ಅಂಗವಿಕಲ ಯುವಕನ ಕರುಣಾಜನಕ ಕಥೆ

7

ಅಂಗವಿಕಲ ಯುವಕನ ಕರುಣಾಜನಕ ಕಥೆ

Published:
Updated:

ಗಜೇಂದ್ರಗಡ: ಹಣೆ ಬರಹಕ್ಕೆ ಹೊಣೆ ಯಾರು? ಇಂಥದೊಂದು ಪ್ರಶ್ನೆ ಯಾವುದೇ ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬವನ್ನು ಕಾಡಿದ್ದರೆ ಪರವಾಗಿಲ್ಲ. ಬದಲಾಗಿ ಇಡೀ ಗ್ರಾಮವನ್ನೇ ಕಾಡುತ್ತಿದೆ. ಹೀಗಾಗಿ ಗ್ರಾಮಸ್ಥರೆಲ್ಲರು ಕಂಗಾಲಾಗಿದ್ದಾರೆ.ಹೌದು, ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಕುಗ್ರಾಮ `ಜಿಗೇರಿ' ಗ್ರಾಮಸ್ಥರಿಗೆ ಇಂಥದೊಂದು ವಿಚಿತ್ರ ಪ್ರಶ್ನೆ ಹತ್ತೊಂಭತ್ತು ವರ್ಷಗಳಿಂದ ಬೆಂಬಿಡದೆ ಕಾಡುತ್ತಿದೆ. ಇದಕ್ಕೆ ಕಾರಣ ಗ್ರಾಮದ ಅಂಗವಿಕಲ ಯುವಕ ಮರ್ತುಜಾಸಾಬ್ ರಾಜೇಸಾಬ್ ಕುಷ್ಟಗಿ.

