ಶನಿವಾರ, ಮೇ 15, 2021
24 °C

ಅಂಗನವಾಡಿ ಆಹಾರದಲ್ಲಿ ಹುಳು-ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಳ್ಯ: ಆಲೆಟ್ಟಿ ಗ್ರಾಮದ ಪರಿವಾರಕಾನ ಅಂಗನವಾಡಿ ಕೇಂದ್ರದಿಂದ ಮಕ್ಕಳಿಗೆ ವಿತರಿಸಿದ ಆಹಾರದಲ್ಲಿ ಹುಳುಗಳು ಪತ್ತೆಯಾಗಿದ್ದು, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ರಾಧಾಕೃಷ್ಣ ಪರಿವಾರಕಾನ ಸುಳ್ಯದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದ್ದಾರೆ.1 ವರ್ಷದ ಒಳಗಿನ ಮಕ್ಕಳಿಗೆ ನೀಡುವ ಬಹುಧಾನ್ಯ ನ್ಯೂಟ್ರಿಮಿನ್ ಮಿಕ್ಸ್‌ನ ಪ್ಯಾಕೇಟ್‌ನಲ್ಲಿ ಹುಳುಗಳು ಪತ್ತೆಯಾಗಿದ್ದು, ಅದನ್ನು ಮಕ್ಕಳ ಪೋಷಕರು ಪಂಚಾಯಿತಿ ಸದಸ್ಯರ ಗಮನಕ್ಕೆ ತಂದಿದ್ದರು. ಅಲ್ಲದೆ ಪ್ಯಾಕೇಟಿನ ಮೇಲೆ ತಯಾರಾದ ದಿನಾಂಕ ಹಾಗೂ ಅವಧಿಯನ್ನು ನಮೂದಿಸಿಲ್ಲದೇ ಇರುವುದೂ ತಯಾರಕರ ಬೇಜವಾಬ್ದಾರಿಯನ್ನು ಸೂಚಿಸುತ್ತದೆ ಎಂದವರು ಆರೋಪಿಸಿದ್ದಾರೆ.ಈ ಕುರಿತು ಸುಳ್ಯ ಸಿಡಿಪಿಒ ನಾರಾಯಣ ನೀರಬಿದರೆಯ ಅವರನ್ನು ಸಂಪರ್ಕಿಸಿದಾಗ, ಅಂಗನವಾಡಿಗಳಿಗೆ ಅಗತ್ಯವಿರುವ ಎಲ್ಲಾ ಆಹಾರ ಸಾಮಾಗ್ರಿಗಳನ್ನು ಪುತ್ತೂರು ಸಂಟ್ಯಾರ್‌ನಲ್ಲಿರುವ ಮಹಿಳಾ ಫುಡ್ ಪ್ರೊಡಕ್ಟ್ ಮತ್ತು ಟ್ರೈನಿಂಗ್ ಸೆಂಟರ್‌ನಲ್ಲಿ ತಯಾರಿಸಿ ಪ್ಯಾಕ್ ಮಾಡಲಾಗುತ್ತದೆ ಮತ್ತು ಅಲ್ಲಿಂದ ತಿಂಗಳಿಗೆ ಬೇಕಾಗುವಷ್ಟು ತಾಲ್ಲೂಕಿನ ಗೋದಾಮಿಗೆ ತರಲಾಗುತ್ತದೆ. ಪ್ರತಿ ತಿಂಗಳೂ ಸುಳ್ಯದ ಗೋದಾಮಿನಿಂದ ಎಲ್ಲಾ ಅಂಗನವಾಡಿಗಳಿಗೆ ಆಹಾರದ ಪ್ಯಾಕೇಟ್‌ಗಳನ್ನು ವಿತರಿಸಲಾಗುತ್ತದೆ.ಇಲ್ಲಿಯ ಗೋದಾಮಿನಲ್ಲಿ ಯಾವುದೇ ಉಳಿಕೆಯಾಗುವುದಿಲ್ಲ. ಅಂಗನವಾಡಿಗಳಲ್ಲೂ ತಿಂಗಳಿಗೆ ಆಗತ್ಯವಿರುವಷ್ಟೇ ವಿತರಿಸುವುದು. 1 ಕೆಜಿ ಪ್ಯಾಕೇಟ್‌ಗಳನ್ನು ತೆರೆದು ವಿತರಿಸುವುದಿಲ್ಲ. ಮಕ್ಕಳ ಪೋಷಕರೇ ಅದನ್ನು ತೆರೆಯುತ್ತಾರೆ. ಅದನ್ನು ಗಾಳಿಯಾಡದ ಡಬ್ಬದಲ್ಲಿ ಇಡದೇ ಇದ್ದರೆ ಅದರಲ್ಲೂ ಹುಳುಗಳು ಆಗುವ ಸಾಧ್ಯತೆ ಇದೆ ಎಂದರು.30 ಟನ್ ಸಿದ್ಧ ಆಹಾರ ತಯಾರಿಸುವ ಅಗತ್ಯವಿರುವ ತಾಲ್ಲೂಕುಗಳಲ್ಲಿ ಮಹಿಳಾ ಫುಡ್ ಪ್ರೊಡಕ್ಟ್ ಮತ್ತು ಟ್ರೈನಿಂಗ್ ಸೆಂಟರ್‌ಗಳನ್ನು ಸರ್ಕಾರ ಆರಂಭಿಸಿದೆ. ಆದರೆ ಸುಳ್ಯಕ್ಕೆ ತಿಂಗಳಿಗೆ 25 ಟನ್ ಮಾತ್ರ ಅಗತ್ಯವಿದೆ. ಹಾಗಾಗಿ ಪುತ್ತೂರು ಕೇಂದ್ರದಲ್ಲೇ ಸುಳ್ಯ ತಾಲ್ಲೂಕಿಗೆ ಅಗತ್ಯವಿರುವ ಸಿದ್ಧ ಆಹಾರತಯಾರಿಸಲಾಗುತ್ತದೆ. ಅದರ ಸಂಪೂರ್ಣ ಮೇಲ್ವಿಚಾರಣೆ ಪುತ್ತೂರಿನ ಸಿಡಿಪಿಒ ಅವರದು.ಕಳೆದ ತಿಂಗಳು ಅಲ್ಲಿಗೆ ಬಂದ ಗೋಧಿಯಲ್ಲಿ ಹುಳಗಳಿದ್ದವು. ಅದನ್ನು ಹಿಂದಕ್ಕೆ ಕಳುಹಿಸಿದ್ದರೂ 2ನೇ ಬಾರಿಯೂ ಹುಳುಗಳಿರುವ ಗೋಧಿ ಕಳುಹಿಸಿದ್ದಾರೆ. ಮತ್ತೆ ಹಿಂದಿರುಗಿಸಿದ್ದರೂ 3ನೇ ಬಾರಿ ಕಳುಹಿಸಿದ ಗೋಧಿಯಲ್ಲೂ ಹುಳುಗಳು ಇದ್ದವು ಎಂದು ಮೇಲ್ವಿಚಾರಕಿ ತಿಳಿಸಿದ್ದಾರೆ. ಸುಳ್ಯದ ಗೋದಾಮಿಗೆ ಬಂದಿರುವ ಗೋಧಿಯಲ್ಲೂ ಹುಳುಗಳಿವೆ ಎಂದವರು ಹೇಳಿದರು.ಬಾಳುಗೋಡು ಕೇಂದ್ರದಿಂದ ವಿತರಿಸಿದ ಪ್ಯಾಕೇಟ್‌ಗಳಲ್ಲೂ ಹುಳುಗಳಿರುವ ಬಗ್ಗೆ ದೂರುಗಳು ಬಂದಿವೆ. ಹುಳುಗಳು ಇಲ್ಲದ ಉತ್ತಮ ಆಹಾರ ಪೂರೈಸಬೇಕೆಂದು ಸುಳ್ಯ ತಾಲ್ಲೂಕು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಸಂಘದ ಪದಾಧಿಕಾರಿಗಳು ಸಿಡಿಪಿಒ ಅವರಿಗೆ ಮನವಿ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.