ಅಂಗನವಾಡಿ ಸಿಬ್ಬಂದಿಗೆ ಸಿಹಿ ಸುದ್ದಿ: ಗೌರವಧನ ದುಪ್ಪಟ್ಟು

7

ಅಂಗನವಾಡಿ ಸಿಬ್ಬಂದಿಗೆ ಸಿಹಿ ಸುದ್ದಿ: ಗೌರವಧನ ದುಪ್ಪಟ್ಟು

Published:
Updated:
ಅಂಗನವಾಡಿ ಸಿಬ್ಬಂದಿಗೆ ಸಿಹಿ ಸುದ್ದಿ: ಗೌರವಧನ ದುಪ್ಪಟ್ಟು

ನವದೆಹಲಿ (ಪಿಟಿಐ): ಅಂಗನವಾಡಿ ಸಿಬ್ಬಂದಿಯ ಹೋರಾಟಕ್ಕೆ ಸ್ಪಂದಿಸಿರುವ ಕೇಂದ್ರ ಸರ್ಕಾರವು ಅವರಿಗೆ ನೀಡುತ್ತಿದ್ದ ಸಹಾಯಧನವನ್ನು ಶೇ 100ರಷ್ಟು ಹೆಚ್ಚಿಸಿದೆ. ಇದೇ ವೇಳೆ ಮಹಿಳಾ ಸ್ವಸಹಾಯ ಸಂಘಗಳಿಗಾಗಿ ವಿಶೇಷ ನಿಧಿ ಸ್ಥಾಪಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಿದೆ. ಬರುವ ಏ.1ರಿಂದ ಈ ಹೆಚ್ಚಳ ಅನ್ವಯವಾಗಲಿದ್ದು ಒಟ್ಟಾರೆ 22 ಲಕ್ಷ ಅಂಗನವಾಡಿ ಸಿಬ್ಬಂದಿ ಇದರ ಪ್ರಯೋಜನ ಪಡೆಯಲಿದ್ದಾರೆ.

ಸಚಿವ ಪ್ರಣವ್ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ 12,733 ಕೋಟಿ ರೂಪಾಯಿ ಮೀಸಲಿರಿಸಿದ್ದಾರೆ. ಇದು ಪ್ರಸಕ್ತ ಸಾಲಿನಲ್ಲಿ ಇರಿಸಿರುವ 11,070.5 ಕೋಟಿ ರೂಪಾಯಿಗಿಂತ ಶೇ 15ರಷ್ಟು ಹೆಚ್ಚಾಗಿದೆ. ಅಂಗನವಾಡಿ ಸಿಬ್ಬಂದಿ ಮಕ್ಕಳ ಸಮಗ್ರ ಅಭಿವೃದ್ಧಿ ಸೇವಾ ಯೋಜನೆಗಳ ಬೆನ್ನೆಲುಬು ಎಂದು ಅಭಿಪ್ರಾಯಪಟ್ಟ ಸಚಿವ ಪ್ರಣವ್, ಕಾರ್ಯಕರ್ತರ ಗೌರವಧನವನ್ನು ರೂ 1500ರಿಂದ ರೂ 3000ಕ್ಕೆ ಹಾಗೂ ಸಹಾಯಕರ ಗೌರವಧನವನ್ನು ರೂ 750ರಿಂದ ರೂ 1500ಕ್ಕೆ ಹೆಚ್ಚಿಸುತ್ತಿರುವುದರಿಂದ ತಮಗೆ ಸಂತಸವಾಗಿದೆ ಎಂದರು.

ಗೌರವಧನ ಹೆಚ್ಚಳ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ಸಿಬ್ಬಂದಿ ಇತ್ತೀಚೆಗಷ್ಟೆ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಿದ್ದರು. ಒಟ್ಟಾರೆ ಮಹಿಳಾ ಕಲ್ಯಾಣ ಕಾರ್ಯಕ್ರಮಗಳಿಗಾಗಿ 78,251 ಕೋಟಿ ರೂಪಾಯಿಗಳನ್ನು ಸರ್ಕಾರ ಮೀಸಲಿಟ್ಟಿದೆ. ಇದರಲ್ಲಿ 20,548 ಕೋಟಿ ರೂಪಾಯಿಗಳನ್ನು ವಿವಿಧ ಇಲಾಖೆಗಳ ಮೂಲಕ ಜಾರಿಯಾಗುವ ಶೇ 100ರಷ್ಟು ಮಹಿಳಾ ನಿರ್ದಿಷ್ಟ ಯೋಜನೆಗಳಿಗಾಗಿಯೇ ಇಟ್ಟಿದ್ದರೆ, 57,702 ಕೋಟಿ ರೂಪಾಯಿಗಳನ್ನು ಮಹಿಳೆಯರ ಪರವಾಗಿ ಕನಿಷ್ಠ ಶೇ 30ರಷ್ಟು ಆದ್ಯತೆ ನೀಡುವ ಕಾರ್ಯಕ್ರಮಗಳಿಗಾಗಿ ಇರಿಸಲಾಗಿದೆ.

ಸ್ತ್ರೀ ಸಬಲೀಕರಣ ಹಾಗೂ ಸ್ವಸಹಾಯ ಸಂಘಗಳ ಬಲವರ್ಧನೆ ದೃಷ್ಟಿಯಿಂದ ರೂ 500 ಕೋಟಿಯ ‘ಮಹಿಳಾ ಸ್ವಸಹಾಯ ಸಂಘ ಅಭಿವೃದ್ಧಿ ನಿಧಿ’ ಸ್ಥಾಪಿಸುವ ಪ್ರಸ್ತಾವವನ್ನೂ ಅವರು ಮುಂದಿಟ್ಟಿದ್ದಾರೆ. 2003ರಲ್ಲಿ ಜಾರಿಗೆ ಬಂದ ರಾಷ್ಟ್ರೀಯ ಪೌಷ್ಟಿಕತೆ ಆಂದೋಲನಕ್ಕಾಗಿ ಬರುವ ಸಾಲಿನಲ್ಲಿ  90 ಕೋಟಿ ರೂಪಾಯಿ ನಿಗದಿ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಅದಕ್ಕೆ ನೀಡಿದ್ದ ಹಣ ಕೇವಲ 1 ಕೋಟಿ ರೂಪಾಯಿ.ಗೌರವ ಸಂಭಾವನೆ ರೂ 4,500

ಬೆಂಗಳೂರು: ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಗೌರವಧನವನ್ನು ದ್ವಿಗುಣಗೊಳಿಸಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಕಾರ್ಯಕರ್ತೆಯರು ಮಾಸಿಕ 4500 ರೂಪಾಯಿ ಗೌರವ ಸಂಭಾವನೆ ಪಡೆಯಲಿದ್ದಾರೆ. ಇದುವರೆಗೆ ಕೇಂದ್ರ ಸರ್ಕಾರ ತನ್ನ ಪಾಲಿನ 1500 ರೂಪಾಯಿ ನೀಡುತ್ತಿದ್ದರೆ, ರಾಜ್ಯ ಸರ್ಕಾರ ಒಂದು ಸಾವಿರ ರೂಪಾಯಿ ನೀಡುತ್ತಿತ್ತು.ಈಗ ಕೇಂದ್ರ ಸರ್ಕಾರ ರೂ 1500 ಹಾಗೂ ರಾಜ್ಯ ಸರ್ಕಾರ ರೂ 500 ಜಾಸ್ತಿ ಮಾಡಿರುವುದರಿಂದ ಒಟ್ಟು 4500 ರೂಪಾಯಿ ಗೌರವ ಧನ ಸಿಗಲಿದ್ದು, ಪರಿಷ್ಕೃತ ವೇತನ ಏಪ್ರಿಲ್‌ನಿಂದ ಜಾರಿಗೆ ಬರುವ ಸಂಭವವಿದೆ. ಅದೇ ರೀತಿ, ಅಂಗನವಾಡಿ ಸಹಾಯಕಿಯರಿಗೆ ಇನ್ನು ಮುಂದೆ 2,250 ರೂಪಾಯಿ ಗೌರವಧನ ಸಿಗಲಿದೆ. ಇವರಿಗೆ ಕೇಂದ್ರ ಸರ್ಕಾರ ರೂ 1500 ಹಾಗೂ ರಾಜ್ಯ ಸರ್ಕಾರ ರೂ 750 ನೀಡಲಿದೆ. ಕೇಂದ್ರ ಸರ್ಕಾರ ನೀಡುವ ಪ್ರಮಾಣದಲ್ಲಿಯೇ ರಾಜ್ಯ ಸರ್ಕಾರವೂ ಗೌರವ ಧನ ನೀಡಬೇಕು ಎಂದು ರಾಜ್ಯಸಭೆಯ ಅರ್ಜಿಗಳ ಸಮಿತಿ ಶಿಫಾರಸು ಮಾಡಿದೆ. ಅದನ್ನು ಪಾಲಿಸಬೇಕು ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ವರಲಕ್ಷ್ಮಿ ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry