ಅಂಗವಿಕಲ ಚಿಣ್ಣರಿಗೆ ಉತ್ತೇಜನ ನೀಡಿ: ನಾಗಶ್ರೀ

7

ಅಂಗವಿಕಲ ಚಿಣ್ಣರಿಗೆ ಉತ್ತೇಜನ ನೀಡಿ: ನಾಗಶ್ರೀ

Published:
Updated:

ಚಾಮರಾಜನಗರ: `ಅಂಗವಿಕಲ ಮಕ್ಕಳಿಗೆ ಪೋಷಕರು ಹೆಚ್ಚು ಉತ್ತೇಜನ ನೀಡುವ ಮೂಲಕ ಅವರಲ್ಲಿ ಅಡಗಿರುವ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿಕೊಡಬೇಕು' ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಿ. ನಾಗಶ್ರೀ ಸಲಹೆ ನೀಡಿದರು.ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಡಿ ಹಮ್ಮಿಕೊಂಡಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮಗುವಿಗೆ ಮನೆಯೇ ಮೊದಲ ಪಾಠಶಾಲೆ. ಪೋಷಕರು ಅಂಗವಿಕಲ ಮಕ್ಕಳನ್ನು ತಾರತಮ್ಯ ಮಾಡದೆ ಪ್ರೀತಿಯಿಂದ ಕಾಣಬೇಕು. ಮನೆಯಲ್ಲಿಯೇ ಮಗುವಿನ ಭವಿಷ್ಯದ ಬೆಳವಣಿಗೆಗೆ ಭದ್ರಬುನಾದಿ ಹಾಕಬೇಕು ಎಂದರು.ಪ್ರತಿ ಇಲಾಖೆಗಳು ಅಂಗವಿಕಲರಿಗೆ ಶೇ. 3ರಷ್ಟು ಸೌಲಭ್ಯ ನೀಡಬೇಕೆಂಬ ನಿಯಮವಿದೆ. ಗ್ರಾಮ ಪಂಚಾಯಿತಿಗಳು ಅಂಗವಿಕಲರಿಗೆ ತಲುಪಬೇಕಿರುವ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕಿದೆ. ಅವರು ಮುಖ್ಯವಾಹಿನಿಗೆ ಬರಲು ಅಗತ್ಯವಿರುವ ಎಲ್ಲ ಸೌಲಭ್ಯ ಕಲ್ಪಿಸುವುದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಹೊಣೆ ಎಂದರು.ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ಅಂಗವಿಕಲರ ಕಲ್ಯಾಣಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಾಕಷ್ಟು ಅನುದಾನ ಒದಗಿಸುತ್ತಿವೆ. ಇದರ ಸದ್ಬಳಕೆಗೆ ಅಂಗವಿಕಲರು ಮುಂದಾಗಬೇಕು. ಅಂಗವಿಕಲರಿಗೆ ಮೀಸಲಾಗಿರುವ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದ ಅವರು, ಅಂಗವಿಕಲತೆಯ ಪ್ರಮಾಣ ಆಧರಿಸಿ ವೇತನ ನೀಡುವುದು ಸಮರ್ಪಕ ಕ್ರಮವಾಗಿದೆ ಎಂದರು.ಜಿಲ್ಲಾಧಿಕಾರಿ ಎನ್. ಜಯರಾಂ ಮಾತನಾಡಿ, ಅಂಗವಿಕಲರಿಗೆ ನೀಡಲಾಗುತ್ತಿರುವ ಸವಲತ್ತುಗಳನ್ನು ಅನರ್ಹರು ಪಡೆಯುತ್ತಿದ್ದಾರೆಂಬ ದೂರು ಕೇಳಿಬಂದಿವೆ. ಇದಕ್ಕೆ ಅವಕಾಶ ನೀಡಬಾರದು. ಅಂಗವಿಕಲರ ಹೆಸರಿನಲ್ಲಿ ಅನರ್ಹರು ಪಡೆಯುತ್ತಿರುವ ಸೌಲಭ್ಯಗಳನ್ನು ಹಿಂದಿರುಗಿಸಿದರೆ ಅರ್ಹರಿಗೆ ನ್ಯಾಯ ಸಿಗಲಿದೆ ಎಂದು ಹೇಳಿದರು.ನಗರಸಭೆ ಅಧ್ಯಕ್ಷೆ ಎನ್. ಭಾಗ್ಯಮ್ಮ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎನ್. ಬಸವಣ್ಣ, ಉಪಾಧ್ಯಕ್ಷೆ ಪಾರ್ವತಮ್ಮ, ನಗರಸಭೆ ಉಪಾಧ್ಯಕ್ಷೆ ಸೆಲ್ವಿಬಾಬು, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಶೇಹೆರ್‌ಬಾನು, ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಎನ್. ಕೃಷ್ಣಮೂರ್ತಿ, ಕುಮಾರ್ ಹಾಜರಿದ್ದರು. ಕಾರ್ಯಕ್ರಮಕ್ಕೂ ಮೊದಲು ಜಾಥಾ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry