ಶನಿವಾರ, ಮೇ 15, 2021
24 °C

ಅಂಗವಿಕಲರಿಗೆ ಶೇ.3 ರಷ್ಟು ಅನುದಾನ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: `ಅಂಗವಿಕಲರಿಗೆ ಕಡ್ಡಾಯವಾಗಿ ಶೇ. 3ರಷ್ಟು ಅನುದಾನ ಮೀಸಲಿಡುವ ಬಗ್ಗೆ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಸೂಚಿಸಲಾಗಿದೆ~ ಎಂದು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಜೈಕೃಷ್ಣ ತಿಳಿಸಿದರು.ನಗರದ ತಾ.ಪಂ. ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ, ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ, ಜಿಲ್ಲಾ ವಿಕಲಚೇತನರ ಕ್ಷೇಮಾಭಿವೃದ್ಧಿ ಸಮಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಸರ್ವಶಿಕ್ಷಣ ಅಭಿಯಾನದಡಿ `ಮಾನಸಿಕ ಆರೋಗ್ಯದ ಬಗ್ಗೆ ಪ್ರಾಥಮಿಕ ಹಂತದಲ್ಲಿ ಪತ್ತೆಹಚ್ಚುವ ಮತ್ತು ತಡೆಗಟ್ಟುವಿಕೆ~ ಕುರಿತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಮತ್ತು ಕ್ಷೇತ್ರ ಸಂಪನ್ಮೂಲ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಅಂಗವಿಕಲರಿಗೆ ಸರ್ಕಾರ ಕಲ್ಪಿಸಿರುವ ಸೌಲಭ್ಯ ಒದಗಿಸುವುದು ಅಧಿಕಾರಿಗಳ ಹೊಣೆ. ನಿರ್ಲಕ್ಷ್ಯ ಮಾಡಬಾರದು. ಪ್ರತಿ ಗ್ರಾ.ಪಂ.ಗೆ ಮಂಜೂರಾಗುವ 30 ಮನೆಗಳಲ್ಲಿ ಒಂದು ಮನೆಯನ್ನು ಅಂಗವಿಕಲರಿಗೆ ಮೀಸಲಿಡಬೇಕು. ಇಲ್ಲವಾದಲ್ಲಿ ಫಲಾನುಭವಿಗಳ ಪಟ್ಟಿಯನ್ನು ತಿರಸ್ಕರಿಸಲಾಗುವುದು. ವಸೂಲಿಯಾದ ತೆರಿಗೆ ಹಣದಲ್ಲೂ ಅಂಗವಿಕಲರಿಗೆ ನಿಯಮಾನುಸಾರ ಸೌಲಭ್ಯ ಕಲ್ಪಿಸಲು ಅನುದಾನ ಮೀಸಲಿಡಬೇಕು ಎಂದರು.ಪ್ರಭಾರ ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಅಧಿಕಾರಿ ರೇವಣೇಶ್ ಮಾತನಾಡಿ, `ಅಂಗವಿಕಲರಿಗೆ ನೀಡಲು ಸಾಧನ ಸಲಕರಣೆಗಳು ಪೂರೈಕೆಯಾಗಿವೆ. ಅಂಗವಿಕಲರಿಂದಲೂ ಅರ್ಜಿ  ಸ್ವೀಕರಿಸಲಾಗಿದೆ. ಶೀಘ್ರವೇ, ಹೋಬಳಿಮಟ್ಟದಲ್ಲಿ ಶಿಬಿರ ನಡೆಸಿ ಅರ್ಹರಿಗೆ ಸಲಕರಣೆ ವಿತರಿಸಲಾಗುವುದು~ ಎಂದು ಹೇಳಿದರು.ಗುರುತಿನ ಚೀಟಿ ವಿತರಣೆ ಸಂಬಂಧ ತಾಲ್ಲೂಕು ಮತ್ತು ಹೋಬಳಿ ಕೇಂದ್ರದಲ್ಲಿ ತಪಾಸಣಾ ಶಿಬಿರ ನಡೆಸಲಾಗುವುದು. ನಂತರ, ಅರ್ಹರಿಗೆ ಗುರುತಿನ ಚೀಟಿ ವಿತರಿಸಲಾಗುತ್ತದೆ ಎಂದರು.ಮಾನಸಿಕ ತಜ್ಞ ಡಾ.ರಾಜೇಶ್ ಮಾತನಾಡಿ, ಪ್ರಾಥಮಿಕ ಹಂತದಲ್ಲಿಯೇ ಮಾನಸಿಕ ಅಸ್ವಸ್ಥತೆಯನ್ನು ಪತ್ತೆಹಚ್ಚುವ ಬಗ್ಗೆ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಮತ್ತು ಕ್ಷೇತ್ರ ಸಂಪನ್ಮೂಲ ಶಿಕ್ಷಕರಿಗೆ ಮಾಹಿತಿ ನೀಡಿದರು.ಮೊಬಿಲಿಟಿ ಇಂಡಿಯಾದ ಕಾರ್ಯಕ್ರಮ ವ್ಯವಸ್ಥಾಪಕ ಎಸ್.ಎನ್. ಆನಂದ್, ಜಿಲ್ಲಾ ವಿಕಲಚೇತನರ ಕ್ಷೇಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಎನ್. ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ವಿ. ಕುಮಾರ್, ಕ್ಷೇತ್ರ ಸಂಪನ್ಮೂಲ ಶಿಕ್ಷಕರಾದ ರಂಗನಾಥ್, ಚಿನ್ನಪ್ಪ, ಶಿವರಾಜ್, ಕೃಷ್ಣಪ್ಪ, ಚಿಗುರು ಅಂಗವಿಕಲರ ಒಕ್ಕೂಟದ ಅಧ್ಯಕ್ಷ ಶಿವಪ್ಪ ಇತರರು ಹಾಜರಿದ್ದರು. ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲ್ಲೂಕಿನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.