ಸೋಮವಾರ, ಮೇ 17, 2021
27 °C

ಅಂಗನವಾಡಿಯಿಂದ ದೂರ ಉಳಿದ ಸಿಳ್ಳೆಕ್ಯಾತರ ಮಕ್ಕಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ಇಲ್ಲಿನ ವೆಲ್ಲೆಸ್ಲಿ ಸೇತುವೆ ಬಳಿ, ಕಾವೇರಿ ನದಿ ದಂಡೆಯಲ್ಲಿ 15ಕ್ಕೂ ಹೆಚ್ಚು ಅಲೆಮಾರಿ ಸಿಳ್ಳೆಕ್ಯಾತ ಜಾತಿಯ ಕುಟುಂಬಗಳು ಕಳೆದ 6 ತಿಂಗಳುಗಳಿಂದ ಬೀಡುಬಿಟ್ಟಿದ್ದು, ಈ ಕುಟುಂಬಗಳ 12ಕ್ಕೂ ಹೆಚ್ಚು ಮಕ್ಕಳು ಶಾಲೆ, ಅಂಗನವಾಡಿಗಳಿಂದ ದೂರವೇ ಉಳಿದಿವೆ.  ಕೂದಲು ವ್ಯಾಪಾರ ಮಾಡಲು ಹಾಸನ ಜಿಲ್ಲೆಯ ಅಣತಿ, ದಿಡಗ, ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಕೋಡಿಹಳ್ಳಿ ಇತರೆಡೆಗಳಿಂದ ಬಂದಿರುವ ಸಿಳ್ಳೆಕ್ಯಾತರು ಪ್ಲಾಸ್ಟಿಕ್ ಹೊದಿಕೆಯ ಟೆಂಟ್ ನಿರ್ಮಿಸಿಕೊಂಡು ಇಲ್ಲಿ ಬೀಡುಬಿಟ್ಟಿದ್ದಾರೆ. ಬೆಳಗಿನಿಂದ ಸಂಜೆವರೆಗೆ ಹಳ್ಳಿ ಹಳ್ಳಿಗಳನ್ನು ಸುತ್ತಿ ತಲೆ ಕೂದಲು ಸಂಗ್ರಹಿಸಿ ತಂದು ಇಲ್ಲಿನ ಮಧ್ಯವರ್ತಿಗೆ ಮಾರಾಟ ಮಾಡುತ್ತಾರೆ. ಹಾಗೆ ಹಳ್ಳಿಗಳಿಗೆ ಹೋಗುವಾಗ ತಮ್ಮ ಕುಲಕಸುಬು ಕಲಿಸಲು ಮಕ್ಕಳನ್ನೂ ಜತೆಯಲ್ಲಿ ಕರೆದೊಯ್ಯುತ್ತಾರೆ.ಸಣ್ಣ ಮಕ್ಕಳನ್ನು ಟೆಂಟ್‌ಗಳಲ್ಲಿ ಬಿಟ್ಟು ಹೋಗುತ್ತಾರೆ. ಈ ಮಕ್ಕಳನ್ನು ಶಾಲೆ ಇಲ್ಲವೆ ಅಂಗನವಾಡಿ ಕೇಂದ್ರಗಳಿಗೆ ಕಳುಹಿಸುವ ಪ್ರಯತ್ನ ಮಾಡಿಲ್ಲ. `ಪಟ್ಟಣದಲ್ಲಿ ಖಾಸಗಿ ಸಂಸ್ಥೆಯೊಂದು ನಡೆಸುತ್ತಿರುವ ಬಾಲಕಾರ್ಮಿಕ ಶಾಲೆಗೆ ಇಲ್ಲಿಂದ 4 ಮಕ್ಕಳನ್ನು ಕಳುಹಿಸುತ್ತಿದ್ದು, ಊಟ ಕೊಟ್ಟು ಸಂಜೆ ವೇಳೆಗೆ ಮನೆಗೆ ಕಳುಹಿಸುತ್ತಾರೆ' ಎಂದು ಅಲೆಮಾರಿ ಕುಟುಂಬದ ಆಶಾ ಹೇಳುತ್ತಾರೆ. ಆದರೆ ಇಲ್ಲಿ 15ಕ್ಕೂ ಹೆಚ್ಚು ಮಕ್ಕಳಿದ್ದು, ಸಾಕಷ್ಟು ಮಕ್ಕಳು ಶಿಕ್ಷಣದಿಂದ ವಂಚಿತವಾಗಿವೆ.  ಗರ್ಭಿಣಿಯರು, ಬಾಣಂತಿಯರು ಹಾಗೂ 6 ವರ್ಷದ ಒಳಗಿನ ಮಕ್ಕಳನ್ನು ಗುರುತಿಸಿ ಪೌಷ್ಟಿಕ ಆಹಾರ ನೀಡುವುದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜವಾಬ್ದಾರಿ. ಆದರೆ ಇಲ್ಲಿನ 6 ವರ್ಷದ ಒಳಗಿನ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ದಾಖಲು ಮಾಡಿಕೊಂಡಿಲ್ಲ. ಶಿಕ್ಷಣ ಹಾಗೂ ಪೌಷ್ಟಿಕ ಆಹಾರ ಕೂಡ ಸಿಗುತ್ತಿಲ್ಲ. ಹಾಗಾಗಿ ಟೆಂಟ್‌ಗಳಲ್ಲಿನ ಮಕ್ಕಳು ಮೈ ತುಂಬಾ ಬಟ್ಟೆಯೂ ಇಲ್ಲದೆ, ಮಣ್ಣಿನಲ್ಲಿ ಆಟವಾಡುತ್ತಾ ಕಾಲ ಕಳೆಯುತ್ತಿವೆ. ಬಿರುಗಾಳಿಗೆ ಹಾರಿ ಹೋಗುವಂತಿರುವ ಟೆಂಟ್‌ಗಳ ಮುಂದೆ ದಪ್ಪ ಹೊಟ್ಟೆಯ, ಸಣಕಲು ಕೈ, ಕಾಲುಗಳ ಮಕ್ಕಳು ಕಾಣ ಸಿಗುತ್ತವೆ.  ಮೊಬೈಲ್ ಅಂಗನವಾಡಿ: `ಅಲೆಮಾರಿ ಸಿಳ್ಳೆಕ್ಯಾತ ಜನರು ತಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಕಳುಹಿಸಲು ಒಪ್ಪುತ್ತಿಲ್ಲ. ಇಂತಹ ಅಲೆಮಾರಿ ಜನಾಂಗದ ಮಕ್ಕಳ ಅನುಕೂಲಕ್ಕಾಗಿ ಮೊಬೈಲ್ (ಸಂಚಾರಿ) ಅಂಗನವಾಡಿ ಕೇಂದ್ರ ತೆರೆಯುವ ಉದ್ದೇಶ ಇದೆ. ಮಕ್ಕಳು ಇದ್ದಲ್ಲಿಗೇ ತೆರಳಿ ಪೌಷ್ಟಿಕ ಆಹಾರ ನೀಡುವ ಯೋಜನೆಗೆ ಶೀಘ್ರ ಚಾಲನೆ ನೀಡಲಾಗುವುದು' ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಮಂಜುನಾಥ್ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.