`ಅಂಗವೈಕಲ್ಯ ಸಾಧನೆಗೆ ಅಡ್ಡಿಯಲ್ಲ'

7

`ಅಂಗವೈಕಲ್ಯ ಸಾಧನೆಗೆ ಅಡ್ಡಿಯಲ್ಲ'

Published:
Updated:

ಬೆಂಗಳೂರು: `ಇಚ್ಛಾಶಕ್ತಿಯಿರುವವರಿಗೆ ಅಂಗವಿಕಲತೆ ಎಂದಿಗೂ ಅಡ್ಡಿಯಾಗಲಾರದು' ಎಂದು ನಿವೃತ್ತ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಹೇಳಿದರು.

ಸ್ಯಾಪ್ ಲ್ಯಾಬ್ಸ್ ಇಂಡಿಯಾ ಸಂಸ್ಥೆಯು ನಗರದಲ್ಲಿ ಸೋಮವಾರ ಆಯೋಜಿಸಿದ್ದ `ಇಂಡಿಯನ್ ಇನ್‌ಕ್ಲೂಷನ್ ಸಮಾವೇಶ-2012'ದಲ್ಲಿ `ಅಂಗವಿಕಲರಲ್ಲಿ ಜಾಗೃತಿಯನ್ನು ಮೂಡಿಸುವಲ್ಲಿ ಸಮಾಜದ ಪಾತ್ರ' ವಿಷಯದ ಕುರಿತು ಅವರು ಮಾತನಾಡಿದರು.

`ಏನಾದರೂ ಸಾಧಿಸಬೇಕೆಂಬ ಛಲವನ್ನು ಹೊಂದಿದ ಮನುಷ್ಯನ ಅಂಗಗಳು ಊನವಾಗಿದ್ದರೂ ಸಹ ತನ್ನ ಇಚ್ಛಾಶಕ್ತಿಯಿಂದ ತನಗೆ ಅನಿಸಿದ್ದನ್ನು ವಿಶಿಷ್ಟವಾಗಿ ಸಾಧಿಸುತ್ತಾನೆ. ಅಂತಹವರು ನಮ್ಮ ಸಮಾಜಕ್ಕೆ ಸದಾ ಪ್ರೇರಣೆಯಾಗುತ್ತಾರೆ' ಎಂದು ಅವರು ಹೇಳಿದರು.

`ಸಮಾಜದಲ್ಲಿ ಅಂಗಗಳು ಊನವಾಗಿರುವ ಅಂಗವಿಕಲರಿಗಿಂತ ಮನಸ್ಸು ಊನವಾಗಿರುವವರೇ ಹೆಚ್ಚಿದ್ದಾರೆ. ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸದ ಅಧಿಕಾರಿಗಳು, ಸಮಸ್ಯೆಗಳನ್ನು ಪರಿಹರಿಸದೆ ತಮಾಷೆ ನೋಡುತ್ತಿರುವ ಸರ್ಕಾರ, ಭ್ರಷ್ಟಾಚಾರದಿಂದ ಹಣವನ್ನು ಪಡೆಯುತ್ತಿರುವ ಅಧಿಕಾರಿಗಳು ಇವರೆಲ್ಲರೂ ಒಂದು ರೀತಿ ಅಂಗವಿಕಲರಾಗಿದ್ದಾರೆ' ಎಂದು ಹೇಳಿದರು.

`ಮಹಿಳೆಯ ಸ್ಥಿತಿಯೂ ಒಂದು ರೀತಿ ಅಂಗವಿಕಲತೆಯಿದ್ದಂತೆ. ಕುಟುಂಬದಲ್ಲಿ ಹೆಣ್ಣು ಮಗು ಹುಟ್ಟಿದರೆ, ಆಕೆಯನ್ನು ಹುಟ್ಟಿನಿಂದಲೇ ದುರ್ಬಲಳನ್ನಾಗಿ ಮಾಡುತ್ತಾ, ಕೀಳಾಗಿ ನಡೆಸಿಕೊಳ್ಳಲಾಗುತ್ತದೆ. ಈ ಆಧುನಿಕ ಯುಗದಲ್ಲಿಯೂ ಈ ಪರಿಸ್ಥಿತಿ ಮುಂದುವರಿದಿರುವುದು ದುರದೃಷ್ಟಕರ' ಎಂದರು.

`ಪುರುಷರು ತಮ್ಮ ಅಸ್ತಿತ್ವವನ್ನು ತೋರಿಸಲು ಮದ್ಯಪಾನ ಮಾಡಿ ಬಂದು ತಮ್ಮ ಹೆಂಡತಿಯರನ್ನು ಹೊಡೆಯುತ್ತಾರೆ. ಅವರನ್ನು ಹೊಡೆದು ತಮ್ಮ ಹಕ್ಕುಗಳನ್ನು ಚಲಾಯಿಸಿದೆವು ಎಂಬ ಧೋರಣೆಯಲ್ಲಿ ಬೀಗುತ್ತಾರೆ.

ಇಂತಹ ಪುರುಷರೂ ಕೂಡಾ ಒಂದು ರೀತಿಯಲ್ಲಿ ಅಂಗವಿಕಲರಾಗಿದ್ದಾರೆ' ಎಂದು ವ್ಯಾಖ್ಯಾನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry