ಸೋಮವಾರ, ಏಪ್ರಿಲ್ 19, 2021
25 °C

ಅಂಗನವಾಡಿ ಖಾಸಗೀಕರಣ ಸಂಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಆಶ್ರಯದಲ್ಲಿ ಅಂಗನವಾಡಿ ನೌಕರರ 6ನೇ ಗುಲ್ಬರ್ಗ ಜಿಲ್ಲಾಮಟ್ಟದ ಸಮ್ಮೇಳನವು ನಗರದ ಖುಬಾ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆರಂಭವಾಯಿತು.ಮೊದಲ ದಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಕಾಯಕರ್ತೆಯರು, ಕೆಂಪು ಸೀರೆ ಧರಿಸಿ ಘೋಷಣೆ ಹಾಕುತ್ತ ಸಾಗಿದರು.  ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಿಂದ ಹೊರಟ ರ‌್ಯಾಲಿಯು ಜಗತ್ ವೃತ್ತದ ಮೂಲಕ ಸೂಪರ್ ಮಾರ್ಕೆಟ್ ತಲುಪಿತು. ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಶಾಂತಾ ಘಂಟಿ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ನಡೆಸಿದ ಹೋರಾಟದ ಫಲವಾಗಿ ಈಗ ಗೌರವಧನದ ಮೊತ್ತದಲ್ಲಿ ಹೆಚ್ಚಳವಾಗಿದೆ. ಜತೆಗೆ ಜನಶ್ರೀ ಯೋಜನೆ, ಮೇಲ್ವಿಚಾರಕಿ ಹುದ್ದೆಗೆ ಮೀಸಲಾತಿ, ನಿವೃತ್ತಿ ಹೊಂದಿದ ನೌಕರರಿಗೆ ಇಡುಗಂಟು ಕೊಡಲು ಸರ್ಕಾರ ಮುಂದಾಗಿದೆ ಎಂದು ಹೇಳಿದರು.ರಾಜ್ಯದಲ್ಲಿರುವ 63,177 ಅಂಗನವಾಡಿ ಕೇಂದ್ರಗಳ ಪೈಕಿ 35,000 ಕೇಂದ್ರಗಳಿಗೆ ಮಾತ್ರ ಕಟ್ಟಡಗಳಿವೆ. ಇವು ಕೂಡ ಮೂಲಸೌಲಭ್ಯ ಕೊರತೆಯಿಂದ ಬಳಲುತ್ತಿವೆ. ಸರ್ಕಾರ ಈ ಬಗ್ಗೆ ಚಿಂತನೆ ನಡೆಸದೇ ಒಡಿಶಾ ಮೂಲದ ವೇದಾಂತ ಸಂಸ್ಥೆಗೆ ನಾಲ್ಕು ಜಿಲ್ಲೆಗಳನ್ನು ದತ್ತು ನೀಡಿದ್ದು, ಅಂಗನವಾಡಿ ಖಾಸಗೀಕರಣಕ್ಕೆ ಸಂಚು ರೂಪಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ನೀತಿಯ ಸಾಧಕ- ಬಾಧಕ ಕುರಿತು ಸಮ್ಮೇಳನದಲ್ಲಿ ಸಮಗ್ರ ಚರ್ಚೆ ನಡೆಯಲಿದೆ ಎಂದು ಅವರು ತಿಳಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಗೌರಮ್ಮ ಪಾಟೀಲ, ಕಾರ್ಯದರ್ಶಿ ಮಹಾದೇವಿ ಪೋಲಕಪಳ್ಳಿ, ಖಜಾಂಚಿ ವೀರಮ್ಮ ಬಂಗಾರಕಿರಣಗಿ, ಉಪಾಧ್ಯಕ್ಷೆ ಸುರೇಖಾ ಕುಲಕರ್ಣಿ ಇತರರು ಪಾಲ್ಗೊಂಡಿದ್ದರು.ಶನಿವಾರ ನಡೆಯುವ ಕಾರ್ಯಕ್ರಮದಲ್ಲಿ 400 ಪ್ರತಿನಿಧಿಗಳು ಪಾಲ್ಗೊಳ್ಳುವರು. ಸಿಪಿಎಂ ಮುಖಂಡ ಮಾರುತಿ ಮಾನ್ಪಡೆ ಮತ್ತು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ವರಲಕ್ಷ್ಮೀ ಆಗಮಿಸುವರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.