ಅಂಗನವಾಡಿ ಅಕ್ಕಂದಿರ ಅನ್ನಕ್ಕೆ ಸರ್ಕಾರದ ವಕ್ರದೃಷ್ಟಿ

7

ಅಂಗನವಾಡಿ ಅಕ್ಕಂದಿರ ಅನ್ನಕ್ಕೆ ಸರ್ಕಾರದ ವಕ್ರದೃಷ್ಟಿ

Published:
Updated:

ಇನ್ನು ಮುಂದೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಮುಷ್ಕರ, ಪ್ರತಿಭಟನೆ ಮಾಡಿದಲ್ಲಿ ಅವರ ಗೌರವಧನ ಕಡಿತಗೊಳಿಸಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎಚ್ಚರಿಸಿದೆ.ಆಳುವ ಸರ್ಕಾರ ಯಾವುದೇ ಇರಲಿ, ಸರ್ಕಾರದ ವಿವಿಧ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಪಾತ್ರ ಮಹತ್ವದ್ದು. ಗ್ರಾಮೀಣ ಪ್ರದೇಶಗಳಲ್ಲಂತೂ ಮಹಿಳೆ ಮತ್ತು ಮಕ್ಕಳ ಸಮಗ್ರ ಅಭಿವೃದ್ಧಿ ಕಾರ್ಯಕ್ರಮದ ಅನುಷ್ಠಾನದಲ್ಲಿ ಅಂಗನವಾಡಿ ಕೇಂದ್ರಗಳೇ ಜೀವಾಳ.1975ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರ 20 ಅಂಶಗಳ ಕಾರ್ಯಕ್ರಮದಲ್ಲಿ ‘ಸಮಗ್ರ ಶಿಶು ಅಭಿವೃದ್ಧಿ ಯೋಜನೆ’ (ಐಸಿಡಿಎಸ್) ಅನುಷ್ಠಾನಕ್ಕಾಗಿ ಅಂಗನವಾಡಿ ಕೇಂದ್ರಗಳಿಗೆ ಚಾಲನೆ ನೀಡಲಾಯಿತು. ಅಂದಿನಿಂದ ಇಂದಿನವರೆಗೆ ಸುಮಾರು 35ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಅತ್ಯಲ್ಪ ಗೌರವಧನ ಪಡೆದರೂ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಆ ಶ್ರಮಕ್ಕೆ ತಕ್ಕಂತೆ ಸಂಬಳ ಪಡೆಯುವುದು ಅವರ ಹಕ್ಕು. ಆದರೆ, ಸರ್ಕಾರ ಈಗ ಅಂತಹ ಹಕ್ಕನ್ನೇ ಕಸಿದುಕೊಳ್ಳುವ ಮೂಲಕ ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ತರಲು ಹೊರಟಿದೆ. ಈ ಮೂಲಕ ಸರ್ಕಾರ ಅಂಗನವಾಡಿ ಹೆಣ್ಣುಮಕ್ಕಳ ಉಣ್ಣುವ ಅನ್ನಕ್ಕೆ ಕನ್ನ ಹಾಕಲು ಹೊರಟಿದೆ.ಶಾಲಾಪೂರ್ವ ಶಿಕ್ಷಣ, ಅವಕಾಶವಂಚಿತ ಮಕ್ಕಳನ್ನು ಮುಖ್ಯವಾಹಿನಿಗೆ ತರುವುದು. ಜನಗಣತಿ, ರಾಷ್ಟ್ರೀಯ ಕುಟುಂಬ ಸೌಲಭ್ಯ ಯೋಜನೆ, ಹಿರಿಯ ವಯಸ್ಸಿನ ವಿಶ್ರಾಂತಿ ಯೋಜನೆ, ಹಸಿರು, ಕೆಂಪು ಕಾರ್ಡ್ ವಿತರಿಸುವಲ್ಲಿ ಅರ್ಹ ಫಲಾನುಭವಿಗಳ ಗುರುತಿಸುವಿಕೆ, ಗ್ರಾಮೀಣ ಹಾಗೂ ಬುಡಕಟ್ಟು ಯೋಜನೆ, ಸಾಕ್ಷರತಾ ಯೋಜನೆ, ಪಲ್ಸ್ ಪೋಲಿಯೊ, ಕುಷ್ಠ, ಕ್ಷಯ, ಮಲೇರಿಯಾ ನಿರ್ಮೂಲನಾ ಕಾರ್ಯಕ್ರಮ, ಏಡ್ಸ್ ನಿಯಂತ್ರಣ ಸೇರಿದಂತೆ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಿರುವ ಹಲವು ಕಾರ್ಯಕ್ರಮಗಳ ಅನುಷ್ಠಾನಕ್ಕೆ ರಾಜ್ಯದಲ್ಲಿ ಸುಮಾರು 1,25,000 ಕಾರ್ಯಕರ್ತೆಯರು ದುಡಿಯುತ್ತಿದ್ದಾರೆ.ಮನೆಯಲ್ಲಿ ಒಂದು ಮಗುವನ್ನೇ ನೋಡಿಕೊಳ್ಳಲು ಹರಸಾಹಸ ಪಡುವ ಕೆಲ ತಾಯಂದಿರು ಇರುವಾಗ, ಪ್ರತಿನಿತ್ಯ 30-40 ಪುಟ್ಟ ಮಕ್ಕಳನ್ನು ಸಣ್ಣ ಸೂರಿನಡಿ ಜೋಪಾನವಾಗಿ ಆರೈಕೆ ಮಾಡುವ, ಮಕ್ಕಳ ಆಟ-ಪಾಠ-ಊಟ, ಆರೋಗ್ಯ ಇನ್ನಿತರ ಚಟುವಟಿಕೆಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ ಈ ಹೆಣ್ಣುಮಕ್ಕಳಿಗೆ ಸರ್ಕಾರ ನೀಡುವ ಗೌರವಧನವಾದರೂ ಎಷ್ಟು? ಕೇವಲ ರೂ 1,500ರಿಂದ 2,500 ಮಾತ್ರ. ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿರುವ ಈ ದಿನಗಳಲ್ಲಿ ಇಷ್ಟು ಕಡಿಮೆ ಸಂಬಳದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಜೀವನ ಸಾಗಿಸಬೇಕಾಗಿದೆ.ಪಕ್ಕದ ಕೇರಳ, ತಮಿಳುನಾಡಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ರೂ 5 ಸಾವಿರ ಗೌರವಧನ, ಅಂಗನವಾಡಿ ಕೇಂದ್ರಗಳಲ್ಲಿ ಕನಿಷ್ಠ ಮೂಲಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಗೌರವಧನ ಒತ್ತಟ್ಟಿಗಿರಲಿ, ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ, ಸರಿಯಾದ ಸಮಯಕ್ಕೆ ಅಡುಗೆ ಅನಿಲ ಪೂರೈಕೆ, ಮಕ್ಕಳಿಗೆ ಉತ್ಕೃಷ್ಟಮಟ್ಟದ ಪೌಷ್ಟಿಕ ಆಹಾರ ನೀಡಿದರೆ ಸಾಕು ಎನ್ನುತ್ತಾರೆ ಕಾರ್ಯಕರ್ತೆಯರು. ಹಾಗೆ ನೋಡಿದರೆ, ಸರ್ಕಾರ ಈ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಇದುವರೆಗೆ ಪರಿಗಣಿಸಿಯೇ ಇಲ್ಲ. ಪರಿಸ್ಥಿತಿ ಹೀಗಿರುವಾಗ, ಮುಷ್ಕರ, ಪ್ರತಿಭಟನೆ ನಡೆಸಬೇಡಿ ಎಂದು ಆದೇಶ ಹೊರಡಿಸುವ ನೈತಿಕತೆಯಾದರೂ ಸರ್ಕಾರಕ್ಕೆ ಇದೆಯೇ? ಎಂಬುದು ಹೋರಾಟಗಾರರ ಪ್ರಶ್ನೆ.ಗಂಡನಿಂದ ದೂರವಾದವರು, ವಿಧವೆಯರು, ಪರಿತ್ಯಕ್ತೆಯರು, ಒಬ್ಬಂಟಿ ಹೆಣ್ಣುಮಕ್ಕಳೇ ಹೆಚ್ಚಾಗಿ ಕಾರ್ಯ ನಿರ್ವಹಿಸುವ ಅಂಗನವಾಡಿ ಕೇಂದ್ರಗಳಲ್ಲಿ ಕನಿಷ್ಠ ಮೂಲಸೌಕರ್ಯ ಕಲ್ಪಿಸಲು ಆಗದ ಪ್ರಭುತ್ವ ಅವರ ಹೋರಾಟದ ಹಕ್ಕನ್ನೂ ಕಸಿಯುತ್ತಿರುವುದು ‘ಹಿಟ್ಲರ್‌ಗಿರಿ’ಯನ್ನು ನೆನಪಿಸುತ್ತದೆ. ಇಂದು ಅಂಗನವಾಡಿ ಕಾರ್ಯಕರ್ತೆಯರ ಹೋರಾಟದ ಹಕ್ಕನ್ನು ಕಸಿಯಲು ಯತ್ನಿಸಿರುವ ಸರ್ಕಾರ, ಮುಂದೆ ಸಾಮಾಜಿಕ, ಜನಪರ ಚಳವಳಿ ಮಾಡುವವರತ್ತಲೂ ಈ ಕಾಕದೃಷ್ಟಿ ಬೀರಲಾರದೆ ಇರುತ್ತದೆಯೇ?ಹೆಣ್ಣುಮಕ್ಕಳು ಎಂಬ ಕಾರಣಕ್ಕಾಗಿಯೇ ಗ್ರಾಮೀಣ ಮತ್ತು ನಗರದ ಕೆಲ ಪ್ರದೇಶಗಳಲ್ಲಿ ಇಂದಿಗೂ ಹೇಳಲಾಗದ ಮಾನಸಿಕ ಯಾತನೆಯೊಂದಿಗೆ ನೋವು ನುಂಗಿಕೊಂಡು ಈ ಅಕ್ಕಂದಿರು ಸ್ವಾಭಿಮಾನ ಬದುಕು ಸಾಗಿಸುತ್ತಿದ್ದಾರೆ. ಅಂತಹ ಸ್ವಾಭಿಮಾನಿ ಬದುಕಿಗಾಗಿ, ನಿತ್ಯದ ತುತ್ತಿಗಾಗಿ ಹೋರಾಟದ ಹಾದಿ ಹಿಡಿಯುವ ಈ ಅಕ್ಕಂದಿರ ಕಷ್ಟ-ಸುಖವನ್ನು ಸರ್ಕಾರದ ಉನ್ನತಮಟ್ಟದ ಅಧಿಕಾರಿಗಳಾಗಲೀ, ಸಚಿವರಾಗಲೀ ಕೇಳುವ ಸೌಜನ್ಯವನ್ನೂ ತೋರಿಲ್ಲದಿರುವುದು ದುರದೃಷ್ಟಕರ.ಪ್ರತಿ ಬಾರಿ ಕಾರ್ಯಕರ್ತೆಯರು ಸಂಬಳ ಹೆಚ್ಚಳ, ಮೂಲಸೌಕರ್ಯಕ್ಕೆ ಆಗ್ರಹಿಸಿ ಪ್ರತಿಭಟಿಸಿದಾಗ ಕೇವಲ 100, 200ರೂಪಾಯಿ ಸಂಬಳ ಹೆಚ್ಚಿಸುವ ಸರ್ಕಾರ, ಅವರ ಸಮಸ್ಯೆಗಳನ್ನು ಅರ್ಥೈಸಿಕೊಳ್ಳಲು ವಿಫಲವಾಗಿದೆ. ಇತ್ತೀಚೆಗಷ್ಟೇ 500 ರೂಪಾಯಿ ಹೆಚ್ಚಿಸುವುದಾಗಿ ಭರವಸೆ ನೀಡಿರುವ ಸರ್ಕಾರ, ಬೆಳಿಗ್ಗೆ 9.30ರಿಂದ ಸಂಜೆ 4.30ರವರೆಗೆ ದುಡಿಯಲು ಹೇಳಿದೆ. ಹೊಟ್ಟೆ ತುಂಬಿದವರು ಎಂದಿಗೂ ಪ್ರತಿಭಟನೆ, ಮುಷ್ಕರಕ್ಕೆ ಮುಂದಾಗುವುದಿಲ್ಲ. ಬಡತನ, ಹಸಿವು ತಾಳಲಾರದವರು ಅನಿವಾರ್ಯವಾಗಿ ಹೋರಾಟದ ಹಾದಿ ಹಿಡಿಯುವುದು ಸಹಜ. ಇಂತಹ ಸಂದರ್ಭಗಳಲ್ಲಿ ಪ್ರಭುತ್ವ ಸಮಾಧಾನಚಿತ್ತದಿಂದ ಹೋರಾಟಗಾರರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದು ನ್ಯಾಯ. ಆದರೆ, ಹಸಿವಿನಿಂದ ಅಳುವ ಮಗುವಿನ ದನಿ ಕೇಳಲಾರದೇ ತಾಯಿಯೇ ಮಗುವಿನ ಗಂಟಲು ಒತ್ತಿ ಹಿಡಿದರೆ ಆ ಕ್ಷಣಕ್ಕೆ ಅಳುವಿನ ಜತೆ ಮಗುವಿನ ಉಸಿರೂ ನಿಂತು ಹೋದೀತು?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry