ಅಂಗವಿಕಲತೆ ಜೊತೆ ಬಾಲಕನ ಬದುಕು

7

ಅಂಗವಿಕಲತೆ ಜೊತೆ ಬಾಲಕನ ಬದುಕು

Published:
Updated:

ಗಜೇಂದ್ರಗಡ: ಅಂಗವಿಕಲರ ಕಲ್ಯಾಣಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೊಳಿಸಿವೆ. ಆದರೆ, ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳನ್ನು ತಲುಪುತ್ತಿಲ್ಲ ಎಂಬ ಆರೋಪಗಳು ಸಹ ಅಷ್ಟೇ ಪ್ರಮಾಣದಲ್ಲಿ ಕೇಳಿ ಬರುತ್ತಿವೆ. ಇದಕ್ಕೆ ಪುಷ್ಠಿ ಎನ್ನುವಂತೆ ಅಂಗವಿಕಲ ಬಾಲಕನೊಬ್ಬ  ಸರ್ಕಾರದ  ಯೋಜನೆಗಳಿಂದ ವಂಚಿತ ಗೊಂಡು ನರಕ ಸದೃಶ ಬದುಕು ಸಾಗಿಸುತ್ತಿದ್ದಾನೆ.ಸಮೀಪದ ರಾಜೂರ ಗ್ರಾಮದ ಪ್ರಕಾಶ ದೇವಪ್ಪ ಸುಣಗಾರ ಎಂಬ ಐದು ವರ್ಷದ ನತದೃಷ್ಟ  ಅಂಗವಿಕಲನ ಕಥೆಯಿದು. ಗದಗ ಜಿಲ್ಲೆಯ ರೋಣ ತಾಲ್ಲೂಕಿನ ರಾಜೂರ ಗ್ರಾಮದ ದೇವಪ್ಪ ಹಾಗೂ ನೀಲವ್ವ ದಂಪತಿಗಳ ಹಿರಿಯ ಮಗ ಪ್ರಕಾಶ  ಐದು ವರ್ಷದ ಬಾಲಕನನ್ನು ಅಂಗವೈಕಲ್ಯ ಹಿಂಡಿ ಹಿಪ್ಪೆಯನ್ನಾಗಿಸಿದೆ.  ದಂಪತಿಗಳಿಗೆ ಮುದ್ದಾದ ಗಂಡು ಮಗು ಜನಿಸಿತಾದರೂ ವೈಕಲ್ಯವನ್ನು ಹೊತ್ತಿದ್ದರಿಂದ್ದ ಸಹಜವಾಗಿಯೇ ದೇವಪ್ಪ  ಕುಟುಂಬಕ್ಕೆ ಆಘಾತ ಉಂಟು ಮಾಡಿತ್ತು.ಮಗು ಪ್ರಕಾಶನಿಗೆ ವೈಕಲ್ಯದಿಂದ ಮುಕ್ತಿಗೊಳಿಸಲು ಕುಟುಂಬಸ್ಥರು ಸಾಕಷ್ಟು ಶ್ರಮಿಸಿದರು. ಆದರೆ, ಬೆನ್ನಿನಲ್ಲಿ ಎಲ್ಲ ನರಗಳು ಒಂದೆಡೆ ಸೇರೆ ಗಂಟಾಗಿದ್ದರಿಂದ ಎರಡು ಕಾಲುಗಳು ಸ್ವಾಧೀನ ಕಳೆದುಕೊಂಡಿವೆ.  ಶಸ್ತ್ರ ಚಿಕಿತ್ಸೆ ಮಾಡಿದರೆ, ಮಗು ಬದುಕುಳಿಯುವ ಸಾಧ್ಯತೆಗಳು ತೀರಾ ವಿರಳ ಎಂಬ ತಜ್ಞ ವೈದ್ಯರ ಸಲಹೆಯಿಂದ ಬಾಲಕ ಪ್ರಕಾಶನಿಗೆ ವೈಕಲ್ಯ ಶಾಶ್ವತ ಎಂಬ ನಿರ್ಧಾಕ್ಕೆ ಕುಟುಂಬಸ್ಥರು ಬದ್ದರಾದರು.ಇಷ್ಟೆಲ್ಲ ಬೆಳವಣಿಗೆಗಳ ಮಧ್ಯೆಯೂ ಸದ್ಯ ಬಾಲಕನಿಗೆ ಐದು ವರ್ಷಗಳು ಪೂರ್ಣಗೊಂಡಿವೆ. ದಿನಗಳು ಉರುಳಿದಂತೆ ಬಾಲಕ ಪ್ರಕಾಶನ ದೇಹದ ಗಾತ್ರ ದೊಡ್ಡದಾಗುತ್ತಿದೆ. ನಿತ್ಯ ಕರ್ಮಾದಿಗಳಿಗೆ ಬೇರೊಬ್ಬರ ಆಸರೆ ಅನಿವಾರ್ಯವಾಗಿದೆ. ಇದರ ಮಧ್ಯೆಯೂ ಮಗನಿಗೆ ಅಂಗವಿಕಲತೆಯಿಂದ ಮುಕ್ತಿಕೊಡಿಸಲು ಇನ್ನಿಲ್ಲದ ಕಸರತ್ತು ನಡೆಸಿರುವ ಬಡ ದಂಪತಿಗಳಿಗೆ ಬಡತನ ಅಡಿಯನ್ನುಂಟು ಮಾಡಿದೆ.`ಸುಣ್ಣ ತಯಾರಿಕೆ, ಮಾರಾಟಗಾರಿಕೆಯನ್ನೇ ನೆಚ್ಚಿಕೊಂಡು ಬದುಕು ಸಾಗಿಸುತ್ತಿರುವ ಸುಣಗಾರ ಕುಟುಂಬಕ್ಕೆ ನಿತ್ಯದ ತುತ್ತಿನ ಚೀಲ ತುಂಬಿಸಿಕೊಳ್ಳುವುದೇ ಕಷ್ಟ ಸಾಧ್ಯವಾಗಿರುವಾಗ ದೊಡ್ಡ ಮೊತ್ತದ ಹಣ ಖರ್ಚು ಮಾಡಿ, ಮಗನಿಗೆ ವೈಕಲ್ಯದಿಂದ ಮುಕ್ತಿ ಕೊಡಿಸುವುದು ಹೇಗೆ ಸಾಧ್ಯ' ಎಂದು ಪ್ರಶ್ನಿಸುವ ದೇವಪ್ಪ ಹಾಗೂ ನೀಲವ್ವ ದಂಪತಿ ನೆರವಿನ ನಿರೀಕ್ಷೆಯಲ್ಲಿದ್ದಾರೆ.   ಸರ್ಕಾರ ಬಾಲ ಸಂಜೀವಿನಿ ಸೇರಿದಂತೆ ಹತ್ತು-ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ, ವಿಕಲ ಚೇತನ ಬಾಲಕ ಪ್ರಕಾಶನ ವೈದ್ಯಕೀಯ ವೆಚ್ಚ ಭರಿಸಲು ಮಾತ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಪ್ರಕಾಶನ ತಂದೆ ದೇವಪ್ಪ ಆರೋಪಿಸಿದರು.ಅಂಗವಿಕಲರ ಬಾಳು ಹಸನಾಗಿಸಲು ಸರ್ಕಾರಗಳು ಮಹತ್ವದ ಯೋಜನೆ ಗಳನ್ನು ಜಾರಿಗೊಳಿಸುತ್ತಲೇ ಇವೆ. ಅಂಗವಿಕಲರ ಬಾಳಿನಲ್ಲಿ ಮಾತ್ರ ಹೊಂಬೆಳಕು ಮೂಡುತ್ತಿಲ್ಲ. ಸರ್ಕಾರಿ ಯೋಜನೆಗಳ ಅಸಮರ್ಪಕ ಅನುಷ್ಠಾನದಿಂದಾಗಿ ಅಸಂಖ್ಯಾತ ವಿಕಲ ಚೇತನರು ತಮ್ಮದಲ್ಲದ ತಪ್ಪಿಗಾಗಿ ಪರಾವಲಂಬಿಗಳಾಗಿಳಾಗಿ ದಯನೀಯ ಬದುಕು  ಸಾಗಿಸುವಂತಾಗಿದೆ. ಅಂಗವಿಕಲ ಬಾಲಕ ಪ್ರಕಾಶನಿಗೆ ನೆರವು ನೀಡ ಬಯಸುವವರು  ಮೊಬೈಲ್ ಸಂಖ್ಯೆ; 9611672199 ಗೆ ಸಂಪರ್ಕಿಸಲು ಕುಟುಂಬಸ್ಥರು ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry