ಮಂಗಳವಾರ, ಮಾರ್ಚ್ 2, 2021
31 °C

ಅಂಗವಿಕಲರಿಗೆ ಚಲಿಸುವ ಕಿರಾಣಿ!

ಸುಮಲತಾ ಎನ್. Updated:

ಅಕ್ಷರ ಗಾತ್ರ : | |

ಅಂಗವಿಕಲರಿಗೆ ಚಲಿಸುವ ಕಿರಾಣಿ!

ಅಂಗವಿಕಲರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡುವ ಹಾದಿಯಲ್ಲಿ ಸರ್ಕಾರ, ಸಂಘ ಸಂಸ್ಥೆಗಳು ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿವೆ. ಆದರೆ ಅವೆಲ್ಲವೂ ಎಲ್ಲರಿಗೂ ತಲುಪುವುದು ಕಷ್ಟಕರ. ಜೊತೆಗೆ ಅದರ ಪೂರ್ಣ ಪ್ರಯೋಜನ ಸಿಗುವುದೂ ವಿರಳ. ಇದೇ ಎಳೆಯನ್ನಿಟ್ಟುಕೊಂಡು ಅವರಿಗೆ ಅನುಕೂಲವಾಗುವ ಹೊಸ ಸಾಧ್ಯತೆಯ ದಾರಿಯಲ್ಲಿರುವುದು ‘ಚಲಿಸುವ ಚಿಲ್ಲರೆ ಅಂಗಡಿ’. ಇದು  ಅಂಗವಿಕಲರಿಗೆ ಉದ್ಯೋಗ ನೀಡುವುದರೊಂದಿಗೆ ಅವರ ಬದುಕನ್ನು ಹಸನು ಮಾಡುವ ಭರವಸೆಯನ್ನೂ ಹೊತ್ತಿದೆ.ಅಂದಹಾಗೆ ‘ಚಲಿಸುವ ಚಿಲ್ಲರೆ ಅಂಗಡಿ’ಯ ಹಿಂದಿನ ಕರ್ತೃ ಆಸ್ಟ್ರಿಚ್ ಮೊಬಿಲಿಟಿ ಸಂಸ್ಥೆ. ಈಗಾಗಲೇ ಎಲೆಕ್ಟ್ರಿಕ್ ವೀಲ್‌ಚೇರ್ ಉತ್ಪಾದನೆಯಲ್ಲಿ ಹೆಸರು ಮಾಡಿರುವ ಸಂಸ್ಥೆ ಈಗ ಹೊಸ ವಾಹನದತ್ತ ದೃಷ್ಟಿ ನೆಟ್ಟಿದೆ.ಸನ್ನಿ ಸ್ಪ್ಲೆಂಡರ್‌ (sunny splendor)

ಚಿಲ್ಲರೆ ಅಂಗಡಿ, ಕಿರಾಣಿ ಸ್ಟೋರುಗಳನ್ನು ಕೇಳಿದ್ದೆವು. ಆದರೆ ‘ಸನ್ನಿ ಸ್ಪ್ಲೆಂಡರ್’ ಎಂದರೇನು ಎಂಬ ಪ್ರಶ್ನೆ ಮೂಡಿರಬಹುದು. ಅಂಗವಿಕಲರಿಗೆ ವ್ಯಾಪಾರ ಮಾಡಲು ಅನುಕೂಲವಾಗುವಂತೆ ತಯಾರಿಸಿರುವ ಈ ವಾಹನದ ಹೆಸರೇ ‘ಸನ್ನಿ ಸ್ಪ್ಲೆಂಡರ್‌’.  ಅದರ ರೂಪುರೇಷೆಗಳು ಹೀಗಿವೆ... ಇದು ಸೋಲಾರ್ ಬೆಂಬಲಿತ ಚಲಿಸುವ ಪೆಟ್ಟಿಗೆ ಅಂಗಡಿ.  ಸೌರಶಕ್ತಿಯದ್ದಾದ್ದರಿಂದ ಇಂಧನಕ್ಕೆ ಹಣ ಸುರಿಯುವ ಅವಶ್ಯಕತೆ ಇಲ್ಲ. ಬ್ಯಾಟರಿ ಮೂಲಕ ಶಕ್ತಿ ಒದಗುತ್ತದೆ.ಸಂಪೂರ್ಣ ಹೊರಾಂಗಣ ವಾಹನ ವಾಗಿದ್ದು, ವ್ಯಾಪಾರಕ್ಕೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ವಸ್ತುಗಳನ್ನು ಇಡಲು ಸೂಕ್ತ ಸ್ಥಳಾವಕಾಶ ಕಲ್ಪಿಸಿದ್ದು, ಟೀ, ಸಣ್ಣ ಪುಟ್ಟ ಆಹಾರ ಸಾಮಗ್ರಿ,  ಮೊಬೈಲ್ ರೀಚಾರ್ಜ್‌ ಶಾಪ್,  ತರಕಾರಿ, ಹಣ್ಣು, ಐಸ್‌ಕ್ರೀಂ, ಚಿಕ್ಕ ಪುಟ್ಟ ದಿನಸಿ ಸಾಮಾನು, ದಿನ ಪತ್ರಿಕೆ, ಮ್ಯಾಗಜೀನ್ ಮಾರಾಟ ಮಳಿಗೆ, ಬಸ್‌ ಡೈಲಿ ಪಾಸ್ ಕೌಂಟರ್ ಇತ್ಯಾದಿ ಮಾರಾಟಕ್ಕೆ ಸಾಧ್ಯವಿದೆ.ಬ್ಯಾಟರಿಯನ್ನು ಒಮ್ಮೆ ಚಾರ್ಜ್‌ ಮಾಡಿದರೆ 45–55 ಕಿ.ಮೀ ಚಲಿಸಬಹುದು. ಎರಡು ಸೌರಶಕ್ತಿ ಪ್ಯಾನೆಲ್‌ಗಳು ಈ ಗಾಡಿಯಲ್ಲಿವೆ. ಪೂರ್ಣ ಬಿಸಿಲಿರುವ ದಿನ 800 ವ್ಯಾಟ್ ವಿದ್ಯುತ್ ಉತ್ಪಾದಿಸಬಲ್ಲದು. ಇದು ಮತ್ತೆ 15 ಕಿ.ಮೀ ವಾಹನ ಚಲಿಸಲು ಸಹಾಯ ಮಾಡುತ್ತದೆ. ಜೊತೆಗೆ ಬ್ಯಾಟರಿ ಪ್ಯಾಕ್ ಇದ್ದು,  ಎರಡು 12 ವೋಲ್ಟ್‌ನ 24 ಎಎಚ್‌ವಿಆರ್‌ಎಲ್‌ಎ ಬ್ಯಾಟರಿ ಪ್ಯಾಕ್ ಇದೆ.ಇದು ವಾಹನವನ್ನು ಸೂರ್ಯನ ಬೆಳಕಿಲ್ಲ ದಿರುವಾಗ ಚಲಿಸಲು ಅನುಕೂಲ ಮಾಡುತ್ತದೆ. ಇದೇ ಬ್ಯಾಟರಿ ಸೋಲಾರ್ ಪ್ಯಾನೆಲ್‌ಗಳಿಂದ ಉತ್ಪಾದನೆಯಾಗುವ ವಿದ್ಯುತ್ ಸಂಗ್ರಹಿಸಿಕೊಳ್ಳುತ್ತದೆ. ಬ್ಯಾಟರಿ ಪ್ಯಾಕ್ ಚಾರ್ಜ್ ಮಾಡಲು ಚಾರ್ಜರ್ ಇದೆ.  ಅದನ್ನು ಮನೆಯಲ್ಲಿರುವ ಸಾಮಾನ್ಯ ಪವರ್‌ ಸಾಕೆಟ್‌ಗಳಿಗೆ ಪ್ಲಗ್ ಹಾಕಬಹುದು.  ಚಾರ್ಜರ್‌ಗೆ ಸ್ವಯಂ ಕಟ್‌ಆಫ್ ಫೀಚರ್ ಇದ್ದು, ಹೆಚ್ಚು ಚಾರ್ಜಿಂಗ್ ತಪ್ಪಿಸುತ್ತದೆ. ಅವಶ್ಯಕ್ಕಿಂತ ಹೆಚ್ಚು ವಿದ್ಯುತ್ ಪಡೆಯುವುದಿಲ್ಲ.ಅಗತ್ಯಕ್ಕೆ ತಕ್ಕಂತೆ ಸೀಟು ಹೊಂದಿಸಿ ಕೊಳ್ಳಬಹುದು. 320 ವ್ಯಾಟ್ ಮೋಟಾರ್‌ಗಳ ಶಕ್ತಿ ಇರುವುದರಿಂದ ಏರು ತಗ್ಗು, ಗುಂಡಿ ರಸ್ತೆಗಳಲ್ಲೂ ಚಲಿಸಲು ಅನುಕೂಲ. ಈ ಮೋಟಾರ್‌ ಅನ್ನು 450 ವ್ಯಾಟ್‌ಗೆ ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ಅಪ್‌ಗ್ರೇಡ್ ಮಾಡಬಹುದು. 150 ಕೆ.ಜಿ ಭಾರ ಹೊತ್ತು ಗಂಟೆಗೆ 12 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವಿದೆ.ಹ್ಯಾಂಡಲ್, ಅಕ್ಸಲರೇಟರ್ ಬದಲಿಗೆ ಜಾಯ್‌ ಸ್ಟಿಕ್ ನಿಯಂತ್ರಣದಲ್ಲಿ  ಚಲಿಸುತ್ತದೆ. ವೇಗವನ್ನು ಐದು ವಿಭಿನ್ನ ಹಂತಗಳಲ್ಲಿ ಗಂಟೆಗೆ 1ಕಿ.ಮೀ ಕಡಿಮೆ ವೇಗ ದಿಂದ ಹೊಂದಿಸಿಕೊಳ್ಳಬಹುದು. ಟ್ರಾಫಿಕ್ ಪರಿಸ್ಥಿತಿಗೆ ಅನುಗುಣವಾಗಿ ಹಾರ್ನ್ ಕೂಡ ಅಳವಡಿಸಲಾಗಿದೆ. ಸೋಲಾರ್ ಪ್ಯಾನೆಲ್ ತಾರಸಿಯಂತೆಯೂ ಸಹಾಯಕ್ಕೆ ಬರುತ್ತದೆ. ಸರಳ ಟ್ಯೂಬ್ ಟೈರ್‌ ಬಳಸಿ ರುವುದರಿಂದ ಕೆಟ್ಟರೆ ಯಾವುದೇ ಪಂಕ್ಚರ್ ಶಾಪ್‌ ನಲ್ಲಿ ಸರಿಪಡಿಸಬಹುದು. ನಿರ್ವಹಣೆ ಸುಲಭ. ಸುರಕ್ಷತೆಗೆ ಎರಡೂ ಮೋಟಾರ್‌ಗಳಿಗೆ ಎಲೆಕ್ಟ್ರೋ ಮ್ಯಾಗ್ನೆಟಿಕ್ ಬ್ರೇಕ್‌ ನೀಡಲಾಗಿದೆ. ಇಷ್ಟೆಲ್ಲ ಅನುಕೂಲ ಗಳು ಇದ್ದ ಮೇಲೆ ಅಂಗವಿಕಲರು ಪ್ರತಿ ಮನೆ ಮನೆಯನ್ನು ತಲುಪುವ ಮೂಲಕ ವ್ಯಾಪಾರ ಮಾಡಲು ಸಾಧ್ಯವಾಗುತ್ತದೆ ಅಲ್ಲವೇ.ಬೆಲೆ ಹೆಚ್ಚು

‘ಸನ್ನಿ ಸ್ಪ್ಲೆಂಡರ್‌ಗೆ ಸಹಜವಾಗಿಯೇ ಬೆಲೆ ಹೆಚ್ಚು’ ಎನ್ನುತ್ತಾರೆ ಆಸ್ಟ್ರಿಚ್ ಮೊಬಿಲಿಟಿ ಸಂಸ್ಥೆಯ ಸಂಸ್ಥಾಪಕ ಹರಿ ವಾಸುದೇವನ್. ಇದರ ಬೆಲೆ ಒಂದು ಲಕ್ಷ ಇಪ್ಪತ್ತೈದು ಸಾವಿರ. ‘ವರ್ಷ ತುಂಬುವುದರೊಳಗೆ ಮೂಲೆ ಸೇರುವ ಉತ್ಪನ್ನಗಳನ್ನು  ತಯಾರಿಸುವುದ ಕ್ಕಿಂತ ಹೆಚ್ಚು ಬೆಲೆಯಾದರೂ ಉತ್ತಮ ಗುಣಮಟ್ಟದ ಉತ್ಪನ್ನ ತಯಾರಿಸಬೇಕು ಎನ್ನುವುದು ನಮ್ಮ ಉದ್ದೇಶ. ಜೀವನಪರ್ಯಂತ ಸೇವೆ ಲಭ್ಯ. ಹತ್ತು ವರ್ಷದ ವಾರೆಂಟಿ ನೀಡುತ್ತೇವೆ. ಬೆಲೆ ಕೇಳಿ  ಹುಬ್ಬೇರಿಸಿದವರೇ ಜಾಸ್ತಿ.ಆದರೆ ಬಳಸುತ್ತಿರುವ ವರನ್ನೂ ಕೇಳಿ. ದಿನವೊಂದಕ್ಕೆ ಮೂರು ಸಾವಿರ ರೂಪಾಯಿಗೂ ಹೆಚ್ಚು ದುಡಿಯುತ್ತಿದ್ದಾರೆ’  ಎಂದು ಮಾಹಿತಿ ನೀಡಿದರು ಹರಿವಾಸುದೇವನ್. ‘ಈ ವಾಹನಗಳು ಈಗಾಗಲೇ ಬೆಂಗಳೂರು ಮತ್ತು ಕೇರಳದಲ್ಲಿ ಚಲಿಸುತ್ತಿವೆ. ಬೆಂಗಳೂರಿನಲ್ಲಿ ಸದ್ಯಕ್ಕೆ ಐದು ಮಂದಿ ಉಪಯೋಗಿಸುತ್ತಿದ್ದಾರೆ. ಕೇರಳ ಸರ್ಕಾರದ ಜೊತೆ ಮಾತುಕತೆ ನಡೆದಿದೆ. ಇದು ಅಂಗವಿಕಲರ ಆರ್ಥಿಕ ಮಟ್ಟ ಸುಧಾರಿಸಿದೆ’ ಎನ್ನುವರು. ಸದ್ಯಕ್ಕೆ ಇದನ್ನು ಕೊಳ್ಳಲು ಸರ್ಕಾರದಿಂದ ಸಾಲ ಲಭ್ಯವಿಲ್ಲ.  ಕೆಲ ಸ್ವಯಂ ಸೇವಾ ಸಂಸ್ಥೆಗಳ ಬೆಂಬಲದಿಂದ ಕೆಲವರಿಗೆ ಇದು ಲಭ್ಯ.  ಕನಸುಗಾರ ಹರಿ

ಈ ರೀತಿ ಅಂಗವಿಕಲರಿಗೆಂದೇ ಸಾಧನ ತಯಾರಿಸುವ ಹಿಂದೆ  ಒಂದು ಕಥೆಯಿದೆ.  ಹರಿ ವಾಸುದೇವನ್ ಅವರಿಗೆ ಮೊದಲಿನಿಂದಲೂ ಎಲೆಕ್ಟ್ರಿಕ್ ಕಾರು, ಬೈಕ್‌ಗಳ ವಿನ್ಯಾಸ ಕ್ಷೇತ್ರದಲ್ಲಿ ಆಸಕ್ತಿ. ಎಲೆಕ್ಟ್ರಿಕ್ ಕಾರು ಉದ್ಯಮದಲ್ಲಿ ಆರು ವರ್ಷ ಗಳ ಸಂಶೋಧನೆ ಮತ್ತು ಅಭಿವೃದ್ಧಿ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿದ್ದರು.ಜೊತೆಗೆ  ರೇವಾ ಕಂಪೆನಿಯಲ್ಲೂ ಕೆಲಸ ಮಾಡಿದ್ದರು. ಈ ಕ್ಷೇತ್ರದಲ್ಲೇ ತಮ್ಮನ್ನು ಗುರುತಿಸಿಕೊಳ್ಳುವ ಹಂಬಲ ಅವರಿಗಿತ್ತು. ಆದರೆ ಅವರ ಈ ಆಲೋಚನೆಗಳಿಗೆ ತಿರುವು ಸಿಕ್ಕಿದ್ದು ಒಂದು ಭೇಟಿಯಿಂದ. ಅಂಗವಿಕಲ ಮಕ್ಕಳ ಹಾಸ್ಟೆಲ್‌ಗೆ ಒಮ್ಮೆ ಹೋಗಿದ್ದಾಗ ಅವರ ಯೋಚನೆಗಳೇ ಬದಲಾದವು.ಆಗ ಅಂಗವಿಕಲರಿಗೆ ಉಪಯೋಗವಾಗುವಂಥ ಕೆಲಸ ಆಯ್ದುಕೊಳ್ಳಬೇಕೆಂಬ ದೃಢ ಸಂಕಲ್ಪ  ಮೂಡಿತು. ಅಂಗವಿಕಲರಿಗೆ ಎಲೆಕ್ಟ್ರಿಕ್ ವೀಲ್‌ಚೇರ್ ವಿನ್ಯಾಸ ಮಾಡಿದರೆ ಹೇಗೆಂಬ ಯೋಚನೆಯೊಂದಿಗೇ 2004ರಲ್ಲಿ ಆಸ್ಟ್ರಿಚ್ ಸಂಸ್ಥೆ ಶುರು ಮಾಡಿದರು. ಆಗಿನ್ನೂ ವೀಲ್‌ಚೇರ್‌ ಬಳಕೆ ಬಗ್ಗೆ ಭಾರತೀಯರಿಗೆ ಸರಿಯಾದ ಮಾಹಿತಿ ಇರಲಿಲ್ಲ. ಇಲ್ಲಿನ ರಸ್ತೆಗಳಿಗೆ ತಕ್ಕಂತೆ ಎಲೆಕ್ಟ್ರಿಕ್ ವೀಲ್‌ಚೇರ್ ವಿನ್ಯಾಸ ಸವಾಲಿನ ಕೆಲಸವೇ ಆಗಿತ್ತು. ಆದರೂ ಕೈಚೆಲ್ಲಲಿಲ್ಲ.ಪವರ್ ವೀಲ್‌ಚೇರ್, ಮ್ಯಾನ್ಯುಯಲ್ ವೀಲ್‌ಚೇರ್, ಏರ್‌ಪೋರ್ಟ್‌ ವೀಲ್‌ಚೇರ್, ಮೊಬಿಲಿಟಿ ಸ್ಕೂಟರ್ ಕ್ರಾಸ್‌ಓವರ್, ಹೆಲ್ತ್‌ಕೇರ್ ಬೆಡ್‌ ಹೀಗೆ ಹಲವು ಉಪಯೋಗಗಳಿಗೆ ಸೂಕ್ತ ವೀಲ್‌ಚೇರ್‌ಗಳನ್ನು ವಿನ್ಯಾಸಗೊಳಿಸಿದರು. ತಮ್ಮ ಮೂರು ತಂತ್ರಜ್ಞಾನಕ್ಕೆ ಪೇಟೆಂಟ್ ಕೂಡ ಪಡೆದುಕೊಂಡರು. ಐಎಸ್‌ಒ 9001, ಸಿಆರ್‌ಐಎಸ್‌ ಐಎಲ್ ರೇಟಿಂಗ್ ಮತ್ತು ಎನ್‌ಎಸ್‌ಐಸಿ ದೃಢೀಕರಣ ದೊರೆತಿದ್ದು ಇವರ ಕೆಲಸಕ್ಕೆ ಇಂಬು ಕೊಟ್ಟಿತು.ಜತೆಗೆ ಅಂಗವಿಕಲರ  ಜೀವನೋಪಾಯಕ್ಕೆ ನೆರ ವಾಗುವ ತಂತ್ರಜ್ಞಾನ ರೂಪಿಸುವ ಆಲೋಚನೆ ಸೇರಿತು. ಭಾರತ ಅತ್ಯಂತ ಹೆಚ್ಚು ಅಂಗವಿಕಲರನ್ನೊಳಗೊಂಡ ದೇಶ. ಇಲ್ಲಿ ಸುಮಾರು 2.7 ಕೋಟಿ ಮಂದಿ (ಭಾರತ ಜನಗಣತಿ 2011ರ ಪ್ರಕಾರ) ಇದ್ದಾರೆ. 54 ಲಕ್ಷ ಜನರು ‘ದೈಹಿಕ ವೈಕಲ್ಯ’ ಹೊಂದಿದ್ದಾರೆ. ಕರ್ನಾಟಕದಲ್ಲಿ ಶೇ21ರಷ್ಟು ಮಂದಿ ಯಲ್ಲಿ 13 ಲಕ್ಷ ಜನರು ದೈಹಿಕ ವೈಕಲ್ಯ ಹೊಂದಿದ್ದಾರೆ.ಅಂಗವಿಕಲರ ಪರಿಷ್ಕೃತ ಕಾಯ್ದೆ ಪ್ರತಿಯೊಬ್ಬರಿಗೂ ಉದ್ಯೋಗ ಭರವಸೆ ನೀಡಿದರೂ ಕರ್ನಾಟಕದಲ್ಲಿ ಶೇ 70ರಷ್ಟು ಅಂಗವಿಕಲರು ನಿರುದ್ಯೋಗಿಗಳಾಗಿಯೇ ಉಳಿದಿದ್ದಾರೆ. ಅವರಲ್ಲಿ ಬಹಳಷ್ಟು ಮಂದಿ ಬಡತನದ ರೇಖೆಗಿಂತಲೂ ಕೆಳಗಿದ್ದಾರೆ. ಸೂಕ್ತ ಶಿಕ್ಷಣ, ಔದ್ಯೋಗಿಕ ವಾತಾವರಣ ಇಲ್ಲದೆ ನಿರುದ್ಯೋಗಿ ಗಳಾಗಿರುವವರದ್ದೂ ಹೆಚ್ಚು ಪಾಲು.ಸರ್ಕಾರ ಅಂಗವಿಕಲರ ಕಲ್ಯಾಣಕ್ಕೆ ಸಾಕಷ್ಟು ಯೋಜನೆ ತಂದಿದೆ. ಉಚಿತ ಸ್ಕೂಟರ್‌ ಗಳನ್ನೂ ನೀಡುತ್ತದೆ. ಆದರೆ ಅದಕ್ಕೆ ಇಂಧನ ಭರಿಸಲು ಸಾಧ್ಯವಾಗದೆ ಮಾರಿದವರು ಬೇಕಾದಷ್ಟು ಮಂದಿ ಎಂಬುದನ್ನು ಹರಿ ಕಂಡುಕೊಂಡರು. ಈ ಅಂಗವಿಕಲರ ಬಗೆಗಿನ ತುಡಿತ, ಅವರ ಉದ್ಯೋಗದ ಅಗತ್ಯ ಇತ್ಯಾದಿ ಕಾರಣಗಳು  ಸೋಲಾರ್ ಬೆಂಬಲಿತ ‘ಚಲಿಸುವ ಪೆಟ್ಟಿಗೆ ಅಂಗಡಿ’ ವಿನ್ಯಾಸಕ್ಕೆ ಮುನ್ನುಡಿಯಾಯಿತು. ಈ ಯೋಜನೆಗೆ ಐದು ಮಂದಿ ಗೆಳೆಯರು ಸಾಥ್ ನೀಡಿದರು. ಸಂಪರ್ಕಕ್ಕೆ: 9341126543. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.