ಅಂಗನವಾಡಿ ಕಾರ್ಯಕರ್ತೆಯರಿಗೆ ಸಚಿವೆ ಕಿವಿಮಾತು

7

ಅಂಗನವಾಡಿ ಕಾರ್ಯಕರ್ತೆಯರಿಗೆ ಸಚಿವೆ ಕಿವಿಮಾತು

Published:
Updated:
ಅಂಗನವಾಡಿ ಕಾರ್ಯಕರ್ತೆಯರಿಗೆ ಸಚಿವೆ ಕಿವಿಮಾತು

ಬೆಂಗಳೂರು:  `ಅಂಗನವಾಡಿ ಕಾರ್ಯಕರ್ತೆಯರು ಜನರ ವಿಶ್ವಾಸಾರ್ಹತೆ ಕಾಪಾಡಿಕೊಳ್ಳಬೇಕು' ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ಹೇಳಿದರು.ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಒಕ್ಕೂಟವು ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಬೆಂಗಳೂರು ಜಿಲ್ಲಾ ಸಮಿತಿಯ ಎರಡನೇ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಕೆಲವು ಅಂಗನವಾಡಿ ಕಾರ್ಯಕರ್ತೆಯರು ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ವಿತರಿಸಲು ಫಲಾನುಭವಿಗಳಿಂದ ರೂ 2 ಸಾವಿರ ಲಂಚ ಕೇಳಿರುವ ಆರೋಪಗಳು ಕೇಳಿ ಬಂದಿವೆ. ಇಂತಹ ಪ್ರಕರಣಗಳಿಂದ ಅಂಗನವಾಡಿ ಕಾರ್ಯಕರ್ತೆಯರು ಜನರ ವಿಶ್ವಾಸ ಕಳೆದುಕೊಳ್ಳುವಂತಾಗುತ್ತದೆ. ಹೀಗಾಗಿ ತಮ್ಮ ಕೆಲಸಕ್ಕೆ ಕೆಟ್ಟ ಹೆಸರು ತರುವ ಕಾರ್ಯವನ್ನು ಅಂಗನವಾಡಿ ಕಾರ್ಯಕರ್ತೆಯರು ಮಾಡಬಾರದು' ಎಂದು ಅವರು ಹೇಳಿದರು.`ಅಂಗನವಾಡಿ ಕಾರ್ಯಕರ್ತೆಯರು ಕಷ್ಟದ ಪರಿಸ್ಥಿತಿಯಲ್ಲಿ ಬದುಕು ನಡೆಸುತ್ತಿದ್ದಾರೆ. ಹೀಗಾಗಿ ಲಂಚದ ಆರೋಪಗಳು ಕೇಳಿಬಂದರೂ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬಾರದೆಂದು ಅವರನ್ನು ಅಮಾನತು ಮಾಡಿಲ್ಲ. ಇದೇ ಕಾರ್ಯ ಮುಂದುವರಿದರೆ ಮುಂದಿನ ದಿನಗಳಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ' ಎಂದು ಎಚ್ಚರಿಸಿದರು.`ಅಂಗನವಾಡಿ ಕಾರ್ಯಕರ್ತೆಯರು ತಾವು ಕಷ್ಟದಲ್ಲಿ ಬದುಕುತ್ತಿದ್ದೇವೆಂದು ಫಲಾನುಭವಿಗಳಿಗೆ ಅನ್ಯಾಯ ಮಾಡುವುದು ಸರಿಯಲ್ಲ. ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು' ಎಂದರು.`ರಾಜ್ಯದ ಅನೇಕ ಕಡೆ ಅಪೌಷ್ಟಿಕತೆಯಿಂದ ಮಕ್ಕಳು ಸಾಯುತ್ತಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು ಅಂತಹ ಮಕ್ಕಳಿಗೆ ಸರ್ಕಾರ ನೀಡುವ ಪೌಷ್ಟಿಕ ಪದಾರ್ಥಗಳನ್ನು ತಲುಪಿಸಬೇಕು. ಈ ಮೂಲಕ ಅವರ ಆರೋಗ್ಯವನ್ನು ಕಾಪಾಡುವ ಜವಾಬ್ದಾರಿಯನ್ನು ಅರಿಯಬೇಕು' ಎಂದು ಹೇಳಿದರು.`ಅಂಗನವಾಡಿ ಕೇಂದ್ರದ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಸ್ವಚ್ಛತೆ ಇಲ್ಲದ ಪ್ರದೇಶದಲ್ಲಿ ಬೆಳೆಯುವ ಮಕ್ಕಳು ಅನೇಕ ರೋಗಗಳಿಗೆ ತುತ್ತಾಗುತ್ತಾರೆ. ಅನಕ್ಷರಸ್ಥ ಪೋಷಕರಿಗೆ ಸ್ವಚ್ಛತೆ ಹಾಗೂ ಪೌಷ್ಟಿಕತೆಯ ಬಗ್ಗೆ ತಿಳಿವಳಿಕೆ ನೀಡಬೇಕು' ಎಂದರು.ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಒಕ್ಕೂಟದ ಅಧ್ಯಕ್ಷ ಎಚ್.ಕೆ.ರಾಮಚಂದ್ರ ಮಾತನಾಡಿ, `ಅಂಗನವಾಡಿ ಕಾರ್ಯಕರ್ತೆಯರ ಬದುಕು ಕಷ್ಟದಲ್ಲಿದೆ. ಕೆಲವು ಬೇಡಿಕೆಗಳನ್ನಿಟ್ಟುಕೊಂಡು ಹಲವಾರು ವರ್ಷಗಳಿಂದ ಹೋರಾಟವನ್ನು ನಡೆಸುತ್ತಿದ್ದೇವೆ. ಆದರೆ ಈವರೆಗೆ ಬೇಡಿಕೆಗಳು ಈಡೇರಿಲ್ಲ' ಎಂದರು.`ಕಾರ್ಮಿಕರ ಜೀವ ವಿಮಾ ಯೋಜನೆ ಹಾಗೂ ಸಂಧ್ಯಾ ಸುರಕ್ಷಾ ಯೋಜನೆಯ ಪ್ರಯೋಜನ ಅಂಗನವಾಡಿ ಕಾರ್ಯಕರ್ತೆಯರಿಗೂ ದೊರೆಯಬೇಕು. ಮಾಸಿಕ ವೇತನವನ್ನು ರೂ 10 ಸಾವಿರಕ್ಕೆ ಹೆಚ್ಚಿಸಬೇಕು. ಅಂಗನವಾಡಿ ಕಾರ್ಯಕರ್ತೆಯರನ್ನು ಸರ್ಕಾರಿ ಸೇವೆಯ `ಸಿ' ಅಥವಾ `ಡಿ' ದರ್ಜೆಗೆ ಸೇರಿಸಬೇಕು. ಸೇವಾ ಹಿರಿತನದ ಆಧಾರದ ಮೇಲೆ ಹೆಚ್ಚುವರಿ ವೇತನವನ್ನು ನಿಗದಿ ಮಾಡಬೇಕು. ಮಿನಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಬೇಕು' ಎಂದು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry