ಗುರುವಾರ , ಮೇ 13, 2021
16 °C
ಬೇಡಿಕೆ ಈಡೇರಿಕೆಗೆ ಶೀಘ್ರ ಕ್ರಮ

ಅಂಗನವಾಡಿ ಕಾರ್ಯಕರ್ತೆಯರಿಗೆ ಸಚಿವೆ ಉಮಾಶ್ರೀ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಬಹುತೇಕ ಬೇಡಿಕೆಗಳು ಹಣಕಾಸು ಇಲಾಖೆಗೆ ಸಂಬಂಧಿಸಿರುವುದರಿಂದ ಶೀಘ್ರದಲ್ಲೇ ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಿ ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಉಮಾಶ್ರೀ ಹೇಳಿದರು.ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿಯಿಂದ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸರ್ಕಾರ ಹಾಗೂ ಸಮಾಜದ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರದ ಹಲವು ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಶ್ರಮವಹಿಸಿ ದುಡಿಯುತ್ತಿದ್ದಾರೆ. ಇವರ ವಿಶೇಷ ಸೇವೆಯನ್ನು ಸರ್ಕಾರ ಅಗತ್ಯವಾಗಿ ಪರಿಗಣಿಸಲಿದೆ. ಬೇಡಿಕೆಗಳು ನ್ಯಾಯಯುತವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸುತ್ತೇನೆ ಎಂದರು.ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ಅಂಗನವಾಡಿ ಕಾರ್ಯಕರ್ತೆಯರು ಭ್ರಷ್ಟಾಚಾರದಲ್ಲಿ ತೊಡಗಿರುವ ಕೆಳಮಟ್ಟದ ಅಧಿಕಾರಿಗಳೊಂದಿಗೆ ಕೈಜೋಡಿಸದೆ, ಅಂತಹ ಪ್ರಕರಣಗಳ ಬಗ್ಗೆ ದೂರು ನೀಡಬೇಕು. ಯಾವುದೇ ಆಮಿಷ, ಬೆದರಿಕೆಗಳಿಗೆ ಒಳಗಾಗದೆ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಕಿವಿಮಾತು ಹೇಳಿದರು.`ಮಕ್ಕಳ ಭವಿಷ್ಯ ರೂಪಿಸುವ ತಾಯಂದಿರ ಕೆಲಸ ನಿಮ್ಮದಾಗಿದೆ. ಆದಕಾರಣ ಕಾರ್ಯಕರ್ತೆಯರು ತಪ್ಪು ಎಸಗದೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು. ತಪ್ಪು ಮಾಡಿದಲ್ಲಿ ಮಾನವೀಯ ದೃಷ್ಟಿಯಿಂದ ಒಮ್ಮೆ  ಕ್ಷಮಿಸಲಾಗುವುದು. ಪದೇ ಪದೇ ತಪ್ಪು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು' ಎಂದು ಎಚ್ಚರಿಸಿದರು.   ಇದಕ್ಕೂ ಮುನ್ನ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿ ಅಧ್ಯಕ್ಷ  ಜಿ.ಆರ್.ಶಿವಶಂಕರ್ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಕೆಲಸದ ಅವಧಿಯನ್ನು ಸಮಗ್ರ ಬಾಲ ವಿಕಾಸ ಯೋಜನೆಯ ನಿಯಮಾವಳಿ ಪ್ರಕಾರ ಗ್ರಾಮೀಣ ಪ್ರದೇಶಗಳಲ್ಲಿ ಬೆಳಿಗ್ಗೆ 9.30ರಿಂದ 1.30ರವರೆಗೆ ಮತ್ತು ನಗರ ಪ್ರದೇಶಗಳಲ್ಲಿ ಬೆಳಿಗ್ಗೆ 10ರಿಂದ 12ರವರೆಗೆ ನಿಗದಿ ಪಡಿಸಬೇಕು, ಪ್ರತಿ ತಿಂಗಳ 5ನೇ ತಾರೀಖಿನ ಒಳಗೆ ಗೌರವ ಧನ ನೀಡಬೇಕು,60 ವರ್ಷದ ಬಳಿಕ ನಿವೃತ್ತಿ ಹೊಂದಿದವರು ಅನಾರೋಗ್ಯದ ವೇಳೆ ಉಚಿತ ಚಿಕಿತ್ಸೆ ಪಡೆಯಲು ಆರೋಗ್ಯ ಕಾರ್ಡ್ ಹಾಗೂ ವಸತಿ ಯೋಜನೆ ಅಡಿಯಲ್ಲಿ ಖಾಲಿ ನಿವೇಶನ ಇಲ್ಲವೇ ವಸತಿ ನೀಡಲು ಕ್ರಮ ಕೈಗೊಳ್ಳಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವ ಎಚ್.ಎಂ.ರೇವಣ್ಣ ವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.