ಅಂಗವಿಕಲರಿಗಾಗಿ ವಾಹನ ವಿನ್ಯಾಸ

7

ಅಂಗವಿಕಲರಿಗಾಗಿ ವಾಹನ ವಿನ್ಯಾಸ

Published:
Updated:
ಅಂಗವಿಕಲರಿಗಾಗಿ ವಾಹನ ವಿನ್ಯಾಸ

ಸಾಮಾಜಿಕ ನ್ಯಾಯದ ಪರಿಕಲ್ಪನೆ ಬಹುಶಃ ವಾಹನ ಲೋಕಕ್ಕೂ ಅನ್ವಯಿಸುತ್ತಿದೆ ಎನಿಸುತ್ತಿದೆ. ಒಂದು ಕಾಲ ಘಟ್ಟದಲ್ಲಿ ವಾಹನ ಚಾಲನೆಯಿಂದ  ದೂರ ಉಳಿದಿದ್ದ ಅಂಗವಿಕಲರು ಇಂದು ಸ್ವತಂತ್ರವಾಗಿ ಯಾವುದೇ ವಾಹನವನ್ನು ಸುಲಭವಾಗಿ ಚಲಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಅಂಗವಿಕಲರು ಕೇವಲ ವಿಶ್ವ ದಾಖಲೆಗಾಗಿ ವಿಮಾನ, ರೈಲು, ಟ್ರಕ್ಕು, ಕಾರು, ಆಟೊ  ಸೇರಿದಂತೆ  ಲಘು ಮತ್ತು ಭಾರೀ ವಾಹನಗಳನ್ನು ಚಾಲನೆ ಮಾಡುತ್ತಿಲ್ಲ.

ಬದಲಿಗೆ ಕೆಲವರು ಅದನ್ನೇ ವೃತ್ತಿಯಾಗಿಸಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಇದೆಲ್ಲಾ ಸಾಧ್ಯವಾಗಿದ್ದು ಆಧುನಿಕ ತಂತ್ರಜ್ಞಾನ ಮತ್ತು ಆಟೊಮೊಬೈಲ್ ಕ್ಷೇತ್ರದ ಬೆಳವಣಿಗೆಯಿಂದ. ಇಂದು ಎಲ್ಲಿಗೆ ಬೇಕಾದರೂ ಸ್ವತಂತ್ರವಾಗಿ ತಾವೇ ವಾಹನಗಳನ್ನು ಚಾಲನೆ ಮಾಡಿಕೊಂಡು ಹೋಗಬಹುದು.  ಈ ತರಹದ ಹತ್ತಾರು ಮಾದರಿಯ ವಾಹನಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ.ಮೊದಲು ತ್ರಿಚಕ್ರ ಸೈಕಲ್‌ಗಳು ಮತ್ತು ಗಾಲಿಕುರ್ಚಿಗಳು ಬಂದವು. ಇವುಗಳನ್ನು  ಸರ್ಕಾರ ಮತ್ತು ಸ್ವಯಂ ಸೇವಾ ಸಂಸ್ಥೆಗಳು ತಯಾರಿಸಿ ಉಚಿತವಾಗಿ ನೀಡುತ್ತಿದ್ದವು. ಆದರೆ ಇಂದು ಅಂಗವಿಕಲರಿಗೆ ಅವಶ್ಯವಿರುವ  ಸಾಧನ ಸಲಕರಣೆಗಳನ್ನು  ತಯಾರಿಸುವ ದೊಡ್ಡ ದೊಡ್ಡ ಕಂಪೆನಿಗಳು ಹುಟ್ಟಿಕೊಂಡಿವೆ. ಇಂತಹ  ವಾಹನಗಳ ಮಾರುಕಟ್ಟೆಯು ಅಗಾಧವಾಗಿ ಬೆಳೆದಿದೆ. ಚೀನಾದ ಅಲಿಬಾಬಾ, ಆಸ್ಟ್ರೇಲಿಯಾದ ಕೆಂಗೂರು ಮತ್ತು ಅಮೆರಿಕದ ಒಟೊಬುಕ್ ಇದರಲ್ಲಿ ಪ್ರಮುಖ ಕಂಪೆನಿಗಳು. ಭಾರತದಲ್ಲಿ ಮೊಬಿಲಿಟಿ ಆಫ್ ಇಂಡಿಯಾ, ಎಪಿಡಿ, ಮೊಬಿಲಿಟಿ ಆಫ್ ಆಡ್ಸ್ ಕಂಪೆನಿಗಳು ಗಾಲಿಕುರ್ಚಿ, ಕ್ಯಾಲಿಪರ್ಸ್, ಬೈಕ್, ಸ್ಕೂಟರ್, ಕಾರ್, ಎಲೆಕ್ಟ್ರಿಕ್ ಗಾಲಿಕುರ್ಚಿಗಳನ್ನು ತಯಾರಿಸುತ್ತಿವೆ.ಈ ಕಂಪೆನಿಗಳು ಅಂಗವಿಕಲರ ದೇಹಕ್ಕೆ ಅನುಗುಣವಾಗಿ ವಾಹನಗಳನ್ನು ವಿನ್ಯಾಸ ಮಾಡಿಕೊಡುತ್ತಿವೆ. ಸ್ಕೂಟರ್‌ಗಳಿಗೆ ಎರಡು ಪ್ರತ್ಯೇಕ ಚಕ್ರಗಳನ್ನು ಜೋಡಿಸಿ ವಿನ್ಯಾಸ ಮಾಡಲಾಗುತ್ತದೆ. ಆದರೆ ಬೈಕ್‌ಗಳಿಗೆ ಹ್ಯಾಂಡಲ್‌ನಲ್ಲಿಯೇ  ಬ್ರೇಕ್, ಗೇರ್,  ಎಕ್ಸಲೇಟರ್‌ ಅಳವಡಿಸಲಾಗುತ್ತದೆ. ಈಗಂತೂ ಸ್ಥಳೀಯ ಆಟೊಮೊಬೈಲ್ ಗ್ಯಾರೇಜ್‌ನವರು ಬೈಕ್ ಮತ್ತು ಸ್ಕೂಟರ್‌ಗಳನ್ನು ವಿನ್ಯಾಸ ಮಾಡಿಕೊಡುತ್ತಾರೆ. ಯಾವ ಬ್ಯಾಲೆನ್ಸ್ ಇಲ್ಲದೇ ಈ ವಿನ್ಯಾಸಿತ ಸ್ಕೂಟರ್‌ ಮತ್ತು ಬೈಕ್‌ಗಳನ್ನು ಸುಲಭವಾಗಿ ಚಾಲನೆ ಮಾಡಬಹುದು.

ಪಕ್ಕದಲ್ಲಿ ಶಾಕ್ ಅಬ್ಸರ್ವರ್‌ ಸಮೇತ ಎರಡು ಚಕ್ರಗಳನ್ನು ಜೋಡಿಸಿರುವುದರಿಂದ ಗಾಡಿ ಮಗುಚಿಕೊಳ್ಳುವ ಭಯವಿಲ್ಲ.   ಹಾಗೇ ರಸ್ತೆ ತಿರುವುಗಳಲ್ಲಿ ವೇಗವಾಗಿ ಗಾಡಿಯನ್ನು ತಿರುಗಿಸಿದರೂ ಯಾವುದೇ ಅಪಾಯವಿಲ್ಲ ಎನ್ನುತ್ತಾರೆ ವಿನ್ಯಾಸಕರು. ಕಾರು ಚಾಲನೆ ಮಾಡ ಬಯಸುವವರು ಕಾರುಗಳನ್ನು ತಮಗೆ ಬೇಕಾದ ಹಾಗೇ ವಿನ್ಯಾಸ ಮಾಡಿಕೊಳ್ಳಬಹುದು.

ಗೇರ್, ಬ್ರೇಕ್ ಮತ್ತು ಎಕ್ಸಲೇಟರ್‌ ಅನ್ನು ಕೈಯಲ್ಲೆ ಆಪರೇಟ್ ಮಾಡಬಹುದು. ಒಂದು ಕೈಯಲ್ಲಿ  ರಿಂಗ್ ವೀಲ್‌ ಚಾಲನೇ ಹಾಗೂ ಮತ್ತೊಂದು ಕೈಯಲ್ಲಿ ಗೇರ್, ಬ್ರೇಕ್ ಮತ್ತು ಎಕ್ಸಲೇಟರ್‌ ಆಪರೇಟ್ ಮಾಡಬೇಕಾಗುತ್ತದೆ. ಕಾರು ಓಡಿಸುವುದು ಕೂಡ ಸ್ಕೂಟರ್‌ ಚಾಲನೆ ಮಾಡಿದಂತಯೇ! ಸ್ಕೂಟರ್ ಮತ್ತು ಬೈಕ್‌ಗಳ ಮರುವಿನ್ಯಾಸಕ್ಕೆ 20,000 ರೂ ಗಳಿಂದ 30,000 ರೂಪಾಯಿ ವೆಚ್ಚವಾಗುತ್ತದೆ.

ಇವುಗಳ ವಿನ್ಯಾಸಕ್ಕೆ ಸ್ಥಳೀಯ ದ್ವಿಚಕ್ರವಾಹನಗಳ ಶೋರೂಂ ಅನ್ನು ಸಂಪರ್ಕಿಸಬಹುದು. ಕಾರುಗಳ ವಿನ್ಯಾಸಕ್ಕೆ 60,000 ರೂಗಳಿಂದ 80,000 ರೂಪಾಯಿ ವೆಚ್ಚವಾಗುತ್ತದೆ.   ಕಾರುಗಳ ವಿನ್ಯಾಸಕ್ಕೆ ಆಲಿಬಾಬಾ ಅಥವಾ ಮೊಬಿಲಿಟಿ ಆಫ್‌ ಕಂಪೆನಿಗಳನ್ನು ಸಂಪರ್ಕಿಸಬಹುದು.

ವೆಬ್ ವಿಳಾಸ: http://www.mobility-aids.in

–ಪೃಥ್ವಿರಾಜ್ ಎಂ.ಎಚ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry