ಸೋಮವಾರ, ಮೇ 17, 2021
21 °C

ಅಂಗಾಂಗ ನಿಧಿ ಸ್ಥಾಪನೆಗೆ ಕಾನೂನು ಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ವೈದ್ಯಕೀಯ ಸಂಶೋಧನೆಗಾಗಿ ದೇಹ ದಾನ ಮಾಡುವಂತಹ ವ್ಯಕ್ತಿಗಳನ್ನು ಉತ್ತೇಜಿಸಲು ಪೂರಕವಾಗಿ ಎಲ್ಲ ವೈದ್ಯಕೀಯ ಸಂಸ್ಥೆಗಳಲ್ಲಿ ಅಂಗಾಂಗ ನಿಧಿ ಸ್ಥಾಪನೆ ಮಾಡುವ ಸಂಬಂಧ ಮುಂದಿನ ಅಧಿವೇಶನದಲ್ಲಿ ಸರ್ಕಾರ ಕಾನೂನು ಜಾರಿಗೆ ತರಲು ಉದ್ದೇಶಿಸಿದೆ~ ಎಂದು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್ ಗುರುವಾರ ಇಲ್ಲಿ ಹೇಳಿದರು.

ಎಂ.ಎಸ್. ರಾಮಯ್ಯ ಸ್ಮಾರಕ ಆಸ್ಪತ್ರೆಯ ಸಭಾಂಗಣದಲ್ಲಿ ಎಂ.ಎಸ್. ರಾಮಯ್ಯ ಉನ್ನತ ಕಲಿಕಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, `ವ್ಯಕ್ತಿಗಳು ಸ್ವಯಂಪ್ರೇರಿತರಾಗಿ ಮುಂದೆ ಬಂದು ತಮ್ಮ ದೇಹಗಳನ್ನು ಸತ್ತ ನಂತರ ದಾನ ಮಾಡುವುದಕ್ಕೆ ಜಾಗೃತಿ ಮೂಡಿಸುವ ಅಗತ್ಯವಿದೆ~ ಎಂದರು.

`ವೈದ್ಯಕೀಯ ಶಿಕ್ಷಣದ ಪಠ್ಯಕ್ರಮವನ್ನು ಬದಲಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ. ಈ ಸಂಬಂಧ ಈಗಾಗಲೇ ಎರಡು ಸಭೆಗಳು ನಡೆದಿವೆ. ಕನಿಷ್ಠ ಮುಂದಿನ ವರ್ಷದಿಂದಾದರೂ ಪಠ್ಯ ಕ್ರಮ ಬದಲಿಸುವಂತೆ ಕೇಂದ್ರವನ್ನು ಆಗ್ರಹಿಸಲಾಗಿದೆ~ ಎಂದು  ತಿಳಿಸಿದರು.

ಹೊಸ ನೇಮಕಾತಿ ನೀತಿ:ವೈದ್ಯರನ್ನು ನೇಮಕ ಮಾಡಿಕೊಳ್ಳುವ ಸಂಬಂಧ ಹೊಸ ನೇಮಕಾತಿ ನೀತಿಯನ್ನು ಸರ್ಕಾರ ಜಾರಿಗೆ ತಂದಿದ್ದು, ಚಿನ್ನದ ಪದಕದ ಜತೆಗೆ ಅನುಭವ ಹೊಂದಿರುವವರು, ಸಂಶೋಧಕರಿಗೆ ಆದ್ಯತೆ ನೀಡಲಾಗುತ್ತಿದೆ. ಅಲ್ಲದೆ, ಗ್ರಾಮೀಣ ಪ್ರದೇಶದಲ್ಲಿ ಒಂದು ವರ್ಷ ಸೇವೆ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದರು.

 ನಿಮ್ಹಾನ್ಸ್‌ನ ನಿರ್ದೇಶಕ ಡಾ.ಪಿ. ಸತೀಶ್ಚಂದ್ರ ಮಾತನಾಡಿ, ಮೃತದೇಹಗಳ ಮೇಲೆ ಪ್ರಾಯೋಗಿಕ ಪರೀಕ್ಷೆ ನಡೆಸುವುದರಿಂದ ವೈದ್ಯರು ತಮ್ಮ ವೃತ್ತಿ ಕೌಶಲವನ್ನು ವೃದ್ಧಿಸಿಕೊಳ್ಳಲು ಅನುಕೂಲವಾಗಲಿದೆ ಎಂದರು. `ಎಲ್ಲ ಜನರಿಗೆ ಉನ್ನತ ವೈದ್ಯಕೀಯ ಚಿಕಿತ್ಸೆಯನ್ನು ನೀಡಲು ಸರ್ಕಾರ ಸಾರ್ವಜನಿಕ ಸಹಭಾಗಿತ್ವದಲ್ಲಿ ಮೂಳೆ, ಚರ್ಮ ಹಾಗೂ ಅಂಗಾಂಶ ನಿಧಿ ಸ್ಥಾಪನೆಗೆ ಒತ್ತು ನೀಡಬೇಕು~ ಎಂದರು.

`25 ವರ್ಷಗಳ ಹಿಂದೆಯೇ ನಿಮ್ಹಾನ್ಸ್‌ನಲ್ಲಿ ಮೆದುಳು ನಿಧಿ ಸ್ಥಾಪಿಸಲಾಗಿದೆ. ಇದರ ಜತೆಗೆ, ನರ ನಿಧಿಯನ್ನೂ ಸ್ಥಾಪಿಸಲು ಉದ್ದೇಶಿಸಲಾಗಿದೆ~ ಎಂದರು.

ಗೋಕುಲ ಶಿಕ್ಷಣ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಾಹಕ ಡಾ.ಡಿ.ವಿ. ಗುರುಪ್ರಸಾದ್ ಸ್ವಾಗತಿಸಿದರು. ಎಂ.ಎಸ್. ರಾಮಯ್ಯ ಉನ್ನತ ಕಲಿಕಾ ಕೇಂದ್ರದ ಅಧ್ಯಕ್ಷ ಡಾ.ಡಿ.ಸಿ. ಸುಂದರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಆರ್. ಜಯರಾಂ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಪ್ಲಾಸ್ಟಿಕ್ ಸರ್ಜರಿ ತಜ್ಞ ಡಾ.ಎಸ್. ರಾಜ ಸಭಾಪತಿ, ಎಂ.ಎಸ್.ರಾಮಯ್ಯ ವೈದ್ಯಕೀಯ ಕಾಲೇಜಿನ ಪ್ರಿನ್ಸಿಪಾಲ್ ಡಾ. ಸರಸ್ವತಿ ಜಿ. ರಾವ್ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.