`ಹೆತ್ತವರಿಗೆ ಹೆಗ್ಗಣ ಮುದ್ದು' ಎಂಬ ಮಾತೊಂದಿದೆ.ಆದರೆ, ಜಿಗೇರಿ ಗ್ರಾಮದ ರಾಜೇಸಾಬ್ ಹಾಗೂ ಸಬೀರಾ ಬೇಗಂ ಎಂಬ ದಂಪತಿಗೆ ಈ ಮಾತು ಅನ್ವಯವಾಗುವುದಿಲ್ಲ. ತಮ್ಮ ಮಗು ಮರ್ತುಜಾಸಾಬ್ ಹುಟ್ಟು ಅಂಗವಿಕಲ ನಾಗಿದ್ದರಿಂದ ಹೆತ್ತವರು ದೂರದ ಮಂಗಳೂರಿಗೆ ಹೋಗಿ ನಲೆಸಿದ್ದಾರೆ. ದಂಪತಿ ಹೇಯ ಕೃತ್ಯದಿಂದಾಗಿ ಅನಾಥ ಪ್ರಜ್ಞೆ ಅನುಭವಿಸುತ್ತಿರುವ ಯುವಕನ ಕರುನಾಜನಕ ಕಥೆ ಇದು. ಹತ್ತೊಂಭತ್ತು ವರ್ಷ ತುಂಬಿದರೂ ಹೆತ್ತ ಮಗುವನ್ನು ದಂಪತಿ ಒಮ್ಮೆಯೂ ತಿರುಗಿ ನೋಡಿಲ್ಲ. ತಾತನೇ ಆಶ್ರಯ: ಹೆತ್ತ ಪಾಲಕರಿಂದ ತಿರಸ್ಕತಿಸಲ್ಪಟ್ಟ ಹಸುಳೆ ಮರ್ತುಜಾಸಾಬನ ಆರೈಕೆಯ ನೊಗ ಹೊತ್ತ  ತಾತ ಕಾಶಿಮ್‌ಸಾಬ ಹೆತ್ತ ತಾಯಿಗಿಂತಲೂ ಮಿಗಿಲಾಗಿ ಪಾಲನೆ- ಪೋಷಣೆ ಮಾಡುತ್ತಿದ್ದಾರೆ.ತುತ್ತಿನ ಚೀಲ ತುಂಬಿಸಿಕೊಳ್ಳುವುದಕ್ಕಾಗಿ ಜಿಗೇರಿ ಗ್ರಾಮದಲ್ಲಿ ಕಮ್ಮಾರಿಕೆ ವೃತ್ತಿಯನ್ನು ನಡೆಸುವ ಅಜ್ಜ ಕಾಶಿಮ್‌ಸಾಬ್ ಕಿತ್ತು ತಿನ್ನುವ ಬಡತನದ ಮಧ್ಯೆಯೂ ಅಂಗವಿಕಲನ ಮೊಮ್ಮಗನನ್ನು ಹೆಗಲ ಮೇಲೆ ಹೊತ್ತು ಗ್ರಾಮದ ಶಾಲೆಯಲ್ಲಿ ಏಳನೇ ತರಗತಿ ವರೆಗೆ ಶಿಕ್ಷಣ ಕೊಡಿಸಿದ. ಓದಿನಲ್ಲಿ ಅತ್ಯಂತ ಆಸಕ್ತಿ ಹೊಂದಿದ್ದ ಮರ್ತುಜಾಸಾಬ್‌ನಿಗೆ ಹೆಚ್ಚಿನ ಓದು ಕೊಡಿಸಬೇಕು ಎಂಬ ಹಂಬಲದಿಂದ ತಾತ ನೆರೆಯ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಮೂಗನೂರ ಗ್ರಾಮದ ಶಾಲೆಗೆ ನಿತ್ಯ ಹೊತ್ಯೊಯ್ದು ಹತ್ತನೇ ತರಗತಿವರೆಗೆ ಶಿಕ್ಷಣ ಕೊಡಿಸಿದ.ಆದರೆ, ಬಡತನದ ಹೊರೆ ಹೆಚ್ಚಾಗಿದ್ದರಿಂದ ಉನ್ನತ ಶಿಕ್ಷಣ ಕೊಡಿಸಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ.ದಿನಗಳು ಉರುಳಿದಂತೆ ಮರ್ತುಜಾಸಾಬನ ದೇಹದ ಗಾತ್ರ ದೊಡ್ಡದಾಗುತ್ತಿದೆ. ಕಾಲುಗಳು ಪೂರ್ಣ ಪ್ರಮಾಣದಲ್ಲಿ ಸ್ವಾಧೀನ ಕಳೆದುಕೊಂಡ ಹಿನ್ನೆಲೆಯಲ್ಲಿ ನಿತ್ಯ ಕರ್ಮಾದಿಗಳಿಗೆ ತಾತನೇ ಆಸರೆ. ಸದ್ಯ ಅಜ್ಜ ಕಾಶಿಮ್‌ಸಾಬ್‌ಗೆ ಅಂಗವಿಕಲ ಮೊಮ್ಮಗನನ್ನು ಹೊತ್ತೊಯ್ಯುವುದು ಕಷ್ಟ ಸಾಧ್ಯವಾಗಿದೆ. ತಾತ ಕಾಶಿಮ್‌ಸಾಬ್‌ನನ್ನು ಹೊರತು ಪಡಿಸಿದರೆ ಮರ್ತು ಜಾಸಾಬಗೆ ಬೇರಾರೂ ಇಲ್ಲ. ಮರ್ತುಜಾಸಾಬ್‌ನ ಕರುಣಾಜನಕ ಸ್ಥಿತಿಯನ್ನು ಕಂಡು ಗ್ರಾಮಸ್ಥರು ಮಮ್ಮಲ ಮರುಗುವಂತಾಗಿದೆ.ಕಳೆದ ಹತ್ತೊಂಭತ್ತು ವರ್ಷಗಳಿಂದ ಅಂಗವೈಕಲ್ಯದಿಂದ ಬಳಲುತ್ತಿರುವ ಜಿಗೇರಿ ಗ್ರಾಮದ ಮರ್ತುಜಾಸಾಬ್‌ಗೆ ಸರ್ಕಾರ ಕನಿಷ್ಠ ಮಾನವೀಯತೆ ಮೆರೆದಿಲ್ಲ.2010ರಲ್ಲಿ ಗ್ರಾಮಸ್ಥರ ಸಾಮೂಹಿಕ ಪರಿಶ್ರಮದಿಂದಾಗಿ 400 ರೂ. ಮಾಸಾಶನ ದೊರೆಯುತ್ತಿದೆ.  ಈ ಸೌಲಭ್ಯವೂ ಸಹ ಕಳೆದ ಆರು ತಿಂಗಳಿನಿಂದ ಸ್ಥಗಿತಗೊಂಡಿದೆ. ಅಜ್ಜ ಕಾಶಿಮ್‌ಸಾಬ್ ಕಾಲವಾದ ನಂತರ ಅಂಗವಿಕಲ ಯುವಕ ಮರ್ತುಜಾಸಾಬ್‌ನ ಗತಿ ಏನು? ಎಂಬುದು ಗ್ರಾಮಸ್ಥರ ಪ್ರಶ್ನೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry