ಅಂಗನವಾಡಿ ಕಾರ್ಯಕರ್ತೆಯರ ಬೃಹತ್‌ ಪ್ರತಿಭಟನೆ

7
ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯ, ಕಾರ್ಯಕರ್ತೆಯರ ಬಂಧನ, ಬಿಡುಗಡೆ

ಅಂಗನವಾಡಿ ಕಾರ್ಯಕರ್ತೆಯರ ಬೃಹತ್‌ ಪ್ರತಿಭಟನೆ

Published:
Updated:
ಅಂಗನವಾಡಿ ಕಾರ್ಯಕರ್ತೆಯರ ಬೃಹತ್‌ ಪ್ರತಿಭಟನೆ

ಹೊಸದುರ್ಗ: ವೇತನ ಹೆಚ್ಚಳ  ಸೇರದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಫೆಡರೇಷನ್‌ ನೇತೃತ್ವದಲ್ಲಿ ಪಟ್ಟಣದ ಟಿ.ಬಿ.ವೃತ್ತದಲ್ಲಿ ಶುಕ್ರವಾರ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.ಪಟ್ಟಣದ ಹಿರಿಯೂರು ವೃತ್ತದಿಂದ ಟಿ.ಬಿ.ವೃತ್ತದ ವರೆಗೆ ಮೆರವಣಿಗೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ರಾಜ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಮಾಜದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದೆ. ಆದರೆ ಈ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಯಕರ್ತೆಯರಿಗೆ ನೀಡುತ್ತಿರುವ ವೇತನ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ದಿನಸಿ ಸಾಮಾನು, ಸೀಮೆಎಣ್ಣೆ, ಗ್ಯಾಸ್‌, ಹಾಲು, ವಿದ್ಯುತ್‌, ಬಸ್‌ ಪ್ರಯಾಣ ದರ, ಮನೆ ಬಾಡಿಗೆ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಸರ್ಕಾರ ನೀಡುತ್ತಿರುವ ಕನಿಷ್ಟ ವೇತನದಿಂದ ದಿನಬಳಕೆಯ ವಸ್ತುವನ್ನೂ ಕೊಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಮಕ್ಕಳ ವಿದ್ಯಾಭ್ಯಾಸವು ಕುಂಠಿತಗೊಳ್ಳುತ್ತಿದೆ. ಇದಕ್ಕೆಲ್ಲ ಸರ್ಕಾರದ ನಿರ್ಲಕ್ಷ್ಯ ದೋರಣೆಯೇ ಕಾರಣ ಎಂದು ಪ್ರತಿಭಟನಾನಿರತರು ಅಳಲು ತೋಡಿಕೊಂಡರು.ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ ರೂ. 12,500 ಕನಿಷ್ಟ ವೇತನ, ಇಎಸ್‌ಐ, ಪಿಎಫ್‌, ನಿವೃತ್ತಿ ವೇತನ ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆ ಗ್ರೇಡ್‌2 ತಹಶೀಲ್ದಾರ್‌ ನಾಗರಾಜ್‌ ಅವರಿಗೆ ಮನವಿ ಸಲ್ಲಿಸಿದರು. ಎಐಟಿಯುಸಿ ನಾಯಕ ಎ.ವಿ.ವೆಂಕಟರಾಂ, ರಾಧಮ್ಮ, ಅಹಲ್ಯಬಾಯಿ, ಲಕ್ಷ್ಮಮ್ಮ, ಎನ್‌.ಬಿ.ಸುಜಾತಾ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.ಜೈಲ್‌ ಭರೋ ಚಳವಳಿ

ಹೊಳಲ್ಕೆರೆ:
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಶುಕ್ರವಾರ ಪಟ್ಟಣದಲ್ಲಿ ಜೈಲ್‌ಭರೋ ಚಳವಳಿ ನಡೆಸಿದರು.ರಾಜ್ಯದಲ್ಲಿ 1.25 ಲಕ್ಷಕ್ಕಿಂತ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಇದ್ದು, ಸರ್ಕಾರ ಕಡಿಮೆ ವೇತನ ನೀಡಿ ಹೆಚ್ಚು ದುಡಿಸಿಕೊಳ್ಳುತ್ತಿದೆ. ಕೂಡಲೇ ವೇತನ, ಸೇವಾ ಭದ್ರತೆ ಸೇರಿದಂತೆ ಆರೋಗ್ಯ, ಶಿಕ್ಷಣಿಕ ನೆರವು ನೀಡಬೇಕು ಎಂದು ಪ್ರತಿಭಟನಾನಿರತರು ಸರ್ಕಾರವನ್ನು ಒತ್ತಾಯಿಸಿದರು.ಅಂಗನವಾಡಿ ಮೇಲ್ವಿಚಾರಣೆಯನ್ನು ವೇದಾಂತ ಸಂಸ್ಥೆ ಅಥವಾ ಯಾವುದೇ ಎನ್‌ಜಿಒಗೆ ವಹಿಸದೆ ಸರ್ಕಾರವೇ ಐಸಿಡಿಎಸ್‌ ಇಲಾಖೆಯಿಂದ ನಡೆಸಬೇಕು. ಕೇಂದ್ರ ಹಾಗೂ ರಾಜ್ಯಸರ್ಕಾರಿ ನೌಕರರಿಗೆ ನೀಡುವಂತೆ ಅಂಗನವಾಡಿ ಕಾರ್ಯಕರ್ತೆಯರಿಗೂ 6 ತಿಂಗಳು ಹೆರಿಗೆ ರಜೆ ಸೌಲಭ್ಯ ನೀಡಬೇಕು. ಪಿಂಚಣಿ ಯೋಜನೆಯಲ್ಲಿ ಕಾರ್ಯಕರ್ತೆಯರಿಗೆ ರೂ. 50 ಸಾವಿರ ಮತ್ತು ಸಹಾಯಕಿಯರಿಗೆ ರೂ. 30 ಸಾವಿರ ನಿಗದಿಪಡಿಸಿದ್ದು, ಭವಿಷ್ಯದ ದೃಷ್ಠಿಯಿಂದ ಇದು ಅವೈಜ್ಞಾನಿಕವಾಗಿದೆ. ಆದ್ದರಿಂದ ಈ ಮೊತ್ತವನ್ನು ರೂ. 3 ಲಕ್ಷಕ್ಕೆ ಹೆಚ್ಚಿಸಬೇಕು. ನಾವು ಸರ್ಕಾರಿ ಸಭೆಗಳಿಗೆ ಹಾಜರಾದಾಗ ರೂ. 200 ದಿನಭತ್ಯೆ ನೀಡಬೇಕು ಎಂದು ಒತ್ತಾಯಿಸಿದರು.ಫೆಡರೇಷನ್‌ ಅಧ್ಯಕ್ಷೆ ಮಹೇಶ್ವರಿ, ಉಪಾಧ್ಯಕ್ಷೆ ಶಾಂತಕುಮಾರಿ, ಶಾರದಮ್ಮ, ಸಾಜೀದಾ, ವನಜಾಕ್ಷಿ, ಜೆ. ಪಾರ್ವತಮ್ಮ, ಹೊನ್ನಮ್ಮ, ಕೋಕಿಲಾ ಬಾಯಿ, ಅಮೀನಾಬೀ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.‘ನಮಗೂ ಸೌಲಭ್ಯ ನೀಡಿ’

