ಅಂಗವಿಕಲರಿಗೆ ಮಾಸಾಶನ ರದ್ದು: ಆಯುಕ್ತರ ಕಿಡಿ

7

ಅಂಗವಿಕಲರಿಗೆ ಮಾಸಾಶನ ರದ್ದು: ಆಯುಕ್ತರ ಕಿಡಿ

Published:
Updated:
ಅಂಗವಿಕಲರಿಗೆ ಮಾಸಾಶನ ರದ್ದು: ಆಯುಕ್ತರ ಕಿಡಿ

ಚಿತ್ರದುರ್ಗ: `ನೀವು ಆಡಿದ್ದೇ, ಮಾಡಿದ್ದೇ ಊಟ ಎನ್ನುವಂತಾಗಿದೆ. ನಾಯಿ ತರಹ ನಿಮ್ಮ ಕಚೇರಿಗೆ ಅಂಗವಿಕಲರು ಅಲೆದಾಡಬೇಕು. ನೀವು ದಬ್ಬಾಳಿಕೆ, ದೌರ್ಜನ್ಯ ಪ್ರದರ್ಶಿಸುತ್ತೀರಿ...~ ಅಂಗವಿಕಲ ಫಲಾನುಭವಿಗಳಿಗೆ ಮಾಸಾಶನ ರದ್ದುಪಡಿಸಿರುವ ಕ್ರಮಕ್ಕೆ ಅಂಗವಿಕಲರ ಅಧಿನಿಯಮ ರಾಜ್ಯ ಆಯುಕ್ತ ರಾಜಣ್ಣ ಅವರು, ಕಂದಾಯ ಇಲಾಖೆ ಅಧಿಕಾರಿಗಳನ್ನು  ತರಾಟೆಗೆ ತೆಗೆದುಕೊಂಡ ಪರಿ ಇದು.ಮಂಗಳವಾರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮಾಸಾಶನಗಳನ್ನು ರದ್ದುಪಡಿಸುವ ನೇರ ಅಧಿಕಾರ ನಿಮಗಿದೆಯೇ. ಒಂದು ವೇಳೆ ಅನರ್ಹ ಫಲಾನುಭವಿಗಳ ಅಂಗವಿಕಲ ಮಾಸಾಶನ ರದ್ದುಪಡಿಸಿದ್ದರೆ ಅಂತಹ ವ್ಯಕ್ತಿಗಳಿಂದ ಇದುವರೆಗೆ ಪಡೆದಿರುವ ಮಾಸಾಶನ ವಸೂಲಿ ಮಾಡಿದ್ದೀರಾ? ಈ ಬಗ್ಗೆ ಏನಾದರೂ ಕ್ರಮ ಕೈಗೊಂಡಿದ್ದೀರಾ?,

 

