ಸೋಮವಾರ, ಅಕ್ಟೋಬರ್ 14, 2019
22 °C

ಅಂಗವಿಕಲರ ಸ್ವಸಹಾಯ ಸಂಘ ಸ್ಥಾಪನೆ

Published:
Updated:

ಧಾರವಾಡ: “ಅಂಗವಿಕಲರ ಜೀವನಕ್ಕೆ ಸಹಾಯ ಒದಗಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ವಿಶೇಷ ಯೋಜನೆಗಳ ಜಾರಿಗೆ ತಾಲ್ಲೂಕಿಗೊಂದರಂತೆ 176 ಅಂಗವಿಕಲರ ಸ್ವಸಹಾಯ ಸಂಘಗಳನ್ನು ಸ್ಥಾಪಿಸಲಾಗುತ್ತಿದೆ” ಎಂದು ರಾಜ್ಯದ ಅಂಗವಿಕಲ ವ್ಯಕ್ತಿಗಳ ಆಯೋಗದ ಆಯುಕ್ತ ಕೆ.ವಿ.ರಾಜಣ್ಣ ಹೇಳಿದರು.ಸೋಮವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಅಂಗವಿಕಲರ ಸೌಲಭ್ಯ ವಿಸ್ತರಣೆ, ಇಲಾಖೆ, ಸಂಸ್ಥೆಗಳ ಅನುದಾನದಲ್ಲಿ ಶೇ. 3 ರಷ್ಟು ಕಾಯ್ದಿರಿಸಿ ಅದರ ಕ್ರಿಯಾಯೋಜನೆ ರೂಪಿಸುವ ಕುರಿತು ನಡೆದ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಸಂಘಕ್ಕೂ 25,000 ರೂ. ಮೂಲಧನ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.ವಿಶ್ವ ಆರೋಗ್ಯ ಸಂಸ್ಥೆಯು ಅಂಗವಿಕಲರ ಉತ್ತಮ ಜೀವನ ವ್ಯವಸ್ಥೆಗಾಗಿ ಯೋಜಿಸಿರುವ ಆರು ಅಂಶ ಸಿದ್ಧಾಂತಗಳನ್ನು ಪ್ರಾಯೋಗಿಕವಾಗಿ ಧಾರವಾಡದಲ್ಲಿ ಪ್ರಾರಂಭಿಸಲಾಗಿದೆ. ಇದು ರಾಜ್ಯಕ್ಕೆ ಮಾದರಿಯಾಗುವ ಕೆಲಸ. ಜಿಲ್ಲೆಯಲ್ಲಿನ ಅಂಗವಿಕಲರ ಕುರಿತ ಯೋಜನೆಗಳ ಒಟ್ಟಾರೆ ಪರಿಶೀಲನೆ ಹಾಗೂ ಜಾರಿ ಕುರಿತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮುದಾಯ ಆಧಾರಿತ ಪುನಶ್ಚೇತನ ಸಂಸ್ಥೆ (ಸಿಬಿಆರ್ ಸೊಸೈಟಿ) ನೋಂದಾವಣಿಯಾಗಿರುವುದು ಪ್ರಥಮ ಹೆಜ್ಜೆಯಾಗಿದೆ ಎಂದರು.ಅಂಗವಿಕಲ ವ್ಯಕ್ತಿಗಳಿಗೆ ಯಾವುದೇ ಜಾತಿ, ಭಾಷೆ, ಅಂತಸ್ತು, ನಗರ, ಗ್ರಾಮೀಣ ಎನ್ನುವ ನಿರ್ಬಂದಗಳಿಲ್ಲದೇ ಅವಕಾಶಗಳು ಹಾಗೂ ಸೌಲಭ್ಯಗಳು ಲಭ್ಯವಾಗಬೇಕು. ಈ ಬಗ್ಗೆ ಇಂದಿನ ಸಭೆಯಲ್ಲಿ ಅನುದಾನದ ಶೇ. 3ರ ಹಣದಲ್ಲಿ ಅಂಗವಿಕಲರಿಗೆ ಆಯಾ ಇಲಾಖೆಯಿಂದ ಉತ್ತಮ ಸೌಲಭ್ಯಗಳು ದೊರಕಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.ಜಿಲ್ಲೆಯ ನಗರ ಪ್ರದೇಶಗಳಲ್ಲಿ ಒಟ್ಟು 1.71 ಕೋಟಿ ರೂ. ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅಂದಾಜು ಒಂದು ಕೊಟಿ ರೂಪಾಯಿ ಅನುದಾನ ಲಭ್ಯವಾಗಲಿದೆ. ಜಿಲ್ಲೆಯ ಶಾಸಕರು ತಲಾ ಐದು ಲಕ್ಷ ರೂಪಾಯಿ, ಸಂಸದರು 10 ಲಕ್ಷ ರೂಪಾಯಿ ಹಾಗೂ ಸ್ಥಳೀಯ ಸಂಸ್ಥೆಗಳು ಶೇ. 3 ರಷ್ಟು ಹಣವನ್ನು ಅಂಗವಿಕಲರಿಗಾಗಿಯೇ ರೂಪಿಸಿದ ಯೋಜನೆಗಳಿಗೆ ನೀಡಬೇಕು ಎಂದರು.ಜಿಲ್ಲಾಧಿಕಾರಿ ದರ್ಪಣ ಜೈನ್ ಮಾತನಾಡಿ, ಜಿಲ್ಲೆಯಲ್ಲಿ ನಗರ ಪ್ರದೇಶದಲ್ಲಿಯೇ ಹೆಚ್ಚಿನ ಜನಸಂಖ್ಯೆ ಇದೆ. ಎಲ್ಲ ಇಲಾಖೆಗಳು ಹಣಕಾಸಿನ ವರ್ಷಾಂತ್ಯಕ್ಕೆ ಹಿಮ್ಮರಳಿಸಲಾಗದ ಶೇ. 3 ರಷ್ಟು ಹಣವನ್ನು ಪ್ರತ್ಯೇಕ ಖಾತೆಯಲ್ಲಿಟ್ಟುಕೊಂಡು ಯೋಜನೆಯಾಧಾರಿತ ಅಂಗವಿಕಲ ಸ್ನೇಹಿ ಯೋಜನೆಗಳನ್ನು ಜಾರಿಗೊಳಿಸಲು ಸಭೆಯಲ್ಲಿ ತಿಳಿಸಲಾಗಿದೆ. ಅಂಗವಿಕಲರಿಗಾಗಿ ಉದ್ಯೋಗಾವಕಾಶ, ಮನೆ, ಉನ್ನತ ಶಿಕ್ಷಣಕ್ಕಾಗಿ ಸಾಲ ಸೌಲಭ್ಯ, ವೈದ್ಯಕೀಯ ಚಿಕಿತ್ಸೆ ಮತ್ತಿತರ ಸೌಲಭ್ಯಗಳು ದೊರಕುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು.ನಗರ ಪ್ರದೇಶಗಳಲ್ಲಿ ಅಂಗವಿಕಲ ವ್ಯಕ್ತಿಗಳ ಅಂಕಿಅಂಶಕ್ಕಾಗಿ (ಡಾಟಾ ಬೇಸ್) ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಅಂಗವಿಕಲರ ವಿಸ್ತ್ರತ ಅಂಕಿಅಂಶ ಶೇಖರಣೆಗೆ ಸಾಫ್ಟವೇರ್ ತಯಾರಿಸಲು ಎನ್‌ಐಸಿಗೆ ಕೇಳಲಾಗಿದೆ. ಜಿಲ್ಲೆಯಲ್ಲಿ ಅಂದಾಜು 23 ಸಾವಿರ ಅಂಗವಿಕಲರಿದ್ದು, ಮೂರು ವರ್ಷಗಳ ಅವಧಿಯಲ್ಲಿ ಅಗತ್ಯದ ಸೌಲಭ್ಯ ಒದಗಿಸಲು ಸಾಧ್ಯವಾಗಲಿದೆ ಎಂದರು.ಅಂಗವಿಕಲರ ಕಲ್ಯಾಣಕ್ಕಾಗಿ ಜಿಲ್ಲೆಯ ಸಾಕಷ್ಟು ಸರ್ಕಾರೇತರ ಸಂಸ್ಥೆಗಳು ಗಮನಾರ್ಹ ಸೇವೆ ಸಲ್ಲಿಸುತ್ತಿದ್ದು, ಸೌಲಭ್ಯ ತಲುಪಿಸಲು ಅವರ ಸೇವೆಯನ್ನು ಬಳಸಿಕೊಳ್ಳಲಾಗುವುದು. ಜಿಲ್ಲೆಯಲ್ಲಿ ಖೊಟ್ಟಿ ದಾಖಲೆ ನೀಡಿ ಅಂಗವಿಕಲರ ಮಾಶಾಸನ ಪಡೆಯುತ್ತಿದ್ದ 3500 ವ್ಯಕ್ತಿಗಳ ಸೌಲಭ್ಯ ತೆಗೆದು ಹಾಕಲಾಗಿದೆ ಎಂದು ಹೇಳಿದರು.

ಸಾಮಾಜಿಕ ಭದ್ರತೆಯ ವಿವಿಧ ಮಾಶಾಸನಗಳ ಕುರಿತು ಪ್ರಾಥಮಿಕ ಸಮೀಕ್ಷೆಯಲ್ಲಿ ಒಟ್ಟಾರೆ 17 ಸಾವಿರ ಅನರ್ಹ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಅವರಿಗೆ ಸೌಲಭ್ಯ ವಿತರಣೆ ನಿಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಸರೋಜಿನಿ ಕಡೇಮನಿ ಹಾೂ ಅಂಗವಿಕಲ ಅಧಿಕಾರಿ ಸಿ.ಎ.ಮುತ್ತಣ್ಣ ಪತ್ರಿಕಾಗೋಷ್ಠಿಯಲ್ಲಿದ್ದರು.ಬೈಕ್ ರ‌್ಯಾಲಿ ಇಂದು

ಧಾರವಾಡ: ಪ್ರಾದೇಶಿಕ ಸಾರಿಗೆ ಕಚೇರಿ 23ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಜ. 3 ರಂದು ಬೈಕ್ ರ‌್ಯಾಲಿ ಹಮ್ಮಿಕೊಂಡಿದೆ.ಅಂದು ಬೆಳಿಗ್ಗೆ 9ಕ್ಕೆ ಕಲಾಭವನದ ಮೈದಾನದಿಂದ ರ‌್ಯಾಲಿ ಆರಂಭವಾಗಲಿದ್ದು, ಹುಬ್ಬಳ್ಳಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಮುಕ್ತಾಯವಾಗಲಿದೆ ಎಂದು ಆರ್‌ಟಿಒ ಜಿ.ಪುರಷೋತ್ತಮ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post Comments (+)