ಮೊಳಕಾಲ್ಮುರು:
ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶುಕ್ರವಾರ ಇಲ್ಲಿ ಎಐಟಿಯುಸಿ ನೇತೃತ್ವದಲ್ಲಿ ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಪ್ರತಿಭಟನೆ ನಡೆಸಿದರು.ಕೆಇಬಿ ವೃತ್ತದಿಂದ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರಮುಖ ಬೀದಿಗಳಲ್ಲಿ ಆಗಮಿಸಿದ ಪ್ರತಿಭಟನಾಕಾರರು ಬಸ್‌ನಿಲ್ದಾಣ ಆವರಣದಲ್ಲಿ ಮಾನವ ಸರಪಳಿ ನಿರ್ಮಾಣ ಮಾಡಿ ನಂತರ ತಾಲ್ಲೂಕು ಕಚೇರಿ ಆವರಣಕ್ಕೆ ಆಗಮಿಸಿದರು.ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಸಂಘದ ಪದಾಧಿಕಾರಿಗಳು ಹಾಗೂ ಸಿಪಿಐ ಮುಖಂಡ ಪಟೇಲ್‌ ಪಾಪನಾಯಕ, ‘ಐಸಿಡಿಎಸ್ ಯೋಜನೆಯನ್ನು ಪುನರ್ ರಚಿಸುವ ಹೆಸರಿನಲ್ಲಿ ಕೇಂದ್ರ ಹಾಗೂ ರಾಜ್ಯಸರ್ಕಾರ ಅಂಗನವಾಡಿಗಳನ್ನು ‘ಮಿಷನ್‌ಮೋಡ್‌’ ಹೆಸರಿನಲ್ಲಿ ಖಾಸಗೀಕರಣ ಮಾಡಲು ಹೊರಟಿದ್ದು ಕೂಡಲೇ ಈ ಪ್ರಸ್ತಾವ ಕೈಬಿಡಬೇಕು ಎಂದು ಆಗ್ರಹಿಸಿದರು.ಅಂಗನವಾಡಿ ಸಿಬ್ಬಂದಿಯನ್ನು ಸರ್ಕಾರ ‘ಸಿ’ ಹಾಗೂ ‘ಡಿ’ ಗ್ರೂಪ್ ನೌಕರರು ಎಂದು ಪರಿಗಣಿಸಬೇಕು. ಕನಿಷ್ಠ ಕಾರ್ಯಕರ್ತೆಯರಿಗೆ ರೂ. 15 ಸಾವಿರ, ಸಹಾಯಕಿಯರಿಗೆ ರೂ. 10 ಸಾವಿರ ವೇತನ ನೀಡಬೇಕು, ಪಿಂಚಣಿ ಹೆಚ್ಚಳ ಮಾಡಬೇಕು, ಸೇವಾ ಹಿರಿತನ ಭತ್ಯೆ ನೀಡಬೇಕು, ಮಿನಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.ಸಂಘಟನೆಯ ಡಿ.ನಾಗರತ್ನ, ಅರವಿಂದಬಾಯಿ, ಸಿ.ಎಂ.ನಾಗರತ್ನ, ಜ್ಯೋತಿ, ಪಾಲಮ್ಮ, ಕೊಂಡ್ಲಹಳ್ಳಿ ನಾಗರತ್ನ, ಸುವರ್ಣ, ಪ್ರಭಾವತಿ, ಜಯಮ್ಮ, ಸೌಭಾಗ್ಯ, ಗೀತಾ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.‘ಹುದ್ದೆ ಕಾಯಂಗೊಳಿಸಿ’

ಹಿರಿಯೂರು:
ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಹುದ್ದೆಗಳನ್ನು ಸಿ ಮತ್ತು ಡಿ ಗುಂಪಿನ ಹುದ್ದೆಗಳೆಂದು ಕಾಯಂಗೊಳಿಸಿ, ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ನೀಡಬೇಕು ಎಂದು ಎಐಟಿಯುಸಿ ಅಧ್ಯಕ್ಷ ಎಸ್.ಸಿ.ಕುಮಾರ್ ಒತ್ತಾಯಿಸಿದರು.ನಗರದಲ್ಲಿ ಶುಕ್ರವಾರ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನೂರಾರು ಅಂಗನವಾಡಿ ಸಿಬ್ಬಂದಿ ವರ್ಗದವರು ನಗರದಲ್ಲಿ ಪ್ರತಿಭಟನಾ ಮೆರವಣಿಗೆಯ ನಂತರ, ತಾಲ್ಲೂಕು ಕಚೇರಿ ಮುಂಭಾಗದ ರಸ್ತೆಯಲ್ಲಿ ರಸ್ತೆ ತಡೆ ನಡೆಸಿದಾಗ ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡರಾದ ಸಿ. ತಿಪ್ಪಮ್ಮ, ಕೆ.ಟಿ. ಸುಜಾತಾ, ಶ್ರೀನಿವಾಸ್, ಜಯರಾಮರೆಡ್ಡಿ, ನಳಿನಾಕ್ಷಿ, ಸಾವಿತ್ರಮ್ಮ, ಎಚ್. ಜಯಮ್ಮ, ತಾ.ಪಂ. ಸದಸ್ಯೆ ಡಾ. ಜೆ.ಆರ್. ಸುಜಾತ ಪಾಲ್ಗೊಂಡಿದ್ದರು. ತಹಶೀಲ್ದಾರರಿಗೆ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry