ಅಂಗಮಾರಿ: ರೈತರಲ್ಲಿ ಆತಂಕ

ಗುರುವಾರ , ಜೂಲೈ 18, 2019
26 °C
ಆಲೂಗೆಡ್ಡೆಯಿಂದ ಶುಂಠಿಯತ್ತ ಅನ್ನದಾತ ವಲಸೆ

ಅಂಗಮಾರಿ: ರೈತರಲ್ಲಿ ಆತಂಕ

Published:
Updated:

ಹಾಸನ: ಜಿಲ್ಲೆಯ ಅನೇಕ ಭಾಗಗಳಲ್ಲಿ ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರೂ ಇತ್ತೀಚಿನ  ಕೆಲವು ದಿನಗಳಲ್ಲಿ ಮಳೆಯಾಗದಿರುವುದರಿಂದ ಆಲೂಗೆಡ್ಡೆ ಬೆಳೆಗಾರರು ನಷ್ಟ ಅನುಭವಿಸಬೇಕಾದ ಸ್ಥಿತಿ ಎದುರಾಗಿದೆ.



ಜಿಲ್ಲೆಯ ವಿವಿಧೆಡೆ ಈಗಾಗಲೇ ಅಂಗಮಾರಿ ರೋಗ ಕಾಣಿಸಿಕೊಂಡಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಹಾಸನ ತಾಲ್ಲೂಕು ದೊಡ್ಡಕೊಂಡಗುಳದ ಹೊಲವೊಂದರಲ್ಲಿ ಕಳೆದ ಶನಿವಾರ ಅಂಗಮಾರಿ ರೋಗ ಕಾಣಿಸಿಕೊಂಡಿತ್ತು. ಮರುದಿನ ಸಂಜೆಯೊಳಗೆ ಅದು ಅಕ್ಕ ಪಕ್ಕದ ಹೊಲಗಳಿಗೂ ಹಬ್ಬಿಕೊಂಡು ನೋಡನೋಡುತ್ತಿದ್ದಂತೆ ಬೆಳೆ ಒಣಗಿತು.



ಇದಲ್ಲದೆ ಮುದ್ಲಾಪುರ, ದೊಡ್ಡಪುರ ಮುಂತಾದ ಭಾಗಗಳಲ್ಲೂ ರೋಗ ಕಾಣಿಸಿಕೊಂಡಿದೆ ಎಂದು ರೈತರು ಹೇಳಿದ್ದಾರೆ.

ಈ ವರ್ಷದ ಆರಂಭದಲ್ಲಿ ಉತ್ತಮ ಮಳೆಯಾಗಿರುವುದರಿಂದ ಆಲೂಗೆಡ್ಡೆಗೆ ಸೂಕ್ತ ವಾತಾವರಣ ನಿರ್ಮಾಣವಾಗಿದೆ, ಬೆಳೆಯೂ ಉತ್ತಮವಾಗಬಹುದು ಎಂದು ರೈತರು ಮಾತ್ರವಲ್ಲದೆ ತೋಟಗಾರಿಕಾ ಇಲಾಖೆಯವರೂ ನಿರೀಕ್ಷಿಸಿದ್ದರು. ಆದರೆ, ಕೆಲವು ದಿನಗಳಿಂದ ಮಳೆ ಕಡಿಮೆಯಾಗಿ ಇಡೀ ದಿನ ಮೋಡ ಮುಸುಕಿದ ವಾತಾವರಣ ಕಂಡುಬರುತ್ತಿದೆ. ಇದು ಬೆಳೆಗೆ ಮಾರಕವಾಗುತ್ತಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.



ಇದೇಸ್ಥಿತಿ ಮುಂದುವರಿದರೆ ಅಂಗಮಾರಿ ಅತಿ ವೇಗದಲ್ಲಿ ಹರಡುವ ಸಾಧ್ಯತೆ ಇದೆ.

ಅಂಗಮಾರಿ ತಡೆಗೆ ಈ ವರ್ಷ ಜಿಲ್ಲಾಡಳಿತ ಹಾಗೂ ತೋಟಗಾರಿಕೆ ಇಲಾಖೆ ಸಾಕಷ್ಟು ಶ್ರಮ ವಹಿಸಿತ್ತು. ಸಹಾಯವಾಣಿ, ಅಂಗಮಾರಿ ತಡೆ ಬಗ್ಗೆ ಮಾಹಿತಿ ನೀಡಲು ಕಾರ್ಯಪಡೆ ರಚನೆ ಮುಂತಾದ ಕ್ರಮ ಕೈಗೊಂಡಿದ್ದರೂ ತಮ್ಮ ಪರಂಪರಾಗತ ಕೃಷಿ ಪದ್ಧತಿಯನ್ನು ಬಿಡಲು ಒಪ್ಪದ ರೈತರು ಈ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ ಎಂಬುದೂ ಅಷ್ಟೇ ನಿಜವಾಗಿದೆ. ಇದೂ ರೋಗ ಹರಡಲು ಕಾರಣವಾಗಿದೆ.



ದಿನೇ ದಿನೇ ಅಂಗಮಾರಿ ತನ್ನ ಬಾಹುಗಳನ್ನು ಚಾಚುತ್ತಿದೆ. ಹಾಸನ ಸಮೀಪದ ಕೋರಹಳ್ಳಿಯ ಶಫಿ ಎಂಬುವವರ ಹೊಲದಲ್ಲೂ ಹುಲುಸಾಗಿ ಬೆಳೆದಿದ್ದ ಗಿಡಗಳು ಸೋಮವಾರ ಸಂಜೆ ಬಾಡಿಕೊಂಡಿದ್ದವು. ಮಂಗಳವಾರ ತಮ್ಮ ಹೊಲಕ್ಕೆ ಭೇಟಿ ನೀಡಿದ ಪತ್ರಕರ್ತರಿಗೆ ಬೆಳೆಯನ್ನು ತೊರಿಸಿ ತಮ್ಮ ಅಳಲು ತೋಡಿಕೊಂಡರು.



ಸಾವಿರಾರು ರೂಪಾಯಿ ಬಂಡವಾಳ ಹಾಕಿ ಗೊಬ್ಬರ, ಕೀಟನಾಶಕ ಬಳಸಿ ಕೃಷಿ ಮಾಡಿದ್ದರೂ ಈಗ ಕೈಸುಟ್ಟುಕೊಳ್ಳುವಂತಾಗಿದೆ ಎಂದು ಶಫಿ ಅಸಹಾಯಕತೆ ವ್ಯಕ್ತಪಡಿಸಿದರು.



ರೈತರು ಇನ್ನೂ 20-25 ದಿನಗಳ ಕಾಲ ಅತ್ಯಂತ ಎಚ್ಚರಿಕೆಯಿಂದಿದ್ದು, ತಜ್ಞರ ಸಲಹೆ ಸೂಚನೆಗಳನ್ನು ಪಾಲಿಸಿ ಬೆಳೆಯನ್ನು ಸಂರಕ್ಷಿಸಿಕೊಂಡರೆ ಉತ್ತಮ ಬೆಳೆ ಪಡೆಯಬಹುದು ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ವರ್ಷವೂ ಆಲೂಗೆಡ್ಡೆ ಬೆಳೆದ ರೈತರು ಕೈಸುಟ್ಟುಕೊಳ್ಳುವ ಸಾಧ್ಯತೆಗಳು ಗೋಚರಿಸುತ್ತಿವೆ.



ಶುಂಠಿಗೆ ಬಂಪರ್ ಬೆಲೆ: ಶುಂಠಿಗೆ ವಿಪರೀತ ಬೆಲೆ ಬಂದಿರುವ ಹಿನ್ನೆಲೆಯಲ್ಲಿ ಈ ಬೆಳೆಯನ್ನು ಕೈಬಿಟ್ಟಿದ್ದ ಅನೇಕ ರೈತರು ಮತ್ತೆ ಶುಂಠಿಯತ್ತ ಮುಖ ಮಾಡಿದ್ದು, ಈ ಬಾರಿ ಬೆಳೆಯೂ ಉತ್ತಮವಾಗಿ ಬಂದಿರುವುದು ರೈತರಲ್ಲಿ ಸಂತಸ ಮೂಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry