಲದೇ ಕೆಲವರು ಮಾರಾಟ ಮಾಡಲು ಹಿಂದೇಟು ಹಾಕುತ್ತಿರುವ ಬಗ್ಗೆ ಇಲ್ಲಿ ದೂರಲಾಗಿದೆ.ಚಿನ್ನದ ವ್ಯಾಪಾರ ಮತ್ತು ಆಭರಣ ತಯಾರಿಕೆಗೆ ಸಂಬಂಧಿಸಿದ ಅನೇಕ ಸಣ್ಣಪುಟ್ಟ ಮಳಿಗೆಗಳು ಇಲ್ಲಿದ್ದು, ಚಿನ್ನ ಕೇಳಿ ಬರುವ ಗ್ರಾಹಕರಿಗೆ ಸಹಕರಿಸದ ವರ್ತಕರು, ನಮ್ಮಲ್ಲಿ ಸಂಗ್ರಹ ಇಲ್ಲ ಎಂದು ನೆಪ ಹೇಳುತ್ತಿದ್ದಾರೆ,  ಈಗಿದ್ದ ಬೆಲೆಗೆ ಕೊಡಿ ಎಂದು ಒತ್ತಾಯಿಸಿದರೆ ಅದು ನಮ್ಮ ಇಷ್ಟ ಎಂದು ವಾದಿಸುತ್ತಾರೆ. ಚಿನ್ನದ ದರ ಕುಸಿಯುತ್ತಿರುವುದೇ ವ್ಯಾಪಾರಿಗಳು ಹಿಂದೇಟು ಹಾಕಲು ಕಾರಣ ಎಂದು ಜನ ದೂರಿದ್ದಾರೆ.ದರ ಹೆಚ್ಚಿದಾಗ ಯಾವುದೇ ನೆಪ ಹೇಳದೆ ವರ್ತಕರು ವಹಿವಾಟು ನಡೆಸುತ್ತಾರೆ. ಗ್ರಾಹಕರು ಅನಿವಾರ್ಯವಾಗಿ ಖರೀದಿಸುತ್ತಾರೆ. ಅದೇ ದರ ಕಡಿಮೆಯಾದ ಸಂದರ್ಭಲ್ಲಿ ಮಾತ್ರ ನಮ್ಮಲ್ಲಿ ಚಿನ್ನ ಇಲ್ಲ ಎನ್ನುತ್ತಾರೆ.ಮದುವೆ ಅವಧಿಯಾಗಿದ್ದು ಬಡವರು, ಮಧ್ಯಮ ವರ್ಗದವರಿಗೆ ಬಂಗಾರದ ಬೆಲೆ ದಿಢೀರ್ ಕುಸಿದಿರುವುದು ಒಂದು ರೀತಿಯ ಅನುಕೂಲವೇ ಆಗಿದೆ. ಆದರೆ ವರ್ತಕರು ಮಾತ್ರ ಬಡವರ ಆಸೆಗೆ ತಣ್ಣೀರೆಚುತ್ತಿದ್ದಾರೆ ಎಂದು ಗ್ರಾಹಕರಾದ ನಾಗರಾಜ ಶೆಟ್ಟರ್, ವೀರೇಶಗೌಡ, ಏಜಾಸಾಬ್ ಬಾಬಾ ಮತ್ತಿತರರು ಆರೋಪಿಸಿದರು. ಅಲ್ಲದೇ ಈ ಬಗ್ಗೆ ಗ್ರಾಹಕರ ನ್ಯಾಯಾಲಯಕ್ಕೆ ದೂರು ಸಲ್ಲಿಸುವುದಾಗಿಯೂ ತಿಳಿಸಿದರು.ಚುನಾವಣೆ ಬೇಡಿಕೆ: ಈ ಮಧ್ಯೆ ವಿಧಾನಸಭೆ ಚುನಾವಣೆ ಸಮಯದಲ್ಲೇ ಬಂಗಾರದ ಬೆಲೆ ಇಳಿತ ರಾಜಕೀಯ ಪಕ್ಷಗಳಿಗೆ ವರದಾನವಾಗಿ ಪರಿಣಮಿಸಿದ್ದು ಜನರು, ಸಂಘ ಸಂಸ್ಥೆಗಳಿಗೆ ಹಂಚುವ ಹುನ್ನಾರ ನಡೆಸಿರುವ ಕೆಲ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಲ್ಲಿ ಬಂಗಾರ ಖರೀದಿ ಧಾವಂತ ಕಾಣುತ್ತಿದೆ. ರಾಜಕಾರಣಿಗಳು ಅಧಿಕ ಪ್ರಮಾಣದ ಬೇಡಿಕೆ ಇಡುತ್ತಿರುವುದೂ ವರ್ತಕರು ಮಾರಾಟಕ್ಕೆ ಹಿಂದೇಟು ಹಾಕಲು ಕಾರಣ ಎನ್ನಲಾಗುತ್ತಿದೆ.ಆದರೆ ಮಾಂಗಲ್ಯ ಮಾಡಿಸುವುದಕ್ಕೆ ಸಾಲ ಮಾಡಿ ಬಂಗಾರ ಖರೀದಿಸುವ ಬಡವರು ಮಾತ್ರ ಪರದಾಡುವಂತಾಗಿದೆ, ಈ ಬಗ್ಗೆ ಚುನಾವಣಾಧಿಕಾರಿಗಳು ನಿಗಾವಹಿಸಬೇಕಿದೆ ಎಂಬ ಮಾತುಗಳು ಸಾರ್ವಜನಿಕರಲ್ಲಿ ಕೇಳಿಬಂದಿವೆ.

ಪ್ರತಿಕ್ರಿಯಿಸಿ (+)