ಅಂಗವೈಕಲ್ಯ ಮೆಟ್ಟಿನಿಂತ ಗಾಯಕ ವಿನಾಯಕ

ಗುರುವಾರ , ಜೂಲೈ 18, 2019
22 °C

ಅಂಗವೈಕಲ್ಯ ಮೆಟ್ಟಿನಿಂತ ಗಾಯಕ ವಿನಾಯಕ

Published:
Updated:

ನಡೆದಾಡಲು ಆಗುವುದಿಲ್ಲ, ಆದರೆ ಸುಮಧುರವಾಗಿ ಹಾಡಬಲ್ಲ ಪ್ರವೀಣ. ಸಂಗೀತ ಪ್ರೇಮಿಗಳಿಂದ ಸೈ ಎನ್ನಿಸಿಕೊಂಡ ಅಂಗವಿಕಲ ಗಾಯಕ. ಸಂಗೀತದಲ್ಲಿ ಇನ್ನೂ ಏನನ್ನಾದರೂ ಸಾಧಿಸಬೇಕೆಂಬ ತುಡಿತ...ಎರಡೂ ಕಾಲುಗಳಿಲ್ಲದರೂ ಜೀವನದಲ್ಲಿ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡುತ್ತ ಉತ್ಸಾಹದಿಂದ ಜೀವನವನ್ನು ಸಾಗಿಸುತ್ತಿರುವ ವಿನಾಯಕ ಮುತಾಲಿಕದೇಸಾಯಿ ಅವರ ಜೀವನದ ಯಶೋಗಾಥೆ ಇದು.ಅಮೃತರಾವ ಹಾಗೂ ಲಕ್ಷ್ಮೀಬಾಯಿ ದಂಪತಿ ಪುತ್ರನಾಗಿ 1963 ರಲ್ಲಿ ವಿಜಾಪುರದಲ್ಲಿ ಜನಿಸಿರುವ ವಿನಾಯಕ ಮುತಾಲಿಕದೇಸಾಯಿ ಅವರು ತಮ್ಮ 9ನೇ ವಯಸ್ಸಿನಲ್ಲಿಯೇ ಪೋಲಿಯೊ ರೋಗಕ್ಕೆ ತುತ್ತಾಗಿ ತಮ್ಮ ಎರಡು ಕಾಲುಗಳನ್ನು ಕಳೆದುಕೊಂಡಿದ್ದಾರೆ. ಹೀಗಿದ್ದರೂ, ಜೀವನದಲ್ಲಿ ಉತ್ಸಾಹವನ್ನು ಕಳೆದುಕೊಳ್ಳದ ವಿನಾಯಕ ಅವರು ಸಂಗೀತ ಕಲಿತು ರಾಜ್ಯದ ವಿವಿಧೆಡೆ ಕಾರ್ಯಕ್ರಮಗಳನ್ನು ನೀಡಿ ಸಂಗೀತ ಪ್ರೇಮಿಗಳ ಮನ ಗೆದ್ದಿದ್ದಾರೆ. ವಿನಾಯಕ ಅವರು ತಮ್ಮ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣವನ್ನು ಗೋಕಾಕಿನಲ್ಲಿ ಪೂರೈಸಿದ್ದು, ಸದ್ಯ ಬೆಳಗಾವಿಯ ಮರಾಠಾ ಲೈಟ್ ಇನ್‌ಫೆಂಟ್ರಿ ರೆಜಿಮೆಂಟಲ್ ಸೆಂಟರ್‌ನಲ್ಲಿ ಟೆಲಿಫೋನ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಕನಕದಾಸರು, ಪುರಂದರದಾಸರು, ವಿಜಯದಾಸರು, ವಾದಿರಾಜರು... ಹೀಗೆ ಎಲ್ಲ ದಾಸರ ಕೃತಿಗಳನ್ನು ವಿನಾಯಕ ಅವರು ತಮ್ಮ ಸುಮಧರ ಕಂಠದಿಂದ ಸುಲಲಿತವಾಗಿ ಪ್ರಸ್ತುತಪಡಿಸುತ್ತಾ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುತ್ತಿದ್ದಾರೆ. ಶಾಲಾ ದಿನಗಳಿಂದಲೇ ಸಂಗೀತ ಕ್ಷೇತ್ರದತ್ತ ಹೆಚ್ಚಿನ ಒಲವು ಬೆಳೆಸಿಕೊಂಡಿದ್ದ ವಿನಾಯಕ ಅವರು ಬೆಳಗಾವಿ, ಬೆಂಗಳೂರು, ಮೈಸೂರು, ತಿರುಪತಿ, ಗುಳೇದಗುಡ್ಡ, ಧಾರವಾಡ, ಹುಬ್ಬಳ್ಳಿ, ಗೋಕಾಕ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಗಾಯನ ಕಾರ್ಯಕ್ರಮ ನೀಡಿದ್ದಾರೆ.ವಿನಾಯಕ ಅವರು ಸಂಗೀತ ಮಾತ್ರವಲ್ಲದೇ ಅಭಿನಯದಲ್ಲೂ ತಮ್ಮ ಕೈಚಳಕ ಪ್ರದರ್ಶಿಸಿದ್ದಾರೆ. ವಿವಿಧ ಹಾಡುಗಳಿಗೆ ತಾವೇ ಅಭಿನಯ ಮಾಡುವ ಮೂಲಕ ತಮ್ಮ ಅಭಿನಯ ಕಲೆಯ ಮೂಲಕ ಕಲಾಭಿಮಾನಿಗಳನ್ನು ಆಕರ್ಷಿಸಿದ್ದಾರೆ. ತಮ್ಮ ನಟನೆಗೆ ಮೆಚ್ಚಿ ಖ್ಯಾತ ನಿರ್ದೇಶಕ ದಿವಂಗತ ಪುಟ್ಟಣ್ಣ ಕಣಗಾಲ ಅವರು ತಮ್ಮ ತಲೆಯ ಮೇಲೆ ಕೈಯಿಟ್ಟು ಆಶೀರ್ವದಿಸಿದ ಕ್ಷಣವನ್ನು ವಿನಾಯಕ ಅವರು ಇಂದಿಗೂ ಸ್ಮರಿಸಿಕೊಳ್ಳುತ್ತಾರೆ.ಸುಮಧುರ ಹಾಗೂ ಸುಲಲಿತ ಕಂಠ ಸಿರಿಯನ್ನು ಹೊಂದಿರುವ ವಿನಾಯಕ ಅವರು ದಾಸ ಸಾಹಿತ್ಯವೇ ತಮ್ಮ ಉಸಿರು... ದಾಸರ ದಾಸ ನಾನು... ಎಂದು ದಾಸರ ಸಾಹಿತ್ಯದ ಬಗ್ಗೆ ಶ್ರದ್ಧಾ ಭಕ್ತಿಯನ್ನು ತೋರಿಸುತ್ತಾರೆ.ಸಂಗೀತ ಕ್ಷೇತ್ರದಲ್ಲಿ ಎಲೆಮರೆ ಕಾಯಿಯಂತೆ ಕಾರ್ಯನಿರ್ವಹಿಸುತ್ತಿರುವ ಇವರನ್ನು ಇಲ್ಲಿಯವರೆಗೆ ಸರ್ಕಾರ ಅಥವಾ ಸಂಗೀತ ಸಂಸ್ಥೆಗಳಾಗಲೀ ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸದಿರುವುದು ದುರ್ದೈವದ ಸಂಗತಿ. ಇನ್ನಾದರೂ ಇಂತಹ ಅಪರೂಪದ ಸಂಗೀತಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಸರ್ಕಾರ ಹಾಗೂ ಸಂಗೀತ ಸಂಸ್ಥೆಗಳು ಮಾಡಬೇಕು ಎಂಬುದು ಸಂಗೀತ ಪ್ರೇಮಿಗಳ ಆಶಯ.`ಸಂಗೀತದಿಂದ ನನ್ನನ್ನು ನಾನು ಮರೆತು ಬಿಡುತ್ತೇನೆ. ಸಂಗೀತದಿಂದಲೇ ನಾನು ನನಗೆ ಕಾಲುಗಳಿಲ್ಲ ಎಂಬ ನ್ಯೂನ್ಯತೆಯನ್ನು ಮರೆತು, ಕಳೆದ ನಾಲ್ಕು ದಶಕಗಳಿಂದ ಎಲ್ಲರೊಡನೆ ಬೆರೆತು ಸಂತೋಷದಿಂದ ಜೀವನ ಸಾಗಿಸುತ್ತಿದ್ದೇನೆ. ಸಂಗೀತವು ನನಗೆ ಸಾಕಷ್ಟು ಸ್ನೇಹಿತರು ಹಾಗೂ ಆಪ್ತರನ್ನು ತಂದು ಕೊಟ್ಟಿದೆ. ಮಾತ್ರವಲ್ಲದೇ ಭಗವಂತನ ನಾಮಸ್ಮರಣೆಯನ್ನು ಸದಾ ನನಗೆ ಒದಗಿಸುತ್ತದೆ. ಸಂಗೀತವೇ ನನ್ನ ಜೀವ' ಎಂದು ವಿನಾಯಕ ಮುತಾಲಿಕದೇಸಾಯಿ `ಪ್ರಜಾವಾಣಿ'ಗೆ ತಿಳಿಸಿದರು.`ದಾಸ ಸಾಹಿತ್ಯದ ಬಗ್ಗೆ ನನಗೆ ಬಹಳ ಪ್ರೀತಿ. ಸತತವಾಗಿ 12 ಗಂಟೆ ಕಾಲ ನಾನು ದಾಸರ ಪದಗಳನ್ನು ಹಾಡಬಲ್ಲೆ. ಹಾಡಿನಲ್ಲಿ ಭಗವಂತನ ನಾಮಸ್ಮರಣೆ ಮಾಡುವುದೆಂದರೆ ನನಗೆ ಬೇಸರವಿಲ್ಲದ ಕೆಲಸ. ಸಂಗೀತ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕೆಂಬ ಹಂಬಲ ಹೊಂದಿದ್ದೇನೆ' ಎನ್ನುತ್ತಾರೆ ಅವರು.ವಿನಾಯಕ ಮುತಾಲಿಕದೇಸಾಯಿ ಅವರ ಮೊಬೈಲ್ ಸಂಖ್ಯೆ 9980243044.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry