ಅಂಗವಿಕಲರಿಗೆ ಉನ್ನತ, ತಾಂತ್ರಿಕ ಶಿಕ್ಷಣ ಅವಕಾಶ

ಭಾನುವಾರ, ಮೇ 26, 2019
31 °C

ಅಂಗವಿಕಲರಿಗೆ ಉನ್ನತ, ತಾಂತ್ರಿಕ ಶಿಕ್ಷಣ ಅವಕಾಶ

Published:
Updated:

ಉಡುಪಿ: `ಅಂಗವಿಕಲ ವಿದ್ಯಾರ್ಥಿಗಳ ಕುಂದು ಕೊರತೆಗಳನ್ನು ಆಲಿಸಿ ಅವುಗಳಿಗೆ ಸಾಧ್ಯವಾದಷ್ಟು ಪರಿಹಾರ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕನಿಷ್ಟ ಎರಡು ತಿಂಗಳಿಗೊಮ್ಮೆಯಾದರೂ ವಿದ್ಯಾರ್ಥಿಗಳ ಜತೆ ಸಮಾಲೋಚನೆ ನಡೆಸಬೇಕು~ ಎಂದು ರಾಜ್ಯದ ಅಂಗವಿಕಲರ ಕಲ್ಯಾಣ ಇಲಾಖೆ ಆಯುಕ್ತ ಕೆ.ವಿ. ರಾಜಣ್ಣ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಇಲ್ಲಿ ಸೂಚಿಸಿದರು.ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಂಗವಿಕಲರಿಗೆ ಶೇ. 3ರ ಅನುದಾನ ಬಳಕೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.`ಉನ್ನತ ಹಾಗೂ ತಾಂತ್ರಿಕ ಶಿಕ್ಷಣದಲ್ಲಿ ಅಂಗವಿಕಲರಿಗೆ ಹೆಚ್ಚು ಒತ್ತು ನೀಡುವುದು ಅವಶ್ಯಕ. ಅಂಗವಿಕಲರಿಗೆ ಸರ್ಕಾರಿ ಉದ್ಯೋಗದಲ್ಲಿ ಕಾನೂನು ಪ್ರಕಾರ `ಎ~ ಮತ್ತು `ಬಿ~ ದರ್ಜೆಯಲ್ಲಿ ಶೇ 3 ಹಾಗೂ `ಸಿ~ ಮತ್ತು `ಡಿ~ ದರ್ಜೆಯಲ್ಲಿ ಶೆ 5ರಷ್ಟು ಮೀಸಲಾತಿ ನೀಡಬೇಕು~ ಎಂದರು.`ಕಾಲೇಜುಗಳಲ್ಲಿ ಅಂಗವಿಕಲರಿಗೆ ಉದ್ಯೋಗ ನಿರಾಕರಣೆ ಕುರಿತಂತೆ ರಾಜ್ಯದ ಹಲವೆಡೆಯಿಂದ ದೂರುಗಳು ಬಂದಿವೆ. ಈ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ಅಂಗವಿಕಲರಿಗೆ ಉದ್ಯೋಗ ನೀಡಿ ಪ್ರೋತ್ಸಾಹ ನೀಡಬೇಕಾಗಿದೆ~ ಎಂದರು.ಕಾಣುವ ವೈಕಲ್ಯಕ್ಕೆ ಮಂಡಳಿ ಪತ್ರ ಬೇಡ: `ಕಣ್ಣಿಗೆ ಕಾಣುವ ಅಂಗವಿಕಲತೆ ಇದ್ದರೆ ಅಂತಹವರಿಗೆ ಪ್ರಮಾಣ ಪತ್ರ ನೀಡಲು ವೈದ್ಯಕೀಯ ಮಂಡಳಿಯವರೆಗೆ ಹೋಗುವ ಅವಶ್ಯಕತೆ ಇಲ್ಲ. ಅವರಿಗೆ ಸ್ಥಳಿಯ ಮಟ್ಟದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯರು ಪ್ರಮಾಣ ಪತ್ರ ನೀಡಬಹುದು. ತೀವ್ರ ಅಂಗವೈಕಲ್ಯದಿಂದ ಆರೋಗ್ಯ ಕೇಂದ್ರಕ್ಕೆ ಹೋಗಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದರೆ ವೈದ್ಯರೇ ಅಂತಹವರ ಮನೆಗೆ ತೆರಳಿ ಪ್ರಮಾಣ ಪತ್ರ ನೀಡಬೇಕು~ ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಅಂಗವಿಕಲತೆ ಇರುವ ಮಹಿಳೆಯರಿಗೆ ಹೆಚ್ಚು ಒತ್ತು ನೀಡಬೇಕು. ಗ್ರಾಮೀಣ ಪ್ರದೇಶದಲ್ಲಿ ಗುರುತಿಸಲಾಗದೇ ಇರುವ ಅಂಗವಿಕಲರನ್ನು ಗುರುತಿಸಿ ಅವರಿಗೆ ಇಲಾಖೆಯ ಸೌಲಭ್ಯಗಳನ್ನು ನೀಡಬೇಕು~ ಎಂದು ಅವರು ಅಂಗವಿಕಲರ ಕಲ್ಯಾಣಾಧಿಕಾರಿಗೆ ಸೂಚಿಸಿದರು.ಸ್ಥಳೀಯ ಸಂಸ್ಥೆಗಳು  ಒಟ್ಟು ಅನುದಾನದಲ್ಲಿ ಶೇ 3ರ ನಿಧಿಯನ್ನು ಅಂಗವಿಕಲರ ಕಲ್ಯಾಣಕ್ಕಾಗಿ ಬಳಸಿರುವ ಬಗ್ಗೆ ಪರಿಶೀಲನೆ ನಡೆಸಿದರು. ಜಿಲ್ಲೆಯಲ್ಲಿ ಅಂಗವಿಕಲರ ಕಲ್ಯಾಣ ಯೋಜನೆಗಳಲ್ಲಿ ಸಾಧಿಸಲಾದ ಪ್ರಗತಿಯನ್ನು ಶ್ಲಾಘಿಸಿದ ಆಯುಕ್ತರು, ಇದು ಬೇರೆ ಜಿಲ್ಲೆಗಳಿಗೆ ಮಾದರಿಯಾಗಿದೆ ಎಂದರು. ಜಿಲ್ಲಾಧಿಕಾರಿ ಎಂ.ಟಿ. ರೇಜು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಶರ್ಮ, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಆರ್. ಶೇಷಪ್ಪ, ಮಕ್ಕಳ ಅಭಿವೃದ್ಧಿ ಕಾರ್ಯಯೋಜನಾಧಿಕಾರಿ  ಸದಾನಂದ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ  ಎಂ. ನಿರಂಜನ ಭಟ್ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry