ಬುಧವಾರ, ಮೇ 18, 2022
27 °C

ಅಂಗನವಾಡಿ ಕಾರ್ಯಕರ್ತೆಯರಿಂದ ಜಿ.ಪಂ. ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಅಂಗನವಾಡಿ ನೌಕರರಿಗೆ ಸ್ವಾವಲಂಬನಾ ರಾಷ್ಟ್ರೀಯ ಪಿಂಚಣಿ ಯೋಜನೆ ಜಾರಿ ಬೇಡ, ಹಲವು ದಶಕಗಳ ಕಾಲ ಸೇವೆ ಸಲ್ಲಿಸಿದ ನೌಕರರಿಗೆ ಪರಿಹಾರ ಕೊಡಬೇಕು, ನಿವೃತ್ತಿ ವೇತನ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿನೂರಾರು ಅಂಗನವಾಡಿ ಕಾರ್ಯಕರ್ತೆಯರು ಜಿಲ್ಲಾ ಪಂಚಾಯಿತಿಗೆ ಬುಧವಾರ ಮುತ್ತಿಗೆ ಹಾಕಿದರು.ಕರ್ನಾಟಕ ರಾಜ್ಯ ಸಿಐಟಿಯು ಸಂಯೋಜಿತ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಮಧ್ಯಾಹ್ನ ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ರ್ಯಾಲಿ ನಡೆಯಿತು.ಸ್ವಾವಲಂಬಿ ಪಿಂಚಣಿ ಯೋಜನೆ ಅಂಗನವಾಡಿ ನೌಕರರ ಹಿತಾಸಕ್ತಿಗೆ ಮಾರಕ. ಈಗಾಗಲೇ ಸಂಘಟನೆಯು ಇದನ್ನು ವಿರೋಧಿಸಿ ನವೆಂಬರ್ 15ರಿಂದ ನಾಲ್ಕು ದಿನ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದೆ. ಆದರೆ ಇಲಾಖೆ ನಿರ್ದೇಶನಾಲಯ ಎಲ್ಲ ನೌಕರರಿಗೂ ಈ ಯೋಜನೆಯನ್ನು ಬಲವಂತದಿಂದ ಅನುಷ್ಠಾನ ಮಾಡುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಸಹಿ ಪಡೆಯುತ್ತಿರುವ ಧೋರಣೆ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.ಹೊಸ ಪಿಂಚಣಿ ಯೋಜನೆ ಷೇರು ಮಾರುಕಟ್ಟೆಯ ಹೂಡಿಕೆಯನ್ನು ಆಧರಿಸಿದೆ. ಎನ್‌ಪಿಎಸ್ ಪ್ರಕಾರ ಶೇ.10ರಷ್ಟು ಬಡ್ಡಿ ದರ ನೀಡುವ ಪ್ರಸ್ತಾಪ ಸೇರಿದಂತೆ ಅನೇಕ ಅವೈಜ್ಞಾನಿಕ ನಿರ್ಧಾರಗಳಿವೆ. ಷೇರು ಮಾರುಕಟ್ಟೆ ಮೂಲಕ ಪಿಂಚಣಿ ನಿಧಿಗಳ ವ್ಯವಹಾರ ನಡೆಸಿರುವ ಅಮೆರಿಕ ಮತ್ತು ಐರ್ಲೆಂಡ್‌ಗಳಲ್ಲಿ 26 ಲಕ್ಷ ಕೋಟಿ ನಷ್ಟವಾಗಿದೆ. 12,33,000 ಪಿಂಚಣಿದಾರರು ಬೀದಿಗೆ ಬಿದ್ದಿದ್ದಾರೆ. ಇಂಥದ್ದೇ ಪಿಂಚಣಿ ಯೋಜನೆಯ ಜಾರಿಗೆ ಮುಂದಾಗಿರುವುದು ಖಂಡನೀಯ ಎಂದರು.

ಸರ್ಕಾರ ಕೂಡಲೇ ತನ್ನ ನಿರ್ಧಾರ ವಾಪಸ್ ಪಡೆಯದೇ ಇದ್ದಲ್ಲಿ ಮಾರ್ಚ್‌ನಿಂದ ನಿರಂತರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷೆ ರಂಗಮ್ಮ ಇರಬಗೇರಾ, ಎಚ್ ಪದ್ಮಾ, ಪ್ರಧಾನ ಕಾರ್ಯದರ್ಶಿ ವರಲಕ್ಷ್ಮಿ, ಲಕ್ಷ್ಮಿ, ಬಸಮ್ಮ, ಕಸ್ತೂರಿಬಾಯಿ, ಲಕ್ಷ್ಮಿ, ಶೇಖಮ್ಮ, ಶಾರದಾ, ಗಿರಿಯಪ್ಪ ಪೂಜಾರಿ, ಶೇಕ್ಷಾ ಖಾದ್ರಿ, ಕೆ.ಜಿ ವಿರೇಶ, ಡಿ.ಎಸ್ ಶರಣಬಸವ, ಮಲ್ಲಿಕಾರ್ಜುನ ಹಾಗೂ ಇತರರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.