ಅಂಗವಿಕಲರಿಗೆ ಶೇ 50 ರಿಯಾಯಿತಿ

7

ಅಂಗವಿಕಲರಿಗೆ ಶೇ 50 ರಿಯಾಯಿತಿ

Published:
Updated:

ಮಡಿಕೇರಿ: ಕೊಡಗಿನಲ್ಲಿ ಸಂಚರಿಸುವ ಖಾಸಗಿ ಬಸ್ಸುಗಳಲ್ಲಿ ಅಂಗವಿಕಲರಿಗೆ ಶೆ.50 ರಷ್ಟು ರಿಯಾಯಿತಿ ಬಸ್ ದರ ನಿಗದಿ ಪಡಿಸಲಾಗಿದೆ ಎಂದು ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ನಗರದಲ್ಲಿ ಇತ್ತೀಚೆಗೆ ನಡೆದ ಬಸ್ ಮಾಲೀಕರ ಸಭೆಯಲ್ಲಿ ಸಂಘವು ಸಾರ್ವಜನಿಕರ ಹಿತ ದೃಷ್ಟಿಯಿಂದ ಕೆಲ ನಿರ್ಣಯ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಸಂಘದ ವತಿಯಿಂದ ಸಾರ್ವಜನಿಕರ ಮತ್ತು ಬಸ್ ಸಿಬ್ಬಂದಿಗಳ ಮಕ್ಕಳಿಗೆ 10ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ 2011-12ನೇ ಸಾಲಿಗೆ ಅನ್ವಯವಾಗುವಂತೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ವಿದ್ಯಾರ್ಥಿಗಳು ನವೆಂಬರ್ 30ರೊಳಗಾಗಿ ಅರ್ಜಿ ಸಲ್ಲಿಸಲು ಕೋರಿದ್ದಾರೆ.ರಾಜ್ಯ ರಸ್ತೆ ಸಾರಿಗೆಯ ಬಸ್‌ಗಳು ರಹದಾರಿ ಇಲ್ಲದೇ ಖಾಸಗಿ ಬಸ್‌ಗಳಿಗೆ ಅನಾವಶ್ಯಕ ಪೈಪೋಟಿ ನೀಡುತ್ತಿದ್ದು, ಈ ಕುರಿತು ಕ್ರಮ ವಹಿಸದಿದ್ದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಿರುವುದಾಗಿ ಅವರು ತಿಳಿಸಿದ್ದಾರೆ.ಅಪಘಾತ ಸಂಭವಿಸಿದಾಗ ಬಸ್‌ಗಳ ಮಾಲೀಕರಿಗೆ ಸಂಘದ ವತಿಯಿಂದ ನೀಡಲಾಗುತ್ತಿದ್ದ 5 ಸಾವಿರ ರೂಪಾಯಿ ಅಪಘಾತ ಪರಿಹಾರ ಮೊತ್ತವನ್ನು 10 ಸಾವಿರ ರೂಪಾಯಿಗೆ ಏರಿಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.ಕೊಡಗಿನ ಕೆಲ ಭಾಗದಲ್ಲಿ ನಡೆಯುವ ಸಂತೆ ಸೇರಿದಂತೆ ಇನ್ನಿತರ ದಿನಗಳಂದು ಮ್ಯಾಕ್ಸಿ ಕ್ಯಾಬ್, ಜೀಪು ಹಾಗೂ ಆಟೋ ರಿಕ್ಷಾಗಳು ಖಾಸಗಿ ಬಸ್‌ಗಳಿಗೆ ತೊಂದರೆ ಉಂಟುಮಾಡುತ್ತಿದ್ದು, ಈ ವಾಹನಗಳ ಓಡಾಟವನ್ನು ತಡೆಗಟ್ಟಲು ಕ್ರಮವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.ಜಿಲ್ಲೆಯ ಎಲ್ಲಾ ಖಾಸಗಿ ಬಸ್ ನಿಲ್ದಾಣಗಳಲ್ಲಿ ಮೂಲ ಸೌಲಭ್ಯ ಒದಗಿಸುವಂತೆ ಅಧಿಕಾರಿಗಳಿಗೆ ಮನವಿ ಪತ್ರ ನೀಡಲು ಸಭೆಯಲ್ಲಿ ತೀರ್ಮಾನಿಸಿರುವುದಾಗಿ ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry