ಅಂಗವಿಕಲರ ಶಾಲೆ ಶಿಕ್ಷಕರ ಹುದ್ದೆ ಖಾಲಿ

7

ಅಂಗವಿಕಲರ ಶಾಲೆ ಶಿಕ್ಷಕರ ಹುದ್ದೆ ಖಾಲಿ

Published:
Updated:

ಮೈಸೂರು: ರಾಜ್ಯ ಸರ್ಕಾರ ಮೈಸೂರು, ಗುಲ್ಬರ್ಗ, ಬಳ್ಳಾರಿ, ಬೆಳಗಾವಿ, ದಾವಣಗೆರೆ ಮತ್ತು ಹುಬ್ಬಳ್ಳಿಯಲ್ಲಿ ನಡೆಸುತ್ತಿರುವ ದೃಷ್ಟಿದೋಷ ಹಾಗೂ ಶ್ರವಣದೋಷವುಳ್ಳ ಮಕ್ಕಳ ಎಂಟು ಶಾಲೆಗಳಲ್ಲಿ 48 ಶಿಕ್ಷಕರ ಹುದ್ದೆಗಳು ಆರು ವರ್ಷಗಳಿಂದ ಖಾಲಿ ಉಳಿದಿವೆ.

ಶ್ರವಣದೋಷ ಇರುವ ಮಕ್ಕಳಿಗಾಗಿ ಗುಲ್ಬರ್ಗ, ಮೈಸೂರು, ಬಳ್ಳಾರಿ ಮತ್ತು ಬೆಳಗಾವಿಯಲ್ಲಿ ನಾಲ್ಕು ಶಾಲೆ ತೆರೆಯಲಾಗಿದೆ.

ಈ ಪೈಕಿ ಬೆಳಗಾವಿಯ ನೆಹರೂ ನಗರದಲ್ಲಿರುವ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ದೃಷ್ಟಿದೋಷ ಇರುವ ಮಕ್ಕಳಿಗಾಗಿ ಗುಲ್ಬರ್ಗ, ಮೈಸೂರು, ದಾವಣಗೆರೆ ಮತ್ತು ಹುಬ್ಬಳ್ಳಿಯಲ್ಲಿ ನಾಲ್ಕು ಶಾಲೆಗಳಿದ್ದು, ದಾವಣಗೆರೆಯ ದೇವರಾಜ ಅರಸು ಕಾಲೊನಿಯಲ್ಲಿರುವ ಶಾಲೆ ವಿದ್ಯಾರ್ಥಿನಿಯರಿಗೆ ಮೀಸಲಾಗಿದೆ.

ಈ ಎಂಟೂ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತ ಶಿಕ್ಷಣ, ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಿದೆ. ಪ್ರತಿ ವರ್ಷ ವಿದ್ಯಾರ್ಥಿವೇತನ ನೀಡುತ್ತಿದೆ. ಆದರೆ, ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡದ್ದರಿಂದ ಅಂಗವಿಕಲ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಪರದಾಡುವಂತಾಗಿದೆ.

ಈ ಶಾಲೆಗಳಲ್ಲಿ 600 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ಸಾಮಾನ್ಯ ಶಾಲೆಗಳ ಶಿಕ್ಷಕರು ನಿಯೋಜನೆಗೆ ಮೇರೆಗೆ ಪಾಠ  ಮಾಡುತ್ತಿದ್ದಾರೆ.

1982ರ ಅನುದಾನಿತ ನಿಯಮಾವಳಿ (ಗ್ರಾಂಟ್ ಇನ್ ಕೋಡ್) ಪ್ರಕಾರ ಅಂಗವಿಕಲರ ಶಾಲೆಗಳನ್ನು ನಡೆಸುವ ಸ್ವಯಂ ಸೇವಾ ಸಂಸ್ಥೆಗಳಿಗೆ (ಎನ್‌ಜಿಒ) ರಾಜ್ಯ ಸರ್ಕಾರ ಶೇ. 100 ರಷ್ಟು ಅನುದಾನ ನೀಡುತ್ತಿದೆ. ಈ ಅನುದಾನವನ್ನು ಶಿಕ್ಷಕರ ಸಂಬಳ, ಇತರೆ ಖರ್ಚುಗಳಿಗೆ ಬಳಸಬೇಕು ಎಂದು ಸೂಚಿಸಲಾಗಿದೆ. ಆದರೆ, ಸ್ವಯಂ ಸೇವಾ ಸಂಸ್ಥೆಗಳು ಶಿಕ್ಷಕರಿಗೆ ಕಡಿಮೆ ವೇತನ ನೀಡುತ್ತಿವೆ. ಇದರಿಂದಾಗಿ ಸ್ವಯಂ ಸೇವಾ ಸಂಸ್ಥೆಗಳು ನಡೆಸುತ್ತಿರುವ ಶಾಲೆಗಳಲ್ಲೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಲಭ್ಯವಾಗುತ್ತಿಲ್ಲ ಎನ್ನುವುದು ಪೋಷಕರ ಅಳಲು.

`ಅಂಗವಿಕಲ ಮಕ್ಕಳಿಗಾಗಿ ಮಗು ಕೇಂದ್ರಿತ ಶಿಕ್ಷಣ ವ್ಯವಸ್ಥೆ ಜಾರಿಗೆ ತರಲಾಗಿದೆ.

ಇದರಡಿ ಶಿಕ್ಷಣ ನೀಡುವ ಸ್ವಯಂ ಸೇವಾ ಸಂಸ್ಥೆಗಳಿಗೆ ಒಂದು ಮಗುವಿಗೆ 2 ಸಾವಿರ ರೂಪಾಯಿ, ವಸತಿ ಶಾಲೆಯಾದರೆ 2,500 ರೂಪಾಯಿ ನೀಡಲಾಗುತ್ತಿದೆ. ಆದರೆ, ಇದು ಅತ್ಯಂತ ಅವೈಜ್ಞಾನಿಕವಾಗಿದೆ.

ಯಾವ ಆಧಾರದ ಮೇಲೆ ಈ ಯೋಜನೆ ಜಾರಿಗೆ ತರಲಾಗಿದೆ ಎಂಬುದೇ ಗೊತ್ತಾಗಿಲ್ಲ. ಸರ್ಕಾರದ ಅನುದಾನ ನೇರವಾಗಿ ಎನ್‌ಜಿಒಗಳಿಗೆ ಪಾವತಿ ಆಗುವುದರಿಂದ ಅಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಭದ್ರತೆ ಇಲ್ಲದಂತಾಗಿದೆ' ಎಂದು ನೊಂದ ಶಿಕ್ಷಕರು ಹೇಳುತ್ತಾರೆ.

`48 ಹುದ್ದೆಗಳು ಖಾಲಿ ಇರುವ ಬಗ್ಗೆ  ರಾಜ್ಯಪಾಲರಿಗೆ ಪತ್ರ ಬರೆಯಲಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅಂಗವಿಕಲ ಮಕ್ಕಳ ಶಾಲೆಗಳನ್ನು ನಡೆಸುತ್ತಿರುವ ಎನ್‌ಜಿಒಗಳಿಗೆ ಅನುದಾನ ನೀಡುತ್ತಿದ್ದು, 90 ಶಾಲೆಗಳು ಈ ಅನುದಾನ ಪಡೆಯುತ್ತಿವೆ. ಆದರೆ, ಶಿಕ್ಷಕರಿಗೆ ನೀಡುವ ಸಂಭಾವನೆ ಅತ್ಯಂತ ಕಡಿಮೆಯಾಗಿದೆ.

ಅಂಗವಿಕಲರ ಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರಿಗೂ ರಾಜ್ಯ ಸರ್ಕಾರದ ಅನುದಾನಿತ ಶಾಲೆಗಳ ಶಿಕ್ಷಕರು ಪಡೆಯುವಷ್ಟು ಸಂಬಳ ನೀಡಬೇಕು' ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ರಾಜ್ಯ ಆಯುಕ್ತ ಕೆ.ವಿ.ರಾಜಣ್ಣ `ಪ್ರಜಾವಾಣಿ'ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry