ಸೋಮವಾರ, ಏಪ್ರಿಲ್ 12, 2021
23 °C

ಅಂಗನವಾಡಿಯಲ್ಲಿ ಹಾಲು, ಮೊಟ್ಟೆಗೆ ಕೊರತೆ

ಪ್ರಜಾವಾಣಿ ವಾರ್ತೆ/ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಕೋಲಾರ: ಈ ಅಂಗನವಾಡಿಯಲ್ಲಿರುವ 15 ಮಕ್ಕಳ ಪೈಕಿ ಮೂವರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅವರಿಗೆ ಕಳೆದ ಮೇ 22ರಿಂದ ಇದುವರೆಗೂ ಹಾಲು ಕೊಟ್ಟಿಲ್ಲ. ಮೊಟ್ಟೆಯನ್ನು ಕಳೆದ ಮಾರ್ಚ್‌ನಿಂದ ಕೊಡುತ್ತಿದ್ದರೂ ಅದನ್ನು ಅಂಗನವಾಡಿ ಶಿಕ್ಷಕಿಯೇ ತಮ್ಮ ಹಣದಿಂದ ಕೊಳ್ಳುತ್ತಿದ್ದಾರೆ. ವೋಚರ್ ಪಡೆದಿರುವ ಇಲಾಖೆ ಹಣ ಪಾವತಿಸಿಲ್ಲ. ಅಂಗನವಾಡಿಯಲ್ಲಿ ಸ್ಟೌ ಇಲ್ಲ, ಕುಕ್ಕರ್ ಇಲ್ಲ. ಅಂಗನವಾಡಿ ಸಹಾಯಕಿಯ ಮನೆಯಲ್ಲಿ ಅಡುಗೆ ತಯಾರಾಗುತ್ತಿದೆ. ಮಳೆ ಬಂದರೆ ಸೋರುವ ಅಂಗನವಾಡಿಯಲ್ಲಿ ಅಡುಗೆ ಕೊಠಡಿ, ಶೌಚಾಲಯದ ನಿರ್ಮಾಣ ಅರ್ಧಕ್ಕೇ ನಿಂತಿದೆ.

ಇದು ತಾಲ್ಲೂಕಿನ ಮುದುವತ್ತಿ ಗ್ರಾಮ ಪಂಚಾಯಿತಿಗೆ ಸೇರಿದ ಚಿಕ್ಕನಹಳ್ಳಿಯ ಅಂಗನವಾಡಿ ದುಃಸ್ಥಿತಿ. ಹಾಲು, ಮೊಟ್ಟೆಯ ವಿಷಯಕ್ಕೆ ಬಂದರೆ ತಾಲ್ಲೂಕಿನ ಬಹುತೇಕ ಅಂಗನವಾಡಿಗಳಲ್ಲಿ ಇದೇ ಸ್ಥಿತಿ ಇದೆ. ಅಪೌಷ್ಟಿಕ ಮಕ್ಕಳಿಗೆ ಹಾಲು ಪೂರೈಕೆಯಾಗುತ್ತಿಲ್ಲ.ಅಂಗನವಾಡಿಗಳಿಗೆ ಸಾಮಗ್ರಿ ಖರೀದಿಯಲ್ಲಿ ಅವ್ಯವಹಾರ ಆರೋಪದ ಮೇಲೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರವೀಂದ್ರ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಆ ಸ್ಥಾನಕ್ಕೆ ಬರಲು ಇತರೆ ಅಧಿಕಾರಿಗಳು ಹಿಂಜರಿಯುತ್ತಿದ್ದಾರೆ. ಹೀಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧೀಕ್ಷಕ ಆಸಿಫುಲ್ಲಾ ಅವರಿಗೆ ಉಸ್ತುವಾರಿ ನೀಡಲಾಗಿದೆ.15 ಮಕ್ಕಳಿರುವ ಈ ಅಂಗನವಾಡಿಗೆ ಮಂಗಳವಾರ `ಪ್ರಜಾವಾಣಿ~ ಭೇಟಿ ನೀಡಿದ ಸಂದರ್ಭದಲ್ಲಿ 1 ಕೆಜಿ ಸಾಂಬಾರ್ ಪುಡಿ ಪೊಟ್ಟಣ ಮುಗಿದಿತ್ತು. ನಾಳೆಯಿಂದ ಸಾಂಬಾರ್‌ಪುಡಿ ತರಲು ಏನು ಮಾಡಬೇಕು ಎಂಬ ಚಿಂತೆಯಲ್ಲಿದ್ದರು ಶಿಕ್ಷಕಿ ವಿ.ಸುಶೀಲ. ಅಂಗನವಾಡಿಗೆ ದಿನವೂ 150 ಗ್ರಾಂ ಸಾಂಬಾರ್‌ಪುಡಿ ಬೇಕು.ಒಂದು ಕೆಜಿ ಪ್ಯಾಕೆಟ್: ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಾದ ಮಾನಸಾ, ಲಲಿತಾಕ್ಷ ಮತ್ತು ಮೋನಿಷಾಗೆ ಕಳೆದ ಏಪ್ರಿಲ್10ರಂದು 1 ಕೆ.ಜಿಯ ಹಾಲಿನ ಪಾಕೆಟ್ ನೀಡಲಾಗಿತ್ತು. ಅದನ್ನು ಮೇ 21ರವರೆಗೂ ಬಳಸಲಾಯಿತು. (ಪ್ರತಿ ಮಗುವಿಗೆ ದಿನಂಪ್ರತಿ 20ಗ್ರಾಂ). ನಂತರ ಅಂಗನವಾಡಿಗೆ ಹಾಲುಪುಡಿ ಪೂರೈಕೆಯಾಗಲೇ ಇಲ್ಲ. ಇತ್ತೀಚೆಗೆ ಅತ್ತೆಮನೆ ಸೇರಿದ ಸ್ಥಳೀಯ ಬಾಣಂತಿಯೊಬ್ಬರ ಮಗುವೂ ಸೇರಿದಂತೆ ನಾಲ್ವರಿಗೆ ಹಾಲು ಕೊಡುತ್ತಿಲ್ಲ. ಪೂರೈಕೆಯಾದಾಗ ಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸುಶೀಲ ಹೇಳಿದರು.ಮೊಟ್ಟೆ ಖರೀದಿ:
ಮಾರ್ಚ್ 28ರಿಂದ ಮೊಟ್ಟೆ ವಿತರಣೆ ಶುರುವಾಗಿದೆ. ಆದರೆ ಅಂದಿನಿಂದಲೂ ತಮ್ಮ ಕೈಯಿಂದಲೇ ಕಾಸು ಹಾಕಿ ಮೊಟ್ಟೆ ಖರೀದಿಸಿ ಮಕ್ಕಳಿಗೆ ನೀಡುತ್ತಿದ್ದಾರೆ. ಅದರ ವೋಚರ್‌ಗಳನ್ನು ಪಡೆದ ಇಲಾಖೆ ಇದುವರೆಗೂ ಹಣ ನೀಡಿಲ್ಲ.ಖಾತೆ ಕ್ಯಾತೆ: ಮೂವರು ಅಪೌಷ್ಟಿಕ ಮಕ್ಕಳಿಗೆಂದು ಸುಮಾರು ಮೂರು ಸಾವಿರ ರೂಪಾಯಿ ಮೌಲ್ಯದ ಔಷಧಿಯನ್ನೂ ತಮ್ಮ ಹಣದಿಂದಲೇ ಖರೀದಿಸಿ ಅವರು ನೀಡಿದ್ದರು. ಆ ಹಣವನ್ನು ಮಕ್ಕಳ ಪೋಷಕರ ಹೆಸರಿಗೆ ಚೆಕ್ ರೂಪದಲ್ಲಿ ಇಲಾಖೆ ನೀಡಿತ್ತು.ಪೋಷಕರ ಹೆಸರಿನಲ್ಲಿ ವಕ್ಕಲೇರಿ ಶಾಖೆಯ ಕೆನರಾ ಬ್ಯಾಂಕ್‌ನಲ್ಲಿ ಖಾತೆ ತೆರೆಯಲು ರೂ.500 ಮುಂಗಡ ಹಣವನ್ನು ಬ್ಯಾಂಕ್ ಕೇಳುತ್ತಿದೆ. ಪೋಷಕರು ಖಾತೆ ತೆರೆಯಲು ಸಾಧ್ಯವಾಗಿಲ್ಲ. ತಮ್ಮ ಹಣ ಇನ್ನೂ ಕೈಸೇರಿಲ್ಲ ಎಂದು ಅವರು ಅಲವತ್ತುಕೊಂಡರು.ಎಲ್ಲೆಡೆ ಇದೇ ಸ್ಥಿತಿ:
ಮುದುವತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಲಕ್ಷ್ಮಿಪುರ, ನೆರ‌್ನಹಳ್ಳಿ, ದಂಡಿಗ್ಯಾನಹಳ್ಳಿ, ಮುದುವತ್ತಿ, ಜಂಗಾಲಹಳ್ಳಿ, ಪಾರ್ಶ್ವಗಾನಹಳ್ಳಿ, ಚಿನ್ನಾಪುರ, ಶೆಟ್ಟಿಕೊತ್ತನೂರು ಮತ್ತು ಶೆಟ್ಟಿಗಾನಹಳ್ಳಿಯಲ್ಲಿರುವ ಅಂಗನವಾಡಿಗಳಲ್ಲೂ ಇಂಥದ್ದೇ ಸ್ಥಿತಿ ಇದೆ ಎನ್ನುತ್ತಾರೆ ಆದಿಮ ಶಕ್ತಿ ವಿದ್ಯಾರ್ಥಿ ಯುವಜನ ವೇದಿಕೆಯ ಹೂಹಳ್ಳಿ ನಾಗರಾಜ್.ಪ್ರಸ್ತುತ ಗ್ರಾಮ ಪಂಚಾಯಿ ವ್ಯಾಪ್ತಿಯ ಅಂಗನವಾಡಿಗಳಲ್ಲಿ ಕಳೆದ ಒಂದು ವರ್ಷದಿಂದ ಅಪೌಷ್ಟಿಕ ಮಕ್ಕಳ ಬಗ್ಗೆ ಅಧ್ಯಯನ ನಡೆಸುತ್ತಿರುವ ಅವರು, ಅಪೌಷ್ಟಿಕ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗಮನ ಹರಿಸುತ್ತಿಲ್ಲ ಎಂದು ಆರೋಪಿಸುತ್ತಾರೆ.`ಮೊಟ್ಟೆ ಹಣ ಖಾತೆಗೆ~

ಕೋಲಾರ:
ಅಪೌಷ್ಟಿಕ ಮಕ್ಕಳಿಗೆ ಅಂಗನವಾಡಿ ಶಿಕ್ಷಕಿಯರು ಖರೀದಿಸಿ ನೀಡಿರುವ ಮೊಟ್ಟೆಯ ಹಣವನ್ನು ಕೂಡಲೇ ಜಮಾ ಮಾಡಲು ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಪ್ರಭಾರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಆಸಿಫುಲ್ಲಾ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.~ಹಾಲಿನ ಪುಡಿಯು ಮೇಲ್ವಿಚಾರಕರ ಬಳಿಯೇ ಉಳಿದಿದೆ. ಅದನ್ನು ಕೂಡಲೇ ಅಂಗನವಾಡಿಗೆ ಪೂರೈಸಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.