ಬುಧವಾರ, ಜೂನ್ 16, 2021
23 °C

ಅಂಗವಿಕಲರಿಗೆ ಪ್ರತ್ಯೇಕ ಸಚಿವಾಲಯಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಅಂಗವಿಕಲರು ಮತ್ತು ಹಿರಿಯ ನಾಗರಿಕರಿಗೆ ಪ್ರತ್ಯೇಕ ಸಚಿವಾಲಯ ರಚಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗವಿಕಲರ ವೇದಿಕೆ ನೇತೃತ್ವದಲ್ಲಿ ಅಂಗವಿಕಲರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಧರಣಿ ನಡೆಸಿದರು.ಜಿಲ್ಲಾ ಮಟ್ಟದಲ್ಲಿ ಅಂಗವಿಕಲ ಅಧಿಕಾರಿಗಳನ್ನು ಉಪ ನಿರ್ದೇಶಕರ ದರ್ಜೆಗೆ ಏರಿಸಬೇಕು. ಅಂಗವಿಕಲರಿಗಾಗಿ ಖಾಲಿ ಇರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಬೇಕು. ಸರ್ಕಾರದ ಸ್ಥಳೀಯ ಸಂಸ್ಥೆಗಳು ಮತ್ತು ಎಲ್ಲ ಸಚಿವಾಲಯಗಳಲ್ಲೂ ಮೀಸಲಿರುವ ಶೇ 3 ರಷ್ಟು ಅನುದಾನವನ್ನು ಅನುಷ್ಠಾನಕ್ಕೆ ತರಬೇಕು. ತರದಿದ್ದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಧರಣಿನಿರತರು ಒತ್ತಾಯಿಸಿದರು.ಗ್ರಾಮೀಣ ಅಂಗವಿಕಲರ ಪುನರ್ವಸತಿ ಯೋಜನೆಯನ್ನು ಬಲವರ್ಧನೆಗೊಳಿಸಿ ಆ ಯೋಜನೆಯನ್ನು ನಗರ ಪ್ರದೇಶಕ್ಕೂ ವಿಸ್ತರಿಸಬೇಕು. ಯೋಜನೆಯ ಕಾರ್ಯಕರ್ತರನ್ನು ಕಾಯಂಗೊಳಿಸಬೇಕು ಮತ್ತು ಕನಿಷ್ಠ ಕೂಲಿ ವ್ಯಾಪ್ತಿಗೆ ಒಳಪಡಿಸಬೇಕು. ಅಂಗವಿಕಲರ ಜಿಲ್ಲಾ ಪುನರ್ವಸತಿ ಕೇಂದ್ರಗಳನ್ನು ರೆಡ್‌ಕ್ರಾಸ್‌ನಿಂದ ಹೊರತುಪಡಿಸಿ ನೇರವಾಗಿ ಸರ್ಕಾರವೇ ನಡೆಸಬೇಕು. ರಾಜ್ಯ ಮಟ್ಟದಲ್ಲಿ ಅಂಗವಿಕಲರ ಪೂರ್ಣ ಸಮೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು.ಪ್ರತಿ ತಿಂಗಳು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅಂಗವಿಕಲರ ಕುಂದುಕೊರತೆ ಸಭೆ ನಡೆಸಬೇಕು. ಎಲ್ಲ ತಾಲ್ಲೂಕುಗಳಲ್ಲಿ ತಹಶೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಅಂಗವಿಕಲರ ಕುಂದುಕೊರತೆ ಸಭೆ ನಡೆಸಬೇಕು.

 

ಗ್ರಾಮೀಣ ಅಂಗವಿಕಲರ ಪುನರ್ವಸತಿ ಯೋಜನೆಯ ಎಲ್ಲ ಉಸ್ತುವಾರಿ ಸಮಿತಿಯ ಸಭೆಗಳು, ತಾಲ್ಲೂಕು ಸಮಿತಿ ಸಭೆಗಳನ್ನು ಕಾಲಕಾಲಕ್ಕೆ ನಡೆಸುತ್ತಿಲ್ಲ. ಸಭೆಗಳನ್ನು ತಪ್ಪದೆ ನಡೆಸಬೇಕು. ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿರುವ ಅಂಗವಿಕಲರ ಮಾನಸಿಕ ನಿರ್ವಹಣ ಭತ್ಯೆಯನ್ನು ಶೀಘ್ರವೇ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.ಬಡತನ ರೇಖೆಗಿಂತ ಕೆಳಗಿರುವ ಅಂಗವಿಕಲರಿಗೆ ಅಂತ್ಯೋದಯ, ಬಿಪಿಎಲ್ ಕಾರ್ಡ್ ವಿತರಿಸಬೇಕು. ಆಶ್ರಯ ಮತ್ತು ಅಂಬೇಡ್ಕರ್ ಇಂದಿರಾ ಆವಾಜ್ ಬಸವ ಯೋಜನೆಗಳ ವಸತಿ ಗೃಹಗಳನ್ನು ಕೊಡಿಸಬೇಕು ಎಂದು ಧರಣಿನಿರತರು ಆಗ್ರಹಿಸಿದರು.ರಾಜ್ಯ ಅಂಗವಿಕಲರ ವೇದಿಕೆ ಜಿಲ್ಲಾ ಸಂಚಾಲಕ ಎನ್.ಬಸವರಾಜು, ಚಾಮರಾಜನಗರ ಜಿಲ್ಲಾ ಸಂಚಾಲಕ ಎಂ.ಪ್ರಭುಸ್ವಾಮಿ, ರಾಷ್ಟ್ರೀಯ ಅಂಧರ ಒಕ್ಕೂಟದ ಅಧ್ಯಕ್ಷ ಸಿದ್ದರಾಜು, ಸಿಕ್ರಂ ಮಾನವ ಹಕ್ಕುಗಳ ಸಂಸ್ಥೆಯ ಸಂಚಾಲಕ ಪ್ರಸನ್ನ, ಶ್ರೀಧರ್ ದೀಕ್ಷಿತ್, ಕುಮಾರ್, ಜಗದೀಶ್ ಧರಣಿಯ ನೇತೃತ್ವ ವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.