ಭಾನುವಾರ, ಮೇ 16, 2021
28 °C
ಲೆಕ್ಕಕ್ಕಿಲ್ಲದ ಸರ್ಕಾರಿ ಆದೇಶ, ಅಧಿಕಾರಿಗಳ `ಮೌನ'

ಅಂಗನವಾಡಿ ಕಾರ್ಯಕರ್ತೆ ಗ್ರಾ.ಪಂ. ಸದಸ್ಯೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ಚುನಾಯಿತ ಪ್ರತಿನಿಧಿ ಅಥವಾ ಅಂಗನವಾಡಿ ಕಾರ್ಯಕರ್ತೆ ಈ ಎರಡರ ಪೈಕಿ ಒಂದನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ತಾಕೀತು ಮಾಡಿ ಸರ್ಕಾರ ಆದೇಶ ಹೊರಡಿಸಿದ್ದರೂ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಎರಡೂ ಹುದ್ದೆಗಳಲ್ಲಿ ಮುಂದುವರೆದಿರುವುದು ಗೊತ್ತಾಗಿದೆ.ತಾಲ್ಲೂಕಿನ ಗುಮಗೇರಿ ಗ್ರಾಮದ ಯಲ್ಲಮ್ಮ ಹೊಟ್ಟೇರ ಎಂಬುವವರು ಆ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮೊದಲಿನಿಂದಲೂ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಎರಡು ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಕಂದಕೂರು ಗ್ರಾಮ ಪಂಚಾಯಿತಿ ಸದಸ್ಯೆಯಾಗಿಯೂ ಆಯ್ಕೆಯಾಗಿದ್ದಾರೆ. ಅಚ್ಚರಿಯಂದರೆ ಎರಡೂ ಹುದ್ದೆಗಳಲ್ಲಿ ಈಗಲೂ ಸಕ್ರಿಯರಾಗಿರುವುದು.ಅಂಗನವಾಡಿ ಕಾರ್ಯಕರ್ತೆಯರು ಚುನಾಯಿತ ಪ್ರತಿನಿಧಿಗಳಾಗಿಯೂ ಸೇವೆ ಸಲ್ಲಿಸುತ್ತಿರುವುದನ್ನು ಕಳೆದ ವರ್ಷ ದಕ್ಷಿಣಕನ್ನಡದ ಸಾಮಾಜಿಕ ಕಾರ್ಯಕರ್ತರೊಬ್ಬರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್, ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಿತ್ತು.ಈ ಹಿನ್ನೆಲೆಯಲ್ಲಿ ತಾಲ್ಲೂಕಿನ ಗುಮಗೇರಿಯಲ್ಲಿನ ಬಸಮ್ಮ ಮತ್ತು ಯಲ್ಲಮ್ಮ ಎಂಬ ಅಂಗನವಾಡಿ ಕಾರ್ಯಕರ್ತೆಯರು ಕಂದಕೂರು ಗ್ರಾ.ಪಂ ಸದಸ್ಯರು ಮತ್ತು ಪ್ರಮುಖ ಪಕ್ಷಗಳ ರಾಜಕೀಯ ಬೆಂಬಲಿಗರಾಗಿ ಪ್ರಭಾವ ಬೀರುತ್ತಿದ್ದುದನ್ನು `ಪ್ರಜಾವಾಣಿ' ಬೆಳಕಿಗೆ ತಂದಿತ್ತು. ಎರಡು ಬಾರಿ ವರದಿ ಪ್ರಕಟಗೊಂಡ ನಂತರ ಎಚ್ಚೆತ್ತುಕೊಂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೋಟಿಸ್ ಜಾರಿ ಮಾಡಿದ್ದರಿಂದ ಬಸಮ್ಮ ಪಂಚಾಯಿತಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನೊಬ್ಬ ಕಾರ್ಯಕರ್ತೆ ಯಲ್ಲಮ್ಮ ಇನ್ನೂ ಎರಡೂ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.ಗ್ರಾ.ಪಂ ಹೇಳಿಕೆ: ಯಲ್ಲಮ್ಮ ಹೊಟ್ಟೇರ ಪಂಚಾಯಿತಿಯ ಸದಸ್ಯೆಯಾಗಿರುವುದು, ಎಲ್ಲ ಸಭೆ ಮತ್ತು ಅಧ್ಯಕ್ಷರ ಆಯ್ಕೆ ಸಭೆಯಲ್ಲೂ ಭಾಗಿಯಾಗಿ ಸಭಾ ಭತ್ಯೆಯನ್ನೂ ಪಡೆಯುತ್ತ ಬಂದಿರುವ ಮಾಹಿತಿಯನ್ನು ಪತ್ರ ಬರೆದಿದ್ದ ಸಿಡಿಪಿಒ ಅವರಿಗೆ ನೀಡಿರುವುದಾಗಿ ಕಂದಕೂರು ಗ್ರಾ.ಪಂ ಪಿಡಿಒ ಶೇಖದಾವೂದ ವಿವರಿಸಿದರು.ಸಿಡಿಪಿಒ ಹೇಳಿಕೆ: ಈ ಕುರಿತು ಮಾಹಿತಿ ನೀಡಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಸನಗೌಡ, ಎರಡು ಹುದ್ದೆಗಳಲ್ಲಿ ಮುಂದುವರೆದಿರುವ ಯಲ್ಲಮ್ಮ ಅವರನ್ನು ಕಾರ್ಯಕರ್ತೆ ಹುದ್ದೆಯಿಂದ ವಜಾಗೊಳಿಸುವಂತೆ ಶಿಫಾರಸು ಮಾಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೊಪ್ಪಳದ ಉಪನಿರ್ದೇಶಕರಿಗೆ ಪತ್ರ ಬರೆಯಲಾಗಿದೆ, ಹತ್ತು ತಿಂಗಳಿನಿಂದ ಸಂಬಳ ತಡೆಹಿಡಿಯಲಾಗಿದೆ ಎಂದು ತಿಳಿಸಿದರು.ಆದರೆ ಮೇಲಧಿಕಾರಿಗಳು ಈ ವಿಷಯದಲ್ಲಿ ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದಿರುವುದು ಅಚ್ಚರಿ ಮೂಡಿಸಿದೆ. ಅಲ್ಲದೇ ಪ್ರಮುಖ ಪಕ್ಷದ ಪ್ರಭಾವಿ ರಾಜಕಾರಣಿಗಳು ಯಲ್ಲಮ್ಮ ಅವರಿಗೆ ಸಂಬಳ ನೀಡುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.