ಮಂಗಳವಾರ, ಏಪ್ರಿಲ್ 13, 2021
24 °C

ಅಂಗನವಾಡಿಗಳಿಗೆ ಆಹಾರ ಕೊಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಗನವಾಡಿ ಕೇಂದ್ರಗಳಿಗೆ ಆಹಾರ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದು ಅಕ್ಷಮ್ಯ. ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ರಾಜ್ಯದ ಅಂಗನವಾಡಿಗಳಿಗೆ ಆಹಾರ ಪೂರೈಕೆಯಾಗಿಲ್ಲ ಎಂಬುದು ಕಳವಳಕಾರಿ. ರಾಜ್ಯದಲ್ಲಿ ಅಪೌಷ್ಟಿಕತೆ ತಾಂಡವವಾಡುತ್ತಿದೆ ಎಂಬುದು ಈಗಾಗಲೇ ದೊಡ್ಡ ವಿವಾದವಾಗಿದೆ.ಈ ನಿಟ್ಟಿನಲ್ಲಿ ಆಡಳಿತ ಸೂತ್ರ ಹಿಡಿದವರು ಏನು ಮಾಡುತ್ತಿದ್ದಾರೆ ಎಂದು ರಾಜ್ಯ ಹೈಕೋರ್ಟ್ ಸಹ ಟೀಕಿಸಿದೆ. ಇಂತಹ ಸಂದರ್ಭದಲ್ಲೇ ಗರ್ಭಿಣಿಯರು ಹಾಗೂ ಮಕ್ಕಳ ಪೌಷ್ಟಿಕತೆಯ ಮೇಲೆ ದುಷ್ಟರಿಣಾಮ ಬೀರಬಹುದಾದ ಈ ವಿದ್ಯಮಾನ ಆತಂಕಕಾರಿ. ಆಹಾರ ಸಾಮಗ್ರಿಗಳ ಬೆಲೆ ಏರಿಕೆ ಇದಕ್ಕೆ ಕಾರಣ ಎಂಬಂತಹ ಮಾತುಗಳನ್ನು ಹೇಳಲಾಗುತ್ತಿದೆ.ಜಿಲ್ಲಾ ಮಟ್ಟಗಳಲ್ಲಿ ಸ್ತ್ರೀಶಕ್ತಿ ಗುಂಪುಗಳು ನಡೆಸುವ ಮಹಿಳಾ ಆಹಾರ ಸರಬರಾಜು ಸಂಸ್ಥೆಗಳ ಮೂಲಕವೇ ಅಂಗನವಾಡಿಗಳಿಗೆ ಆಹಾರ ಸರಬರಾಜು ಮಾಡಲು ಸರ್ಕಾರ ಆದೇಶಿಸಿದೆ. ಆದರೆ ಜಿಲ್ಲಾಧಿಕಾರಿ ನಿರ್ಧರಿಸುವ ಬೆಲೆಯಲ್ಲಿ ಆಹಾರ ಪೂರೈಸಲು ಈ ಸಂಘಗಳು ಅಸಹಾಯಕತೆ ವ್ಯಕ್ತಪಡಿಸಿವೆ.ನಿರಂತರ ಬೆಲೆ ಏರಿಕೆ ಕಾರಣ ಆಹಾರ ಪದಾರ್ಥಗಳ ಮಾರುಕಟ್ಟೆ ದರಗಳಿಗೂ ಜಿಲ್ಲಾಧಿಕಾರಿ ನಿಗದಿ ಪಡಿಸುವ ಬೆಲೆಗಳಿಗೂ ಅಪಾರ ಅಂತರವಿರುವುದು ಈ ಸಮಸ್ಯೆಯ ಮೂಲ. ಮಕ್ಕಳಿಗೆ ವಾರದಲ್ಲಿ ಮೂರು ದಿನ ಮೊಟ್ಟೆ ಕೊಡಬೇಕೆಂಬ ನಿರ್ದೇಶನವೂ ಅಂಗನವಾಡಿ ಕೇಂದ್ರಗಳಿಗೆ ಇದೆ.

 

ತಲಾ ಮೊಟ್ಟೆಗೆ ಜಿಲ್ಲಾಧಿಕಾರಿಗಳು ನಿಗದಿ ಪಡಿಸುವ ದರ ರೂ 3.25. ಆದರೆ ಮುಕ್ತ ಮಾರುಕಟ್ಟೆಯಲ್ಲಿ ತಲಾ ಮೊಟ್ಟೆ ಧಾರಣೆ ರೂ 3.50ರಿಂದ ರೂ 4ರವರೆಗೆ ಇದೆ ಎಂಬುದು ಕಾರ್ಯಕರ್ತೆಯರ ದೂರು. ಈ ಸಮಸ್ಯೆ ಆರಂಭವಾಗಿ ಒಂದು ತಿಂಗಳು ಕಳೆದಿದ್ದರೂ ಇದರ ಪರಿಹಾರದತ್ತ ಗಮನ ತೋರಿಲ್ಲದಿರುವುದು ಆಡಳಿತದ ವೈಫಲ್ಯ.ರಾಜ್ಯದಲ್ಲಿ 60 ಸಾವಿರಕ್ಕೂ ಅಧಿಕ ಅಂಗನವಾಡಿಗಳಿವೆ. 36ಲಕ್ಷಕ್ಕೂ ಅಧಿಕ ಮಕ್ಕಳು ಈ ಅಂಗನವಾಡಿ ಸೌಲಭ್ಯಗಳ ಪ್ರಯೋಜನ ಪಡೆಯುತ್ತಿವೆ. ಈಗ ಆಹಾರ ಪೂರೈಕೆಯಲ್ಲಿನ ವ್ಯತ್ಯಯ ಈ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರುವಂತಹದ್ದು. ರಾಜ್ಯದಲ್ಲಿ 0-6 ವಯೋಮಾನದ ಗುಂಪಿನಲ್ಲಿ 71,000 ಮಕ್ಕಳು ತೀವ್ರತರದ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ.ಸುಮಾರು 30 ಲಕ್ಷ ಮಕ್ಕಳು ಅಲ್ಪಪ್ರಮಾಣದ ಅಪೌಷ್ಟಿಕತೆಗೆ ಗುರಿಯಾಗಿದ್ದಾರೆ ಎಂದು ಇತ್ತೀಚಿನ ಸರ್ಕಾರದ ವರದಿಯೇ ಹೇಳಿದೆ. ಹೀಗಿದ್ದೂ ಪೌಷ್ಟಿಕತೆ ಸುಧಾರಿಸುವ ಉದ್ದೇಶದ ಕಾರ್ಯಕ್ರಮ ಜಾರಿಯಲ್ಲಿ ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯ ಖಂಡನೀಯ. ಇಂತಹ ನಿರ್ಲಕ್ಷ್ಯ ಇದೇ ಮೊದಲಲ್ಲ. ಈ ಹಿಂದೆ,  ಸಿದ್ಧಪಡಿಸಿದ ಪೊಟ್ಟಣದ ಆಹಾರವನ್ನು 2009ರಿಂದ ಅಂಗನವಾಡಿ ಮಕ್ಕಳಿಗೆ ವಿತರಿಸಲು ಸರ್ಕಾರ ಆರಂಭಿಸಿತ್ತು. ಇದು ದೊಡ್ಡ ಹಗರಣವೇ ಆಗಿಹೋಯಿತು.ಈ ಹಗರಣ ರಾಜ್ಯದ ಮಕ್ಕಳ ಪೌಷ್ಟಿಕತೆಯ ಮೇಲೆ ಬೀರಿದ ದುಷ್ಪರಿಣಾಮವನ್ನು ಮರೆಯುವಂತೆಯೇ ಇಲ್ಲ.

 

ಇದರ ವಿರುದ್ಧ ನಡೆದ ಜನಾಂದೋಲನದ ಪರಿಣಾಮವಾಗಿ ಸ್ಥಳೀಯವಾಗಿಯೇ ತಯಾರಿಸಿದ ಬಿಸಿ ಆಹಾರವನ್ನು ಮಕ್ಕಳಿಗೆ ನೀಡುವಂತಹ ನಿರ್ಧಾರ ಕೈಗೊಳ್ಳಲಾಯಿತು.  ಈಗ ಮತ್ತೆ ಶುರುವಾಗಿರುವ ಆಹಾರ ಪೂರೈಕೆಯ ಈ ಹೊಸ ಸಮಸ್ಯೆ ನಿವಾರಣೆಗೆ ಸರ್ಕಾರ ತುರ್ತುಕ್ರಮ ಕೈಗೊಳ್ಳಬೇಕು.    

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.