ಗುರುವಾರ , ಜನವರಿ 23, 2020
23 °C
ಜಿಲ್ಲೆಯ ವಿವಿಧೆಡೆ ಅಂಗವಿಕಲರ ದಿನಾಚರಣೆ : ವಿವಿಧ ಸ್ಪರ್ಧೆ

ಅಂಗವಿಕಲರಲ್ಲಿ ಆತ್ಮ ಸ್ಥೈರ್ಯ ತುಂಬಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ನಗರದ ಎನ್‌ಡಿವಿ ಹಾಸ್ಟೆಲ್‌ ಮೈದಾನದಲ್ಲಿ ಮಂಗಳವಾರ ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ 6ರಿಂದ 14 ವರ್ಷದ ಮಕ್ಕಳಿಗೆ ಹಾಗೂ ಪೋಷಕರಿಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಬ್ಲಾಕ್‌ ಯೋಜನಾ ಸಮನ್ವಯಾಧಿಕಾರಿ  ಕಚೇರಿ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪೋಷಕರಿಗೆ ಮ್ಯೂಸಿಕಲ್‌ ಛೇರ್‌, ಮಕ್ಕಳಿಗೆ ಕೆರೆ–ದಡ, ಕಪ್ಪೆ ಓಟ, ಬಾಂಬ್ ಇನ್‌ ದಿ ಸಿಟಿ ಮುಂತಾದ ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಯಿತು. ಹಾಗೆಯೇ, ಚಿತ್ರಗೀತೆಗಳ ಸ್ಪರ್ಧೆಯನ್ನೂ ಏರ್ಪಡಿಸಲಾಗಿತ್ತು.ವಿಜೇತರಾದ ಮಕ್ಕಳು, ಪೋಷಕರಿಗೆ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಹೇಮಾಪಾವನಿ, ಜಿ.ಪಂ.ಸಿಇಒ ಸಸಿಕಾಂತ್‌ ಸೆಂಥಿಲ್  ಬಹುಮಾನ ವಿತರಿಸಿದರು.ಶಿವಮೊಗ್ಗ ತಾ.ಪಂ.ಅಧ್ಯಕ್ಷೆ ಉಣ್ಣಾಮಲೈ ದೇಸಿಂಗ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಸಮಾರಂಭದಲ್ಲಿ ಜಿಲ್ಲಾ ಪಂಚಾಯ್ತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಗಾಯತ್ರಿ ಷಣ್ಮುಖಪ್ಪ, ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ ಗಣಪತಿ, ಕ್ಷೇತ್ರ ಸಮನ್ವಯಾಧಿಕಾರಿ ಲೋಕೇಶಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಹಾಲಾನಾಯ್ಕ ಮತ್ತಿತರರು ಉಪಸ್ಥಿತರಿದ್ದರು.‘ಅರಿವು ಮೂಡಿಸಿ‘

ಸಾಗರ
: ದೈಹಿಕ ನ್ಯೂನತೆಯ ನಡುವೆಯೂ ಸಮಾಜದಲ್ಲಿ ಇತರರಂತೆ ಬದುಕಲು ಸಾಧ್ಯ ಎನ್ನುವ ಆತ್ಮಸ್ಥೈರ್ಯವನ್ನು ಅಂಗವಿಕಲರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕಿದೆ ಎಂದು ನಿವೃತ್ತ ಪ್ರಾಂಶುಪಾಲ ಅ.ಪು.ನಾರಾಯಣಪ್ಪ ಹೇಳಿದರು.ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ನಗರಸಭೆ  ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಂಗವಿಕಲರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಲಿಂಗಪ್ಪ ಮಾತನಾಡಿ, ಆರೋಗ್ಯವಂತ ಮಕ್ಕಳ ಜತೆಗೆ ವಿಶೇಷ ಅಗತ್ಯತೆಯುಳ್ಳ ಮಕ್ಕಳು ಕೂಡ ಶಿಕ್ಷಣ ಪಡೆಯಬೇಕು ಎನ್ನುವ ಉದ್ದೇಶದಿಂದ ಸರ್ಕಾರವು ವಿವಿಧ ನ್ಯೂನತೆಯ ಮಕ್ಕಳಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸಿದೆ ಎಂದು ತಿಳಿಸಿದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಕೃಷ್ಣಪ್ಪ, ಶಂಕರ್‌.ಕೆ.ಶಾಸ್ತ್ರಿ, ವಸುಮತಿ ದೇವರಾಜ್‌ ಹಾಜರಿದ್ದರು. ಪ್ರೇಮಾ ಭಾಸ್ಕರ್‌ಶೆಟ್ಟಿ ಪ್ರಾರ್ಥಿಸಿದರು. ವೈ.ಗಣೇಶ್‌ ಸ್ವಾಗತಿಸಿದರು. ಸದಾಶಿವ ವಂದಿಸಿದರು. ಪುಟ್ಟರಾಜ್‌ ಕಾರ್ಯಕ್ರಮ ನಿರೂಪಿಸಿದರು.ಮಕ್ಕಳ ಸಂಭ್ರಮ

ಹೊಸನಗರ: ‘
ಅಂಗವಿಕಲ ಮಕ್ಕಳಿಗೆ ಹಾಗೂ ಪೋಷಕರಿಗೆ ಖುಷಿ ನೀಡಿದ ಕ್ಷಣಗಳಿಗೆ  ಪಟ್ಟಣದ ನೆಹರೂ ಕ್ರೀಡಾಂಗಣ ಸಾಕ್ಷಿಯಾಗಿತ್ತು.

ಎಲ್ಲಾ ಮಕ್ಕಳಂತೆ 100 ಮೀ. ಓಟ, ಕೆರೆ–ದಡ, ಮಡಕೆ ಒಡೆಯುವುದು. ಚಮಚದಲ್ಲಿ ಲಿಂಬೆಹಣ್ಣಿ ಓಟವೂ ಸೇರಿದಂತೆ ಮಕ್ಕಳ ಜತೆಗೆ ಪೋಷಕರಿಗೂ ಸಹ ಕ್ರೀಡೆ–ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದರು.   ಮಂಗಳವಾರ ಅಂಗವಿಕಲರ ದಿನಾಚರಣೆ ಅಂಗವಾಗಿ  ಕ್ರೀಡಾಕೂಟ, ಸಾಂಸ್ಕೃತಿಕ ಸಂಜೆ ಹಾಗೂ ಅರ್ಹ ಮಕ್ಕಳಿಗೆ ಸಾಧನಾ ಸಲಕರಣೆ ವಿತರಣಾ ಸಮಾರಂಭದಲ್ಲಿ ತಾಲ್ಲೂಕಿನ 68ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪ, ವಿವಿಧ ನ್ಯೂನ್ಯತೆ ಇರುವ ಮಕ್ಕಳನ್ನು ಆಗಸ್ಟ್ ನಲ್ಲಿ ನುರಿತ ತಜ್ಞರಿಂದ ತಪಾಸಣೆ ಮಾಡಿಸಲಾಗಿತ್ತು. ಸರ್ವ ಶಿಕ್ಷಣ ಅಭಿಯಾನದಡಿಯಲ್ಲಿ ವೈದ್ಯರು ಸೂಚಿಸಿ ಸಾಧನೆ ಸಲಕರಣೆಯನ್ನು  ವಿತರಿಸಲಾಯಿತು ಎಂದರು.ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಗೀತಾ ಲಿಂಗಪ್ಪ ಉದ್ಘಾಟಿಸಿ ಮಾತನಾಡಿದ ತಾಲ್ಲೂಕು ಪಂಚಾಯ್ತಿ  ಅಧ್ಯಕ್ಷೆ ನಾಗರತ್ನಾ ದೇವರಾಜ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ತಹಶೀಲ್ದಾರ್‌ ಚಿದಂಬರ ಕುಲಕರ್ಣಿ, ಸರ್ವ ಶಿಕ್ಷಣ ಅಭಿಯಾನದ ಸಮನ್ವಯಾಧಿಕಾರಿ ಹಾಲಸಿದ್ಧಪ್ಪ, ರಾಜ್ಯ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ರೇಣುಕಪ್ಪ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಂಗಾನಾಯ್ಕ ಹಾಜರಿದ್ದರು.ಸಲಕರಣೆ ವಿತರಣೆ

ಭದ್ರಾವತಿ:
‘ಅಂಗವಿಕಲ ಮಕ್ಕಳಿಗೆ ಸಹಾನುಭೂತಿ ತೋರುವ ಬದಲು ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡಿ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್‌. ಸೋಮಶೇಖರಯ್ಯ ಹೇಳಿದರು.ಇಲ್ಲಿನ ಗುರುಭವನದಲ್ಲಿ ಮಂಗಳವಾರ ನಡೆದ ಅಂಗವಿಕಲರ ದಿನಾಚರಣೆ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು. ಸಂಪನ್ಮೂಲ ಕೇಂದ್ರದ ಧಾರುಕೇಶ್ ಮಾತನಾಡಿ ತಾಲ್ಲೂಕಿನಲ್ಲಿ 1041 ಅಂಗವಿಕಲ ಮಕ್ಕಳಿದ್ದು, ಅವರಲ್ಲಿ ವಿವಿಧ ಹಂತದ ಹತ್ತು ನ್ಯೂನ್ಯತೆ ಪರಿಗಣಿಸಿ ಅವರಿಗೆ ತರಬೇತಿ ನೀಡುವ ಕೆಲಸ ನಡೆದಿದೆ. ಇದಕ್ಕಾಗಿ ನೇಮಕಗೊಂಡ ಶಿಕ್ಷಕರು ಉತ್ತಮ ಸ್ಪಂದನೆ

ನೀಡುತ್ತಿದ್ದಾರೆ ಎಂದರು.ಮಕ್ಕಳಿಗೆ ಅವಶ್ಯವಿರುವ ಕೆಲವು ಸಲಕರಣೆ ಸಹ ವಿತರಿಸಲಾಯಿತು. ಜತೆಗೆ ಅವರಿಗೆ ಅವಶ್ಯವಿರುವ ಆರೋಗ್ಯ ರಕ್ಷಣೆಗೂ ಸಹ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಎಸ್‌.ಕುಮಾರ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಭುವನೇಶ್ವರಿ, ನಗರಸಭಾ ಸದಸ್ಯರಾದ ಆರ್‌. ಕರುಣಾಮೂರ್ತಿ, ಶಾಂಭವಿ, ವಿದ್ಯಾಶ್ರೀ, ಶಿವರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)