ಅಂಗವಿಕಲರ ಮಾಸಾಶನ ರದ್ದತಿ ಕಂದಾಯ ಅಧಿಕಾರಿಗಳೇ ಕಾರಣ

7

ಅಂಗವಿಕಲರ ಮಾಸಾಶನ ರದ್ದತಿ ಕಂದಾಯ ಅಧಿಕಾರಿಗಳೇ ಕಾರಣ

Published:
Updated:

ಚಿತ್ರದುರ್ಗ: ಕಂದಾಯ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ರಾಜ್ಯದಲ್ಲಿ 1.60 ಲಕ್ಷ ಅಂಗವಿಕಲರ ಮಾಸಾಶನ ರದ್ದಾಗಿದೆ ಎಂದು ಅಂಗವಿಕಲರ ಅಧಿನಿಯಮ ಆಯೋಗದ ರಾಜ್ಯ ಆಯುಕ್ತ ಕೆ.ವಿ. ರಾಜಣ್ಣ ದೂರಿದರು.ಅಧಿಕಾರಿಗಳು ಖುದ್ದು ಪರಿಶೀಲನೆ ನಡೆಸದೇ ಕುಳಿತ ಜಾಗದಲ್ಲಿಯೇ ದಾಖಲೆ ತಯಾರಿಸಿದ್ದಾರೆ. ಗ್ರಾಮಲೆಕ್ಕಾಧಿಕಾರಿಗಳು ಹಳ್ಳಿಗೆ ಹೋಗಿಲ್ಲ. ಮೊದಲು ಗ್ರಾಮಲೆಕ್ಕಿಗರು ಮನೆಗೆ ಹೋಗಿ ಅಂಗವಿಕಲರನ್ನು ಭೇಟಿ ಮಾಡಬೇಕು. ನಂತರ ಕಂದಾಯ ನಿರೀಕ್ಷಕರು ದಾಖಲೆ ತಪಾಸಣೆ ಮಾಡಬೇಕು. ನಂತರ ತಹಶೀಲ್ದಾರ್ ಅವರಿಗೆ ಮಾಹಿತಿ ನೀಡಬೇಕು. ಅಂತಿಮವಾಗಿ ಈ ಎಲ್ಲ ಪ್ರಕ್ರಿಯೆಗಳಿಗೆ ಉಪ ವಿಭಾಗಾಧಿಕಾರಿಗಳು ಜವಾಬ್ದಾರರಾಗಿರುತ್ತಾರೆ. ಆದರೆ, ಈ ಯಾವ ಅಧಿಕಾರಿಯೂ ಅಂಗವಿಕಲರ ಮನೆ ಬಳಿ ಹೋಗಿಲ್ಲ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.ಅರ್ಹ ಫಲಾನುಭವಿಗಳಿಗೆ ಮಾಸಾಶನ ರದ್ದುಪಡಿಸಿದ್ದರೆ ರದ್ದುಪಡಿಸಿದ ದಿನದಿಂದಲೇ ಮಾಸಾಶನ ನೀಡಬೇಕು ಎಂದು ಜುಲೈ 23 ರಂದು ಸುತ್ತೋಲೆ ಹೊರಡಿಸಲಾಗಿದೆ. ಈ ಎಲ್ಲ ವಿಷಯಗಳ ಬಗ್ಗೆ ಚರ್ಚಿಸಲು ಅ. 18ರಂದು ಹಾಜರಾಗುವಂತೆ ಎಲ್ಲ ಉಪ ವಿಭಾಗಾಧಿಕಾರಿಗಳಿಗೆ ಸಮನ್ಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.ಅಂಗವಿಕಲತೆ ಬಗ್ಗೆ ನಕಲಿ ವೈದ್ಯಕೀಯ ಪ್ರಮಾಣಪತ್ರಗಳನ್ನು ಸಲ್ಲಿಸಿ ಸೌಲಭ್ಯ ಪಡೆದರೆ ಅಂತಹವರಿಗೆ 2 ವರ್ಷ ಜೈಲು ಹಾಗೂ 20 ಸಾವಿರ ದಂಡ ವಿಧಿಸುವ ಹಕ್ಕು ಕಾಯ್ದೆಯಲ್ಲಿದೆ. ನಕಲಿ ಪ್ರಮಾಣಪತ್ರ ನೀಡುವ ವೈದ್ಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಅವರು ಆರೋಗ್ಯ ಇಲಾಖೆಗೆ ಶಿಫಾರಸು ಮಾಡಬೇಕು. ಆದರೆ, ರಾಜ್ಯದಲ್ಲಿ ಇದುವರೆಗೆ ಯಾವುದೇ ಒಂದೇ ಒಂದು ಇಂತಹ ಪ್ರಕರಣವೂ ಇಲ್ಲ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry