ಅಂಗವೈಕಲ್ಯ ಮೆಟ್ಟಿನಿಂತ ಚಂದ್ರಶೇಖರ್‌ಗೆ ಡಾಕ್ಟರೇಟ್

7

ಅಂಗವೈಕಲ್ಯ ಮೆಟ್ಟಿನಿಂತ ಚಂದ್ರಶೇಖರ್‌ಗೆ ಡಾಕ್ಟರೇಟ್

Published:
Updated:

ಮಂಗಳೂರು: ತಿರುಚಿಕೊಂಡಿರುವ ಅವರ ಬಲಗೈಯಲ್ಲಿ ಶಕ್ತಿ ಇಲ್ಲ. ಆದರೆ ಸಾಧಿಸಬೇಕೆಂಬ ಹುಮ್ಮಸ್ಸಿಗೆ, ಮನೋಬಲಕ್ಕೆ ಕೊರತೆಯೇನೂ ಇರಲಿಲ್ಲ.ಮೂರೇ ವರ್ಷದಲ್ಲಿ ಪಿಎಚ್.ಡಿ ಪೂರ್ಣ. ವಿವಿಧ ವಿಷಯ ಕುರಿತು ಐದು ಪುಸ್ತಕ ಬರೆದಿದ್ದಾರೆ.

 

ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಜತೆ ಒಂದೂವರೆ ವರ್ಷ ಹೋರಾಟಗಳಲ್ಲಿ ಪಾಲ್ಗೊಂಡಿದ್ದಾರೆ. ಈಗಲೂ ತಿಂಗಳಲ್ಲಿ 15 ದಿನ ದಲಿತರ, ರೈತರ ಸಮಸ್ಯೆಗಳಿಗೆ ಪರಿಹಾರ ಕೊಡಿಸಲು ಹೋರಾಡುತ್ತಾರೆ.  ಸಣ್ಣ ವಯಸ್ಸಿನಲ್ಲೇ (32 ವರ್ಷ) ಇಂಥ ಸಾಧನೆ ಮಾಡಿದವರು ಕೋಲಾರದ ಮಾಲೂರು ತಾಲ್ಲೂಕಿನ ರಾಮೇನಹಳ್ಳಿಯ ಆರ್.ವಿ.ಚಂದ್ರಶೇಖರ್. ಇವರು ಕೃಷಿಕ ಆರ್.ವೆಂಕಟೇಶಯ್ಯ ಅವರ ಪುತ್ರ.ಮಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಜೋಗನ್ ಶಂಕರ್ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ `ಕರ್ನಾಟಕದಲ್ಲಿ ವಿಶೇಷ ಆರ್ಥಿಕ ವಲಯಗಳು-ಒಂದು ಸಮಾಜಶಾಸ್ತ್ರೀಯ ಅಧ್ಯಯನ~ ವಿಷಯದಲ್ಲಿ ಮಹಾಪ್ರಬಂಧ ಮಂಡಿಸಿದ ಚಂದ್ರಶೇಖರ್, 30ನೇ ಘಟಿಕೋತ್ಸವದಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಂದ ಡಾಕ್ಟರೇಟ್ ಸ್ವೀಕರಿಸಿದರು. ಬಳಿಕ `ಪ್ರಜಾವಾಣಿ~ ಜತೆ ಸಾಧನೆಯ ಖುಷಿ ಹಂಚಿಕೊಂಡರು.`ಅಂಗವೈಕಲ್ಯದಿಂದಾಗಿ ಸಣ್ಣಪುಟ್ಟ ಮುಜುಗರ ಎದುರಿಸಿದ್ದೇನೆ. ಈ ನ್ಯೂನತೆ ಮೆಟ್ಟಿನಿಲ್ಲಲು ಸಾಧನೆ ಮಾಡಬೇಕು ಎಂದು ಮನಸ್ಸು ನಿರಂತರವಾಗಿ ತವಕಿಸುತ್ತಿತ್ತು. ಈ ಹಂಬಲದಿಂದಲೇ ಸದ್ಯ ಸಾಧನೆ ಸಾಧ್ಯವಾಗಿದೆ~ ಎಂದು ಚಂದ್ರಶೇಖರ್ ನುಡಿದರು. `ಚಿಕ್ಕಂದಿನಲ್ಲೇ ಅಪ್ಪ ಗದ್ದೆ ಕೆಲಸದಲ್ಲಿ ತೊಡಗಿಸಿಕೊಳ್ಳುವಂತೆ ಉತ್ತೇಜಿಸುತ್ತಿದ್ದರು. ಆ ಮೂಲಕ ಅಂಗವೈಕಲ್ಯದ ನೋವು ಮೆಟ್ಟಿ ನಿಲ್ಲಲು ಹುರಿದುಂಬಿಸಿದ್ದರು. ಈಗ ಬೈಕ್, ಕಾರು, ಟ್ರಾಕ್ಟರ್ ಕೂಡ ಓಡಿಸಬಲ್ಲೆ. ಅಂಗವೈಕಲ್ಯ ಒಂದು ಕೊರತೆ ಎಂದು ಅನಿಸುವುದೇ ಇಲ್ಲ~ ಎಂದು ನಗೆಬೀರಿದರು.ಚಂದ್ರಶೇಖರ್ ಬೆಂಗಳೂರು ವಿವಿಯಲ್ಲಿ ಪದವಿಯಲ್ಲಿ ಶೇ. 68, ಸಮಾಜಶಾಸ್ತ್ರ ಸ್ನಾತಕೋತ್ತರ ಪದವಿಯಲ್ಲಿ ಶೇ. 66 ಅಂಕ ಗಳಿಸಿದ್ದಾರೆ. `ಅಭಿವೃದ್ಧಿ ಎಂಬ ಅವನತಿ~, `ಅಭಿವೃದ್ಧಿಯ ಕೊಡಲಿಯಲ್ಲಿ ಒಕ್ಕಲುತನದ ಕೊರಳು~, `ಸಮಕಾಲೀನ ಮಹಿಳೆ ಮತ್ತು ಆರೋಗ್ಯ~ ಸೇರಿದಂತೆ ಐದು ಪುಸ್ತಕ ಬರೆದಿದ್ದಾರೆ. ಐದು ಸಾಕ್ಷ್ಯಚಿತ್ರಗಳನ್ನೂ ನಿರ್ಮಿಸಿದ್ದಾರೆ.`ಮೇಧಾ ಪಾಟ್ಕರ್ ಜತೆ ಕೆಲಸ ಮಾಡಬೇಕೆಂಬ ಹಂಬಲದಿಂದಲೇ ಒಂದೂವರೆ ವರ್ಷ ಅವರ ಹೋರಾಟಗಳಲ್ಲಿ ಪಾಲ್ಗೊಂಡಿದ್ದೆ. ರಾಜ್ಯದಲ್ಲೇ ದೊಡ್ಡ ಯೋಜನೆಗಳು ಅನುಷ್ಠಾನಕ್ಕೆ ಬರಲು ಆರಂಭಿಸಿದಾಗ ಇಲ್ಲಿನ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದೆನಿಸಿತು.

 

ಬೆಂಗಳೂರಿನ ಸ್ಕೂಲ್ ಆಫ್ ಸೋಶಿಯಲ್ ಸೈನ್ಸ್‌ನಲ್ಲಿ ತಿಂಗಳಿಗೆ 15 ದಿನ ಪಾಠ ಮಾಡುತ್ತೇನೆ. 15 ದಿನ ದಲಿತ, ರೈತರು ಹಾಗೂ ಪರಿಸರ ಕುರಿತ ಚಳವಳಿಯಲ್ಲಿ ಪಾಲ್ಗೊಳ್ಳುತ್ತೇನೆ~ ಎಂದು ವಿವರಿಸಿದರು.

`ಪಿಎಚ್.ಡಿ ಆಲೋಚನೆ ಇರಲಿಲ್ಲ. ನನ್ನ ಒಂದು ಪುಸ್ತಕಕ್ಕೆ ಮುನ್ನುಡಿ ಬರೆದ ಜೋಗನ್ ಶಂಕರ್ ಪ್ರೇರೇಪಿಸಿದ್ದರಿಂದ ಮಹಾಪ್ರಬಂಧ ಸಿದ್ಧಪಡಿಸಲು ಮುಂದಾದೆ.

 

ಪ್ರಾಧ್ಯಾಪಕ ಲಕ್ಷ್ಮಿಪತಿ, ಜೋಗನ್ ಶಂಕರ್ ಅವರ ಪ್ರೋತ್ಸಾಹದಿಂದ ಇದು ಸಾಧ್ಯವಾಯಿತು~ ಎಂದು ಗುರುನಮನ ಸಲ್ಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry