ಶುಕ್ರವಾರ, ಜೂನ್ 18, 2021
29 °C

ಅಂಗವಿಕಲ ಕ್ರೀಡಾಪಟುವಿಗೆ 13 ಲಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕ್ರೀಡಾರಂಗದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದರೂ, ತಮಗೆ ಸಿಗಬೇಕಿರುವ ಹಣಕ್ಕಾಗಿ ದಶಕದ ಕಾಲ ಸಮರ ಸಾರಿದ್ದ ಅಂಗವಿಕಲ ಕ್ರೀಡಾಪಟುವಿನ ನೆರವಿಗೆ ಹೈಕೋರ್ಟ್ ಧಾವಿಸಿದೆ.ನಗರದ ಜಿ.ವೆಂಕಟರವಣಪ್ಪ ಎಂಬ ಕ್ರೀಡಾ ಪಟುವಿಗೆ ಕಾನೂನಿನ ಅನ್ವಯ ಸಿಗಬೇಕಿರುವ 13ಲಕ್ಷ ರೂಪಾಯಿಗಳನ್ನು ಮೂರು ತಿಂಗಳ ಒಳಗೆ ನೀಡುವ ಸಂಬಂಧ ಪರಿಗಣಿಸುವಂತೆ ನ್ಯಾಯಮೂರ್ತಿಗಳಾದ ಕೆ.ಎಲ್.ಮಂಜುನಾಥ ಹಾಗೂ ಬಿ.ಮನೋಹರ ಅವರನ್ನು ಒಳಗೊಂಡ ವಿಭಾಗೀಯ ಪೀಠ ಆದೇಶಿಸಿದೆ.

ತಮಗೆ ದಕ್ಕಬೇಕಿರುವ ಈ ಹಣಕ್ಕಾಗಿ 2002ರಿಂದ ಸರ್ಕಾರದ ಕದ ತಟ್ಟಿ ಸೋತು ಕೊನೆಯದಾಗಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಹಲವು ಸಾಧನೆ ಮಾಡಿ ಅರ್ಜುನ ಪ್ರಶಸ್ತಿ, ಏಕಲವ್ಯ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ವೆಂಕಟರವಣಪ್ಪ ಅವರಿಗೆ ಈಗ ನ್ಯಾಯ ದಕ್ಕಿದೆ. 1999ರಲ್ಲಿ ಜಾರಿಗೆ ಬಂದಿರುವ ಸರ್ಕಾರದ ಮಾರ್ಗಸೂಚಿ ಅನ್ವಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಕ್ರೀಡಾಪಟುಗಳು ಪಡೆದುಕೊಂಡಿರುವ ಪದಕಗಳಿಗೆ ಅನುಗುಣವಾಗಿ ಹಣದ ಬಹುಮಾನ ನೀಡಲಾಗುತ್ತದೆ.ಅದರಂತೆ ತಾವು ಪಡೆದುಕೊಂಡಿರುವ ಚಿನ್ನ, ಬೆಳ್ಳಿ, ಕಂಚಿನ ಪದಕಗಳ ಮೊತ್ತವನ್ನು ಗಣನೆಗೆ ತೆಗೆದುಕೊಂಡರೆ ಅದು 13 ಲಕ್ಷ ರೂಪಾಯಿ ಆಗುತ್ತದೆ. ಇದನ್ನು ನೀಡುವಂತೆ ತಾವು ಹಲವು ಬಾರಿ ಸರ್ಕಾರಕ್ಕೆ, ಸಚಿವರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನ ಆಗಲಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿತ್ತು.

ಸರ್ಕಾರದ ಕ್ರಮಕ್ಕೆ ನ್ಯಾಯಮೂರ್ತಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

 

`ಇವರು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಗೆದ್ದು ಭಾರತಕ್ಕೆ ಹೆಸರು ತಂದುಕೊಟ್ಟಿದ್ದಾರೆ. ಬಹುಮಾನ ನೀಡುವ ಸಂಬಂಧ ಮಾರ್ಗಸೂಚಿ ಇದ್ದರೂ ಒಬ್ಬ ಅಂಗವಿಕಲ ಕ್ರೀಡಾಪಟುವಿಗೆ ಈ ರೀತಿ ತೊಂದರೆ ನೀಡಿರುವುದು ಉಚಿತವಲ್ಲ~ ಎಂದು ತಿಳಿಸಿದರು.ಮಕ್ಕಳಿಗಾಗಿ ತಾಯಿ ಮೊರೆ

ಕಳ್ಳತನದ ಆರೋಪ ಹೊರಿಸಿ ಭಾರತಿನಗರದ ಪೊಲೀಸರು ತಮ್ಮ ಮಕ್ಕಳನ್ನು ಬಂಧಿಸಿ ಹಿಂಸೆ ನೀಡುತ್ತಿರುವುದಾಗಿ ದೂರಿ ಮಹಿಳೆಯೊಬ್ಬರು ಹೈಕೋರ್ಟ್ ಮೊರೆ ಹೋಗಿದ್ದಾರೆ.ಉಮ್ಮೆಸಲ್ಮಾ ಎಂಬ ಮಹಿಳೆ ಮುಖ್ಯ ನ್ಯಾಯಮೂರ್ತಿಗಳಿಗೆ ಈ ಕುರಿತು ಪತ್ರ ಬರೆದಿದ್ದರು. ಈ ಪತ್ರವನ್ನೇ ಸ್ವಯಂ ಪ್ರೇರಿತವಾಗಿ ಹೇಬಿಯಸ್ ಕಾರ್ಪಸ್ ಅರ್ಜಿಯಾಗಿ ಪರಿವರ್ತಿಸಿರುವ ಕೋರ್ಟ್, ಅದರ ವಿಚಾರಣೆ ನಡೆಸುತ್ತಿದೆ.ಮೊಹಮ್ಮದ್ ಯಾಸೀನ್, ಮೊಹಮ್ಮದ್ ಜುಬೇರ್, ಮೊಹಮ್ಮದ್ ಬರ್ಖಾತ್ ಉಲ್ಲಾ ಅವರನ್ನು ಎಳೆದುಕೊಂಡು ಹೋಗಿರುವ ಪೊಲೀಸರು ವಿಚಾರಣೆ ಹೆಸರಿನಲ್ಲಿ ತೀವ್ರವಾಗಿ ಹಿಂಸಿಸುತ್ತಿದ್ದಾರೆ. ಇದರಿಂದ ತಮ್ಮ ಮಕ್ಕಳ ಪ್ರಾಣಕ್ಕೆ ಬೆದರಿಕೆ ಇದೆ ಎಂದು ಅವರು ಪತ್ರದಲ್ಲಿ ದೂರಿದ್ದರು.ಪೊಲೀಸ್ ಇನ್ಸ್‌ಪೆಕ್ಟರ್ ಪ್ರಮೋದ್ ಕುಮಾರ್, ಪಿಎಸ್‌ಐ ರವಿ ಅವರೇ ಈ ಕೃತ್ಯ ಎಸಗಿದ್ದಾರೆ ಎನ್ನುವುದು ಮಹಿಳೆ ಆರೋಪ. ಈ ಆರೋಪಗಳನ್ನು ಪೊಲೀಸರು ತಳ್ಳಿಹಾಕಿದ್ದಾರೆ. ನ್ಯಾಯಮೂರ್ತಿ ಡಾ.ಕೆ.ಭಕ್ತವತ್ಸಲ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ಮುಂದೂಡಿದೆ.ಮರ ಕಡಿಯದಂತೆ ಆದೇಶ

 ಶಾಸಕರ ಭವನದ ಎದುರು ಬಹುಮಹಡಿ ಕಾರು ಪಾರ್ಕಿಂಗ್ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸುವಾಗ ಕಬ್ಬನ್ ಉದ್ಯಾನ ವ್ಯಾಪ್ತಿಯ ಯಾವುದೇ ಮರಗಳನ್ನು ಕಡಿಯದಂತೆ ಹೈಕೋರ್ಟ್, ಬಿಬಿಎಂಪಿಗೆ ಮಂಗಳವಾರ ಆದೇಶಿಸಿದೆ. ಮರ ಕಡಿಯುವ ಸಂಬಂಧ ಈ ಹಿಂದೆ ತಾವು ಹೊರಡಿಸಿರುವ ಆದೇಶವನ್ನು ವಿಸ್ತರಿಸಿ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.ಪಾರ್ಕಿಂಗ್ ನಿರ್ಮಾಣಕ್ಕೆ ತಡೆ ಕೋರಿ ರಮೇಶ್‌ಬಾಬು ಎನ್ನುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ. ಕಳೆದ ಬಾರಿ ಆದೇಶ ಹೊರಡಿಸಿದ ನಂತರವೂ ಮರ ಕಡಿಯುವುದು ಮುಂದುವರಿದಿದೆ ಎಂದು ಅರ್ಜಿದಾರರ ಪರ ವಕೀಲ ಎ.ವಿ.ಅಮರನಾಥನ್ ಪೀಠದ ಗಮನಕ್ಕೆ ತಂದರು. ಇದರ ಸತ್ಯಾಸತ್ಯತೆ ಪರಿಶೀಲಿಸಿ ತಮಗೆ ತಿಳಿಸುವಂತೆ ಪೀಠ ಸರ್ಕಾರಕ್ಕೆ ಸೂಚಿಸಿ ವಿಚಾರಣೆ ಮುಂದೂಡಿತು.

ಅಧಿಕಾರಿಗಳ ಹಾಜರಿಗೆ ಆದೇಶ

ಮೀಸಲು ಅರಣ್ಯ ಪ್ರದೇಶದಲ್ಲಿ ಸಾಗುವಳಿ ಮಾಡಲು ಅನುಮತಿ ನೀಡಿರುವ ವಿವಾದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಖುದ್ದು ಹಾಜರಿಗೆ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.ಇದೇ 30ರಂದು ಹಾಜರು ಆಗುವಂತೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ಆದೇಶಿಸಿದೆ. ಈ ಆದೇಶದ ಮೇರೆಗೆ ಕೌಶಿಕ್ ಮುಖರ್ಜಿ ಹಾಗೂ ಅಶೋಕ್ ಕುಮಾರ್ ಮುನೋಳಿ ಅವರು ಹಾಜರು ಇರಬೇಕಿದೆ.ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿನ ಸುಮಾರು 88 ಎಕರೆ ಜಮೀನಿನ ವಿವಾದ ಇದಾಗಿದೆ. ಇಲ್ಲಿ ಕೆಲವರು ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದರು.ಇವರೆಲ್ಲ ಸಣ್ಣ ಹಿಡುವಳಿದಾರರು ಆಗಿರುವ ಕಾರಣ  ಅವರಿಗೇ ಆ ಜಮೀನು ನೀಡಲು ಸರ್ಕಾರ ಮುಂದಾಗಿ 1980ರಲ್ಲಿ ಸರ್ಕಾರ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. 28 ವರ್ಷಗಳ ನಂತರ 2008ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಯಿತು. ಇದನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಂದ ಕೋರ್ಟ್ ಹೆಚ್ಚಿನ ಮಾಹಿತಿ ಬಯಸಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.