ಒಂದು ವೇಳೆ `ಅಂಗವಿಕಲ~ ಎಂದು ಸುಳ್ಳು ವೈದ್ಯಕೀಯ ಪ್ರಮಾಣಪತ್ರ ನೀಡಿರುವ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆಗೆ ಶಿಫಾರಸು ಮಾಡಿದ್ದೀರಾ. ಇಂತಹ ಒಂದಾದರೂ ಉದಾಹರಣೆ ನೀಡಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.ಜಿಲ್ಲೆಯಲ್ಲಿ ಸಾಮಾಜಿಕ ಭದ್ರತಾ ಯೋಜನೆ ಅಡಿಯಲ್ಲಿ 24,324 ಅಂಗವಿಕಲರು ಮಾಶಾಸನ ಪಡೆಯುತ್ತಿದ್ದು, ಈ ಬಗ್ಗೆ ಭೌತಿಕ ಪರಿಶೀಲನೆ ನಡೆಸಿದಾಗ 6,131 ಅಂಗವಿಕಲರ ಮಾಸಾಶನ ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಆಯುಕ್ತರು ಭೌತಿಕ ಪರಿಶೀಲನೆ ನಡೆಸಿ ರದ್ದುಗೊಳಿಸಿರುವ ಬಗ್ಗೆ ಭೌತಿಕ ಸಮೀಕ್ಷೆ ನಡೆಸುವುದಕ್ಕೆಮುಂಚೆ ಅವರಿಗೆ ಮಾಹಿತಿ ಸೂಚನೆ ನೀಡಲಾಗಿದೆಯೇ? ಹೇಗೆ? ಯಾವ ಕಾರಣ ನೀಡಿ ರದ್ದುಗೊಳಿಸಿದ್ದೀರಿ ಎಂದು ತಹಶೀಲ್ದಾರರುಗಳಿಗೆ ಕೇಳಿದರು. ರದ್ದುಗೊಳಿಸಿದಂತಹ ಪ್ರಕರಣಗಳನ್ನು ತಹಶೀಲ್ದಾರರು ಮತ್ತು ಉಪವಿಭಾಗಾಧಿಕಾರಿಗಳು  `ರ‌್ಯಾಂಡಂ ಚೆಕ್ ಮಾಡಿದ್ದೀರಾ? ಹೇಗೆ? ಎಂದು ಅವರು ಕೇಳಿದರು.ಚಿತ್ರದುರ್ಗ ತಾಲ್ಲೂಕಿನ ವಿವರ ನೀಡಿದ ತಹಶೀಲ್ದಾರ್ ಕುಮಾರಸ್ವಾಮಿ, ತಾಲ್ಲೂಕಿನಲ್ಲಿ 2,075 ಮಾಸಾಶನಗಳನ್ನು ರದ್ದುಪಡಿಸಲಾಗಿದೆ. ಭೌತಿಕ ಪರಿಶೀಲನೆ ಸಂದರ್ಭದಲ್ಲಿ ಗ್ರಾಮಗಳಲ್ಲಿ ಡಂಗುರ ಸಾರಲಾಗಿತ್ತು. ರದ್ದಾದ ಮಾಸಾಶನಗಳನ್ನು ಮರುಚಾಲನೆಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಭೌತಿಕ ಪರಿಶೀಲನಾ ಮುನ್ನ ಪತ್ರಿಕಾ ಪ್ರಕಟಣೆ ನೀಡಬೇಕು ಮತ್ತು ಡಂಗುರ ಸಾರಬೇಕು. ಇವೆರಡನ್ನು ಮಾಡಿಲ್ಲ. ಗ್ರಾಮಗಳಲ್ಲಿ ಡಂಗುರ ಹಾಕಿಸಿರುವ ಒಂದು ಉದಾಹರಣೆ ಕೊಡಿ. ಡಂಗುರ ಹಾಕಿಸಿದ್ದಾರೆಯೇ ಎಂದು ಸಭೆಯಲ್ಲಿದ್ದ ಅಂಗವಿಕಲರನ್ನು ಆಯುಕ್ತರು ಕೇಳಿದಾಗ `ಇಲ್ಲ~ ಎನ್ನುವ ಉತ್ತರ ಬಂತು. ಮಾಸಾಶನ ರದ್ದುಪಡಿಸಿದ ವ್ಯಕ್ತಿಗೆ ವಿವರಗಳನ್ನೂ ನೀಡಿಲ್ಲ. ಕಂದಾಯ ಇಲಾಖೆಯವರದ್ದು ಆಡಿದ್ದೇ ಆಟ, ಮಾಡಿದ್ದೇ ಊಟ ಎನ್ನುವಂತಾಗಿದೆ.

 

ಸಾರ್ವಜನಿಕರು, ಅಂಗವಿಕಲರು ನಾಯಿ ತರಹ ನಿಮ್ಮ ಹತ್ತಿರ ಅಲೆದಾಡಬೇಕು. ನೀವು ದಬ್ಬಾಳಿಕೆ, ದೌರ್ಜನ್ಯ ಪ್ರದರ್ಶಿಸುತ್ತೀರಿ. ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಸಹ ದಬ್ಬಾಳಿಕೆ ಮಾಡುತ್ತಾರೆ. ಸಮರ್ಪಕವಾದ ಕಾರಣಗಳಿಲ್ಲದೆ ಮಾಸಾಶನ ರದ್ದುಪಡಿಸಲಾಗಿದೆ.ರದ್ದುಪಡಿಸಿದ್ದರೆ ಮತ್ತೇಕೆ ಮರುಚಾಲನೆಗೊಳಿಸುವ ಅಗತ್ಯವೇನು?. ಡಂಗುರ ಹಾಕಿಸಿಲ್ಲ, ಪತ್ರಿಕಾ ಪ್ರಕಟಣೆ ಇಲ್ಲ, ಎಂಡೋರ್ಸ್‌ಮೆಂಟ್ ನೀಡಿಲ್ಲ ಎಂದು ಕುಮಾರಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಮೊಳಕಾಲ್ಮುರಿನಲ್ಲಿ 550 ರದ್ದುಪಡಿಸಲಾಗಿದ್ದು, ಮತ್ತೆ ಮರುಚಾಲನೆಗೊಳಿಸಲಾಗಿದೆ. ಕೆಲವರ ವಿಳಾಸ ದೊರೆತಿಲ್ಲ ಎಂದು ತಹಶೀಲ್ದಾರ್ ಮಾರುತಿ ವಿವರಿಸಿದರು.ಫಲಾನುಭವಿಗಳನ್ನು ಗ್ರಾಮ ಲೆಕ್ಕಾಧಿಕಾರಿ ಗುರುತಿಸಬೇಕು. ಕಂದಾಯ ನಿರೀಕ್ಷಕ, ತಹಶೀಲ್ದಾರ್ ಮತ್ತು ಉಪ ವಿಭಾಗಾಧಿಕಾರಿ ತಪಾಸಣೆ ಮಾಡಬೇಕು. ಈ ಪ್ರಕ್ರಿಯೆ ನಡೆದಿದ್ದರೆ ವರದಿ ನೀಡಿ. ಅಂತಿಮವಾಗಿ ಉಪ ವಿಭಾಗಾಧಿಕಾರಿಗಳೇ ಜವಾಬ್ದಾರರು. ನಿಜವಾದ ಫಲಾನುಭವಿಗಳಿಗೆ ಯಾವ ದಿನದಿಂದ ಮಾಸಾಶನ ರದ್ದಾಗಿದೆ ಆ ದಿನದಿಂದಲೇ ಹಣವನ್ನು ಮರುಪಾವತಿಸಬೇಕು.ಈ ಬಗ್ಗೆ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ. 15 ದಿನಗಳ ಒಳಗೆ ಮತ್ತೆ ಮಾಸಾಶನ ನೀಡಬೇಕು ಎಂದು ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.ಶೇಕಡಾ 75ರಷ್ಟು ಅಂಗವಿಕಲತೆ ಇದ್ದರೂ ತಮ್ಮ ಮಾಸಾಶನ ರದ್ದುಪಡಿಸಲಾಗಿದೆ ಎಂದು ಚಳ್ಳಕೆರೆಯ ರಾಜಪ್ಪ ಆಯುಕ್ತರ ಮುಂದೆ ದೂರಿದರು.ಸರ್ಕಾರಿ ಸೌಲಭ್ಯಗಳನ್ನು ನೀಡುವಾಗ ಅಂಗವಿಕಲರಿಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಹಿಂದುಳಿದ ಮತ್ತು ಅಲ್ಪಸಂಖ್ಯಾತ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲೆಯಲ್ಲಿ 4,540 ಅಂಗವಿಕಲ ವಿದ್ಯಾರ್ಥಿಗಳು ಇದ್ದಾರೆ. ಇದರಲ್ಲಿ 950 ಮಕ್ಕಳಿಗೆ ಅಲ್ಪದೃಷ್ಟಿ ಹೊಂದಿದ್ದಾರೆ. ಈ ಪೈಕಿ 32 ಮಕ್ಕಳಿಗೆ ಕನ್ನಡಕಗಳನ್ನು ವಿತರಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ಮಾಹಿತಿ ನೀಡಿದರು.ಈ ಬಗ್ಗೆ ಆಯುಕ್ತರು ಪ್ರಶ್ನಿಸಿ 950 ಮಕ್ಕಳಲ್ಲಿ ಕೇವಲ 32 ಮಕ್ಕಳಿಗೆ ಕನ್ನಡಕ ನೀಡಿದ್ದು, ಉಳಿದ ಮಕ್ಕಳಿಗೆ ದೃಷ್ಟಿ ಪರೀಕ್ಷೆ ನಡೆಸಿ ಕ್ರಮ ಕೈಗೊಳ್ಳದಿರುವುದಕ್ಕೆ ಅತೃಪ್ತಿ ವ್ಯಕ್ತಪಡಿಸಿದರು. ಸರ್ವ ಶಿಕ್ಷಣ ಅಭಿಯಾನದ ಯೋಜನೆ ಅಡಿಯಲ್ಲಿ 10 ವರ್ಷಗಳಿಂದ ಅಂಗವಿಕಲರ ಮಕ್ಕಳಿಗೆ ನೀಡಿರುವ ಸೌಲಭ್ಯಗಳ ಬಗ್ಗೆ ತನಿಖೆ ಮಾಡಲು ಎಲ್ಲ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಿಗೆ ಕೋರಲು ಚಿಂತನೆ ಮಾಡಲಾಗುವುದು. ಜತೆಗೆ ಹೈಕೋರ್ಟ್ ಮೊರೆ ಹೋಗಲಾಗುವುದು ಎಂದು ತಿಳಿಸಿದರು. ಚಿತ್ರದುರ್ಗ ನಗರಸಭೆ ವತಿಯಿಂದ ಅಂಗವಿಕಲರಿಗೆ ಸಹಾಯ-ಸೌಲಭ್ಯ ಒದಗಿಸಲು ರೂ10 ಲಕ್ಷ  ತೆಗೆದಿರಿಸಿದ್ದು ಇದರಲ್ಲಿ ರೂ9.21 ಲಕ್ಷ ವೆಚ್ಚ ಮಾಡಿ ಸಹಾಯ-ಸವಲತ್ತು ಕಲ್ಪಿಸಲಾಗಿದೆ ಎಂದು ತಿಳಿಸಿದರು.  ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ, ಹೆಚ್ಚುವರಿ ಜಿಲ್ಲಾಧಿಕಾರಿ ಎ.ಎಸ್. ನಿರ್ವಾಹಣಪ್ಪ, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ರುದ್ರಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಂಜುಂಡೇಗೌಡ, ಯೋಜನಾಧಿಕಾರಿ ಚಂದ್ರಪ್ಪ ಹಾಜರಿದ್ದರು.`ಐ ಬ್ಯಾಂಕ್~ಗೆ ನೇತ್ರದಾನ 

 ನಗರದ ಹಳೇ ಅಂಚೆ ಕಚೇರಿ ರಸ್ತೆ ವಾಸಿ ಜಿ.ಪಿ. ನವೀನ್ ಅವರ ತಾಯಿ ಎಲ್.ಸಿ. ರಾಜೇಶ್ವರಿ (59) ಮೃತರಾಗಿದ್ದು, ಅವರ ಕಣ್ಣುಗಳನ್ನು ಮೃತರ ಕುಟುಂಬದವರು ಬಸವೇಶ್ವರ ಪುನರ್‌ಜ್ಯೋತಿ ಐ ಬ್ಯಾಂಕ್‌ಗೆ ದಾನ ಮಾಡಿದ್ದಾರೆ ಎಂದು `ಐ ಬ್ಯಾಂಕ್~ನ ಕಾರ್ಯದರ್ಶಿ ಕೆ. ಮಧುಪ್ರಸಾದ್ ತಿಳಿಸಿದ್ದಾರೆ.ನೇತ್ರದಾನ ಮಾಡಲು ಇಚ್ಚಿಸುವವರು ಮೊಬೈಲ್: 94481 35226, 94480 83139ಗೆ ಸಂಪರ್ಕಿಸಲು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry